ಕೆ.ಪಿ.ಎಸ್ ಕೋಟೇಶ್ವರ ವಿದ್ಯಾರ್ಥಿ ಜೀವನದಲ್ಲಿ ವ್ಯಸನಮುಕ್ತಿಯ ಅರಿವು ಮೂಡಿಸಿದ ಕಾರ್ಯಗಾರ

0
13

ಕುಂದಾಪುರ ಮಿರರ್ ಸುದ್ದಿ…

ಕೋಟೇಶ್ವರ :ವಿದ್ಯಾರ್ಥಿಗಳಲ್ಲಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಟೇಶ್ವರ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್, ಪ್ರೌಢಶಾಲಾ ವಿಭಾಗ, ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿ “ಜೀವನದಲ್ಲಿ ವ್ಯಸನ”ಎನ್ನುವ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಮೆಡಿಕಲ್ ಎಕ್ಸಿಕ್ಯೂಟಿವ್ ಕೋ-ಆರ್ಡಿನೇಟರ್ ಅರ್ಪಿತ ಅವರು ವಿದ್ಯಾರ್ಥಿಗಳಿಗೆ ಮೆದುಳಿನ ಆರೋಗ್ಯ (Brain Health), ಅಪಸ್ಮಾರ (Epilepsy), ಮೊಬೈಲ್ ವ್ಯಸನ, ಮಾದಕ ವಸ್ತುಗಳ ವ್ಯಸನ (Drug Addiction) ಸೇರಿದಂತೆ ವಿವಿಧ ರೀತಿಯ ವ್ಯಸನಗಳ ದುಷ್ಪರಿಣಾಮಗಳು, ಅವುಗಳಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಮತ್ತು ಅವುಗಳಿಂದ ದೂರವಿರುವ ಪರಿಣಾಮಕಾರಿ ಮಾರ್ಗಗಳ ಕುರಿತು ಮನಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸಮಯದ ಸದ್ಬಳಕೆ, ಉತ್ತಮ ಸ್ನೇಹವಲಯ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ವ್ಯಸನಗಳಿಂದ ದೂರವಿರಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ರೂಪಿಸುವ ಸುವರ್ಣ ಕಾಲವಾಗಿದ್ದು, ಮೊಬೈಲ್ ಹಾಗೂ ಮಾದಕ ವ್ಯಸನಗಳು ಭವಿಷ್ಯವನ್ನು ಹಾಳುಮಾಡುವ ಅಪಾಯವನ್ನು ಹೊಂದಿವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಸ್ತು, ಆತ್ಮವಿಶ್ವಾಸ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ ಎಂ. ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಅಮೃತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಹ ಶಿಕ್ಷಕಿ ದಿವ್ಯ ಪ್ರಭಾ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ವ್ಯಸನಮುಕ್ತ ಜೀವನದ ಕುರಿತು ಅಮೂಲ್ಯ ಮಾಹಿತಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಗಾರ ಮಹತ್ವದ ಪಾತ್ರ ವಹಿಸಿತು.

LEAVE A REPLY

Please enter your comment!
Please enter your name here