ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳ ಭೇಟಿ

0
143

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನಬಾರ್ಡ್‍ನ ಡಿಜಿಎಮ್ ಸತೀಶನ್ ಕರ್ತಾ ಇವರ ನೇತೃತ್ವದಲ್ಲಿ ಮುಂಬೈ, ಪುಣೆ ಮತ್ತು ಅಹಮದಾಬಾದ್‍ನ 28 ನಬಾರ್ಡ್ ಅಧಿಕಾರಿಗಳು ಕೋಟದ ಸಹಕಾರಿ ವ್ಯವಸಾಯಕ ಸಂಘಕ್ಕೆ ಇತ್ತೀಚಿಗೆ ಭೇಟಿ ನೀಡಿದರು.

ಈ ಸಂದರ್ಭ ಸಂಘದ ಅಧ್ಯಕ್ಷರಾದ ಡಾ. ಕೃಷ್ಣ ಕಾಂಚನ್ ಇವರು ಸಂಘವು ನಡೆದು ಬಂದ ದಾರಿ, ಸದಸ್ಯತ್ವ, ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಸಾಲಗಳು, ಸ್ವ ಸಹಾಯ ಸಂಘ ರಚನೆ, ಉಳಿತಾಯ ಕ್ರೋಢೀಕರಣ, ಸಾಲ ವಿತರಣೆ ಮತ್ತು ವಸೂಲಾತಿ, ಸಂಘದ ಸ್ವಂತ ಕಟ್ಟಡಗಳು ಮತ್ತು ಗೋದಾಮುಗಳು, ಸಂಘದ ವ್ಯವಹಾರ ಅಭಿವೃದ್ಧಿ, ಸದಸ್ಯರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸವಲತ್ತುಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು.

ಸಂಘದ ಆರ್ಥಿಕ ಅಭಿವೃದ್ಧಿ, ಸಾಲ ನೀಡುವಿಕೆ ಮತ್ತು ವಸೂಲಾತಿ, ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆ ಮತ್ತು ಸಂಘದ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡರು. ಸಂಘದ ವ್ಯವಸ್ಥಿತ ಕಾರ್ಯವೈಖರಿ, ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘದ ಸರ್ವತೋಮುಖ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ಶ್ಲಾಘಿಸಿದರು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಅವರು ಭೇಟಿ ನೀಡಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here