ಗ್ರಾಮಗಳ ಭೌತಿಕ ಸಮೀಕ್ಷೆ, ಕಾನೂನು ಹೋರಾಟ, ಉನ್ನತ ಮಟ್ಟದ ಸಮಿತಿ ರಚನೆಗೆ ಆಗ್ರಹ
ಕುಂದಾಪುರ :ಪರಿಸರ ಸೂಕ್ಷ್ಮ ವಲಯ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ಖಚಿತ ಮಾಹಿತಿಯ ಅವಶ್ಯಕತೆ ಇದೆ. ಸಂಬಂಧಿತ ಗ್ರಾಮಗಳ ಭೌತಿಕ ಸಮೀಕ್ಷೆ ನಡೆಸದ ವಿನಃ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸಾಕಷ್ಟು ವರ್ಷಗಳಿಂದ ಇದೇ ವಿಚಾರ ಚರ್ಚೆ ಆಗುತ್ತಿದೆ ವಿನಾ ಕೇರಳ ರಾಜ್ಯದಂತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ. ತಳಮಟ್ಟದಿಂದಲೇ ಈ ಬಗ್ಗೆ ಅಧ್ಯಯನ ನಡೆಯಬೇಕು. ರಾಜ್ಯ ಸರ್ಕಾರ ಕೂಡಾ ಇಲ್ಲಿ ಬಾಧ್ಯಸ್ಥವಾಗುತ್ತದೆ ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕುಂದಾಪುರ ಮಿನಿ ವಿಧಾನ ಸೌಧದಲ್ಲಿ ಕಸ್ತೂರಿ ರಂಗನ್ ಉನ್ನತ ಮಟ್ಟದ ಕಾರ್ಯಪಡೆಯ ಶಿಫಾರಸ್ಸಿನ ಆಧಾರದ ಮೇಲೆ ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತ 7ನೇ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಸಂತೃಸ್ತ ಗ್ರಾಮಗಳ ಮುಂದಿನ ಹೋರಾಟದ ನಿಲುವಿನ ಬಗ್ಗೆ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದರು.
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡ ಕಿರಣ್ ಕೊಡ್ಗಿ ಅವರು, ಜನಸಾಮಾನ್ಯರ ಹಿತಾಸಕ್ತಿಯನ್ನು ಅಧಿಕಾರಿಗಳು ಗಮನ ಹರಿಸಬೇಕು. ಭೌತಿಕ ಸಮೀಕ್ಷೆ ತಳಮಟ್ಟದಿಂದ ಹೇಗೆ ನಡೆಯಬೇಕು ಎನ್ನುವುದರ ಬಗ್ಗೆಯೇ ಅಧಿಕಾರಿಗಳು ಖಚಿತತೆ ಹೊಂದಬೇಕು. ಇದರ ಬೌಂಡರಿ ಎಲ್ಲಿ ಬರುತ್ತದೆ ಎನ್ನುವುದರ ಬಗ್ಗೆಯಾದರೂ ಮಾಹಿತಿ ಬೇಕಾಗುತ್ತದೆ ಎಂದರು.
ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಇಲ್ಲಿ ಜನಸಾಮಾನ್ಯರ ಬದುಕು ಮುಖ್ಯ. ಅರಣ್ಯ ಪ್ರದೇಶ ಹೊರತು ಪಡಿಸಿ ಜನವಸತಿ ಪ್ರದೇಶಗಳನ್ನು ಸೇರಿಸಿಕೊಂಡಿರುವುದರಿಂದ ಜನಸಾಮಾನ್ಯರು ಸಹಜವಾಗಿ ಆತಂಕಿತರಾಗಿದ್ದಾರೆ. 2014ರಿಂದ ನಿರಂತರವಾಗಿ ಕಸ್ತೂರಿ ರಂಗನ್ ವರದಿ ಅನುಷ್ಟಾನದ ಆತಂಕವಿದೆ. ಇಲ್ಲಿ ಆ ಪಕ್ಷ ಈ ಪಕ್ಷ ಎಂದು ದೂರುವುದಲ್ಲ. ರಾಜ್ಯ ಸರಕಾರದ ವೈಫಲ್ಯವೂ ಎದ್ದು ಕಾಣುತ್ತಿದೆ. ರಾಜ್ಯ ಸರಕಾರ ರಾಜ್ಯದ ಪರವಾಗಿ ಬಲವಾಗಿ ವಿರೋಧ ಮಾಡಬೇಕಿತ್ತು. ಉನ್ನತ ಮಟ್ಟದ ಸಮಿತಿಗಳನ್ನು ರಚಿಸುವುದರ ಮೂಲಕ ಆಡಳಿತಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಡಾ.ಅತುಲ್ ಕುಮಾರ್ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ನಂತರದ ದಿನಗಳಿಂದಲೇ ಅಧಿಕಾರಿಗಳು ಸಾರ್ವಜನಿಕರನ್ನು ವಿಶ್ವಾಸಕ್ಕೆ ತಗೆದೊಂಡಿಲ್ಲ. ಅವರಷ್ಟಕ್ಕೆ ಅವರು ಯೋಜನೆಗಳನ್ನು ರೂಪಿಸುತ್ತಾ ಹೋಗುತ್ತಿದ್ದಾರೆ. ತಳಮಟ್ಟದ ಸಮಸ್ಯೆಗಳನ್ನು ಗಮನಿಸುವುದಿಲ್ಲ, ಜನರ ಅಭಿಪ್ರಾಯಗಳನ್ನು ಕೇಳುವುದಿಲ್ಲ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ನಿರಂತರವಾಗಿ ಈ ಜಿಲ್ಲೆಯಲ್ಲಿ ಹೋರಾಟ ಮಾಡಿಕೊಂಡು ಬಂದರೂ ಕೂಡಾ ರಾಜ್ಯ ಸರ್ಕಾರ ಜನರ ಪರವಾಗಿ ನಿಲ್ಲಲಿಲ್ಲ. ಹಿಂದೆ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಕಾಲದಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಗ್ರಾಮಗಳಿಗೆ ತರಳಿ ಮಾಹಿತಿ ಸಂಗ್ರಹಿಸುವ ಕೆಲಸ ಆಯಿತು. ಒಟ್ಟಾರೆಯಾಗಿ ಪುನಃ ಪುನಃ ಹಿನ್ನೆಡೆ ಆಗುತ್ತಿರುವುದು ರಾಜ್ಯ ಸರಕಾರದ ವೈಫಲ್ಯದಿಂದ. ನಾವೀಗ ರಾಜ್ಯ ಸರಕಾರವನ್ನೇ ಪ್ರಶ್ನಿಸಬೇಕಾಗಿದೆ ಎಂದರು.
ಬಾಕಿಸಂ ಜಿಲ್ಲಾ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಾತನಾಡಿ, ಉಪಗ್ರಹ ಆಧಾರಿತ ಸಮೀಕ್ಷೆಯಿಂದಾಗಿ ಸಮಸ್ಯೆಯಾಗುತ್ತಿದೆ. ಸ್ವತಃ ಡಾ.ಕಸ್ತೂರಿ ರಂಗನ್ ಅವರೇ ಸಹ ಹೇಳಿದ್ದು ಇದು ಅಂತಿಮವಲ್ಲ ಎಂದು. ಅಂದರೆ ಅವರು ಕೂಡಾ ಅನುಷ್ಟಾನಕ್ಕೆ ಮೊದಲು ಭೌತಿಕ ಸಮೀಕ್ಷೆಯ ಬಗ್ಗೆ ಒಲವು ತೋರಿದ್ದರು. ಆದರೆ ಸರಕಾರಗಳ ವೈಫಲ್ಯವನ್ನು ಗಮನಿಸಬಹುದಾಗಿದೆ. ಇಲ್ಲಿ 6 ಮತ್ತು 7ನೇ ಅಧಿಸೂಚನೆಯಲ್ಲಿ ಒಂದಿಷ್ಟು ಗೊಂದಲಗಳಿವೆ.7ನೇ ಅಧಿಸೂಚನೆಯಲ್ಲಿ ಹೆಕ್ಟೇರ್ ಬದಲಿಗೆ ಇಡೀ ಗ್ರಾಮವನ್ನೇ ಸೇರಿಸಿದ್ದಾರೆ. ಬಫರ್ ಝೋನ್ ವಿಷಯದಲ್ಲಿಯೂ ಗೊಂದಲವಿದೆ ಎಂದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ರಶ್ಮಿ ಎಸ್.ಆರ್, ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್ ಪಿ, ಕುಂದಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ ಜಿ, ಬೈಂದೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಅರಣ್ಯ ಇಲಾಖೆಯ ದಿನೇಶ, ಪರಿಸರ ಇಲಾಖೆ, ಸಿ.ಆರ್.ಜೆಡ್ ಅಧಿಕಾರಿಗಳು, ಎರಡು ತಾಲೂಕು ತಹಶೀಲ್ದಾರ್ ಉಪಸ್ಥಿತರಿದ್ದರು.
