ವಿದ್ಯಾರಣ್ಯ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ

0
10

ನಾಯಕತ್ವವೆಂದರೆ ಸ್ಫೂರ್ತಿ, ಪ್ರೇರಣೆ- ಜಿಲ್ಲಾ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾಯಕತ್ವವೆಂದರೆ ಜವಾಬ್ದಾರಿಯಾಗಿದ್ದು, ಆ ಗುಣವನ್ನು ಮೈಗೂಡಿಸಿಕೊಳ್ಳಲು ಶಿಸ್ತು ಹಾಗೂ ಬದ್ಧತೆ ಅತ್ಯಗತ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಂ ಹುಸೇನ್ ಶೇಕ್ ನುಡಿದರು.

ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ ನಲ್ಲಿ ಜುಲೈ 22ರ ಬುಧವಾರದಂದು ನಡೆದ ವಿದ್ಯಾರ್ಥಿಗಳ ಸಂಸತ್ ಪದಗ್ರಹಣ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ನಾಯಕತ್ವದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದನ್ನು ಕಲಿಯುವುದು ಮುಖ್ಯ ಎಂದರು.

ತನ್ನೊಟ್ಟಿಗೆ ತಂಡವನ್ನು ಬೆಳೆಸಿಕೊಂಡು ಜೊತೆ ಸಾಗುವವನೇ ಲೀಡರ್ ಎನ್ನಿಸಿಕೊಳ್ಳುತ್ತಾನೆ. ವಿದ್ಯಾರ್ಥಿ ದೆಸೆಯಲ್ಲಿಯೇ ಅದರ ಪ್ರಾಮುಖ್ಯ ತಿಳಿಯಲು ನಿಮಗೆ ಇಲ್ಲಿ ಅವಕಾಶ ಸಿಕ್ಕಿದೆ. ಇದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ನುಡಿದರು.

ಎಲ್ಲಾ ನ್ಯಾಯಾಲಯಕ್ಕಿಂತ ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು ಎಂಬ ಗಾಂಧೀಜಿಯವರ ಮಾತನ್ನು ಉಲ್ಲೇಖಿಸಿದ ನ್ಯಾಯಾಧೀಶರು,, “ನಾವೇನೇ ತಪ್ಪು ಮಾಡಿದರೂ ಮೊದಲಿಗೆ ನಮ್ಮನ್ನು ಎಚ್ಚರಿಸುವುದೇ ನಮ್ಮ ಆತ್ಮಸಾಕ್ಷಿ. ಹಾಗಾಗಿ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಳ್ಳದೇ ಬದುಕಿ” ಎಂದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್ ಅವರು ಮಾತನಾಡಿ, ನಾಯಕತ್ವದ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು ಸುಲಭವಾದ ಕೆಲಸವಲ್ಲ.; ಅದನ್ನು ಉತ್ತಮವಾಗಿ ನಿಭಾಯಿಸುವುದನ್ನು ಸಿದ್ಧಿಸಿಕೊಳ್ಳಲು ಪ್ರಾಮಾಣಿಕ ಪರಿಶ್ರಮ ಮುಖ್ಯವಾಗುತ್ತದೆ ಎಂದರು.

ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಜಯಚಂದ್ರ ಶೆಟ್ಟಿ ಮಾತನಾಡಿ, ನಿಮ್ಮ ಬ್ಯಾಡ್ಜ್ ನ ಮಹತ್ವ ಏನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ; ವಿದ್ಯಾಸಂಸ್ಥೆಯು ನಿಮ್ಮ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ನಿಮಗೆ ನೀಡಿದೆ; ಈ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸಿ ಎಂದು ನುಡಿದರು.

ಒಳ್ಳೆಯ ಪ್ರಜೆಯಾಗಿ ರೂಪುಗೊಳ್ಳುವ ದಿಸೆಯಲ್ಲಿ ಈಗಿನಿಂದಲೇ ಒಳ್ಳೆಯ ಕನಸುಗಳನ್ನು ಕಾಣಿರಿ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದಂತೆ ಕನಸುಗಳು ನಿದ್ರೆಯಲ್ಲಿ ಬೀಳುವ ಕನಸುಗಳಿಗಿಂತ ಯಾವುದು ನಮ್ಮನ್ನು ನಿದ್ರೆಯಿಂದ ಎಚ್ಚರವಾಗುವಂತೆ ಮಾಡುತ್ತವೆಯೇ ಅವು ಮಹತ್ವದ ಕನಸುಗಳಾಗಿರುತ್ತವೆ ಎಂದು ವಿವರಿಸಿದರು..

ನಾಯಕನಾದವನು ಮೊದಲಿಗೆ ತಾನು ಶಿಸ್ತು , ಬದ್ಧತೆ ಹಾಗೂ ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕು. ಈ ಗುಣಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಎತ್ತರಕ್ಕೆ ಏರಿಸುತ್ತವೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.

ವಿದ್ಯಾರ್ಥಿಗಳಿಗೆ ಇಲ್ಲಿ ಲಭ್ಯವಾಗಿರುವ. ಈ ಅವಕಾಶವು ಮುಂದಿನ ಜೀವನಕ್ಕೆ ಸಹಾಯಕಾರಿಯಾಗುತ್ತದೆ. ಲೀಡರ್ ಎಂದರೆ ಆದೇಶ ನೀಡುವುದು ಎಂದರ್ಥವಲ್ಲ. ಅದು ಅಧಿಕಾರವೂ ಅಲ್ಲ. ಯಾರು ಇತರರಿಗೆ ಪ್ರೇರಣೆ ಹಾಗೂ ಸ್ಫೂರ್ತಿಯಾಗಬಲ್ಲರೋ ಅವರೇ ನಿಜವಾದ ನಾಯಕರು ಎಂದು ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ನುಡಿದರು.

ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಾತನಾಡಿ, “ ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲೆಂದು ನಾವು ಪ್ರತಿ ಬಾರಿ ಇಂತಹ ಕಾರ್ಯಕ್ರಮಗಳ ಮೂಲಕ ಸಂಪನ್ಮೂಲ ವ್ಯಕ್ತಿಗಳನ್ನು ಕರೆದುಕೊಂಡು ಬರುತ್ತೇವೆ. ಎಲ್ಲರ ಜೊತೆ ಬೆರೆತು ತಂಡವನ್ನು ಮುಂದೇ ತೆಗೆದುಕೊಂಡು ಹೋಗುವವನೇ ನಿಜವಾದ ನಾಯಕ” ಎಂದು ಹೇಳಿದರು.

ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಬಂದು ಮುಖ್ಯ ಅತಿಥಿಗಳಿಂದ ಬ್ಯಾಡ್ಜ್ ಸ್ವೀಕರಿಸಿದರು. ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಪ್ರದೀಪ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕಿ ಲಾಸ್ಯ ಮಧ್ಯಸ್ಥ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ ನ ವಿದ್ಯಾರ್ಥಿ ನಾಯಕಿ ಯಶಿಕಾಗೆ ಶುಭ ಹಾರೈಸಿದರು.ಸುಜ್ಞಾನ ನ್ಯಾಷನಲ್ ಕಾಲೇಜು ಬಾರ್ಕೂರಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ ನ ಪ್ರಾಂಶುಪಾಲರಾದ ಅನಿತಾ ಕುಮಾರಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಸ್ಪೂರ್ತಿ ಎ. ಧನ್ಯವಾದ ಅರ್ಪಿಸಿದರು.

ಮಗನ ಸಾಧನೆಗೆ ಪ್ರೋತ್ಸಾಹಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಗೆ ಧನ್ಯವಾದ ತಿಳಿಸಿದ ನ್ಯಾಯಾಧೀಶರು

ಕಾರ್ಯಕ್ರಮವೊಂದನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಂ ಹುಸೇನ್ ಶೇಕ್ ಅವರು, ಸುಜ್ಞಾನ ಸಂಸ್ಥೆಯೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡರು.
“ಕಳೆದ ನಾಲ್ಕೈದು ವರ್ಷಗಳಿಂದ ನಾನು ಸುಜ್ಞಾನ ವಿದ್ಯಾಸಂಸ್ಥೆಯನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದೇನೆ. ನನ್ನ ಮಗನ ಜೀವನದಲ್ಲಿ ಶಿಸ್ತು, ಸಂಸ್ಕಾರ ಮತ್ತು ಆತ್ಮವಿಶ್ವಾಸ ಮೂಡಿಸಲು ಇಲ್ಲಿನ ಆಡಳಿತಮಂಡಳಿ, ಉಪನ್ಯಾಸಕರು ನೀಡಿದ ಮಾರ್ಗದರ್ಶನ ಅತೀವ ಸಂತೋಷ ತಂದಿದೆ. ನನ್ನ ಮಗ NEET ಪರೀಕ್ಷೆಯಲ್ಲಿ 720ಕ್ಕೆ 600 ಅಂಕ ಗಳಿಸಿ, ಮೆಡಿಕಲ್ ಸೀಟು ಪಡೆಯಲು ಅರ್ಹತೆ ಗಳಿಸಿದ್ದಾನೆ.ಆತ NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಸಂಸ್ಥೆಯು ನೀಡಿದ ಬೆಂಬಲ, ಅತ್ಯುತ್ತಮ ತರಬೇತಿ, ಕ್ರ್ಯಾಷ್ ಕೋರ್ಸ್ ಹಾಗೂ ಮಾಕ್ ಟೆಸ್ಟ್ ಗಳ ಪರಿಣಾಮವಾಗಿಯೇ ಇಷ್ಟೊಂದು ಉತ್ತಮ ಅಂಕ ಗಳಿಸಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಯಿತು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸಂಸ್ಥೆ ಬದ್ಧತೆಯಿಂದ ಶ್ರಮಿಸುತ್ತಿದೆ. ಈ ಬೆಂಬಲಕ್ಕಾಗಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಮಸ್ತ ಉಪನ್ಯಾಸಕ ವೃಂದಕ್ಕೆ ನಾನು ಚಿರಋಣಿಯಾಗಿದ್ದೇನೆ” ಎಂದು ನ್ಯಾಯಾಧೀಶರು ಆಡಳಿತ ಮಂಡಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

LEAVE A REPLY

Please enter your comment!
Please enter your name here