ಕುಂದಾಪುರ :ಸಿದ್ಧಾಪುರ ಏತ ನೀರಾವರಿ ಯೋಜನೆ: ಮೂಲ ಡಿಪಿಆರ್(DPR) ನಂತೆ ಅನುಷ್ಠಾನಕ್ಕೆವಾಗಬೇಕು – ರೋಹಿತ್ ಕುಮಾರ್ ಶೆಟ್ಟಿ

ಕುಂದಾಪುರ ಮಿರರ್ ಸುದ್ದಿ..
ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಮೂಲ ಡಿಪಿಆರ್ ಪ್ರಕಾರ ಮಾಡಬೇಕು. ಮೂಲ ಯೋಜನೆಯನ್ನು ಕೈಬಿಟ್ಟು ಒಂದು ವೇಳೆ ರೈತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪಕ್ಷಾತೀತವಾದ ಎಲ್ಲರನ್ನು ಒಗ್ಗೂಡಿಸಿಕೊಂಡು ಸತ್ಯಾಗ್ರಹ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿ.ಪಂ. ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಟಿಯಲ್ಲಿ, ಯೋಜನೆಗೆ 2018ರಲ್ಲಿ ಸೌಕೂರು ಸಿದ್ದಾಪುರ ಏತ ನೀರಾವರಿ ಎಂದು ಆಗಿ ಬಳಿಕ ಸಿದ್ದಾಪುರ ಬಿಟ್ಟು ಹೋಗಿದೆ. 2019ರಲ್ಲಿ ಡಿಪಿಆರ್ ಆಗಿ 2021ರಲ್ಲಿ 165 ಕೋ.ರೂ. ಮಂಜೂರಾಗಿತ್ತು. ಮೊದಲ ಗುತ್ತಿಗೆದಾರರು ಕಾಮಗಾರಿ ಮಾಡದೇ ರಾಜೇಶ್ ಕಾರಂತ್ ಗುತ್ತಿಗೆ ವಹಿಸಿ 2 ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್ ಲೈನ್ ಮಾಡಿ ಪಂಪ್ ಹೌಸ್ ಮಾಡುವಾಗ ಕೆಲಸಕ್ಕೆ ತಡೆ ನೀಡಲಾಯಿತು. ಮಾಜಿ ಶಾಸಕ ಗೋಪಾಲ ಪೂಜಾರಿ ಮುಖ್ಯಮಂತ್ರಿಗೆ ನೀಡಿದ ಪತ್ರವನ್ನು ತಡೆಗೆ ಕಾರಣವಾಗಿ ಕೊಡಲಾಯಿತು. ಪ್ರಸ್ತುತ ವಿನ್ಯಾಸವು ವಾರಾಹಿ ಮೂಲ ನದಿಯ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ನೀಡುವಂತಿದೆ. ಶಿವನ ಲಿಂಗಕ್ಕೆ ತೊಂದರೆ ಆಗುತ್ತದೆ. ಮೂಲ ನದಿಯಲ್ಲಿ ನೀರು ಬತ್ತಿಹೋದರೆ ಜಲಚರಗಳು ನಾಶವಾಗುತ್ತವೆ. ಅಲ್ಲದೆ, ನದಿ ಪಾತ್ರದ ಅಂತರ್ಜಲ ಮಟ್ಟ ಕುಸಿದು ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿ ಬಂಜರಾಗುವ ಭೀತಿ ಇದೆ ಎನ್ನುವುದು ಸುಳ್ಳು ಆರೋಪ. ಇದಕ್ಕೆ ಆಧಾರಗಳು ಏನು ಎಂದು ಅವರು ಪ್ರಶ್ನಿಸಿದರು.
ಸರಕಾರದಿಂದ 2005 ನೇ ಇಸವಿಯಲ್ಲಿ ಡ್ಯಾಮ್ ಮಾಡುವಾಗ ಮುಂದಿನ ಎಡ ದಂಡೆ ಮತ್ತು ಬಲ ದಂಡೆ ಯೋಜನೆಗಳಿಗೆ ಹಾಗೂ ಏತ ನೀರಾವರಿಗಳಿಗೆ ನೀರು ಕೊಡಲೆಂದೇ ಡ್ಯಾಮ್‍ನ್ನು ಮಾಡಿದ್ದಾರೆ. ಆದರೆ ಈ ಡ್ಯಾಮಿನಿಂದ ನೀರು ತೆಗೆಯ ಬಾರದೆಂದು ಹೇಳುವ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು.
4 ಗೇಟ್ ತೆರೆದರೆ 4,500 ಕ್ಯುಸೆಕ್ಸ್ ನೀರು ಬರುತ್ತದೆ. 3 ಗೇಟ್ ತೆರೆದರೆ 3,375 ಕ್ಯುಸೆಕ್ಸ್ ನೀರು ಬರುತ್ತದೆ. ಈಗ 6 ಸಾವಿರ ಹೆಕ್ಟೇರು ಕೃಷಿ ಭೂಮಿಗೆ ನೀರು ಹೋಗುತ್ತದೆ. ಇದು ಮೂಲ ಯೋಜನೆಯಂತೆಯೇ 15 ಸಾವಿರ ಹೆಕ್ಟೇರಿಗೆ ಹೋಗಬೇಕು. 1 ದಿನಕ್ಕೆ 66 ಕ್ಯೂಸೆಕ್ಸ್ ನೀರು ಮಾತ್ರ ಏತ ನೀರಾವರಿಗೆ ಬೇಕಾಗುವುದು. ಹೊಳೆ ಶಂಕರನಾರಾಯಣದ ಶಿವಲಿಂಗಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಮೂಲ ಯೋಜನೆ ಪ್ರಕಾರ ಸರಕಾರದ ಅಣೆಕಟ್ಟಿನಿಂದಲೇ ಎಡದಂಡೆ, ಬಲದಂಡೆಗೆ ನೀರು ತೆಗೆಯಬೇಕು. ಅರಣ್ಯ ಇಲಾಖೆ ನಿರಾಕ್ಷೇಪಣೆ ನೀಡಿದ್ದು, ಹಾಸನದಲ್ಲಿ ನೀರಾವರಿ ಇಲಾಖೆ ಅರಣ್ಯ ಇಲಾಖೆಗೆ 125 ಹೆ.ಜಾಗ ಹಾಗೂ ನೆಡುತೋಪಿಗಾಗಿ 9 ಕೋ.ರೂ. ನೀಡಿದೆ. ಒಂದೊಮ್ಮೆ ಈಗ ಮಾಜಿ ಶಾಸಕರು ಆಕ್ಷೇಪಿಸಿದಂತೆ ಸ್ಥಳ ಬದಲಾಯಿಸಿದರೆ, ಹೊಸ ಅಣೆಕಟ್ಟಿಗೆ ಬೇಕಾಗುವ ಅನುದಾನ, ಹೊಸದಾಗಿ ಅರಣ್ಯ ಇಲಾಖೆ ಮಂಜೂರಾತಿ ಇತ್ಯಾದಿಗಳು ನಡೆಯಬೇಕಾಗುತ್ತದೆ. ಯೋಜನೆ ಮತ್ತೊಂದಷ್ಟು ವರ್ಷಗಳು ಮುಂದೂಡಲ್ಪಡುತ್ತದೆ. ಈಗ ಯೋಜನೆಗೆ ಎಲ್ಲವೂ ಸುಗಮವಾಗಿದ್ದು ವಾರಾಹಿ ತಟದಲ್ಲಿ ಇರುವ ಸಿದ್ದಾಪುರಕ್ಕೆ ನೀರು ದೊರೆಯಲು ಕಾಮಗಾರಿ ಆಗಲೇಬೇಕು. ಅದಕ್ಕಾಗಿ ವಿಶೇಷ ಗ್ರಾಮಸಭೆ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ. ಮಾಜಿ ಶಾಸಕರೂ ಇದಕ್ಕೆ ಅಡ್ಡಿ ಪಡಿಸಲಾರರು ಎಂಬ ನಂಬಿಕೆ ಇದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಹರ್ಷ ಜಿ., ಭೋಜರಾಜ ಶೆಟ್ಟಿ, ಸಿದ್ದಾಪುರ ಪಂಚಾಯತ್ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಮಾಜಿ ಅಧ್ಯಕ್ಷ ಶೇಖರ ಕುಲಾಲ್, ಪ್ರಕಾಶ್ ಶೆಟ್ಟಿ, ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts

Exit mobile version