ಗುಜ್ಜಾಡಿ :ಗೇರು ಪ್ಲಾಂಟೇಶನ್‍ನಲ್ಲಿ ಆಕಸ್ಮಿಕ ಬೆಂಕಿ

0
560

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ : ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ಗೇರು ಪ್ಲಾಂಟೇಶನ್‍ನಲ್ಲಿ ಬುಧವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡದಂತೆ ಸ್ಥಳೀಯರು, ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಗುಜ್ಜಾಡಿ ಗ್ರಾಮದ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯ ಬದಿಯಲ್ಲಿರುವ ಗೇರು ಪ್ಲಾಂಟೇಶನ್‍ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನೋಡ ನೋಡುತ್ತಿದ್ದಂತೆಯೇ ವ್ಯಾಪಕವಾಗಿ ಹಬ್ಬತೊಡಗಿತು. ಗೇರು ಪ್ಲಾಂಟೇಶನ್‍ನಲ್ಲಿ ಒಣಗಿದ ಗಿಡಗಂಟಿಗಳಿದ್ದು ಇದರಿಂದ ಬೆಂಕಿ ಬೀಸುತ್ತಿರುವ ಗಾಳಿಗೆ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸಿಕೊಳ್ಳುತ್ತಿದೆ. ಸುದ್ಧಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸರು, ಗುಜ್ಜಾಡಿ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು, ಮೆಸ್ಕಾಂ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕೆಸಿಡಿಸಿ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯ ತನಕ ಬೆಂಕಿ ವ್ಯಾಪಿಸಿಕೊಳ್ಳುತ್ತಿದೆ. ಬೆಳಿಗ್ಗೆಯಿಂದ ಸಂಜೆ ತನಕ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದರೂ ಬೆಂಕಿ ಕಾಡ್ಗಿಚ್ಚಿನಂತೆ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಕಿ ಅವಘಡಕ್ಕೆ ಸುಮಾರು 10 ಎಕ್ರೆಗೂ ಮಿಕ್ಕಿ ಗೇರು ಪ್ಲಾಂಟೇಶನ್‍ನಲ್ಲಿರುವ ಗೇರು ಮರಗಳು ಸೇರಿದಂತೆ ನೂರಾರು ಮರಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣವಾಗಿ ಹಾನಿಯಾಗಿದೆ. ಅನೇಕ ಮರಗಳು ಸಂಪೂರ್ಣ ಸುಟ್ಟು ಹೋಗಿದೆ.
ಬೆಂಕಿ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪ್ರತಿವರ್ಷ ಇದೇ ರೀತಿಯಾಗಿ ಗೇರು ಪ್ಲಾಂಟೇಶನ್‍ನಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದು ಕಾರಣ ಇನ್ನೂ ನಿಗೂಢವಾಗಿದೆ.

LEAVE A REPLY

Please enter your comment!
Please enter your name here