ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು -ಸುಧಾಕರ್ ನಾಯಕ್

0
78

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಾದಕ ದ್ರವ್ಯಗಳ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಮುದಾಯದ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ನಾಯಕ್ ಕರೆ ನೀಡಿದರು.
ಅವರು ಜುಲೈ 24ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “DRUGS ಬೇಡ BRO!” ಮತ್ತು ಮಾದಕ ವಸ್ತುಗಳಿಗೆ NO -ಜೀವನಕ್ಕೆ YES” ಎಂಬ ಯುವಜನರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ವಸ್ತುಸ್ಥಿತಿ ಆತಂಕಕಾರಿಯಾಗಿದೆ. ಹೆಚ್ಚಿನ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅವರು ತಮ್ಮ ಶೈಕ್ಷಣಿಕ ಹಿನ್ನೆಡೆ, ಮಾನಸಿಕ, ದೈಹಿಕ ಆರೋಗ್ಯವನ್ನು ಕಳೆದುಕೊಂಡು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಕುಟುಂಬ, ಸಮಾಜ ಊರು ಮತ್ತು ದೇಶಕ್ಕೆ ಹೊರೆಯಾಗುತ್ತಿದ್ದಾರೆ. ಮಾದಕದ್ರವ್ಯ ಸೇವನೆಯ ವ್ಯಸನಿಗಳ ಸಂಖ್ಯೆ ಸಹ ವಿಪರೀತಕ್ಕೆ ತಲುಪಿದೆ. ಇದು ಸಮಾಜದ ಮತ್ತು ದೇಶದ ಬೆಳವಣಿಗೆಗೆ ಮಾರಕವಾಗಿದೆ. ಹಾಗಾಗಿ ಮಾದಕ ದ್ರವ್ಯಗಳ ಸೇವನೆಯ ವಿರುದ್ದ ಯುವಕರಲ್ಲಿ ಜಾಗೃತಿ ಮೂಡಿಸಬೇಕು . ಉತ್ತಮ ಸಮಾಜ ನಿರ್ಮಾಣಕ್ಕೆ ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು, ಇಲಾಖೆಗಳು,ವಿದ್ಯಾರ್ಥಿಗಳು ಒಟ್ಟಾಗಿ ಜಂಟಿಯಾಗಿ ವ್ಯಸನದ ಕೆಟ್ಟ ಪರಿಣಾಮದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕೊಡ್ಗಿ ಮಾತನಾಡಿ ಇಂದಿನ ಯುವಜನತೆ ಭವ್ಯ ಭಾರತದ ರುವಾರಿಗಳು 2047ರ ವಿಕಸಿತ ಭಾರತವನ್ನು ನೋಡಬೇಕಾದರೆ ಮೊದಲು ಸತ್ಪ್ರಜೆಯಾಗಬೇಕು. ಮಾದಕದ್ರವ್ಯ ಸೇವನೆಯಿಂದ ಮೊದಲು ದೂರವಿರಬೇಕು. ಪೋಲೀಸ್ ಇಲಾಖೆ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣ ಮತ್ತು ಮಾದಕದ್ರವ್ಯ ಸೇವನೆಯ ವಿರುದ್ದ ಯುವಕರಲ್ಲಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ನಮ್ಮೆಲ್ಲರ ಆಶಯದಂತೆ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.
DRUGS ಬೇಡ BRO!” ಮತ್ತು ಮಾದಕ ವಸ್ತುಗಳಿಗೆ NO -ಜೀವನಕ್ಕೆ YES” ಎಂಬ ಯುವಜನರಲ್ಲಿ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.
ಕುಂದಾಪುರದ ಮಾತಾ ಆಸ್ಪತ್ರೆಯ ಮನೋವೈದ್ಯರಾದ ಡಾ.ಪ್ರಕಾಶ್ ತೋಳಾರ್ ಮತ್ತು ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ನಂಜಾನಾಯ್ಕ್ ಎನ್. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜಾ ಎಮ್, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ನಿರೀಕ್ಷಕರಾದ ಜಯರಾಮ ಡಿ.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನಿರಿಕ್ಷಕರಾದ ಪುಷ್ಪ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನಿರೀಕ್ಷಕರಾದ ಅನೂಪ್ ನಾಯ್ಕ್ ವಂದಿಸಿದರು. ಶಂಕರನಾರಾಯಣ ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಧುಸೂದನ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here