ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಒಂದು ಲಕ್ಷ ರೂ. ಮೌಲ್ಯದ ಸುಂದರ ಉದ್ಯಾನವನ ಕೊಡುಗೆ

0
119

ರೋಟರಿ ಕ್ಲಬ್ ಕೋಟೇಶ್ವರದ ಸಮಾಜಮುಖಿ ಸೇವೆಗೆ ಮೆಚ್ಚುಗೆ

ಕುಂದಾಪುರ ಮಿರರ್ ಸುದ್ದಿ…
ಕೋಟೇಶ್ವರ: ರೋಟರಿ ಕ್ಲಬ್ ಕೋಟೇಶ್ವರದ ಸದಸ್ಯರು ಹಾಗೂ ಓಂಕಾರ್ ಕ್ಯಾಶ್ಯೂ ಸಂಸ್ಥೆಯ ಮಾಲಕರಾದ ಗಜೇಂದ್ರ ಶೆಟ್ಟಿ ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಸುಂದರ ಉದ್ಯಾನವನವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾರೆ.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಾಲೇಜು ಆವರಣದಲ್ಲಿ ನೂತನ ಉದ್ಯಾನವನದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಅವರು ಉದ್ಯಾನವನವನ್ನು ಉದ್ಘಾಟಿಸಿ, ಕಾಲೇಜಿನ ಆವರಣವನ್ನು ಹಸಿರುಮಯ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಕೋಟೇಶ್ವರ ನೀಡಿರುವ ಈ ಕೊಡುಗೆಯನ್ನು ಶ್ಲಾಘಿಸಿದರು. ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯ ಹಾಗೂ ಪರಿಸರ ಅಭಿವೃದ್ಧಿಯ ಮೂಲಕ ಸೇವೆ ಸಲ್ಲಿಸುವುದು ಅತ್ಯಂತ ಶ್ರೇಷ್ಠವಾದ ಸಮಾಜಮುಖಿ ಕಾರ್ಯವಾಗಿದ್ದು, ರೋಟರಿ ಕೋಟೇಶ್ವರದ ಇಂತಹ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ಅಕ್ಷತಾ ಗಿರೀಶ್, ಕಾರ್ಯದರ್ಶಿ ಹಾಗೂ ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಅರುಣ್ ದೇವಾಡಿಗ, ರೋಟರಿ ಕ್ಲಬ್‌ನ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು, Anns ಕ್ಲಬ್ ಅಧ್ಯಕ್ಷರಾದ ಸುಜಾತ ಶೆಟ್ಟಿ ಉಪಸ್ಥಿತರಿದ್ದರು.

ಕಾಲೇಜಿಗೆ ಅತ್ಯಂತ ಉಪಯುಕ್ತವಾದ ಹಾಗೂ ಆಕರ್ಷಕವಾದ ಉದ್ಯಾನವನವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿರುವ ಗಜೇಂದ್ರ ಶೆಟ್ಟಿ ಅವರ ಉದಾರ ಮನೋಭಾವ ಮತ್ತು ಶಿಕ್ಷಣ ಸಂಸ್ಥೆಯ ಮೇಲಿನ ಕಾಳಜಿಯನ್ನು ಕಾಲೇಜಿನ ಪರವಾಗಿ ವಿಶೇಷವಾಗಿ ಅಭಿನಂದಿಸಲಾಯಿತು. ಸಮಾಜಕ್ಕೆ ಮರಳಿ ಕೊಡುವ ಮನೋಭಾವದಿಂದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಿರುವ ಅವರ ಸೇವೆ ಇತರರಿಗೂ ಮಾದರಿಯಾಗಿದೆ ಎಂದು ಪ್ರಶಂಸಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ. ಅವರು ಮಾತನಾಡಿ, ರೋಟರಿ ಕ್ಲಬ್ ಕೋಟೇಶ್ವರವು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜದ ವಿವಿಧ ಕ್ಷೇತ್ರಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಕಾಲೇಜಿನ ಹಸಿರು ಪರಿಸರದ ಅಭಿವೃದ್ಧಿಗೆ ಇಂತಹ ಮಹತ್ವದ ಕೊಡುಗೆ ನೀಡಿರುವ ರೋಟರಿ ಕ್ಲಬ್ ಹಾಗೂ ಶ್ರೀ ಗಜೇಂದ್ರ ಶೆಟ್ಟಿ ಅವರಿಗೆ ಕಾಲೇಜಿನ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಹಸಿರುಮಯ ಕಲಿಕಾ ವಾತಾವರಣ ನಿರ್ಮಿಸಲು ಈ ಉದ್ಯಾನವನವು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here