ರಾಜ್ಯದ ಟಾಪ್ 10 ಪೊಲೀಸ್ ಠಾಣೆಗಳಲ್ಲಿ ಗಂಗೊಳ್ಳಿಗೆ 7ನೇ ಸ್ಥಾನ! 10 ವರ್ಷಗಳ ಅವಧಿಯಲ್ಲಿ ಇಲಾಖೆಯ 14 ಪ್ರಮುಖ ಕಾರ್ಯಕ್ಷಮತಾ ಮಾನದಂಡಗಳ ಆಧಾರದಲ್ಲಿ ಆಯ್ಕೆ

0
27

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹತ್ತು ಪೊಲೀಸ್ ಠಾಣೆಗಳಲ್ಲಿ (ಟಾಪ್-10) ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದಲ್ಲದೆ ಜಿಲ್ಲಾ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದೆ.
2016 ಜನವರಿ 1 ರಿಂದ 10 ವರ್ಷದ ಅವಧಿಗೆ ಪೊಲೀಸ್ ಇಲಾಖೆಯ ಪ್ರಮುಖ ಕಾರ್ಯಕ್ಷಮತೆ ಸೂಚಕಗಳ ಮಾನದಂಡಗಳನ್ನಿಟ್ಟುಕೊಂಡು (ಕೀ ಪರ್ಫಾಮೆನ್ಸ್ ಇಂಡಿಕೇಟರ್-ಕೆಪಿಐ) ಇಲಾಖೆಯ ಕಾರ್ಯಕ್ಕೊಳಪಟ್ಟ 14 ಅಂಶದಲ್ಲಿ 100 ಅಂಕಗಳಿಗೆ ಇಲಾಖೆಯಿಂದ ಪರಿಶೀಲನೆ ನಡೆದಿತ್ತು. ಇದರಲ್ಲಿ ಹತ್ತು ಅತ್ಯುತ್ತಮ ಪ್ರದರ್ಶನ ನೀಡಿದ ಠಾಣೆಗಳ ಪೈಕಿ ಜಿಲ್ಲೆಯಿಂದ ಗಂಗೊಳ್ಳಿ ಪೊಲೀಸ್ ಠಾಣೆಯನ್ನು ಘೋಷಿಸಲಾಗಿದೆ.
ಟಾಪ್ 10 ಠಾಣೆಗಳು: ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಉಪವಿಭಾಗದ ಬೈಂದೂರು ವೃತ್ತದ ಗಂಗೊಳ್ಳಿ ಪೊಲೀಸ್ ಠಾಣೆಯು ರಾಜ್ಯದ ಟಾಪ್ 10 ಠಾಣೆಗಳಲ್ಲಿ (67.22 ಸ್ಕೋರ್) ಪಡೆದು 7ನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯಲ್ಲಿ ಏಕೈಕ ಠಾಣೆಯಾಗಿದೆ. ಕ್ರಮವಾಗಿ ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆ ಪ್ರಥಮ ಸ್ಥಾನ, ಮೈಸೂರು ನಂಜನಗೂಡು ಗ್ರಾಮಾಂತರ ಠಾಣೆ, ಗದಗ ಜಿಲ್ಲೆಯ ನರೆಗಾಲ್ ಠಾಣೆ, ರಾಯಚೂರು ಶಕ್ತಿನಗರ, ಬೀದರ್ ಜಿಲ್ಲೆಯ ಹುಲ್ಸೂರು, ಗದಗ್‍ನ ಮುಲಗುಂಡ್, ಉಡುಪಿಯ ಗಂಗೊಳ್ಳಿ, ಗದಗ್ ಜಿಲ್ಲೆ ನರಗುಂದ್, ರಾಯಚೂರಿನ ಇಡಪನೂರು ಠಾಣೆ, ಗದಗ ಜಿಲ್ಲೆಯ ಗದಗ ನಗರ ಠಾಣೆಯು ಹತ್ತು ಸ್ಥಾನಗಳನ್ನು ಪಡೆದಿದೆ.

ಕೆಪಿಐ ಸೂತ್ರಗಳೇನು?
ಇಲಾಖೆಗೆ ಸಂಬಂಧಿತ ಒಟ್ಟು 14 ಸೂತ್ರಗಳನ್ನು ಮಾನದಂಡವಾಗಿಟ್ಟುಕೊಂಡು ಒಂದೊಂದು ವಿಭಾಗಕ್ಕೂ 5, 10 ಅಂಕಗಳಲ್ಲಿ ಒಟ್ಟು 100 ಅಂಕಗಳಿಗೆ ಕೇಂದ್ರೀಕರಿಸಿ ಕೆಪಿಐ (ಕೀ ಪರ್ಫಾಮೆನ್ಸ್ ಇಂಡಿಕೇಟರ್) ಸಿದ್ದಪಡಿಸಲಾಗಿತ್ತು.
ಅಪಘಾತಗಳ ಸಂಖ್ಯೆ ಇಳಿಮುಖ, ಚಾರ್ಜ್‍ಶೀಟ್ ಸಲ್ಲಿಕೆ, ಇ-ಬೀಟ್, ಇ-ಸಾಕ್ಷ್ಯ, ಇ-ಸಮನ್ಸ್, ದುಷ್ಕರ್ಮಿ, ರೌಡಿಶೀಟರ್‍ಗಳು ದಾಖಲೆಗಳ ನಿರ್ವಹಣೆಯೊಂದಿಗೆ ಅಗತ್ಯ ಕ್ರಮ ಜರುಗಿಸುವುದು, ದೂರು-ಅರ್ಜಿಗಳ ತ್ವರಿತ ವಿಲೇವಾರಿ, ಸಾರದವಜನಿಕರೊಂದಿಗೆ ಉತ್ತಮ ಸ್ಪಂದನೆ ಸಹಿತ ಇಲಾಖೆ ಸಂಬಂಧಿತ ಕಾರ್ಯಚಟುವಟಿಕೆಗಳ ಬಗ್ಗೆ 14 ಅಂಶಗಳನ್ನು ಪರಿಗಣಿಸಲಾಗಿತ್ತು.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ 10 ವರ್ಷದ ಅವಧಿಯಿಂದ ಕರ್ತವ್ಯ ನಿರ್ವಹಿಸಿದ ಪಿಎಸ್ಐಗಳು, ಸಿಬ್ಬಂದಿಗಳು ಕಾರ್ಯಕ್ಷಮತೆ ಹಾಗೂ ಪೊಲೀಸ್ ಉಪವಿಭಾಗದ ಅಧಿಕಾರಿಗಳು, ಬೈಂದೂರು ಸಿಪಿಐಗಳು ಅವರಿಗೆ ನೀಡಿದ ಮಾರ್ಗದರ್ಶನ ಅಭಿನಂದನಾರ್ಹ. ಕೋಮುಗಲಭೆ ಮೊದಲಾದ ಸಮಸ್ಯೆಗಳು ಇಳಿಮುಖವಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಹಿತ ವಿವಿಧ ಅಂಶಗಳನ್ನು ಪರಿಗಣಿಸಿ ಪೊಲೀಸ್ ಇಲಾಖೆಯು ರಾಜ್ಯದ ಟಾಪ್ 10 ರಲ್ಲಿ 7ನೇ ಸ್ಥಾನವನ್ನು ಗಂಗೊಳ್ಳಿ ಠಾಣೆಗೆ ನೀಡಿದ್ದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯಾಗಿದೆ – ಹರಿರಾಂ ಶಂಕರ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

LEAVE A REPLY

Please enter your comment!
Please enter your name here