ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೊರೋನಾ ಭೀತಿಯ ನಡುವೆಯೂ ಗಣೇಶ ಚತುರ್ಥಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ, ಸಂಭ್ರಮದಿಂದ ನಡೆಯುತ್ತಿದ್ದು ಭಕ್ತರು ಸಂಕಷ್ಟಹರ ವಿನಾಯಕನ ಪೂಜೆಯಲ್ಲಿ ನಿರತರಾಗಿದ್ದಾರೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರ ದಂಡು ಕಂಡುಬಂದಿತ್ತು. ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯದ ಒಳಗೆ ಗಣಪನ ದರ್ಶನಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಅರ್ಚಕರಿಂದ ವಿಶೇಷ ಪೂಜೆಗಳು ನಡೆಸಲಾಗಿದ್ದು ಭಕ್ತರಿಗೆ ಹಣ್ಣು ಕಾಯಿ, ತೀರ್ಥಪ್ರಸಾದ ಹೊರಗೆ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷ ಗಣೇಶ ಚತುರ್ಥಿಗೆ ಅನ್ನ ಪ್ರಸಾದ ವ್ಯವಸ್ಥೆಯಿರಲಿಲ್ಲ ಆದರೆ ಈ ಬಾರಿ ಸುವ್ಯವಸ್ಥಿತವಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 1008 ಕಾಯಿ (ಸಹಸ್ರ ನಾರಿಕೇಳ) ಗಣಯಾಗ ಮಾಡಿ ಕೊರೋನಾ ಮಹಾಮಾರಿ ತೊಲಗುವ ನಿಟ್ಟಿನಲ್ಲಿ ಸಂಕಲ್ಪ ಪೂಜೆಮಾಡಲಾಯಿತು. ದೇವಸ್ಥಾನದ ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ದೇವಸ್ಥಾನದ ವ್ಯವಸ್ಥಾಪಕ ನಟೇಶ್ ಕಾರಂತ್, ಪರ್ಯಾಯ ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ಕುಂದಾಪುರದ ಸಹಾಯಕ ಕಮಿಷನರ್ ಕೆ. ರಾಜು, ತಹಶಿಲ್ದಾರ್ ಕಿರಣ್ ಗೌರಯ್ಯ ದೇವಳಕ್ಕೆ ಆಗಮಿಸಿದರು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕುಂದಾಪುರ ನಗರ ಹಾಗೂ ಟ್ರಾಫಿಕ್ ಪೊಲೀಸರು ಭದ್ರತೆ ಹಾಗೂ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಿದರು.