ಕುಂದಾಪುರ ತಾಲೂಕು ಆಡಳಿತದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ

0
636

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ಮಾದರಿಯಲ್ಲಿ ರಚಿಸಿದ ಸಂವಿಧಾನದಿಂದಲೇ ಭಾರತ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ. ದೂರದರ್ಶಿತ್ವ ಹೊಂದಿದ್ದ, ಪಾರದರ್ಶಕವಾಗಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಅಂಬೇಡ್ಕರ್ ಅವರು ಮಹಾನ್ ನಾಯಕ್, ಮಹಾಮಾನವತಾವಾದಿ ಹಾಗೂ ಪ್ರಾತ:ಸ್ಮರಣೀಯರು. ಅಂಬೇಡ್ಕರ್‍ರವರು ಹಾಕಿದ ಬಲಿಷ್ಠ ಬುನಾದಿ, ಸಂವಿಧಾನದಿಂದ ದೇಶದಲ್ಲಿ ಸಮಾನತೆ ಹಾಗೂ ಸ್ವಾತಂತ್ರ್ಯ ಕಾಣುವಂತಾಗಿದೆ ಎಂದು ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಂದಾಪುರ ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘಟನೆಗಳ ಸಹಯೋಗದೊಂದಿಗೆ ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸ ನೀಡಿ ಮಾತನಾಡಿದ ಉಪಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೊವಾಡಿ, ಇಡೀ ಸಮಗ್ರ ಭಾರತದ ಚಿತ್ರಣವನ್ನೊಳಗೊಂಡ ಶ್ರೇಷ್ಠ ಚಾರಿತ್ರಿಕ ಪುರುಷ ಡಾ.ಅಂಬೇಡ್ಕರ್ ಅವರದ್ದು ಅಳತೆಗೆ ಮೀರದ ವ್ಯಕ್ತಿತ್ವ. ಸ್ವಾಭಿಮಾನಿ ರಾಷ್ಟ್ರೀಯವಾದಿ. ಶ್ರೇಷ್ಠ ನ್ಯಾಯ ತಜ್ಞರಾಗಿದ್ದ ಅವರು, ಶೋಷಣೆಯಿಂದ ಕೂಡಿದ ಸಮಾಜದ ಬದುಕಿನ ಆಶಾಕಿರಣವಾಗಿದ್ದರು. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ಪ್ರತಿಪಾದಕರಾಗಿದ್ದರು. ಸಾಮಾಜಿಕ ಸ್ವಾತಂತ್ರ್ಯದ ಹರಿಕಾರರಾಗಿದ್ದ ಡಾ.ಅಂಬೇಡ್ಕರ್. ವಾಸ್ತವವಾದಿ, ವಿಚಾರವಾದಿ. ಜಾತಿ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆ, ಜಾತಿ ವ್ಯವಸ್ಥೆಯಿಂದ ಹೊರಬರಲು ಪರಿಹಾರೋಪಾಯಗಳ ಬಗ್ಗೆ ಚಿಂತನೆ ನಡೆಸಿದ ಡಾ.ಅಂಬೇಡ್ಕರ್ ಅವರು, ಅಂಬೇಡ್ಕರ್ ಧರ್ಮ ವಿರೋಧಿಯಲ್ಲ. ಯಾವುದೇ ಧರ್ಮದ ಒಳಗಿರುವ ಮೌಢ್ಯಗಳನ್ನು, ಮೂಡನಂಬಿಕೆಗಳನ್ನು, ಸಂಪ್ರದಾಯಗಳನ್ನು ತನ್ನ ಬದುಕಿನುದ್ದಕ್ಕೂ ವಿರೋಧಿಸುತ್ತಾ ಬಂದಿದ್ದರು. ಜ್ಞಾನದ ಬೆಳಕು, ಅರಿವಿನ ಬೆಳಕು ಡಾ.ಅಂಬೇಡ್ಕರ್ ಎಂದು ಅವರು ಹೇಳಿದರು.

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳಾದ ರತ್ನ, ಸೀತವ್ವ, ಆತ್ಮಿಕಾ, ಮಾರುತಿ ಕಲ್ಲಪ್ಪ ಹಾಗೂ ಷಣ್ಮುಗ ಎಸ್. ಅವರನ್ನು ಗೌರವಿಸಲಾಯಿತು. ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಕುಂದಾಪುರ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ತಾ ಶುಭಾಶಂಸನೆಗೈದರು.
ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಕುಂದಾಪುರ ತಹಶೀಲ್ದಾರ್ ಪ್ರದೀಪ ಕುರ್ಡೇಕರ್ ಎಸ್., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಉಪತಹಶೀಲ್ದಾರ್ ವಿನಯ್ ಸ್ವಾಗತಿಸಿದರು. ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ರಾಧಿಕಾ ರಾಣಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here