ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಕ್ವಾಡಿಯ ಬಾಂಡ್ಯ-ಎಜುಕೇಶನಲ್ ಟ್ರಸ್ಟ್ ನ ಅಂಗಸಂಸ್ಥೆಗಳಾದ ಗುರುಕುಲ ಪದವಿ ಪೂರ್ವ ಕಾಲೇಜು ಹಾಗೂ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡುತ್ತಾ – ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾದ ಯೋಗವು ವಿಶ್ವಮಟ್ಟದಲ್ಲಿ ಉತ್ಕೃಷ್ಟ ಸ್ಥಾನವನ್ನು ಪಡೆದುದ್ದಲ್ಲದೆ ನಮ್ಮ ಉದಾತ್ತ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹಾಕಾರ್ಯವಾಗಿ ರೂಪ ಪಡೆದಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವುದರೊಂದಿಗೆ ಸ್ವಸ್ಥ ಜೀವನವನ್ನು ರೂಪಿಸುವಲ್ಲಿ ಯೋಗವು ಮಹತ್ತರ ಸ್ಥಾನವನ್ನು ಪಡೆದಿದೆ. ನಮ್ಮ ಮೂಲ ಋಷಿ ಸಂಸ್ಕೃತಿಯನ್ನು ಇಂದು ಇಡೀ ಜಗತ್ತು ಪಾಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ನಾಯ್ಕರವರು ಯೋಗ ದಿನಾಚರಣೆಯ ಮಹತ್ವ ತಿಳಿಸುತ್ತಾ – ಯೋಗವು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಯಾಂತ್ರಿಕ ಜೀವನಶೈಲಿಯ ಒತ್ತಡವನ್ನು ಕಡಿಮೆ ಮಾಡಲು ಯೋಗ ಅಭ್ಯಾಸವು ಉತ್ತಮ ಮಾರ್ಗ ಎಂದರು. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಯೋಗಾಸನ ಪ್ರದರ್ಶಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ದೈಹಿಕ ಶಿಕ್ಷಕ ಶಿವಮೂರ್ತಿ ರವರು ಕಾರ್ಯಕ್ರಮವನ್ನು ಸಂಘಟಿಸಿದ್ದು, ಅಧ್ಯಾಪಕ ವೃಂದ ನಿಯಮ ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ತನುಶ್ರೀ ಯೋಗಾಸನದ ವಿವಿಧ ಆಯಾಮಗಳನ್ನು ನಿರ್ದೇಶಿಸಿದರು. ಹವಿಶ ಕಾರ್ಯಕ್ರಮವನ್ನು ನಿರೂಪಿಸಿದ್ದು , ಲಕ್ಷ್ಮಿ ಪ್ರಿಯ ಸ್ವಾಗತಿಸಿ, ಮಾನ್ಯ ವಂದಿಸಿದರು.
