ಪಂಚಗ್ಯಾರಂಟಿ ಯೋಜನೆ: ಕುಂದಾಪುರ ತಾಲೂಕಿಗೆ ಜೂನ್ ತಿಂಗಳಲ್ಲಿ ರೂ.15,12,29,069 ಬಿಡುಗಡೆ -ಎಚ್.ಹರಿಪ್ರಸಾದ್ ಶೆಟ್ಟಿ

0
7

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ನಡೆಯುತ್ತಿದ್ದು, ಈ ಯೋಜನೆಯಡಿ ಒಟ್ಟು 73868 ನೊಂದಣಿಯಾಗಿದ್ದು, 48322 ಪೂರ್ಣ ಪರಿಷ್ಕರಣೆಯಾಗಿದ್ದು, 25546 ಅರ್ಜಿಗಳು ಬಾಕಿ ಇದೆ. ಬಾಕಿ ಇರುವ ಅರ್ಜಿಗಳ ಪೈಕಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಇರುವ ಸಾಧ್ಯತೆಗಳಿರುತ್ತದೆ ಅಲ್ಲದೆ ಕೀಪ್ಯಾಡ್ ಮೊಬೈಲ್ ಇಲ್ಲದಿರುವವರು ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲರೂ ಸೇರಿಕೊಂಡು ಅಂತಹ ಫಲಾನುಭವಿಗಳಿಗೆ ಪರಿಷ್ಕರಣೆ ಮಾಡಲು ಸಹಕಾರ ಮಾಡಬೇಕು. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ ಕೂಡ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪೋರ್ಟ್‍ಲ್‍ನಲ್ಲಿ ಪಾಸ್‍ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಮರಣ ಹೊಂದಿದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಹಣ ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಫೆಬ್ರವರಿ ತಿಂಗಳ ತನಕ ಹಣ ಪಾವತಿಯಾಗಿದೆ. ಕುಂದಾಪುರ ತಾಲೂಕಿನಲ್ಲಿ ಸುಮಾರು 1705 ಮರಣ ಹೊಂದಿದವರ ಖಾತೆಗೆ ಸುಮಾರು 5 ಕೋಟಿ ರೂ. ಜಮೆ ಆಗಿದ್ದು, ಈ ಪೈಕಿ 16 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿಕೊಂಡಿದ್ದಾರೆ. 13 ಲಕ್ಷ ರೂ.ಗಳನ್ನು ಫ್ರೀಜ್ ಮಾಡಲಾಗಿದ್ದು, 19 ಲಕ್ಷ ರೂ. ವಾಪಾಸ್ ಕಟ್ಟಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಕುಂದಾಪುರದಲ್ಲಿ ಸುಮಾರು 17 ಸಾವಿರ ಮನೆಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು 11 ಸಾವಿರ ಮನೆಗಳ ಪರಿಶೀಲನೆ ಕಾರ್ಯ ಬಾಕಿ ಇದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಮಳೆಗಾಲದಲ್ಲಿ ಲೈನ್‍ಮ್ಯಾನ್‍ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡುವ ಕಾರ್ಯವಾಗದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಈ ಮರಗಳು ಬಿದ್ದರೆ ವಿದ್ಯುತ್ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಕಂಬಗಳು ಮುರಿದು ಹೋಗುತ್ತವೆ. ಕೂಡಲೇ ತೆರವು ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಮೆಸ್ಕಾಂ ಅಧಿಕಾರಿಗಳು ಮಾತನಾಡಿ ಈಗಾಗಲೇ ಕೆಲವು ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದರು.
ಸಾಕಷ್ಟು ಸಭೆಗಳಿಂದ ಮನವಿ ಮಾಡುತ್ತಾ ಇದ್ದರೂ ಹಕ್ಲಾಡಿ ಮತ್ತು ಆಲೂರು ಮಾರ್ಗಕ್ಕೆ ಬಸ್ ಕಲ್ಪಿಸಲಾಗಿಲ್ಲ. ಶಾಲಾ ಕಾಲೇಜು ಸಮಯಕ್ಕಾದರೂ ಬಸ್ ಓಡಿಸಿ ಎಂದು ಸದಸ್ಯ ಅರುಣ ಮನವಿ ಮಾಡಿದರು. ಹೇರಿಕುದ್ರು ಬಸ್ ತಂಗುದಾಣದಲ್ಲಿ ಕೆಎಸ್.ಆರ್.ಟಿಸಿ ಲೋಕಲ್ ಬಸ್ ನಿಲ್ಲಿಸುತ್ತಿಲ್ಲ ಎಂದು ಅಭಿಜಿತ್ ಪೂಜಾರಿ ಹೇಳಿದರು. ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು. ನಿಲ್ಲಿಸಲು ಸಾಧ್ಯವೋ ಇಲ್ಲವೀ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಬೇಕು ಎಂದು ಖಾರವಾಗಿ ಹೇಳಿದರು.
ಗಂಗೊಳ್ಳಿಯಲ್ಲಿ ಪಡಿತರ ಅಂಗಡಿ ಸಮೀಪ ಪಡಿತರ ಪಡೆಯುವ ವೇಳೆ ಗಲಾಟೆ ನಡೆದಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯ ಜಹೀರ್ ಅಹಮ್ಮದ್ ಆಗ್ರಹಿಸಿದರು. ಫಲಾನುಭವಿಗಳು ಪಡಿತರ ಪಡೆಯುವ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಡಿತರ ಅಂಗಡಿ ಸಮೀಪ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜೂನ್ ತಿಂಗಳಿನಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 4.86 ಕೋಟಿ ರೂ., ಅನ್ನಭಾಗ್ಯ ಯೋಜನೆಯಲ್ಲಿ 2.66 ಕೋಟಿ ರೂ., ಯುವನಿಧಿ ಯೋಜನೆಯಲ್ಲಿ 5.07 ಲಕ್ಷ ರೂ., ಶಕ್ತಿ ಯೋಜನೆಯಲ್ಲಿ 3.16 ಕೋಟಿ ರೂ., ಗೃಹಜ್ಯೋತಿ ಯೋಜನೆಯಲ್ಲಿ 4.38 ಕೋಟಿ ರೂ. ಬಿಡುಗಡೆಯಾಗಿದೆ. ಮೇ ತಿಂಗಳಲ್ಲಿ ಒಟ್ಟು 15.12 ಕೋಟಿ ರೂ. ಇಲ್ಲಿನ ತನಕ ಒಟ್ಟು 597,62,71,084 ಬಿಡುಗಡೆಯಾಗಿದೆ- ಎಚ್.ಹರಿಪ್ರಸಾದ್ ಶೆಟ್ಟಿ

LEAVE A REPLY

Please enter your comment!
Please enter your name here