ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟೇಶ್ವರದ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಅಂಗಸಂಸ್ಥೆಯಾದ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೋಸ್ಕರ ನೈತಿಕ ಶಿಕ್ಷಣದ ಮಹತ್ವ ಮತ್ತು ಕೌಶಲ್ಯಾಧಾರಿತ ಶಿಕ್ಷಣ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತುಮಕೂರಿನ ಶ್ರೀ ರಾಮಕೃಷ್ಣ ಪರಮಹಂಸ ವಿವೇಕಾನಂದ ಆಶ್ರಮದ ಅಧ್ಯಕ್ಷರೂ, ಸಂಚಾಲಕರಾದ ಪೂಜ್ಯ ಶ್ರೀ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿ ಯವರು ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ – ನೈತಿಕ ಶಿಕ್ಷಣವೆಂದರೆ ಶಿಕ್ಷಣ ಪದ್ಧತಿಯಲ್ಲಿ ಪ್ರತ್ಯೇಕವಾದ ಅಂಗವಲ್ಲ ಎಲ್ಲಾ ಸ್ತರಗಳಲ್ಲಿಯೂ ಸಮ್ಮಿಳಿತವಾಗಿರುವ ಶಿಕ್ಷಣ. ಶಿಕ್ಷಣ ಒಂದೇ ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ. ನೈತಿಕ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಚಿಂತನ ಮಂಥನಗಳು ಮಾಗಿ ರೂಪುಗೊಳ್ಳುತ್ತವೆ. ಈ ಕಾರಣಕ್ಕಾಗಿಯೇ ಸ್ವಾಮಿ ವಿವೇಕಾನಂದರು ವಿದ್ಯಾರ್ಥಿ ದೇವೋಭವ: ಎಂದು ಕರೆ ಕೊಟ್ಟಿದ್ದರು. ಜ್ಞಾನವೆನ್ನುವುದು ಅನಂತ. ಅರಿವೇ ಗುರು. ಯಾವ ಕಲಿಕೆ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೋ ಅದು ನಿಜವಾದ ಕಲಿಕೆ. ನೈತಿಕ ಮೌಲ್ಯವನ್ನು ಒಳಗೊಂಡು, ಕೌಸಲ್ಯಾಧಾರಿತ ಶಿಕ್ಷಣ ಪದ್ಧತಿ ನಿಮ್ಮ ಸುಂದರ ಬದುಕನ್ನು ರೂಪಿಸುವಂತಾಗಲಿ ಎಂದು ಹರಸಿದರು. ಸುಮಾರು ಮೂರು ಗಂಟೆ ನಿರಂತರ ಪ್ರವಚನದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರೊಂದಿಗೆ ಆಪ್ತವಾಗಿ ಸಮಾಲೋಚಿಸಿದರು.
ಸಭಾಧ್ಯಕ್ಷತೆ ವಹಿಸಿದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಕರಾದ ಅನುಪಮಾ ಎಸ್. ಶೆಟ್ಟಿಯವರು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ನಾಯ್ಕ್ ರವರು ಉಪಸ್ಥಿತರಿದ್ದರು.
ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಸ್ವಾಗತಿಸಿದರು. ಡಾ.ಕೃಷ್ಣರಾಜ ಕರಬ ನಿರೂಪಿಸಿ, ವಂದಿಸಿದರು.
