ತೂಗು ಸೇತುವೆಯ ಹರಿಕಾರ ಗಿರೀಶ್ ಭಾರಧ್ವಜ್ ಅವರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ

0
449

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನೀಡಲಾಗುವ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ-2021ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ “ಗಿರೀಶ್ ಭಾರದ್ವಾಜ್” ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.


‘ಸೇತುಬಂಧು’ ಎಂದೇ ಕರೆಯಲ್ಪಡುವ ಗಿರೀಶ್ ಭಾರದ್ವಾಜ್ ಗ್ರಾಮೀಣ ಪ್ರದೇಶದ ಜನರ ಜೀವನದಲ್ಲಿ ಹೊಸ ಬೆಳಕು ಮೂಡಿಸುವಂತೆ 130 ತೂಗು ಸೇತುವೆ ನಿರ್ಮಾಣ ಮಾಡಿದವರು. ಅಲ್ಲದೇ ಸಮಾಜ ಸೇವೆಯಲ್ಲೂ ಕ್ರೀಯಾಶೀಲರಾದವರು. ಇವರ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕಳೆದ ಹದಿನಾರು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದ್ದು ಈಗಾಗಲೇ ವೀರಪ್ಪ ಮೊಯ್ಲಿ, ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ | ಬಿ. ಎಂ ಹೆಗ್ಡೆ, ಪ್ರಕಾಶ್ ರೈ, ಶ್ರೀ ಪಡ್ರೆ ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಪ್ರದಾನ ಮಾಡಲಾಗಿದೆ.

ಅಕ್ಟೋಬರ್ 10ರಂದು ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ದಿನ ಡಾ. ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗುವುದು.

ಈ ಬಾರಿ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಅಕ್ಟೋಬರ್ ಒಂದರಿಂದ ಹತ್ತರವರೆಗೆ ಹತ್ತು ದಿನಗಳ ಸಾಂಸ್ಕೃತಿಕ- ಸಾಹಿತ್ಯಿಕ ಸುಗ್ಗಿ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಹಮ್ಮಿಕೊಳ್ಳಲಾಗಿದೆ. ಕಾರಂತ ಚಿಂತನ-ನೃತ್ಯ ಪ್ರದರ್ಶನ, ಸಂಗೀತ ಸುಧೆ-ಯಕ್ಷ-ನಾಟ್ಯ-ವೈಭವ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾರಂತ ಥೀಮ್ ಪಾರ್ಕ್ ಯುಟ್ಯೂಬ್ ಹಾಗೂ ಪೇಸ್ ಬುಕ್ ಪೇಜ್‌ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here