ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರ; ರಾಜ್ಯದ ಕರಾವಳಿ ಮೀನುಗಾರರಿಗೆ ನೆರವಾಗಲು ಪ್ರತ್ಯೇಕ ಸೀಮೆಎಣ್ಣೆ ಹಂಚಿಕೆಗೆ ಕೋರಿಕೆ

0
6

ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ 2026–27ನೇ ಸಾಲಿನಲ್ಲಿ 24,090 KL ಸೀಮೆಎಣ್ಣೆ ಒದಗಿಸುವಂತೆ ನವದೆಹಲಿಯಲ್ಲಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಂಸದರು

ಕುಂದಾಪುರ ಮಿರರ್ ಸುದ್ದಿ…
ನವದೆಹಲಿ :ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕರ್ನಾಟಕದ ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕಾ ಕ್ಷೇತ್ರಕ್ಕೆ 2026–27ನೇ ಸಾಲಿನಲ್ಲಿ 24,090 ಕಿಲೋಲೀಟರ್ (ಕೆಎಲ್) ಸಬ್ಸಿಡಿ ರಹಿತ ಸೀಮೆಎಣ್ಣೆಯನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡುವಂತೆ ಮನವಿ ಸಲ್ಲಿಸಿದರು. ಈ ಭೇಟಿ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಕೂಡ ಉಪಸ್ಥಿತರಿದ್ದರು.

ಕರ್ನಾಟಕದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದ ಸಂಸದ ರಾಘವೇಂದ್ರ, ತಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ಸೇರಿದಂತೆ ಕರಾವಳಿ ಭಾಗದ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಪ್ರಮುಖ ಜೀವನಾಧಾರವಾಗಿದ್ದು, ಸೀಮೆಎಣ್ಣೆಯ ಬೆಲೆ ಏರಿಕೆಯಿಂದಾಗಿ ಮೀನುಗಾರಿಕೆ ನಡೆಸುವುದು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ ಎಂದು ಪ್ರಸ್ತುತ ರಾಜ್ಯದ ಮೀನುಗಾರರ ಬವಣೆ ವಿವರಿಸಿದರು.

ಸೀಮೆಎಣ್ಣೆ ಬೆಲೆ ಏರಿಕೆಯಿಂದ ಮೀನುಗಾರರಿಗೆ ಸಂಕಷ್ಟ: ಸಾಂಪ್ರದಾಯಿಕ ಮೀನುಗಾರರು ಬಳಸುವ ಕೈಗಾರಿಕಾ ಸೀಮೆಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ ಸುಮಾರು 64 ರೂ.ನಿಂದ 152 ರೂ.ಗಳಿಗೆ ಏರಿಕೆಯಾಗಿದೆ. ಕರ್ನಾಟಕ ಸರ್ಕಾರ ಪ್ರತಿ ಲೀಟರ್‌ಗೆ 35 ರೂ. ಸಬ್ಸಿಡಿ ನೀಡುತ್ತಿದ್ದರೂ, ಮೀನುಗಾರರು ಪ್ರತಿ ಲೀಟರ್‌ಗೆ 117 ರೂ. ಗಳಿಗೂ ಹೆಚ್ಚು ತೆರಬೇಕಾಗಿದೆ. ಪ್ರಸಕ್ತ ಸೀಮೆಎಣ್ಣೆ ಬೆಲೆ 160 ರೂ.ಗಳಿಗೂ ಹೆಚ್ಚಾಗಿರುವ ಸಂದರ್ಭದಲ್ಲಿ, ರಾಜ್ಯದ ಸಬ್ಸಿಡಿ ಬಳಿಕವೂ ಮೀನುಗಾರರ ಮೇಲೆ ಸುಮಾರು 125 ರೂ. ನಷ್ಟು ಹೊರೆ ಪ್ರತಿ ಲೀಟರ್‌ಗೆ ಬೀಳುತ್ತಿದೆ ಎಂದು ರಾಘವೇಂದ್ರ ಕೇಂದ್ರ ಸಚಿವರಿಗೆ ವಿವರಿಸಿದರು.

ಕರ್ನಾಟಕದ ಕರಾವಳಿಯಲ್ಲಿ ಒಟ್ಟು 8,030 ಪರವಾನಗಿ ಪಡೆದ ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿದ್ದು, ಈ ವಲಯಕ್ಕೆ ವಾರ್ಷಿಕವಾಗಿ ಸುಮಾರು 24,090 KL ಸೀಮೆಎಣ್ಣೆಯ ಅಗತ್ಯವಿದೆ. ಆದರೆ, ಪ್ರಸ್ತುತ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಕರ್ನಾಟಕಕ್ಕೆ ಪ್ರತಿ ತ್ರೈಮಾಸಿಕಕ್ಕೆ ಕೇವಲ 2,868 KL ಸೀಮೆಎಣ್ಣೆ ಹಂಚಿಕೆಯಾಗುತ್ತಿದ್ದು, ಇದರಲ್ಲಿ ಗೃಹಬಳಕೆಯ ಅಗತ್ಯವೂ ಸೇರಿದೆ. ಈ ಹಂಚಿಕೆಯಿಂದ ಮೀನುಗಾರಿಕಾ ಕ್ಷೇತ್ರದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ರಾಘವೇಂದ್ರ ಹೇಳಿದರು.

ಮೀನುಗಾರಿಕಾ ಕ್ಷೇತ್ರಕ್ಕೆ ಪ್ರತ್ಯೇಕ ಹಂಚಿಕೆಗೆ ಮನವಿ: ಈ ಹಿನ್ನೆಲೆಯಲ್ಲಿ, ಕರ್ನಾಟಕದ ಸಾಂಪ್ರದಾಯಿಕ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗಾಗಿ 2026–27ನೇ ಸಾಲಿನಲ್ಲಿ 24,090 KL ಸಬ್ಸಿಡಿ ರಹಿತ ಸೀಮೆಎಣ್ಣೆಯನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು. ರಾಜ್ಯದ ಮೀನುಗಾರಿಕಾ ಇಲಾಖೆಯೂ ಈ ಕುರಿತು ಕೇಂದ್ರ ಸರ್ಕಾರದ ಮುಂದೆ ಪ್ರತ್ಯೇಕ ಹಂಚಿಕೆಯ ಬೇಡಿಕೆಯನ್ನು ಸಲ್ಲಿಸಿರುವುದನ್ನು ಅವರು ಸಚಿವರ ಗಮನಕ್ಕೆ ತಂದರು.

‘ಕರಾವಳಿಯ ಸಾಂಪ್ರದಾಯಿಕ ಮೀನುಗಾರರು ಶ್ರಮಜೀವಿಗಳಾಗಿದ್ದು, ತಮ್ಮ ಬದುಕನ್ನು ಸ್ವಾಭಿಮಾನ ಮತ್ತು ಸ್ವಾವಲಂಬನೆಯೊಂದಿಗೆ ಮುಂದುವರಿಸಲು ಅಗತ್ಯವಾದ ನೆರವು ಮಾತ್ರ ಬಯಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಸೀಮೆಎಣ್ಣೆಯ ಪ್ರತ್ಯೇಕ ಹಂಚಿಕೆ ದೊರೆತರೆ ಸಾವಿರಾರು ಮೀನುಗಾರ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕರ್ನಾಟಕದ ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆ ವಲಯಕ್ಕೆ ಅಗತ್ಯವಾದ ಬೆಂಬಲ ದೊರೆಯಲಿದೆ.’_ ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ರಾಜ್ಯದ ಮೀನುಗಾರರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಾಗೂ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಕೃತಜ್ಞತೆಗಳನ್ನು ಸಲ್ಲಿಸಿದರು. ಮೀನುಗಾರರ ಹಿತದೃಷ್ಟಿಯಿಂದ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಆಶಾದಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here