ಕುಂದಾಪುರ ಮಿರರ್ ಸುದ್ದಿ…
ಅಂಪಾರು: ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ.) ಅಂಪಾರು ಆಶ್ರಯದಲ್ಲಿ ನಡೆಯುತ್ತಿರುವ ಸಂಜಯ ಗಾಂಧಿ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ವಂಡಾರಿನ ಕೃಷ್ಣ ಪ್ರಸಾದ್ ಕ್ಯಾಶುಸ್ ಇಂಡಸ್ಟ್ರೀಸ್‌ನ ಮಾಲೀಕರಾದ ಶ್ರೀ ಸಂಪತ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಗುರುಗಳು ಹಾಗೂ ಪೋಷಕರು ಮಕ್ಕಳ ಜೀವನದ ನಿಜವಾದ ಮಾರ್ಗದರ್ಶಕರಾಗಿದ್ದು, ಸ್ವಾಮಿ ವಿವೇಕಾನಂದ ಸೇರಿದಂತೆ ಮಹನೀಯರ ಆದರ್ಶಗಳನ್ನು ಅನುಸರಿಸಿ ಮೌಲ್ಯಯುತ ಜೀವನ ನಡೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಇವರು ವಹಿಸಿ, ಗುರುಗಳ ಮಾರ್ಗದರ್ಶನವೇ ಉತ್ತಮ ವ್ಯಕ್ತಿತ್ವ ನಿರ್ಮಾಣದ ಭದ್ರ ಬುನಾದಿ ಎಂದು ಹೇಳಿದರು.
ಟ್ರಸ್ಟ್ ನ ಖಜಾಂಚಿ ಹಾಗೂ ಶೈಕ್ಷಣಿಕ ಸಂಚಾಲಕರಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಇವರು ಮುಖ್ಯ ಅತಿಥಿಯನ್ನು ಪರಿಚಯಿಸಿ, ಪರಿಶ್ರಮ, ಶಿಸ್ತು ಮತ್ತು ಜೀವನ ಮೌಲ್ಯಗಳೇ ಯಶಸ್ಸಿನ ಗುಟ್ಟೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಆಡಳಿತಾಧಿಕಾರಿ ಶ್ರೀಮತಿ ಚೈತ್ರಾ ಯಡಿಯಾಳ ಮಾತನಾಡಿ, ಗುಣಮಟ್ಟದ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕಾರ ಹಾಗೂ ಗುರುಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಶಾಲೆಯ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.
ಶಾಲಾ ನಿರ್ದೇಶಕ ಶ್ರೀ ಕಿರಣ್ ಹೆಗ್ಡೆ ಇವರು ಗುರುಪೂರ್ಣಿಮೆಯ ಶುಭ ಅವಸರದಲ್ಲಿ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯ್ ಕುಮಾರ್ ಬಿ. ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿದ್ಯಾರ್ಥಿಗಳೇ ನಿರೂಪಣೆ, ಸ್ವಾಗತ, ವಂದನಾರ್ಪಣೆ ಹಾಗೂ ಗುರುಪೂರ್ಣಿಮೆಯ ಮಹತ್ವದ ಕುರಿತು ಭಾಷಣ ನಡೆಸಿದರು. ಗುರುಸ್ತುತಿ, ಭಗವದ್ಗೀತಾ ಪಠಣದ ಮೂಲಕ ಆರಂಭವಾದ ಕಾರ್ಯಕ್ರಮ ಎಲ್ಲಾ ಗುರುಗಳಿಗೆ ಆರತಿ, ಪುಷ್ಪಾರ್ಚನೆ ಹಾಗೂ ಪಾದಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರ ಶಿಕ್ಷಕರು ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿ ಹರಸಿದರು. ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು. ಶಾಲೆಯ ವಿಶಿಷ್ಟ ಹಾಗೂ ಮೌಲ್ಯಾಧಾರಿತ ಗುರುಪೂರ್ಣಿಮಾ ಆಚರಣೆ ಮುಖ್ಯ ಅತಿಥಿಗಳು, ಪೋಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
