ಬೈಂದೂರು ಕರಾವಳಿ ಅಭಿವೃದ್ಧಿಗೆ ‘ಸಾಗರಮಾಲಾ’ ಯೋಜನೆ ಹಾಗೂ ದುರಂತದಲ್ಲಿ ಮೃತಪಟ್ಟ ಯುವಕರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡಲು ಸಚಿವರಿಗೆ ಸಂಸದ ಬಿ. ವೈ. ರಾಘವೇಂದ್ರ ಮನವಿ

0
13

ಕುಂದಾಪುರ ಮಿರರ್ ಸುದ್ದಿ…

ಬೆಂಗಳೂರು / ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಶ್ರೀ ಬಸವಂತಪ್ಪ ಅವರಿಗೆ ಎರಡು ಪ್ರಮುಖ ಮನವಿ ಪತ್ರಗಳನ್ನು ಸಲ್ಲಿಸಿ, ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಇತ್ತೀಚೆಗೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಮೂವರು ಯುವಕರ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವಂತೆ ಕೋರಿದ್ದಾರೆ.

1) ಮೀನುಗಾರಿಕಾ ಸಂಕಷ್ಟ ಪರಿಹಾರ ನಿಧಿಯಡಿ ಗರಿಷ್ಠ ಪರಿಹಾರಕ್ಕೆ ಒತ್ತಾಯ

ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಗ್ರಾಮದಲ್ಲಿ ದಿನಾಂಕ 14-10-2025 ರಂದು ಸಂಭವಿಸಿದ ದುರಂತದ ಕುರಿತು ಸಚಿವರ ಗಮನ ಸೆಳೆದ ಸಂಸದರು, ನೊಂದ ಕುಟುಂಬಗಳಿಗೆ ಸಾಂತ್ವನ ನೀಡಲು ವಿಶೇಷ ನೆರವು ಕೋರಿದ್ದಾರೆ:
ಅರಬ್ಬಿ ಸಮುದ್ರದಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಕಿರಿಮಂಜೇಶ್ವರ ಗ್ರಾಮದ ಆಶೀಶ್ ದೇವಾಡಿಗ (15 ವರ್ಷ), ಸೂರಜ್ ಪೂಜಾರಿ (16 ವರ್ಷ) ಹಾಗೂ ಸಂಕೇತ್ ದೇವಾಡಿಗ (18 ವರ್ಷ) ಎಂಬ ಮೂವರು ಯುವಕರು ಮೃತಪಟ್ಟಿದ್ದಾರೆ.
ಮೃತ ಯುವಕರೆಲ್ಲರೂ ಅತ್ಯಂತ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದು, ಭವಿಷ್ಯದ ಆಸರೆಯಾಗಿದ್ದ ಮಕ್ಕಳನ್ನು ಕಳೆದುಕೊಂಡು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ಈ ದುರಂತವನ್ನು ಮಾನವೀಯತೆಯ ದೃಷ್ಟಿಯಿಂದ “ವಿಶೇಷ ಪ್ರಕರಣ” (Special Case) ವೆಂದು ಪರಿಗಣಿಸಿ, ಸರ್ಕಾರದ ಮೀನುಗಾರಿಕಾ ಸಂಕಷ್ಟ ಪರಿಹಾರ ನಿಧಿಯಡಿ ಮೃತ ಯುವಕರ ಕುಟುಂಬಗಳಿಗೆ ಶೀಘ್ರವಾಗಿ ಗರಿಷ್ಠ ಮೊತ್ತದ ಪರಿಹಾರ ಮಂಜೂರು ಮಾಡಬೇಕೆಂದು ಆಗ್ರಹಿಸಿದ್ದಾರೆ.

2) ಸಾಗರಮಾಲಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ
ಬೈಂದೂರು ಕರಾವಳಿ ಭಾಗದ ಮೂಲಸೌಕರ್ಯ, ಮೀನುಗಾರರ ಸುರಕ್ಷತೆ ಮತ್ತು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಈ ಕೆಳಗಿನ ಯೋಜನೆಗಳ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿ ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ಶಿಫಾರಸು ಪ್ರಸ್ತಾವನೆ ಸಲ್ಲಿಸಲು ಸಚಿವರಿಗೆ ವಿನಂತಿಸಲಾಗಿದೆ:
ಹೊಸ ಹೊರಬಂದರು ನಿರ್ಮಾಣ: ಉಪ್ಪುಂದ ಗ್ರಾಮದ ಮಡಿಕಲ್‌ನಲ್ಲಿ ಮೀನುಗಾರರ ಬಹುದಿನಗಳ ಬೇಡಿಕೆಯಾದ ಹೊಸ ಹೊರಬಂದರು ನಿರ್ಮಾಣ.
ಬಂದರು ಮತ್ತು ಮೀನು ಇಳಿದಾಣಗಳ (FLC) ಮೇಲ್ದರ್ಜೆಗೇರಿಸುವಿಕೆ: ಗಂಗೊಳ್ಳಿ ಬಂದರು, ಗಂಗೊಳ್ಳಿ ಮೆಗ್ನಿಶಿಯಂ ವಾರ್ಫ್, ಶಿರೂರು-ಆಳ್ವೆಗದ್ದೆ ಹಾಗೂ ಕೋಡೇರಿ ಮೀನು ಇಳಿದಾಣಗಳ ಆಧುನೀಕರಣ ಮತ್ತು ಭದ್ರತಾ ಮೂಲಸೌಕರ್ಯ ವೃದ್ಧಿ.
ಜೆಟ್ಟಿ ಸೌಲಭ್ಯಗಳ ವಿಸ್ತರಣೆ:
ಶಿರೂರು-ಆಳ್ವೆಗದ್ದೆ FLC ಯಲ್ಲಿ 60 ಮೀಟರ್ ಜೆಟ್ಟಿ ವಿಸ್ತರಣೆ.
ಕೋಡೇರಿ ಪೂರ್ವ ಮತ್ತು ಪಶ್ಚಿಮ FLC ಗಳಲ್ಲಿ ಎರಡೂ ಬದಿ ತಲಾ 200 ಮೀಟರ್ ಜೆಟ್ಟಿ ವಿಸ್ತರಣೆ.
ಮರವಂತೆ ಹೊರಬಂದರಿನಲ್ಲಿ 300 ಮೀಟರ್ ಉದ್ದದ ನೂತನ ಜೆಟ್ಟಿ ನಿರ್ಮಾಣ.
ಕರಾವಳಿ ರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ:
ರಾಷ್ಟ್ರೀಯ ಹೆದ್ದಾರಿ-66 ರ ಕರಾವಳಿ ಭಾಗವನ್ನು ರಕ್ಷಿಸಲು ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿ ಮರವಂತೆ ಬೀಚ್ ಅಭಿವೃದ್ಧಿ.
ಬೋಟ್‌ಗಳ ಸುರಕ್ಷಿತ ಸಂಚಾರಕ್ಕಾಗಿ ಗಂಗೊಳ್ಳಿ, ಶಿರೂರು-ಆಳ್ವೆಗದ್ದೆ, ಕೋಡೇರಿ ಮತ್ತು ಮರವಂತೆ ಭಾಗಗಳಲ್ಲಿ ಅಲೆತಡೆಗೋಡೆಗಳ (Breakwater) ವಿಸ್ತರಣೆ.
ಹೂಳೆತ್ತುವಿಕೆ ಮತ್ತು ಸಂಪರ್ಕ ರಸ್ತೆಗಳು:
ಗಂಗೊಳ್ಳಿ, ಶಿರೂರು-ಆಳ್ವೆಗದ್ದೆ, ಕೋಡೇರಿ ಮತ್ತು ಮರವಂತೆ ಬಂದರುಗಳಲ್ಲಿ ಬೋಟ್‌ಗಳ ಸುಗಮ ಸಂಚಾರಕ್ಕೆ ಅಗತ್ಯ ನೀರಿನ ಆಳ ಕಾಪಾಡಲು ತುರ್ತು ಹೂಳೆತ್ತುವ (Dredging/Desilting) ಕಾಮಗಾರಿ.
ಬಂದರುಗಳಿಂದ ಹಿಡಿದ ತಾಜಾ ಮೀನುಗಳನ್ನು ಮಾರುಕಟ್ಟೆಗೆ ತ್ವರಿತವಾಗಿ ಸಾಗಿಸಲು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಉನ್ನತೀಕರಣ.

ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here