30 ವರ್ಷದಿಂದ ಏಕಪಥ ಕೊಂಕಣ ರೈಲ್ವೆ ಅಭಿವೃದ್ಧಿಗೆ ಸಿಎಂ ಗೆ ಸಂಸದ ಕೋಟ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ

0
55

ಕುಂದಾಪುರ ಮಿರರ್ ಸುದ್ದಿ…

ಬೆಂಗಳೂರು : ಕಳೆದ ಸುಮಾರು 30 ವರ್ಷಗಳಿಂದ ಏಕಪಥದಲ್ಲೇ ಸಂಚರಿಸುತ್ತಿರುವ ಕೊಂಕಣ ರೈಲ್ವೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಹಕಾರ ನೀಡಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿ ನಡೆದ ಭೇಟಿಯಲ್ಲಿ ಸಂಸದರೊಂದಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು.

ಕೊಂಕಣ ರೈಲ್ವೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಮತ್ತು ಹಳಿಗಳನ್ನು ದ್ವಿಪಥಗೊಳಿಸಲು ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವುದು ಅಗತ್ಯ ಎಂದು ಸಂಸದರು ಪ್ರತಿಪಾದಿಸಿದರು.

ಹಿರಿಯ ಮುತ್ಸದ್ದಿ ಜಾರ್ಜ್ ಫೆರ್ನಾಂಡಿಸ್ ಅವರು ಕೊಂಕಣ ರೈಲ್ವೆಯನ್ನು ಕರಾವಳಿ ಜನತೆಗೆ ಸಮರ್ಪಿಸುವ ವೇಳೆ ಮಾಡಿಕೊಂಡಿದ್ದ ಒಪ್ಪಂದದಂತೆ, ಕೆಲವು ರಾಜ್ಯಗಳು ತಮ್ಮ ಹಣಕಾಸು ಪಾಲನ್ನು ತ್ಯಜಿಸಬೇಕಾಗಿದೆ. ಕೇರಳ ಮತ್ತು ಗೋವಾ ಈಗಾಗಲೇ ತಮ್ಮ ಪಾಲನ್ನು ತ್ಯಜಿಸಿವೆ. ಇದೇ ರೀತಿ ಕರ್ನಾಟಕ ಸರ್ಕಾರವೂ ಸಹಕಾರ ನೀಡಬೇಕು ಎಂದು ಕೋರಿದರು.

ಕರಾವಳಿ ಭಾಗದ ಸಂಸದರಾದ ಬ್ರಿಜೇಶ್ ಚೌಟ ಮತ್ತು ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರೂ ಈ ಅಭಿಪ್ರಾಯ ಹೊಂದಿದ್ದಾರೆ. ಕೇಂದ್ರ ಸರ್ಕಾರದ ಮೂಲಕ ಕೊಂಕಣ ರೈಲ್ವೆ ಅಭಿವೃದ್ಧಿ ನಮ್ಮ ಪ್ರಮುಖ ಗುರಿ ಎಂದು ಸಂಸದ ಕೋಟ ಅವರು ಸಿಎಂಗೆ ಮನವರಿಕೆ ಮಾಡಿದರು.

ಭೇಟಿಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಕ್ಷೇತ್ರದ ಅನುಭವದ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೊಂಕಣ ರೈಲ್ವೆ ಅಭಿವೃದ್ಧಿಗಾಗಿ ಸಂಸದರ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here