ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರದೊಂದಿಗೆ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಪುನಶ್ಚೇತನಗೊಳಿಸಲಾದ ಯಡಾಡಿ ಮದಗ ಕೆರೆಯ ಬಾಗಿನ ಅರ್ಪಣೆ ಹಾಗೂ ಹಸ್ತಾಂತರ ಕಾರ್ಯಕ್ರಮವನ್ನು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕರೆಕಟ್ಟೆಗಳು ಜನರ ಜೀವನಾಡಿ, ಕೆರೆಗಳನ್ನು ಉಳಿಸುವ ಕೆಲಸವನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ಮಾಡಬೇಕಾಗಿದೆ. ದರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಹಲವಾರು ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು, 955 ನೇ ಕೆರೆ ನಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಮಾಡಿರುವುದು ಬಹಳ ಸಂತೋಷದ ವಿಷಯ. ನೂರಾರು ವರ್ಷಗಳ ಇತಿಹಾಸವುಳ್ಳ ಕೆರೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪುನಶ್ಚೇತನಗೊಳಿಸಿ ಪುಣ್ಯದ ಕೆಲಸ ಮಾಡುತ್ತಿದೆ. ನಮ್ಮ ತಾಲೂಕಿನಲ್ಲಿ ಈಗಾಗಲೇ ಹಲವು ಕೆರೆಗಳನ್ನು ಹೂಳೆತ್ತಿ ಸಾಕಷ್ಟು ಕೃಷಿ ಕುಟುಂಬಗಳಿಗೆ ಹಾಗೂ ಜನರ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟಿರುತ್ತಾರೆ. ಮುಂದೆ ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಗ್ರಾಮ ಪಂಚಾಯತ್ ಹಾಗೂ ಊರಿನವರದ್ದಾಗಿರುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್‌ಗೆ ಕೆರೆ ಹಸ್ತಾಂತರ ಮಾಡಿ ಮಾತನಾಡಿದ ಗ್ರಾಮಾಭಿವೃಧ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ನಾಗರಾಜ್ ಶೆಟ್ಟಿರವರು ಗ್ರಾಮಸ್ಥರೆಲ್ಲರೂ ಈ ಕೆರೆಯನ್ನು ನಮ್ಮೂರು ನಮ್ಮ ಕೆರೆ ಎಂದೇ ಭಾವಿಸಿ, ಇದರ ನಿರ್ವಹಣೆಯನ್ನು ಮಾಡಬೇಕಾಗಿದೆ. ಗ್ರಾಮಸ್ಥರ ಸಹಕಾರ ಇದ್ದರೆ ಮಾತ್ರ ಇಂತಹ ಕೆರೆಯನ್ನು ಅಭಿವೃಧ್ಧಿ ಮಾಡಲು ಸಾಧ್ಯ ಈ ಕೆರೆಯು 5 ಎಕ್ರೆ ವಿಸ್ತೀರ್ಣದಲ್ಲಿದ್ದು, ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.6.42 ಲಕ್ಷ ಹಾಗೂ ಗ್ರಾಮಸ್ಥರ ಹೂಳು ಸಾಗಾಟ ಮೌಲ್ಯ ಸೇರಿ ಒಟ್ಟು ರೂ.9.59 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕೆರೆಯನ್ನು ಇದೀಗ ಪುನಶ್ಚೇತನಗೊಳಿಸಿ ಪಂಚಾಯತ್‌ನವರಿಗೆ ಹಸ್ತಾಂತರ ಮಾಡಿದ್ದೇವೆ. ಇದು ಇಲ್ಲಿನ ಜನರು, ಪ್ರಾಣಿ, ಪಕ್ಷಿಗಳಿಗೆ ಉತ್ತಮ ರೀತಿಯಲ್ಲಿ ಉಪಯೋಗವಾಗಲಿ ಎಂದು ಹಾರೈಸಿದರು.
ಕೆರೆಯಂಗಳದಲ್ಲಿ ಗಿಡ ನಾಟಿ ಮಾಡಿದ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸುಬ್ರಮಣ್ಯ ಶೆಟ್ಟಿರವರು ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರ ಸರ್ವತೋಮುಖ ಅಭಿವದ್ಧಿಗೆ ಶ್ರಮಿಸುತ್ತಿದೆ. ಅಂತರ್ಜಲ ಮಟ್ಟವನ್ನು ವೃದ್ಧಿಸುವ ಇಂತಹ ಕೆರೆಗಳು ನಮಗೂ ಹಾಗೂ ನಮ್ಮ ಮುಂದಿನ ಪೀಳಿಗೆಗೆ ತುಂಬಾ ಅವಶ್ಯಕವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಿರ್ಮಾಣವಾದ ಈ ಕೆರೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೇಲ್ಲರದ್ದಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಕೆರೆಗೆ ಬಾಗಿನ ಅರ್ಪಣೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಸುಲೇಖಾ ಶೆಟ್ಟಿರವರು ಹಾಗೂ ನಾಮಫಲಕ ಅನಾವರಣವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಂತಿ ಶೆಟ್ಟಿರವರು ನೆರವೇರಿಸಿದರು. ಕೆರೆ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧುಸೂದನ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಣಪತಿ ನಾಯ್ಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶಂಕರ ಮೊಗವೀರ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಉದಯ್, ದಿನೇಶ್ ಮೊಗವೀರ, ಗುಂಡು ಶೆಟ್ಟಿ, ದೀಪಾ, ಉದ್ಯಮಿಗಳಾದ ಮಹೇಶ್ ಶೆಣೈ ಗಾವಳಿ, ಕೃಷ್ಣಮರಕಾಲ ಯಡಾಡಿ, ಬಿದ್ಕಲ್‌ಕಟ್ಟೆ ವಲಯಾಧ್ಯಕ್ಷರಾದ ರಮೇಶ್ ಪೂಜಾರಿ, ವಲಯ ಶೌರ್ಯ ಘಟಕ ಪ್ರತಿನಿಧಿ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ಸ್ವಾಗತಿಸಿ, ಕೃಷಿ ಮೇಲ್ವಿಚಾರಕರಾದ ಪ್ರದೀಪ್ ಕುಮಾರ್ ಎಲ್ಲರಿಗೂ ವಂದಿಸಿದರು. ವಲಯ ಮೇಲ್ವಿಚಾರಕರಾದ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.
