ಸೆಪ್ಟೆಂಬರ್ 19ರಂದು ಬಸ್ರೂರಿನಲ್ಲಿ ಶ್ರೀ ತುಳುವೇಶ್ವರನಿಗೆ ದ್ವಾದಶ ಜ್ಯೋತಿರ್ಲಿಂಗ ತೀರ್ಥಾಭಿಷೇಕ

0
13

ಕುಂದಾಪುರ ಮಿರರ್ ಸುದ್ದಿ..‌

ಬಸ್ರೂರು: ಬಸ್ರೂರು ಶ್ರೀ ತುಳುವೇಶ್ವರ ದೇವಸ್ಥಾನದ ತುಳುವೇಶ್ವರಿ ಮೂಲದೇವಿಯ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಅಂಗವಾಗಿ ಸೆಪ್ಟೆಂಬರ್ 19 ಮತ್ತು 20ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಇದರ ಅಂಗವಾಗಿ ಸೆಪ್ಟೆಂಬರ್ 19ರಂದು ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಶ್ರೀ ತುಳುವೇಶ್ವರನಿಗೆ ದ್ವಾದಶ ಜ್ಯೋತಿರ್ಲಿಂಗಗಳ ಪವಿತ್ರ ತೀರ್ಥಜಲದಿಂದ ವಿಶೇಷ ತೀರ್ಥಾಭಿಷೇಕ ನಡೆಯಲಿದೆ.

ತುಳುವರ್ಲ್ಡ್ ಫೌಂಡೇಶನ್ ಸದಸ್ಯರಾದ ನಿತಿನ್ ಪೂಜಾರಿ, ಅಜಯ್ ದೇವಾಡಿಗ, ರಿತೇಶ್ ಹಾಗೂ ಬಸಂತ್ ನಾಲ್ವರು ಯುವಕರು ಸುಮಾರು 48 ದಿನಗಳ ಕಾಲ ತಮ್ಮದೇ ವಾಹನದಲ್ಲಿ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳ ಯಾತ್ರೆ ಕೈಗೊಂಡು, ಎಲ್ಲಾ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪವಿತ್ರ ತೀರ್ಥಜಲವನ್ನು ಸಂಗ್ರಹಿಸಿ ಬಸ್ರೂರಿಗೆ ತಂದಿದ್ದಾರೆ. ಈ ತೀರ್ಥಜಲವನ್ನು ಶ್ರೀ ತುಳುವೇಶ್ವರನಿಗೆ ಅಭಿಷೇಕದ ಮೂಲಕ ಸಮರ್ಪಿಸಲಾಗುವುದು.

ವಿಶೇಷ ತೀರ್ಥಾಭಿಷೇಕವನ್ನು ನೀಲೇಶ್ವರದ ತಂತ್ರಿಗಳಾದ ಅರವತ್ತ್ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳು ನೆರವೇರಿಸಲಿದ್ದಾರೆ. ತೀರ್ಥಾಭಿಷೇಕದ ಬಳಿಕ ತುಳುವೇಶ್ವರಿ ಮೂಲದೇವಿಯ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯಲಿದೆ.

“ಶ್ರೀ ತುಳುವೇಶ್ವರನ ದರ್ಶನ ಮಾಡಿದರೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನದ ಫಲ ದೊರೆಯುತ್ತದೆ” ಎಂಬ ಭಕ್ತಿಯ ನಂಬಿಕೆಯ ಹಿನ್ನೆಲೆಯಲ್ಲಿ ಈ ವಿಶೇಷ ತೀರ್ಥಾಭಿಷೇಕವನ್ನು ಆಯೋಜಿಸಲಾಗಿದೆ. ಒಂದೇ ಸಾನಿಧ್ಯದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪವಿತ್ರ ತೀರ್ಥಸಂಗಮ ನಡೆಯುತ್ತಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.

ಇದೇ ಸಂದರ್ಭದಲ್ಲಿ ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಬೆಳವಣಿಗೆಯೂ ಮಹತ್ವ ಪಡೆದಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ, ಅಂಜಾರು ರಾಮಣ್ಣ ಹೆಗ್ಡೆ ಹಾಗೂ ಎಸ್.ಯು. ಪಣಿಯಾಡಿ ಅವರ ತುಳುವ ಚಳುವಳಿಯ ಶತಮಾನೋತ್ಸವ, ಸೆಪ್ಟೆಂಬರ್ 23ರಿಂದ ನಡೆಯಲಿರುವ ತುಳುವ ಮಹಾಸಭೆಯ 99ನೇ ವರ್ಷಾಚರಣೆ ಹಾಗೂ 19 ರಾಷ್ಟ್ರಗಳಲ್ಲಿ ತುಳುವ ಮಹಾಸಭೆಯ ಕಾರ್ಯವ್ಯಾಪ್ತಿ ವಿಸ್ತರಿಸಿರುವುದು ತುಳು ನುಡಿ ಮತ್ತು ಸಂಸ್ಕೃತಿಯ ಪುನರ್‌ವೈಭವದ ವ್ಯಾಪ್ತಿಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಬಸ್ರೂರು ಶ್ರೀ ತುಳುವೇಶ್ವರ–ತುಳುವೇಶ್ವರಿ ಸಾನಿಧ್ಯದ ಮಹತ್ವವೂ ಮತ್ತಷ್ಟು ಗಮನ ಸೆಳೆಯುತ್ತಿದೆ.

ಸಮಸ್ತ ತುಳುನಾಡಿನ ಜನರು ಹಾಗೂ ಶ್ರೀ ತುಳುವೇಶ್ವರ–ತುಳುವೇಶ್ವರಿ ಭಕ್ತರು ಸೆಪ್ಟೆಂಬರ್ 19ರಂದು ಬಸ್ರೂರಿಗೆ ಆಗಮಿಸಿ ದ್ವಾದಶ ಜ್ಯೋತಿರ್ಲಿಂಗ ತೀರ್ಥಾಭಿಷೇಕದಲ್ಲಿ ಹಾಗೂ ನಂತರ ನಡೆಯುವ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಭಾಗವಹಿಸಿ ಪುನೀತರಾಗಬೇಕೆಂದು ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here