ಕುಂದಾಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಗಣೇಶ ಚತುರ್ಥಿಯಂದು ದೇವಸ್ಥಾನಕ್ಕೆ ದರ್ಶನಕ್ಕೆ ಬಂದ ಮಹಿಳೆಯ ಚಿನ್ನದ ಸರ ಕಳವು; ಮೂವರು ಮಹಿಳಾ ಆರೋಪಿಗಳ ಬಂಧನ

0
12

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗಣೇಶ ಚತುರ್ಥಿಯ ದಿನ ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಆಗಮಿಸಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಮೂವರು ಮಹಿಳಾ ಆರೋಪಿಗಳನ್ನು ವಶಕ್ಕೆ ಪಡೆದು, ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
2026ರ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿಯ ಪ್ರಯುಕ್ತ ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿ ನಿವಾಸಿ ಮುತ್ತು (75) ಎಂಬವರು ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿದ್ದರು.

ದೇವಸ್ಥಾನದ ಒಳಗೆ ದೇವರ ದರ್ಶನ ಪಡೆದು, ತೀರ್ಥ ಪ್ರಸಾದ ಸ್ವೀಕರಿಸಿ ಭಕ್ತರ ಜನಜಂಗುಳಿಯ ನಡುವೆ ಪ್ರದಕ್ಷಿಣೆ ಹಾಕುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಗಳು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದೇ ದಿನ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವಾಗಿತ್ತು.

ಪ್ರಕರಣದ ತನಿಖೆಯ ಸಂದರ್ಭದಲ್ಲಿ ತಮಿಳುನಾಡು ಮೂಲದ ವಲ್ಲಿಯಮ್ಮ ದೇವಿ ಅಲಿಯಾಸ್ ತಿಲೋತ್ತಮ ಹಾಗೂ ಪೊನ್ನಿ ಎಂಬ ಮೂವರು ಮಹಿಳಾ ಆರೋಪಿಗಳನ್ನು ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತಿರುನೆಲ್ಲಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುವುದು ತಿಳಿದುಬಂದಿತ್ತು.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನಿರ್ದೇಶನದಂತೆ ಕುಂದಾಪುರ ಪೊಲೀಸ್ ನಿರೀಕ್ಷಕರು ತನಿಖೆ ಕೈಗೊಂಡು, ನ್ಯಾಯಾಲಯದ ಆದೇಶದ ಮೇರೆಗೆ ಮಾನಂತವಾಡಿ ಜೈಲಿನಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕುಂದಾಪುರಕ್ಕೆ ಕರೆತಂದಿದ್ದರು.

ಆರೋಪಿಗಳ ವಿಚಾರಣೆ ಹಾಗೂ ತನಿಖೆಯ ಬಳಿಕ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 2 ಲಕ್ಷ ರೂ. ಮೌಲ್ಯದ 15.340 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here