ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ನಿರಂತರ ಪ್ರಯತ್ನದ ಫಲವಾಗಿ ಭಾರತೀಯ ರೈಲ್ವೆ ಬೆಂಗಳೂರು–ಮಂಗಳೂರು–ಉಡುಪಿ–ಕಾರವಾರ–ಮಡಗಾಂವ್ ನಡುವೆ ಹೊಸ ವಂದೇ ಭಾರತ್ ಸಂಪರ್ಕದ ಘೋಷಣೆ ಮಾಡಿದೆ.
ಕಳೆದ ಒಂದು ವರ್ಷದಿಂದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ನಡೆಸುತ್ತಿದ್ದ ಹೋರಾಟಕ್ಕೂ ಇದರಿಂದ ಜಯ ಸಿಕ್ಕಂತಾಗಿದೆ. ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಘಾಟ್ ಪ್ರದೇಶದ ಸಮಸ್ಯೆಯಿಂದಾಗಿ ವಂದೇ ಭಾರತ್ ರೈಲು ಸಂಚಾರಕ್ಕೆ ನಿರಂತರವಾಗಿ ಎದುರಾಗುತ್ತಿದ್ದ ಅಡಚಣೆಗಳ ಹಿನ್ನೆಲೆಯಲ್ಲಿ ಸಂಸದ ಕೋಟ ಅವರು ಹಲವು ಬಾರಿ ರೈಲ್ವೆ ಮಂಡಳಿ ಹಾಗೂ ರೈಲ್ವೆ ಸಚಿವಾಲಯದ ಸಭೆಗಳಲ್ಲಿ ಭಾಗವಹಿಸಿ, ಸಮಸ್ತ ಕರಾವಳಿಗೆ ವೇಗದ ರೈಲು ಸಂಪರ್ಕದ ಅಗತ್ಯವನ್ನು ಸಚಿವರಿಗೆ ಮನದಟ್ಟು ಮಾಡಿದ್ದರು.
ಕರಾವಳಿಯ ರಸ್ತೆ ಮಾರ್ಗದ ಸವಾಲುಗಳು, ಈಗಿರುವ ರೈಲುಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಂಸದರು ರೈಲ್ವೆ ಸಚಿವಾಲಯಕ್ಕೆ ನಿರಂತರವಾಗಿ ಭೇಟಿ ನೀಡಿ ಸಭೆಗಳನ್ನು ನಡೆಸಿದ್ದರು. ಇದರ ಫಲವಾಗಿ ಹಲವು ಪರೀಕ್ಷೆಗಳ ನಂತರ ಬೆಂಗಳೂರು ಮತ್ತು ಕರಾವಳಿಯ ನಡುವೆ ವಂದೇ ಭಾರತ್ ರೈಲು ಓಡಿಸುವ ನಿರ್ಧಾರವನ್ನು ಭಾರತೀಯ ರೈಲ್ವೆ ಪತ್ರದ ಮೂಲಕ ಸಂಸದರಿಗೆ ತಿಳಿಸಿದೆ.
ಕೊಂಕಣ ರೈಲ್ವೆಯ ಉಡುಪಿ ಮತ್ತು ಕಾರವಾರ ನಿಲ್ದಾಣಗಳಲ್ಲಿ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ, ನೀರು ತುಂಬಿಸಿಕೊಳ್ಳಲು ರೈಲು ಗೋವಾದ ಮಡಗಾಂವ್‌ವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿದೆ.
ಕಾರವಾರದ ರಕ್ಷಣಾ ನೌಕಾ ನೆಲೆ, ಗೋಕರ್ಣ–ಮುರುಡೇಶ್ವರದ ಯಾತ್ರಾ ಸ್ಥಳಗಳು, ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ ಹಾಗೂ ಕರಾವಳಿಯ ಅಸಂಖ್ಯಾತ ಬೀಚ್‌ಗಳು ಮತ್ತು ದೇವಾಲಯಗಳು ರಾಜಧಾನಿ ಬೆಂಗಳೂರಿನೊಂದಿಗೆ ನೇರ ಸಂಪರ್ಕ ಪಡೆಯಲಿವೆ.
ಬೆಂಗಳೂರಿನಲ್ಲಿ ನೆಲೆಸಿರುವ ಉಡುಪಿ ಮೂಲದ ಹೋಟೆಲ್ ಉದ್ಯಮಿಗಳು, ಐಟಿ ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಈ ರೈಲು ವೇಗದ ಮತ್ತು ಆರಾಮದಾಯಕ ಪ್ರಯಾಣದ ಸೌಲಭ್ಯ ಒದಗಿಸಲಿದೆ.
ಈ ಹಿಂದೆ ಮಂಗಳೂರು–ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಸೇವೆಗಳು ಹೊಸ ರೈಲು ಸೇವೆಯೊಂದಿಗೆ ವಿಲೀನಗೊಳ್ಳಲಿದ್ದು, ಕರಾವಳಿಯ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ವಂದೇ ಭಾರತ್ ರೈಲು ಸಂಪೂರ್ಣ ಕರಾವಳಿಯುದ್ದಕ್ಕೂ ಸಂಚರಿಸುವಂತೆ ಮಾಡಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅವರೊಂದಿಗೆ ನಿರಂತರವಾಗಿ ಹೋರಾಟ ನಡೆಸಿದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಪ್ರಸ್ತಾವಿತ ಮಾರ್ಗವು ಸುಬ್ರಹ್ಮಣ್ಯ ರೋಡ್, ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರುಡೇಶ್ವರ, ಗೋಕರ್ಣ ಹಾಗೂ ಕಾರವಾರ ಮೂಲಕ ಮಡಗಾಂವ್ ತಲುಪಲಿದೆ.
ಬೆಂಗಳೂರು ಮತ್ತು ಮಡಗಾಂವ್ ಎರಡೂ ಕಡೆಯಿಂದ ರೈಲುಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ನಿರೀಕ್ಷೆಯಿದೆ. ಬೆಳಿಗ್ಗೆ ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 4ರ ಸುಮಾರಿಗೆ ಉಡುಪಿ ತಲುಪುವ ನಿರೀಕ್ಷೆಯಿದ್ದು, ಉಡುಪಿಯಿಂದ ಮಧ್ಯಾಹ್ನದ ವೇಳೆಗೆ ಹೊರಟು ರಾತ್ರಿ 9ರ ಸುಮಾರಿಗೆ ಯಶವಂತಪುರ ತಲುಪುವ ಸಾಧ್ಯತೆ ಇದೆ.
ಬೆಂಗಳೂರನ್ನು ಕಾರವಾರದೊಂದಿಗೆ ವಂದೇ ಭಾರತ್ ರೈಲಿನ ಮೂಲಕ ಸಂಪರ್ಕಿಸಬೇಕೆಂಬ ಬೇಡಿಕೆಯನ್ನು ರಾಜ್ಯದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿಯೇ ಕೋಟ ಶ್ರೀನಿವಾಸ ಪೂಜಾರಿ ಅವರು ವ್ಯಕ್ತಪಡಿಸಿದ್ದರು. ಹಾಸನ–ಸುಬ್ರಹ್ಮಣ್ಯ ಮಾರ್ಗದ ವಿದ್ಯುದೀಕರಣದ ಬಳಿಕವೂ ಅವರು ರೈಲು ಪ್ರಯಾಣಿಕರ ಸಮಿತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಂದೇ ಭಾರತ್ ಸೇವೆಯನ್ನು ಸಂಪೂರ್ಣ ಕರಾವಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.
“ಮುಂದಿನ ದಿನಗಳಲ್ಲಿ ರೈಲಿನ ವೇಗವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸಲಾಗುವುದು,” ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.
