ಅಂಪಾರು ಸಂಜಯ ಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ ‘ಸಂಜಯ ಸಿಂಚನ’ ಪಠ್ಯ ಪುಸ್ತಕದಾಚೆಯ ಬದುಕಿನ ಪಾಠ ಎನ್ನುವ ಮಾಸಿಕ ಸರಣಿ – ಮೌಲ್ಯ ಮಾಲಿಕೆಗೆ ಚಾಲನೆ

0
39

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ದೇಶಾಭಿಮಾನ ಹಾಗೂ ಜೀವನಮೌಲ್ಯ ಬೆಳೆಸುವ ವಿನೂತನ ಪ್ರಯತ್ನ ಪಠ್ಯಪುಸ್ತಕ ಜ್ಞಾನ ನೀಡುತ್ತದೆ ಆದರೆ ಬದುಕಿನ ಮೌಲ್ಯಗಳು ವ್ಯಕ್ತಿತ್ವ ರೂಪಿಸುತ್ತವೆ ಎಂಬ ಆಶಯದೊಂದಿಗೆ ಅಂಪಾರಿನ ಸಂಜಯ ಗಾಂಧಿ ಶಿಕ್ಷಣ ಸಂಸ್ಥೆ ಯಲ್ಲಿ ‘ಸಂಜಯ ಸಿಂಚನ – ಪಠ್ಯಪುಸ್ತಕದಾಚೆಯ ಬದುಕಿನ ಪಾಠ’ ಎಂಬ ವಿನೂತನ ಮಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
‘ಮೌಲ್ಯ ಮಾಲಿಕೆ–01’ರ ಮೌಲ್ಯ ಸಾರಥಿಯಾಗಿ ಸಾಹಿತಿ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ರೊಟರಿ ಜಿಲ್ಲೆ 3180 ಇದರ ಶತಾಬ್ದಿ ಗವರ್ನರ್ ಆಗಿದ್ದ ಎ.ಎಸ್.ಎನ್. ಹೆಬ್ಬಾರ್ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಜೀವನಮೌಲ್ಯಗಳ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು.
ಊರ ಹಿರಿಯರು ಹಾಗೂ ಅಂಪಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಣಪಯ್ಯ ಶೆಟ್ಟಿ ಕುಪ್ಗೋಡು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಹಿತೈಷಿ ರಂಜನಾ ಪ್ರಭು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅಧ್ಯಕ್ಷರಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಪರಿಕಲ್ಪನೆ, ಮಾರ್ಗದರ್ಶನ ಹಾಗೂ ರೂಪುರೇಷೆಯನ್ನು ಶಾಲೆಯ ಶೈಕ್ಷಣಿಕ ಸಂಚಾಲಕರಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಪ್ರಸ್ತಾಪನೆಗೈದರು. ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್, ಅಂಪಾರು ಇದರ ನಿರ್ದೇಶಕರಾದ ಕಿರಣ್ ಹೆಗ್ಡೆ ಹಾಗೂ ಉಮೇಶ್ ಕೋಠಾರಿ ಉಪಸ್ಥಿತರಿದ್ದರು.

ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಚೈತ್ರಾ ಯಡಿಯಾಳ ಸರ್ವರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕಿ ಶೈಲಜಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸರೋಜಾ ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸಂಸ್ಕಾರ, ಮಾನವೀಯತೆ, ದೇಶಾಭಿಮಾನ ಹಾಗೂ ನಮ್ಮ ನಾಡು–ನುಡಿ–ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಬೆಳೆಸುವ ಉದ್ದೇಶದಿಂದ ರೂಪುಗೊಂಡಿರುವ ‘ಸಂಜಯ ಸಿಂಚನ’ ಪ್ರತಿ ತಿಂಗಳು ವಿವಿಧ ಕ್ಷೇತ್ರಗಳ ಗಣ್ಯರ ಮೂಲಕ ಮಕ್ಕಳಿಗೆ “ಏನು ಕಲಿಯಬೇಕು?” ಎಂಬುದರ ಜೊತೆಗೆ “ಹೇಗೆ ಬದುಕಬೇಕು?” ಎಂಬ ಬದುಕಿನ ಪಾಠವನ್ನು ಪರಿಚಯಿಸಲಿದೆ.

ಪಠ್ಯಕ್ರಮದ ಆಚೆಗೆ ವ್ಯಕ್ತಿತ್ವ ನಿರ್ಮಾಣದತ್ತ ‘ಸಂಜಯ ಸಿಂಚನ ‘ ಒಂದು ಸಾರ್ಥಕ ಹೆಜ್ಜೆ ಎನ್ನುವುದಾಗಿ ಕೊಂಡಾಡಿದ ಶ್ರೀಯತ ಹೆಬ್ಬಾರರು ಅನೇಕ ಕಥೆ, ಘಟನೆಗಳ ಮೂಲಕ ಮಕ್ಕಳಲ್ಲಿ ಮೌಲ್ಯದ ಅಗತ್ಯತೆಯನ್ನು ವಿವರಿಸಿದರು…

LEAVE A REPLY

Please enter your comment!
Please enter your name here