ಸಿದ್ಧಾಪುರ: ಮಗನ ಹುಟ್ಟುಹಬ್ಬಕ್ಕೆ ಬೆಂಗಳೂರಿನಿಂದ ಊರಿಗೆ ಬಂದ ವ್ಯಕ್ತಿ ಸಿಡಿಲಾಘಾತಕ್ಕೆ ಬಲಿ

0
381

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತಾಲೂಕಿನ ಸಿದ್ಧಾಪುರದ ಗ್ರಾಮ ಮಂಗಳವಾರ ಸಂಜೆ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಸಿದ್ಧಾಪುರ ಗ್ರಾಮದ ಸ್ವಾಮಿಹಾಡಿಯ ಸುರೇಶ್ ಶೆಟ್ಟಿ (೩೮) ಮೃತ ದುರ್ದೈವಿ.

ಮಂಗಳವಾರ ಸಂಜೆ ಸಿದ್ಧಾಪುರದಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು, ಈ ಸಂದರ್ಭ ಸುರೇಶ್ ಶೆಟ್ಟಿ ಎಂಬವವರು ತನ್ನ ಕಿರಿಯ ಮಗನೊಂದಿಗೆ ತನ್ನ ಮನೆಯ ಸಮೀಪವೇ ಇದ್ದ ಮಾವಿನ ಮರದಿಂದ ಮಾವಿನಹಣ್ಣು ತರಲು ತೆರಳಿದ್ದರು. ಈ ವೇಳೆ ಅವರ ಎದೆಯ ಭಾಗಕ್ಕೆ ಏಕಾಏಕಿ ಸಿಡಿಲು ಬಡಿದಿದೆ. ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು ಬದುಕಿಸುವ ಪ್ರಯತ್ನ ಮಾಡಲಾಗಿತ್ತಾದರೂ ಇದೇ ವೇಳೆ ಸಿದ್ಧಾಪುರ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದರಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿದ್ದರಿಂದ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ವೇಳೆ ಅವರೊಂದಿಗಿದ್ದ ಕಿರಿಯ ಮಗ ಪ್ರಾಣಾಪಾಯದಿಂದ ಪಾರಾಗಿದೆ.

ಹೆನ್ನಾಬೈಲುವಿನ ಬಸವ ಶೆಟ್ಟಿ ಅವರ ಪುತ್ರರಾದ ಸುರೇಶ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಹೋಟೆಲ್ ಕಾರ್ಮಿಕರಾಗಿದ್ದು, ಮಗನ ಹುಟ್ಟುಹಬ್ಬಕ್ಕೆ ಬೆಂಗಳೂರಿನಿಂದ ಊರಿಗೆ ಬಂದು ಸಿದ್ಧಾಪುರ ಸ್ವಾಮಿಹಾಡಿಯ ಹೆಂಡತಿ ಮನೆಯಲ್ಲಿ ಉಳಿದುಕೊಂಡಿದ್ದರು. ಸಿಡಿಲಾಘಾತದ ಸಂದರ್ಭ ಮನೆಯಿಂದ ಸಮೀಪವೇ ಅವರು ಮೃತಪಟ್ಟಿರುವುದು ಕುಟುಂಬಿಕರಿಗೂ ಆಘಾತವನ್ನುಂಟುಮಾಡಿದೆ. ಈ ವೇಳೆ ಸುರೇಶ್ ಶೆಟ್ಟಿ ಅವರ ಮಡದಿ, ಅತ್ತೆ, ನಾದಿನಿ ಹಾಗೂ ಓರ್ವ ಮಗ ಮನೆಯ ಒಳಗಿದ್ದುದರಿಂದ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು ಸಿದ್ಧಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ವಿನೋದಾ, ೮ ವರ್ಷದ ಸುಮೋದ್ ಹಾಗೂ ೪ ವರ್ಷದ ಸರ್ವದ ಎಂಬ ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲಾಘಾತಕ್ಕೆ ಸಿದ್ದಾಪುರ ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಹಾಗೂ ವಿದ್ಯುತ್ ಸಮಸ್ಯೆ ಎದುರಾಗಿದ್ದು, ರಾತ್ರಿಯ ತನಕವೂ ದುರಸ್ತಿಯಾಗಿರಲಿಲ್ಲ.

LEAVE A REPLY

Please enter your comment!
Please enter your name here