ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

0
6

ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ :ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಗಣೇಶ ಮೊಗವೀರ ಧ್ವಜಾರೋಹಣಗೈದು ” ಇಂದು ಜಾಗತಿಕ ಮಟ್ಟದಲ್ಲಿ ಭಾರತ ದೇಶದ ಖ್ಯಾತಿ ಹೆಚ್ಚುತ್ತಿದೆ. ಸ್ವಾತಂತ್ರ್ಯ ಸಂಪಾದನೆ ಎಂಬುದು ಸುಲಭಕ್ಕೆ ಸಿಕ್ಕ ಫಲವಾಗಿರಲಿಲ್ಲ. ಅನೇಕ ಮಹನೀಯರು, ಸ್ವಾತಂತ್ರ್ಯ ಸಿಂಹಗಳು ತಮ್ಮ ಇಡೀ ಬದುಕನ್ನು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಹಿರಿಯರ ಶ್ರಮದ ಫಲದಿಂದ ಈ ಸ್ವಾತಂತ್ರ್ಯವನ್ನು ನಾವೆಲ್ಲರೂ ಒಗ್ಗೂಡಿ ರಾಷ್ಟ್ರ ಕಟ್ಟುವ ಕೆಲಸ ಮಾಡುವ ಮೂಲಕ ಸಾರ್ಥಕಗೊಳಿಸಬೇಕೆಂದು ಕರೆ ಕೊಟ್ಟರು. ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಸ್ವಾತಂತ್ರ್ಯದ ಶುಭ ಕೋರಿದರು. ಸಂಸ್ಥೆಯ ಸಹಶಿಕ್ಷಕರಾದ ರಾಘವೇಂದ್ರ ದುರ್ಗ ಬಿಲ್ಲವ ಸ್ವಾತಂತ್ರ್ಯ ಸಂಭ್ರಮದ ಬಗ್ಗೆ ಮಾತನಾಡುತ್ತಾ ” ಇಂದಿನ ದಿನ ಸಮಸ್ತ ಭಾರತೀಯರಿಗೂ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದೊರಕಿ 80 ವರ್ಷಗಳೇ ಉರುಳಿ ಹೋಗಿವೆ, ಇಷ್ಟು ವರ್ಷಗಳ ಇತಿಹಾಸದಲ್ಲಿ ಈ ದೇಶ ಬಹಳಷ್ಟನ್ನು ಸಾಧಿಸಿದೆ. ಆರ್ಥಿಕತೆ, ಕ್ರೀಡೆ, ಸಾಂಸ್ಕೃತಿಕ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅನುಪಮವಾದ ಸಾಧನೆಗಳು ಕಂಡು ಬಂದಿವೆ. ವಿದೇಶಗಳಲ್ಲಿ ಭಾರತ ಮತ್ತು ಭಾರತೀಯರ ವರ್ಚಸ್ಸು ಹೆಚ್ಚುತ್ತಿದೆ. ಇಂದಿನ ಈ ಸಾಧನೆಯ ಹಿಂದೆ ಹಲವಾರು ಮಹನೀಯರ ತ್ಯಾಗ ಮತ್ತು ಅವಿರತ ಪರಿಶ್ರಮವಿದೆ. ನಮ್ಮ ಹಿರಿಯರಿಂದ ಸಿಕ್ಕಿರುವ ಈ ಸ್ವಾತಂತ್ರ್ಯವನ್ನು ಕಾಪಾಡುವುದು ಮತ್ತು ದೇಶದ ಕೀರ್ತಿಗಾಗಿ ಶ್ರಮಿಸುವುದು ಎಲ್ಲಾ ಭಾರತೀಯರ ಹೊಣೆಗಾರಿಕೆಯಾಗಿದೆ ” ಎಂದು ಅಭಿಪ್ರಾಯಪಟ್ಟರು.
ಶಿಕ್ಷಕಿಯರು ಮತ್ತು ವಿದ್ಯಾರ್ಥಿ ವೃಂದದವರು ದೇಶಪ್ರೇಮವನ್ನು ಸಾರುವ ಹಲವು ದೇಶಭಕ್ತಿ ಗೀತೆಗಳಿಗೆ ಇದೇ ಸಂದರ್ಭದಲ್ಲಿ ದನಿಯಾದರು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು, ಶಿಕ್ಷಕ- ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಹಶಿಕ್ಷಕಿ ಶ್ರೀರಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here