ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಕುಂದಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್ ಕುಂದಾಪುರ, ಶಿಶು ಅಭಿವೃದ್ದಿ ಯೋಜನೆ ಕುಂದಾಪುರ ಇವರ ನೇತೃತ್ವದಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ, ಅನ್ನಪ್ರಾಶನ ಕಾರ್ಯಕ್ರಮ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಶು ಮತ್ತು ಮಹಿಳಾ ಇಲಾಖೆ ಉಪ ನಿರ್ದೇಶಕರಾದ ಪ್ರೇಮಮೂರ್ತಿ ಕೆ ಅವರು ಭಾರತ ಸಂಪದ್ಭರಿತವಾದ ದೇಶ. ಇತರ ದೇಶಗಳಿಂತ ನಮ್ಮ ದೇಶ ವಿಭಿನ್ನವಾದುದು. ಇಲ್ಲಿನ ಪ್ರತಿಯೊಂದು ಪ್ರಕ್ರಿಯೆ ಕೂಡಾ ನೈಸರ್ಗಿಕತೆಗೆ ಹತ್ತಿರ. ಆದರೆ ಇವತ್ತಿನ ಆಹಾರ ಕ್ರಮಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಇವತ್ತು ಸಹಜ ಹೆರಿಗೆ ಎನ್ನುವುದು ಸಂಪೂರ್ಣ ಮರೆಯಾಗಿದೆ. ಶಸ್ತ್ರ ಚಿಕಿತ್ಸೆಯ ಮೂಲಕವೇ ಮಗು ಭೂಮಿಯ ಬೆಳಕು ಕಾಣುತ್ತದೆ. ಇದು ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ನಾವು ಬಂದಿದ್ದೇವೆ. ಇದಕ್ಕೆ ಕಾರಣ ಇವತ್ತಿನ ಆಹಾರ ಕ್ರಮ. ಗರ್ಭವಸ್ಥೆ, ಶಿಶುವಿನ ಪೋಷಣೆ, ತಾಯಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಸರಕಾರ ಪೋಷಣ್ ಅಭಿಯಾನವನ್ನು ಆರಂಭಿಸಿದೆ. ಈ ವರ್ಷ ವಿಶೇಷವಾಗಿ ವೈವಿಧ್ಯಮಯ ಆಹಾರ, ಸಮುದಾಯದ ಸಹಕಾರ, ಮಾತೃವಂದನಾ, ಮಗುವಿನ 1000 ದಿನಗಳು ಎನ್ನುವ ವಿಷಯಗಳನ್ನು ಅಳವಡಿಕೆ ಮಾಡಿದೆ. ಎಲ್ಲಾ ಗರ್ಬಿಣಿಯರು, ಬಾಣಂತಿಯರು ಹಾಗೂ ಶಿಶುವಿನ ಆರೈಕೆಗೆ ಹೆಚ್ಚಿನ ಒತ್ತು ನೀಡಬೇಕು, ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮದಾಗಬೇಕು ಎಂದರು.
ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಮಾತನಾಡಿ, ಗರ್ಬಿಣಿ ಸ್ತ್ರೀಯರು ಭೌದ್ದಿಕ, ಮಾನಸಿಕವಾಗಿಯೂ ಎಚ್ಚರಿಕೆ ವಹಿಸಬೇಕು. ಗರ್ಬಿಣಿಯ ಮಾನಸಿಕ ಸ್ಥಿತಿ ಮಗುವಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ತಮ್ಮದಲ್ಲದ ತಪ್ಪಿಗೆ ಮಗು ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಗರ್ಭವಸ್ಥೆಯ ನವಮಾಸವನ್ನು ಆರಾಮದಾಯಕವಾಗಿ ಕಳೆಯಬೇಕು. ಗರ್ಬಿಣಿ ಮಹಿಳೆ ಮುಂದಿನ ಸಮಾಜ ನಿರ್ಮಾಣದ ಉತ್ತರದಾಯಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಕುಂದಾಪುರ ಇದರ ಅಧ್ಯಕ್ಷರಾದ ಗುಣರತ್ನ ಅವರು,ಪೋಷಣ್ ಅಭಿಯಾನದಡಿ ಸಾಮೂಹಿಕ ಸೀಮಂತ ಹಾಗೂ ಅನ್ನಪ್ರಾಶನ ಕಾರ್ಯಕ್ರಮ ಅರ್ಥಪೂರ್ಣವಾದುದು. ಗರ್ಬಿಣಿ ಮಹಿಳೆ ಮತ್ತು ಶಿಶು ಆರೈಕೆ ಅತ್ಯಂತ ಮಹತ್ವದ್ದು. ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಲಾಖೆ ನೀಡುವ ಮಾಹಿತಿಗಳನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಹಾದಿಮನಿ, ಶಿಶು ಯೋಜನಾಧಿಕಾರಿ ಬೇಬಿ, ಶಿಶು ಅಭಿವೃದ್ದಿ ಇಲಾಖೆಯ ರಾಜು, ವಲಯ ಮೇಲ್ವಿಚಾರಕಿ ಲಲಿತಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದ ಅಧ್ಯಕ್ಷೆ ಉಷಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಗರ್ಬಿಣಿ ಮಹಿಳೆಯರಿಗೆ ಸಾಮೂಹಿಕ ಸೀಮಂತ ಶಾಸ್ತ್ರ ಮಾಡಲಾಯಿತು. ಪುಟ್ಟ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನೆಡೆಸಲಾಯಿತು.
ಉಷಾ ಸ್ವಾಗತಿಸಿದರು.ಸುಚಿತ್ರಾ ತಂಡದವರು ಪ್ರಾರ್ಥಿಸಿದರು. ಮಂಜುನಾಥ ವಂದಿಸಿದರು.