ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಆಷಾಢ ಮಾಸದ ಪೂರ್ಣಿಮ ದಿನದಂದು ಆಚರಿಸಲಾಗುವ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವ್ಯಾಸ ಪೂರ್ಣಿಮೆ ಎಂದು ಕರೆಯುವ ಈ ದಿನದ ವಿಶೇಷತೆಯ ಗೌರವಾರ್ಥವಾಗಿ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್ ಶೆಟ್ಟಿ ಯವರು ಗುರು ನಮನ ಸಲ್ಲಿಸಿ ಮಾತನಾಡುತ್ತಾ ಗುರಿಯನ್ನು ಮುಟ್ಟಿಸುವ ಗುರುವನ್ನು ನಾವು ಅನುಸರಿಸಬೇಕು. ನಿಸ್ವಾರ್ಥ ಭಾವದಿಂದ ತನ್ನಲ್ಲಿನ ಅಂತ:ಶಕ್ತಿಯನ್ನು ಶಿಷ್ಯ ಕೋಟಿಗೆ ಧಾರೆ ಎರೆಯುವ ಉದಾತ್ತ ಗುಣವನ್ನು ಗುರು ಹೊಂದಿರುತ್ತಾನೆ. ಗುರುವಿನ ಅನುಗ್ರಹ ಒಂದಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು. ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಗುರು ಪೂರ್ಣಿಮೆಯ ಶುಭ ಸಂದೇಶವನ್ನು ತಿಳಿಸಿದರು. ಎಲ್ಲಾ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದರು. ವಿದ್ಯಾರ್ಥಿನಿ ಸಪ್ತಮಿ ಆರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
