ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೀಜಾಡಿಯ ಸೀತಾಲಕ್ಷ್ಮೀ ಮತ್ತು ಬಿ.ಎಂ ರಾಮಕೃಷ್ಣ ಹತ್ವಾರ್‌ ಸರಕಾರಿ ಫ್ರೌಢಶಾಲೆಯ ಸಭಾಭವನ ನಿರ್ಮಾಣಕ್ಕೆ ರೂ.1.50 ಲಕ್ಷದ ನೆರವು

0
11

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೋಟೇಶ್ವರದ ಸೀತಾಲಕ್ಷ್ಮೀ ಮತ್ತು ಬಿ.ಎಂ ರಾಮಕೃಷ್ಣ ಹತ್ವಾರ್‌ ಸರಕಾರಿ ಫ್ರೌಢಶಾಲೆಯ ಸಭಾಭವನ ನಿರ್ಮಾಣಕ್ಕೆ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ರೂ.1.50 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುಧೀರ್‌ ಹಂಗಳೂರುರವರು ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ವ್ಯವಸ್ಥಾಪನಾ ಸಮಿತಿಯವರಿಗೆ ಹಸ್ತಾಂತರಿಸಿದರು.

ಈ ಬಗ್ಗೆ ಸಂದರ್ಭ ಮಾತನಾಡಿದ ಯೋಜನಾಧಿಕಾರಿಯವರು ಗ್ರಾಮದ ಪ್ರತೀ ಮಕ್ಕಳೂ ಶಾಲಾ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಉತ್ತಮ ಶಿಕ್ಷಣ ದೊರೆಯಬೇಕಾದರೆ, ಮೂಲಭೂತ ಸೌಕರ್ಯಗಳಿರುವ ಶಾಲೆಯು ಕೂಡ ಗ್ರಾಮಕ್ಕೆ ಅತೀ ಮುಖ್ಯವಾಗಿ ಬೇಕಾಗುತ್ತದೆ. ಪ್ರತೀ ಗ್ರಾಮದಲ್ಲಿಯೂ ಶಿಕ್ಷಣದ ಕ್ರಾಂತಿ ಆಗಬೇಕು. ಈ ನಿಟ್ಟಿನಲ್ಲಿ ಶಾಲೆಗಳ ತರಗತಿ ಕೊಠಡಿ ನಿರ್ಮಾಣಕ್ಕೆ, ಶಾಲಾ ಸಭಾಭವನ ನಿರ್ಮಾಣಕ್ಕೆ, ಶಾಲಾ ಶೌಚಾಲಯ ನಿರ್ಮಾಣಕ್ಕೆ, ಹಲವಾರು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುದಾನವನ್ನು ಒದಗಿಸಿಕೊಡಲಾಗುತ್ತಿದೆ. ಇಷ್ಟೇ ಅಲ್ಲದೇ ಮಕ್ಕಳು ಸರಿಯಾಗಿ ಕುಳಿತು ಪಾಠವನ್ನು ಕೇಳಲು ಅನುಕೂಲವಾಗುವಂತೆ ಬೆಂಚು ಡೆಸ್ಕ್‌ಗಳ ಒದಗಣೆ, ಶಿಕ್ಷಕರಿಲ್ಲದ ಅಗತ್ಯ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನೇಮಕಾತಿಯನ್ನ ಕೂಡ ಮಾಡಲಾಗುತ್ತಿದೆ. ಇದರೊಂದಿಗೆ SSLC ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಗೊಳ್ಳಲು ಸಹಕಾರಿಯಾಗುವಂತೆ ವಾರ್ಷಿಕ 03 ತಿಂಗಳುಗಳ ಕಾಲ ಶಾಲಾ ಎಲ್ಲಾ SSLC ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್‌ ಕ್ಲಾಸ್‌ನ್ನು ಕೂಡ ಯೋಜನೆಯ ವತಿಯಿಂದ ನೀಡಲಾಗುತ್ತಿದೆ.

ಈವರೆಗೆ ತಾಲೂಕಿನಲ್ಲಿ ವರ್ಷಂದೀಚೆಗೆ ಒಟ್ಟು 45 ಲಕ್ಷದ 25 ಸಾವಿರ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಿಕೊಡಲಾಗಿದ್ದು, ಇದು ನೆರವು ನೀಡುತ್ತಿರುವ 16 ನೇ ಶಾಲೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಶಾಲಾ ಕಟ್ಟಡ ರಚನಾ ಸಮಿತಿಯ ಅಧ್ಯಕ್ಷರಾದ ಶೇಖರ ಛಾತ್ರಬೆಟ್ಟು, ಕಟ್ಟಡ ರಚನಾ ಸಮಿತಿಯ ಖಜಾಂಚಿ ಬಾಬಣ್ಣ ಪೂಜಾರಿ, ಕಟ್ಟಡ ಸಮಿತಿಯ ಉಪಾಧ್ಯಕ್ಷರಾದ ಎಲ್‌ ವಿ ನಾಯ್ಕ್‌, ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀನಿವಾಸ, ಶಾಲಾ ಮುಖ್ಯೋಪಾಧ್ಯಾಯರಾದ ವಿನೋದ ಎಂ, ಶಾಲಾ ಶಿಕ್ಷಕರಾದ ಅಪರ್ಣಾ ಬಾಯಿ, ಪ್ರಗತಿಬಂದು ಸ್ವಸಹಾಯ ಸಂಘಗಳ ವಲಯಾಧ್ಯಕ್ಷರಾದ ಬಸವರಾಜು, ಬೀಜಾಡಿ ಕುಂದಾಪುರ ಒಕ್ಕೂಟ ಅಧ್ಯಕ್ಷರಾದ ಸವಿತಾ, ಮೇಲ್ವಿಚಾಕರಾದ ರೋಹಿಣಿ ಎ ಎನ್‌, ಸೇವಾಪ್ರತಿನಿಧಿ ಶಾಲಿನಿ, ಸ್ಥಳಿಯ ಒಕ್ಕೂಟದ ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here