ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಇಂಗ್ಲಿಷ್ ವಿಭಾಗ ಹಾಗೂ ಇಕೋ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ “Literariness of Satyagraha in Hind Swaraj” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು 10 ಸೆಪ್ಟೆಂಬರ್ 2026ರಂದು ಮಧ್ಯಾಹ್ನ 2.00 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲದ MPEAS ಟ್ರಸ್ಟ್ ನ ಅಧ್ಯಕ್ಷರಾದ ಪ್ರೊ. ವರದೇಶ್ ಹಿರೇಗಂಗೆ ಅವರು ಆಗಮಿಸಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ. ಅವರು ವಹಿಸಿದ್ದರು.
ಉಪನ್ಯಾಸದಲ್ಲಿ ಮಹಾತ್ಮ ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿಯಲ್ಲಿನ ಸತ್ಯಾಗ್ರಹದ ಪರಿಕಲ್ಪನೆ, ಅದರ ಸಾಹಿತ್ಯಿಕ ಅಭಿವ್ಯಕ್ತಿ ಹಾಗೂ ಗಾಂಧೀಜಿಯವರ ಚಿಂತನೆಗಳಲ್ಲಿ ಅಹಿಂಸೆ, ಸತ್ಯ, ಸ್ವರಾಜ್ಯ ಮತ್ತು ನೈತಿಕತೆಯ ಮಹತ್ವವನ್ನು ವಿವರಿಸಲಾಯಿತು. ಸತ್ಯಾಗ್ರಹವು ಕೇವಲ ರಾಜಕೀಯ ಹೋರಾಟದ ವಿಧಾನವಲ್ಲದೆ, ಸತ್ಯ ಮತ್ತು ನೈತಿಕತೆಯನ್ನು ಆಧರಿಸಿದ ಜೀವನಮೌಲ್ಯ ಹಾಗೂ ಸಾಮಾಜಿಕ ಪರಿವರ್ತನೆಯ ಮಾರ್ಗವಾಗಿದೆ ಎಂಬುದನ್ನು ಸಂಪನ್ಮೂಲ ವ್ಯಕ್ತಿಗಳು ವಿಶ್ಲೇಷಿಸಿದರು.
‘ಹಿಂದ್ ಸ್ವರಾಜ್’ ಕೃತಿಯ ಸಂವಾದಾತ್ಮಕ ನಿರೂಪಣಾ ಶೈಲಿ, ಗಾಂಧೀಜಿಯವರ ಭಾಷೆಯ ಸರಳತೆ ಹಾಗೂ ಭಾರತೀಯ ಸಮಾಜ, ಆಧುನಿಕ ನಾಗರಿಕತೆ ಮತ್ತು ಸ್ವರಾಜ್ಯದ ಕುರಿತಾದ ಅವರ ವಿಮರ್ಶಾತ್ಮಕ ದೃಷ್ಟಿಕೋನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಸತ್ಯಾಗ್ರಹದ ಮೂಲಕ ವ್ಯಕ್ತಿ ಮತ್ತು ಸಮಾಜದಲ್ಲಿ ಉಂಟಾಗಬಹುದಾದ ಪರಿವರ್ತನೆಯ ಬಗ್ಗೆಯೂ ಅವರು ವಿವರಿಸಿದರು.
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಪನ್ಯಾಸವನ್ನು ಆಲಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಗಾಂಧೀಜಿಯವರ ವಿಚಾರಧಾರೆ, ಸತ್ಯಾಗ್ರಹದ ತಾತ್ವಿಕ ಹಿನ್ನೆಲೆ ಹಾಗೂ ‘ಹಿಂದ್ ಸ್ವರಾಜ್’ ಕೃತಿಯ ಸಾಹಿತ್ಯಿಕ ಮತ್ತು ಸಾಮಾಜಿಕ ಮಹತ್ವದ ಕುರಿತು ಅರಿವು ಮೂಡಿಸುವಲ್ಲಿ ಪರಿಣಾಮಕಾರಿಯಾಯಿತು.
ಒಟ್ಟಿನಲ್ಲಿ, ವಿಶೇಷ ಉಪನ್ಯಾಸವು ವಿದ್ಯಾರ್ಥಿಗಳಲ್ಲಿ ಗಾಂಧೀಜಿಯವರ ಚಿಂತನೆಗಳನ್ನು ಅರ್ಥೈಸಿಕೊಳ್ಳಲು ಹಾಗೂ ಸತ್ಯ, ಅಹಿಂಸೆ ಮತ್ತು ಸ್ವರಾಜ್ಯದ ಮೌಲ್ಯಗಳನ್ನು ಸಮಕಾಲೀನ ಸಂದರ್ಭದಲ್ಲಿ ಚಿಂತಿಸಲು ಉತ್ತಮ ವೇದಿಕೆಯಾಯಿತು.
ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ನಿರಂಜನ್ ಶರ್ಮಾ ಈ ಕಾರ್ಯಕ್ರಮದ ಪ್ರಾಸ್ತವಿಕ ಹಾಗೂ ಸ್ವಾಗತ ನುಡಿಗಳನ್ನಾಡಿದರು,
ಈ ಕಾರ್ಯಕ್ರಮವನ್ನು ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ದುರ್ಗಾಶ್ರೀ ನಿರೂಪಿಸಿದರು, ಮುಖ್ಯ ಅತಿಥಿಗಳನ್ನು ದ್ವಿತೀಯ ಬಿಸಿಎ ವಿದ್ಯಾರ್ಥಿನಿ ದುರ್ಗಾಶ್ರೀ ಸಭೆಗೆ ಪರಿಚಯಿಸಿದರು. ಡಾ.ಅನುಷಾ ಎಲ್ ವಂದನಾರ್ಪಣೆಗೈದರು
