ಕುಂದಾಪುರ ಪುರಸಭೆಯ ಪೇ ಪಾರ್ಕಿಂಗ್ ಟೆಂಡರ್ ನಿರ್ಣಯ ಹಿಂಪಡೆಯುವಂತೆ ಕುಂದಾಪುರ ಸಹಬಾಳ್ವೆ, ಸಮಾನ ಮನಸ್ಕ ಸಂಘಟನೆಗಳಿಂದ ಆಗ್ರಹ – ಸಹಾಯಕ ಆಯುಕ್ತರಿಗೆ ಮನವಿ

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ, ಮಾ.6: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಹಾಗೂ ಅದಕ್ಕಾಗಿ ಟೆಂಡರ್ ಮೂಲಕ ವಸೂಲಿ ಹಕ್ಕು ನೀಡಲು ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಕಟಣೆ ಹೊರಡಿಸಿರುವುದು ಸಾಮಾನ್ಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದ್ದು ಜನವಿರೋಧಿ ಕ್ರಮವಾಗಿದ್ದು ಕೂಡಲೇ ಟೆಂಡರ್ ಹಿಂಪಡೆಯುವಂತೆ ಸಹಭಾಳ್ವೆ-ಕುಂದಾಪುರ ಹಾಗೂ ಸಮಾನ ಮನಸ್ಕ ಸಂಘಟನೆಗಳು ಕುಂದಾಪುರ ಸಹಾಯಕ ಆಯುಕ್ತರನ್ನು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಕುಂದಾಪುರಕ್ಕೆ ಪ್ರತಿದಿನ ಸಾವಿರಾರು ಜನರು ತಮ್ಮ ದೈನಂದಿನ ವ್ಯಾಪಾರ, ಉದ್ಯೋಗ ಮತ್ತು ಅಗತ್ಯ ಕಾರ್ಯಗಳಿಗಾಗಿ ಬರುತ್ತಾರೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಲು ಸಹ ಶುಲ್ಕ ವಿಧಿಸುವುದರಿಂದ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರು ಅನಗತ್ಯ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಇದರಿಂದ ನಗರದ ವ್ಯಾಪಾರ ಚಟುವಟಿಕೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀಳುವ ಆತಂಕವಿದೆ. ಇದಲ್ಲದೇ ಪೇ ಪಾರ್ಕಿಂಗ್ ಹಕ್ಕನ್ನು ಹರಾಜು ಮೂಲಕ ಖಾಸಗಿ ವ್ಯಕ್ತಿಗಳು ಅಥವಾ ಕಂಪೆನಿಗಳಿಗೆ ನೀಡುವುದರಿಂದ ಅನಗತ್ಯ ವಸೂಲಿ, ಸಾರ್ವಜನಿಕರೊಂದಿಗೆ ಸಂಘರ್ಷ ಮತ್ತು ಅಸಮಾಧಾನಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದುದರಿಂದ ಸಾರ್ವಜನಿಕರ ಅನುಕೂಲ ಮತ್ತು ನಗರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕುಂದಾಪುರ ಪುರಸಭೆ ತೆಗೆದುಕೊಂಡಿರುವ ಈ ಪೇ ಪಾರ್ಕಿಂಗ್ ಟೆಂಡರ್ ನಿರ್ಣಯವನ್ನು ತಕ್ಷಣವೇ ಮರುಪರಿಶೀಲಿಸಿ ಹಿಂಪೆಡೆಯಬೇಕೆಂದು ಆಗ್ರಹಿಸಿದರು.
ಪಾರ್ಕಿಂಗ್ ವ್ಯವಸ್ಥೆಯನ್ನು ಮೇಲ್ಸೆತುವೆಯ ಕೆಳಗಡೆ ಮಾಡಿ ಫೆ ಪಾರ್ಕಿಂಗ್ ಮಾಡಲಿ, ಅದು ಬಿಟ್ಟು ಅಂಗಡಿ ಮುಂದೆ ನಿಲ್ಲಿಸಿದ ವಾಹನಗಳಿಗೆ ಶುಲ್ಕ ವಿಧಿಸುವುದು ಸರಿಯಲ್ಲ. ಹರಾಜು ಪಡೆದವರು ಮುಂದೆ ಸಾರ್ವಜನಿಕರೊಂದಿಗೆ ಗದ್ದಲಕ್ಕೂ ಕಾರಣವಾದೀತು. ಹಾಗಾಗಿ ಈ ಅವೈಜ್ಞಾನಿಕ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿ, ಕುಂದಾಪುರ ಸಹಾಯಕ ಆಯುಕ್ತರು, ಪುರಸಭೆ ಆಡಳಿತಾಧಿಕಾರಿ ರಶ್ಮಿ ಎಸ್.ಆರ್ ಅವರು, 2010ರಲ್ಲಿ ಜಿಲ್ಲಾಧಿಕಾರಿಗಳಿಂದ ಗೆಜೆಡೆಡ್ ಆಗಿದೆ. ಆದರೆ ತೊಂದರೆ ಇಲ್ಲ, ಪ್ರಕಟಣೆ ಕೊಟ್ಟ ಕೂಡಲೇ ಮುಗಿತು ಅಂತಲ್ಲ. ನಿಮ್ಮ ಆಕ್ಷಪಣೆಗಳನ್ನು ಪರಿಗಣಿಸುತ್ತೇವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ. ಆ ಬಗ್ಗೆ ನಿರ್ಣಯ ಮಾಡಿದ್ದಾರೆ. ನಿಗಧಿತ ಸ್ಥಳದಲ್ಲಿ ಪಾರ್ಕಿಂಗ್ ಅವಕಾಶ ಕಲ್ಪಿಸಿ ವ್ಯವಸ್ಥಿತವಾಗಿ ಮಾಡಬೇಕಾಗಿದೆ. ಆ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು.

ಸಹಭಾಳ್ವೆ ಸಂಘಟನೆಯ ಅಧ್ಯಕ್ಷರಾದ ರಾಮಕೃಷ್ಣ ಹೇರ್ಳೆ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಪುರಸಭಾ ಮಾಜಿ ಅಧ್ಯಕ್ಷ ವಿ.ನರಸಿಂಹ, ಕಾರ್ಮಿಕ ಮುಖಂಡರುಗಳಾದ ಹೆಚ್.ನರಸಿಂಹ, ಚಂದ್ರಶೇಖರ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೆಡಿಪಿ ಸದಸ್ಯರಾದ ಗಣೇಶ, ಕೇಶವ ಭಟ್, ಜೋಯ್ ಕರ್ವಾಲ್ಲೋ ಮೊದಲಾದವರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts

Exit mobile version