ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದ್ದು, ಈ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಪರಿಸರ ಹೋರಾಟಗಾರ ಹಾಗೂ ವಿಜ್ಞಾನಿ ಸೋನಂ ವಾಂಗ್ಚುಕ್ ಅವರ ಶಾಂತಿಯುತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಿಐಟಿಯು ಕುಂದಾಪುರ ಸಂಚಲನ ಸಮಿತಿ ವತಿಯಿಂದ ಸೋಮವಾರ ಶಾಸ್ತ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಮುಖಂಡ ಎಚ್. ನರಸಿಂಹ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಕುಗ್ಗಿಸಿರುವ ಅತಿ ದೊಡ್ಡ ಹಗರಣವಾಗಿದೆ. ಈ ಗಂಭೀರ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ತೋರಿದ ನಿರ್ಲಕ್ಷ್ಯ ಖಂಡನೀಯವಾಗಿದ್ದು, ಪ್ರಧಾನಿಯವರು ಈ ವಿಷಯದ ಕುರಿತು ಮೌನ ವಹಿಸಿರುವುದು ಭ್ರಷ್ಟಾಚಾರವನ್ನು ಪರೋಕ್ಷವಾಗಿ ಬೆಂಬಲಿಸುವಂತಿದೆ ಎಂದು ಆರೋಪಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಎನ್‌ಟಿಎ (NTA) ಕಾರ್ಯವೈಖರಿಯ ಬಗ್ಗೆ ದೇಶಾದ್ಯಂತ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಪರಿಸರ ಹೋರಾಟಗಾರ ಹಾಗೂ ವಿಜ್ಞಾನಿ ಸೋನಂ ವಾಂಗ್ಚುಕ್ ಅವರು ನಡೆಸಿದ ಶಾಂತಿಯುತ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕಿ ಬಂಧಿಸಿರುವುದು ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಪ್ರಹಾರ ನಡೆಸಿರುವುದು ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಖಂಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಹಯವದನ ಮೂಡಸಗ್ರಿ ಸಹ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಸುರೇಂದ್ರ ಹೆಚ್., ರಾಜು ದೇವಾಡಿಗ, ಸಂತೋಷ್ ಹೆಮ್ಮಾಡಿ, ಹಂಚು ಕಾರ್ಮಿಕರ ಸಂಘದ ಮುಖಂಡರಾದ ಚಂದ್ರ ದೇವಾಡಿಗ, ಪ್ರಕಾಶ್ ಕೋಣೆ, ಲಕ್ಷ್ಮಣ ಡಿ., ಚಂದ್ರ ಪೂಜಾರಿ, ಬೀಡಿ ಕಾರ್ಮಿಕರ ಮುಖಂಡರಾದ ಬಲ್ಕಿಸ್, ಮಹಿಳಾ ಮುಖಂಡರಾದ ಶೀಲಾವತಿ ಹಾಗೂ ಮಹಾಬಲ ವಡೇರಹೋಬಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
