ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ಗೆ ರಾಷ್ಟ್ರಮಟ್ಟದ ‘ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್–2026’ ಗೌರವ

0
228

ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಡಾ. ಸುಕಾಂತ್ ಮಜುಂದಾರ್ ಅವರಿಂದ ಪ್ರಶಸ್ತಿ ಪ್ರದಾನ

ನವದೆಹಲಿ:ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ಗೆ ರಾಷ್ಟ್ರಮಟ್ಟದ ‘ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್–2026’ ಲಭಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ‘ಇಂಡಿಯನ್ ಹ್ಯಾಬಿಟಾಟ್ ಸೆಂಟರ್’ನಲ್ಲಿ ಮಂಗಳವಾರ ನಡೆದ ‘Education Excellence Conference & Awards–2026’ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವರಾದ ಡಾ. ಸುಕಾಂತ್ ಮಜುಂದಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಗೌರವವನ್ನು ಪ್ರದಾನ ಮಾಡಿದರು.

‘Fit India’ ಹಾಗೂ ‘School Grads’ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ದೇಶದ ಅತ್ಯಂತ ಆಯ್ದ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಈ ಪುರಸ್ಕಾರ ನೀಡಲಾಯಿತು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಲ್ಪಾವಧಿಯಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆ, ಗುಣಮಟ್ಟದ ಬೋಧನೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ನೀಡಿರುವ ಆದ್ಯತೆ ಮತ್ತು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಂಸ್ಥೆಯ ಪರವಾಗಿ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿ ಅವರು ಕೇಂದ್ರ ಸಚಿವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಡಾ. ಸುಕಾಂತ್ ಮಜುಂದಾರ್, “ಭಾರತದ ಶಿಕ್ಷಣ ವ್ಯವಸ್ಥೆಯು ವೇಗವಾಗಿ ಆಧುನೀಕರಣದತ್ತ ಸಾಗುತ್ತಿದೆ. ದೇಶದ ಅಭಿವೃದ್ಧಿಗೆ ಶೈಕ್ಷಣಿಕ ರಂಗದಲ್ಲಿ ತರಲಾಗುವ ಸುಧಾರಣೆಗಳು ಅತ್ಯಗತ್ಯ. ಶಿಕ್ಷಕರು ಕೇವಲ ಬೋಧನೆಗಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಾರ್ಗದರ್ಶಕರಾಗಬೇಕು. ಆಧುನಿಕ ತಂತ್ರಜ್ಞಾನ ಹಾಗೂ ಹೊಸತನವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವ ಸಂಸ್ಕೃತಿ ಬೆಳೆಯಬೇಕಿದ್ದು, ಪ್ರಶಸ್ತಿ ಪಡೆದ ಸಂಸ್ಥೆಗಳು ದೇಶದ ಭವಿಷ್ಯ ನಿರ್ಮಾಣದಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲಿ,” ಎಂದು ಶುಭ ಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, “ಅಖಿಲ ಭಾರತ ಮಟ್ಟದ ಈ ಪ್ರತಿಷ್ಠಿತ ಪ್ರಶಸ್ತಿ ನಮ್ಮ ಸಂಸ್ಥೆಗೆ ದೊರೆತಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಕ್ಷಣ. ಕುಂದಾಪುರದಂತಹ ಸ್ಥಳದಿಂದ ಆರಂಭವಾದ ನಮ್ಮ ಸಂಸ್ಥೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊರೆತಿರುವ ಈ ಗೌರವ ನಮ್ಮೆಲ್ಲರ ಶ್ರಮಕ್ಕೆ ಸಂದ ಮಾನ್ಯತೆ. ಕೇವಲ ಐದು ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶ ನೀಡಿದ ಸಮಾಜದ ಎಲ್ಲ ವರ್ಗದ ಜನರಿಗೆ, ನಮ್ಮ ಸಂಸ್ಥೆಯ ಪೋಷಕರಿಗೆ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಹಾಗೂ ಹಗಲಿರುಳು ಶ್ರಮಿಸಿದ ನಮ್ಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇವೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬಿಹಾರದ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಹಾಗೂ ‘Arukas Private Limited’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜೂಹಿ ರಜಪೂತ್ ಸೇರಿದಂತೆ ಶೈಕ್ಷಣಿಕ ಕ್ಷೇತ್ರದ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here