ಸುಜ್ಞಾನ ಕಾಲೇಜಿನಲ್ಲಿ CA ಹಾಗೂ CS ತರಬೇತಿ ಕಾರ್ಯಕ್ರಮ ಉದ್ಘಾಟನೆ

0
26

ನಿರಂತರ ಶ್ರಮದಿಂದ ಯಶಸ್ಸು ಸಾಧ್ಯ; ಸಿಎ ರಾಘವೇಂದ್ರ ಶೆಟ್ಟಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಿಎ ಕೋರ್ಸ್ ಅತ್ಯಂತ ಕಷ್ಟಕರವಾದದ್ದೇನೂ ಅಲ್ಲ. ನಿರಂತರ ಅಧ್ಯಯನ ಹಾಗೂ ಬದ್ಧತೆ ಇದ್ದರೆ ಇದನ್ನು ಸುಲಭವಾಗಿ ಸಾಧಿಸಬಹುದು. ಅಲ್ಲದೆ, ಈ ವೃತ್ತಿಗೆ ಯಾವುದೇ ನಿವೃತ್ತಿ ಇಲ್ಲದಿರುವುದರಿಂದ ಜೀವನಪರ್ಯಂತ ದುಡಿಯಬಹುದು ಎಂದು ಕರ್ನಾಟಕ ಲೆಕ್ಕಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಸಿಎ ರಾಘವೇಂದ್ರ ಶೆಟ್ಟಿ ಅವರು ಹೇಳಿದರು.

ಅವರು ಕುಂದಾಪುರದ ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಸಿಎ ಫೌಂಡೇಶನ್ ಹಾಗೂ ಸಿಎಸ್’ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಪೊರೇಟ್ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಸಿಎ ಮತ್ತು ಸಿಎಸ್ ಪದವೀಧರರಿಗೆ ಅಪಾರ ಅವಕಾಶಗಳಿವೆ. ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಭವಿಷ್ಯ ರೂಪಿಸುವ ಕೋರ್ಸ್ ಆಗಿದ್ದು, ಮನಸ್ಸಿಟ್ಟು ಕಲಿಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉನ್ನತ ಭವಿಷ್ಯ ರೂಪಿಸಲು ಕಾಲೇಜಿನಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಪರಿಣಿತರಿಂದ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೊಡ್ಡ ಕನಸು ಕಾಣಬೇಕು. ಸವಾಲುಗಳಿಗೆ ಅಂಜದೆ, ಸಿಎ ನಂತಹ ವೃತ್ತಿಪರ ಕೋರ್ಸ್‌ಗಳನ್ನು ಧೈರ್ಯವಾಗಿ ಸ್ವೀಕರಿಸಿ ಸಾಧನೆ ಮಾಡಬೇಕು” ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಅವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆ ಅತೀ ಮುಖ್ಯ. ಸಿಎ ಮತ್ತು ಸಿಎಸ್ ಪರೀಕ್ಷೆಗಳು ಕೇವಲ ಜ್ಞಾನವನ್ನಷ್ಟೇ ಅಲ್ಲದೆ, ನಿಮ್ಮ ತಾಳ್ಮೆ ಮತ್ತು ಶ್ರಮವನ್ನು ಪರೀಕ್ಷಿಸುತ್ತವೆ. ಕಠಿಣ ಪರಿಶ್ರಮದಿಂದ ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಿ” ಎಂದು ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಪೂಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಎ ಫೌಂಡೇಶನ್‌ ಸಂಯೋಜಕ ಪ್ರಮಥ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here