ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ :ಮಡಿಕೆ ತಯಾರಿ ಪ್ರಾತ್ಯಕ್ಷಿಕೆ

0
8

ಕುಂದಾಪುರ ಮಿರರ್ ಸುದ್ದಿ…

ಅಂಪಾರು: ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ.) ಅಂಪಾರು ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಮಡಕೆ ತಯಾರಿಕೆಯ ನೇರ ಪ್ರಾತ್ಯಕ್ಷಿಕೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ವಹಿಸಿದ್ದರು. ಟ್ರಸ್ಟ್‌ನ ನಿರ್ದೇಶಕರಾದ ಕಿರಣ್ ಹೆಗ್ಡೆ ಉಪಸ್ಥಿತರಿದ್ದರು.
ಗಾಂಧೀಜಿಯವರ ಸರ್ವಧರ್ಮ ಸಮಭಾವದ ಸಂದೇಶವನ್ನು ಸಾರುವ ಸರ್ವಧರ್ಮ ಪ್ರಾರ್ಥನೆ ಹಾಗೂ ಭಜನೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಕ್ತಿಭಾವದಿಂದ ಭಾಗವಹಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಸಾಂಪ್ರದಾಯಿಕ ಮಡಕೆ ತಯಾರಿಕೆಯ ನೇರ ಪ್ರದರ್ಶನವನ್ನು ಯಡಾಡಿಯ ಶ್ರೀಮತಿ ಗಂಗಿ ಕುಲಾಲ್ತಿ ಅವರು ನಡೆಸಿಕೊಟ್ಟರು. ಮಣ್ಣಿನಿಂದ ಮಡಕೆ ರೂಪುಗೊಳ್ಳುವ ಪ್ರಕ್ರೀಯೆಯನ್ನು ಮಕ್ಕಳಿಗೆ ನೇರವಾಗಿ ಪರಿಚಯಿಸುವ ಮೂಲಕ ನಮ್ಮ ನಾಡಿನ ಸಾಂಪ್ರದಾಯಿಕ ಗುಡಿಕೈಗಾರಿಕೆಯ ಕಲೆ, ಕೌಶಲ್ಯ ಮತ್ತು ಶ್ರಮದ ಗೌರವದ ಮಹತ್ವವನ್ನು ಮನದಟ್ಟುಗೊಳಿಸಿದರು.
ಶಿಕ್ಷಕಿ ಮಲ್ಲಿಕಾ ಅವರು ಗಾಂಧೀಜಿ ಹಾಗೂ ಶಾಸ್ತ್ರಿಜಿಯವರ ಜೀವನ ಮತ್ತು ಆದರ್ಶಗಳ ಕುರಿತು ಮಾಹಿತಿ ನೀಡಿದರು. ಸಹಶಿಕ್ಷಕಿ ಆಶಾ ಅವರು ಶ್ರಮದ ಗೌರವ ಹಾಗೂ ಸಾಂಪ್ರದಾಯಿಕ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ಶಿಕ್ಷಕಿ ಸರೋಜಾ ಅವರು ಅತಿಥಿ ಪರಿಚಯ ಹಾಗೂ ಮಡಕೆ ತಯಾರಿಕೆಯ ಕುರಿತು ಮಾತನಾಡಿದರು.ಕನ್ನಡ ಭಾಷಾ ಶಿಕ್ಷಕಿ ಪೂಜಾ ಸ್ವಾಗತಿಸಿದರು ಹಾಗೂ ಶಿಕ್ಷಕಿ ಭವ್ಯಾ ವಂದಿಸಿದರು. ವಿದ್ಯಾರ್ಥಿನಿಯರಾದ ಅನಿತಾ ಕಿಣಿ ಹಾಗೂ ಸನ್ವಿತಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಪ್ರಥಮ ಅವಧಿಯ ಸರ್ವಜಿತ್ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಿತು. ಚರಕ, ಸುಶ್ರುತ, ಅಗಸ್ತ್ಯ, ಆತ್ರೇಯ ನಾಲ್ಕು ತಂಡಗಳ ವಿದ್ಯಾರ್ಥಿಗಳು ವಿವಿಧ ತಂಡ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಅಂಕಗಳನ್ನು ಗಳಿಸಿದರು. ಅಂತಿಮವಾಗಿ ಅತ್ರೇಯ ತಂಡ ವಿಜೇತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಶಾಲಾ ಶೈಕ್ಷಣಿಕ ನಿರ್ದೇಶಕರಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ , ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಹಾಗೂ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಅವರು ಎಲ್ಲಾ ನಾಲ್ಕು ತಂಡಗಳ ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.
ಗಾಂಧೀಜಿಯವರ ಸರ್ವಧರ್ಮ ಸಮಭಾವ, ಶಾಸ್ತ್ರಿಜಿಯವರ ಸರಳತೆ ಮತ್ತು ಕರ್ತವ್ಯನಿಷ್ಠೆ, ಶ್ರಮದ ಗೌರವ ಹಾಗೂ ನಮ್ಮ ಸಾಂಪ್ರದಾಯಿಕ ಕಲೆಗಳ ಸಂರಕ್ಷಣೆ—ಈ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿದ ಈ ಆಚರಣೆ ಅರ್ಥಪೂರ್ಣವಾಗಿ ಮೂಡಿಬಂತು.

LEAVE A REPLY

Please enter your comment!
Please enter your name here