ಕುಂದಾಪುರ ಮಿರರ್ ಸುದ್ದಿ….

ಉಡುಪಿ: ಈ ಭಾಗದ ಸಂಘಟನೆಗಳು ಹಾಗೂ ಜನ ಪ್ರತಿನಿಧಿಗಳು ಭೌತಿಕ ಸಮೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು” ಎಂದ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ಅವರು ಹೆಬ್ರಿಯ ಸರ್ಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ವಾಸಿಸುವ ಜನರ ಸಮಸ್ಯೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸಚಿವ ಸಂಪುಟ ಸಭೆ ನಡೆಸಿದ್ದೇನೆ. ಜನರ ಕಷ್ಟ ಸಮಸ್ಯೆಗಳ ಬಗ್ಗೆ ವಾಸ್ತವಾಂಶ ತಿಳಿದುಕೊಳ್ಳುವ ಉದ್ದೇಶದಿಂದ ನಾನೇ ನಿಮ್ಮ ಬಳಿ ಬಂದಿದ್ದೇನೆ. ನೊಂದವರ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಜನರ ಸಮಸ್ಯೆ ಗಳನ್ನು ಅವರ ಅಭಿಪ್ರಾಯವನ್ನು ತಿಳಿದು ಕೊಂಡಿದ್ದೇನೆ. ಈ ಬಗ್ಗೆ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದ್ದೇನೆ. ವಿಧಾನಸಭೆಯ 2 ಸದನದಲ್ಲಿ ಜನಪ್ರತಿನಿಧಿಗಳೊಂದಿಗೆವಿಸ್ತೃತ ಚರ್ಚೆ ನಡೆಸಿ ಕಾಡಂಚಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ ಎಂದರು.
ಮಂಗಳೂರಿನಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ 60 ತೀರ್ಮಾನಗಳನ್ನು ತೆಗೆದುಕೊಂಡಿ ದ್ದೇವೆ. ಇದರಲ್ಲಿ 40 ತೀರ್ಮಾನಗಳು ನೇರವಾಗಿ ಕರಾವಳಿ ಭಾಗದ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡದ ಮೂರು ಜಿಲ್ಲೆಗಳಿಗ ಅನುಕೂಲವಾಗಲಿದೆ, ಇಂದು ಎರಡು ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಯಾಗಿ ಮಾನ್ಯತೆ ನೀಡಿ ಮಾತೃ ಭಾಷೆಗೆ ಆದ್ಯತೆ ನೀಡಿದ್ದೇವೆ. ಕರಾವಳಿ ಮಲೆನಾಡು ಭಾಗಕ್ಕೆ ಹೊಸ ಪ್ರವಾಸೋದ್ಯಮ ನೀತಿಗೆ ಅನುಮೋದನೆ ನೀಡಿದ್ದೇವೆ. 320 ಕಿಲೋ ಮೀಟರ್ ಸಮುದ್ರ ತೀರ ಮತ್ತು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಇವನ ಬಳಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಜನರ ವಲಸೆಯನ್ನು ತಡೆಯುತ್ತೇವೆ ಎಂದರು.
ಕರಾವಳಿ ಭಾಗದ ಹಿರಿಯರು ಬ್ಯಾಂಕ್ ಗಳನ್ನು ಸ್ಥಾಪಿಸಿ ದೇಶಕ್ಕೆ ಮಾದರಿ ಯಾಗಿದ್ದಾರೆ. ಜಿಲ್ಲೆಯು ಅತಿ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದು ಡಾಕ್ಟರ್ ರಾಗುತ್ತಿದ್ದಾರೆ,ಪದವಿ ಪೂರ್ವ ಕಾಲೇಜು ಒಂದರಲ್ಲೇ ನಾಲ್ಕು ಲಕ್ಷಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರು ವುದು ಹೆಮ್ಮೆಯ ವಿಚಾರ. ಕರಾವಳಿಯ ಜನರನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ಸರ್ಕಾರ ಎಂದೆಂದಿಗೂ ನಿಮ್ಮ ಜೊತೆ ಇರಲಿದೆ ಎಂದರು.
ಜಿಲ್ಲೆಯ ಅರಣ್ಯದಲ್ಲಿ ಬದುಕು ಕಟ್ಟಿಕೊಂಡವರ ಒಳತಿಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ, ಜನರಿಗೆ ತೊಂದರೆ ಕೊಡಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದರು.
ಬಗರ್ ಹುಕುಂ ಸಾಗುವಳಿ ತಂದಿದ್ದು ನಾವೇ. ಭೂ ಮಸೂದೆ ತಂದವರು ನಾವೇ, ಭಾವನೆ ಮೇಲೆ ನಮ್ಮ ರಾಜಕಾರಣ ಇಲ್ಲ ಬದುಕಿನ ಮೇಲೆ ನಮ್ಮ ರಾಜಕಾರಣ, ನಿಮ್ಮೆಲ್ಲರ ಬದುಕು ನಮಗೆ ಮುಖ್ಯ ಅಕ್ರಮ ಸಕ್ರಮ, ಇಕೋ ಸೆನ್ಸಿಟೀವ್ ವಿಚಾರ ನನಗೆ ಅರಿವಿದೆ. ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಬಗೆಗೂ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇವೆ, ಎಂದವರು ಇಂದಿನ ಸಭೆಯಲ್ಲಿ ಇಲ್ಲಿನ ಸ್ಥಳೀಯ ಜನರು ಗ್ರಾಮ ಸಭೆ ಮಾಡಬೇಕು, ಸರ್ವೆ ಮಾಡಬೇಕು, ಜೋನಲ್ ಮ್ಯಾನೇಜ್ಮೆಂಟ್ ಪ್ಲಾನ್ ಬಗ್ಗೆ ಗಮನ ಸೆಳೆದಿದ್ದಾರೆ ಅದನ್ನು ಪರಿಗಣಿಸಲಾಗುವುದು ಎಂದರು. ಹೆಬ್ರಿಗೆ ತಾಲೂಕ ಆಸ್ಪತ್ರೆ ಅವಶ್ಯಕತೆ ಇದೆ ಎಂದಿದ್ದಾರೆ.
ಸಿಕ್ಕ ಅವಕಾಶದಲ್ಲಿ ನಿಮಗೆ ಸಹಾಯ ಮಾಡುತ್ತೇನೆ.
ಸುಮ್ಮನೆ ಘೋಷಣೆ ಮಾಡುವುದು ಮುಖ್ಯ ಅಲ್ಲ, ಮೂರು ದಿನಗಳ ಒಳಗಾಗಿ ಸ್ಥಳೀಯ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ
ಅದು ಕಾರ್ಯರೂಪಕ್ಕೆ ಮುಂದಿನ ದಿನದಲ್ಲಿ ತರಲಾಗುವುದು ಎಂದರು.
ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿಕೇಂದ್ರ ಸರ್ಕಾರ ಜುಲೈ 2026 ರಲ್ಲಿ ಹೊರಡಿಸಿದ ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಒಪ್ಪುವುದಿಲ್ಲ. ಈ ವರದಿ ಮತ್ತು ಅದರ ಆಧಾರದ ಮೇಲೆ ಹೊರಡಿಸಲಾದ ಅಧಿಸೂಚನೆಗಳನ್ನು ತಿರಸ್ಕರಿಸುವ ಸ್ಪಷ್ಟ ತೀರ್ಮಾನವನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 39 ತಾಲೂಕುಗಳ ಮೇಲೆ ಭೀಕರ ಪರಿಣಾಮ ಬೀರಲಿದೆ. ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಮತ್ತು ಸಾರ್ವಜನಿಕರ ಜೀವನೋಪಾಯಕ್ಕೆ ಧಕ್ಕೆ ತರುವ ಯಾವುದೇ ನಿರ್ಧಾರಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ತಿರಸ್ಕರಿಸುತ್ತೇವೆ ಎಂದರು
ಸಚಿವ ರಿಜ್ವಾನ್ ಆರ್ಷದ್ ಮಾತನಾಡಿ
ಕಸ್ತೂರಿ ರಂಗನ್ ವರದಿಗೆ ಮಲೆನಾಡು, ಕರಾವಳಿಗರ ವಿರೋಧ- ಖುದ್ದು ಸಮಸ್ಯೆ ಆಲಿಸಲು ಬಂದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದ- ನಮ್ಮ ಸರ್ಕಾರ ಜನರ ಭಾವನೆಗಳಿಗೆ ದ್ವನಿಯಾಗಲಿದೆ ಎಂದರು.
ನಾನು ಇಂದು ನಿಮ್ಮ ಮುಂದೆ ಕೇವಲ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಿಂತಿಲ್ಲ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ, ಈ ಕರಾವಳಿ ಮತ್ತು ಮಲೆನಾಡು ಜಿಲ್ಲೆಯ ಜನರು ತಾವು ಎಂದೂ ಕೇಳದ, ಎಂದೂ ಒಪ್ಪಿಗೆ ನೀಡದ ಒಂದು ಅಧಿಸೂಚನೆಯ ನೆರಳಿನಡಿ ಬದುಕುತ್ತಿರುವುದನ್ನು ನೋಡಿದ ಕರ್ನಾಟಕದ ಮಗನಾಗಿ ನಿಂತಿದ್ದೇನೆ.
ಈ ದಿನ ಕರಾವಳಿ ಭಾಗದ ಜನರ ಪಾಲಿನ ಸುವರ್ಣ ದಿನ. ಸ್ವಾತಂತ್ರ್ಯ ಬಂದು 79 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ನಮ್ಮ ಅಭಿಮಾನದ ಭಾಷೆಯಾದ‘ತುಳು’ಭಾಷೆಯನ್ನ 2 ನೇ ಆಡಳಿತ ಭಾಷೆಯನ್ನಾಗಿ ಘೋಷಿಸಲಾಗಿದೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿನಂದಿಸುತ್ತೇನೆ ಎಂದರು.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜುಲೈ 27, 2026ರಂದು ಹೊರಡಿಸಿದ ಏಳನೇ ಕರಡು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ) ಅಧಿಸೂಚನೆಯಲ್ಲಿ ಈ ಜಿಲ್ಲೆಯ ಮೂವತ್ತೈದು ಗ್ರಾಮಗಳ ಹೆಸರುಗಳಿವೆ. ಕುಂದಾಪುರ ತಾಲೂಕಿನ 11, ಹೆಬ್ರಿ ತಾಲೂಕಿನ 9, ಕಾರ್ಕಳ ತಾಲೂಕಿನ 7 ಮತ್ತು ಬೈಂದೂರು ತಾಲೂಕಿನ 8 ಗ್ರಾಮಗಳಿವೆ. ಆಲೂರು ಮತ್ತು ಅಮಾಸೆಬೈಲಿನ, ಬೆಳ್ವೆ ಮತ್ತು ಮಡಾಮಕ್ಕಿಯ, ಅಂಡಾರು ಮತ್ತು ಶಿರ್ಲಾಲಿನ, ಬೈಂದೂರು ಮತ್ತು ಕೊಲ್ಲೂರಿನ ಪ್ರತಿಯೊಂದು ಕುಟುಂಬದ ಧ್ವನಿಯಾಗಲು ನಮ್ಮ ಮುಖ್ಯಮಂತ್ರಿಗಳು ನಮ್ಮೊಂದಿಗೆ ನಿಲ್ಲಲು ಹೆಬ್ರಿಗೆ ಬಂದಿದ್ದಾರೆ ಎಂದರು.
ಇದು ಹೊಸ ಸಮಸ್ಯೆಯಲ್ಲ, ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ತನ್ನ ವರದಿಯನ್ನು ಏಪ್ರಿಲ್ 2013ರಲ್ಲಿಯೇ ಸಲ್ಲಿಸಿತು. ಅಂದಿನಿಂದ ಕೇಂದ್ರ ಸರ್ಕಾರ ಒಂದಲ್ಲ, ಎರಡಲ್ಲ, ಸತತ ಏಳು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಪ್ರತಿ ಬಾರಿಯೂ ಗ್ರಾಮಗಳ ಸಂಖ್ಯೆ ಬದಲಿಸಿ, ಪ್ರತಿ ಬಾರಿಯೂ ಗಡಿಗಳನ್ನು ಬದಲಿಸಿ, ಪ್ರತಿ ಬಾರಿಯೂ ಉಡುಪಿಯ ಜನರನ್ನ ಅದೇ ಹೋರಾಟಕ್ಕೆ ಮತ್ತೆ ಮತ್ತೆ ಸಜ್ಜು ಮಾಡುವಂತೆ ಮಾಡಿದೆ. ಈ ಅಧಿಸೂಚನೆಯಲ್ಲಿ ಕರ್ನಾಟಕದ ಪಾಲು 20,668 ಚದರ ಕಿಲೋಮೀಟರ್ ವ್ಯಾಪ್ತಿಗೆ ಅನ್ವಯಿಸುತ್ತದೆ. ಇಂದು ಪಶ್ಚಿಮ ಘಟ್ಟದ ಆರು ರಾಜ್ಯಗಳಲ್ಲಿ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ಇವುಗಳ ಸಹಭಾಗಿತ್ವ ಇಲ್ಲದೇ ಒಂದು ರಾಷ್ಟ್ರೀಯ ಸಂರಕ್ಷಣಾ ಗುರಿಯನ್ನು ಯಾವುದೇ ಪರಿಹಾರವಿಲ್ಲದೇ ಕರ್ನಾಟಕ ಒಂದೇ ರಾಜ್ಯ ಸಂಪೂರ್ಣವಾಗಿ ಹೊರುವಂತೆ ಮಾಡಿದೆ ಎಂದರು.
ಸಭೆಯಲ್ಲಿ ಶಾಸಕರಾದ ಸುನಿಲ್ ಕುಮಾರ್, ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಗ್ಯಾರೆಂಟಿ ಯೋಜನೆಯ ಉಪಾಧ್ಯಕ್ಷರಾದ ಉದಯ್ ಶೆಟ್ಟಿ ಮುನಿಯಾಲ್ ಮಾತನಾಡಿದರು.
ಕುಂದಾಪುರ ನ್ಯಾಯವಾದಿ ಟಿ ಬಿ ಶೆಟ್ಟಿ, ಬುಡಕಟ್ಟು ಸಮುದಾಯದ ಮುಖಂಡ ಶ್ರೀಧರ್ ಗೌಡ, ರೈತ ಸಮುದಾಯದ ಪ್ರತಿನಿಧಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ , ದಿನೇಶ್ ಹೆಗ್ಡೆ, ವರದಿ ಜಾರಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ,ಗುರುರಾಜ ಶೆಟ್ಟಿ ಗಂಟಿಹೊಳೆ ,ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜನಾಥ ಪೂಜಾರಿ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಅಧ್ಯಕ್ಷ ಬಿ.ಹೆಚ್. ಹರೀಶ್, ಮುಖಂಡರಾದ ವಿನಯ್ ಕುಮಾರ್ ಸೊರಕೆ, ಜಯ ಪ್ರಕಾಶ್ ಹೆಗ್ಡೆ , ರಮಾನಾಥ ರೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಸ್ವಾಗತಿಸಿ, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಶ್ರೀನಿವಾಸಲು ಪ್ರಾಸ್ತಾವಿಸಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡರ್ ಕೆ ಸಿ ರಾಜೇಶ್, ರೋಷನ್ ಶೆಟ್ಟಿ ವಂದಿಸಿ ನಿರೂಪಿಸಿದರು.