ಅಂಪಾರು :ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಾರಿ ವಿದ್ಯೆ ಹಾಗೂ ಮಿಡ್ ಬ್ರೈನ್ ಆ್ಯಕ್ಟಿವೇಷನ್ ತರಬೇತಿ ಉದ್ಘಾಟನೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಒಳನೋಟದ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಅತ್ಯಂತ ವಿಶಿಷ್ಟ ಹಾಗೂ ಅವಶ್ಯಕತೆಯ ಶಿಕ್ಷಣ ಪದ್ಧತಿಯಾದ “ ಗಾಂಧಾರಿ ವಿದ್ಯೆ ಹಾಗೂ ಮಿಡ್ ಬ್ರೈನ್ ಆ್ಯಕ್ಟಿವೇಷನ್ ” ತರಬೇತಿ ಕಾರ್ಯಾಗಾರವನ್ನು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ). ಅಂಪಾರು ವತಿಯಿಂದ ಚಿಗುರು ಮಿಡ್ ಬ್ರೈನ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಯಿತು.

ರೋಟರಿ ಕ್ಲಬ್ ಕುಂದಾಪುರದ ಸಹಕಾರದೊಂದಿಗೆ ಒಂದು ವಾರಗಳ ಅವಧಿಯ ಈ ವಿಶೇಷ ತರಬೇತಿ ಶಿಬಿರವು ಇಂದು ಬೆಳಿಗ್ಗೆ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭಗೊಂಡಿತು. ಕಾರ್ಯಕ್ರಮದ ಅಂಗವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ). ಅಂಪಾರು ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ನಿರ್ದೇಶಕರಾದ ಅಂಪಾರು ಅರುಣ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, “ಇಂದಿನ ಮಕ್ಕಳಲ್ಲಿ ಅಡಗಿರುವ ಅಸಾಮಾನ್ಯ ಪ್ರತಿಭೆಯನ್ನು ಹೊರತೆಗೆದು, ಅವರ ಚಿಂತನಾ ಶಕ್ತಿಯನ್ನು ವೃದ್ಧಿಸುವಲ್ಲಿ ಇಂತಹ ತರಬೇತಿಗಳು ಮಹತ್ವದ ಪಾತ್ರವಹಿಸುತ್ತವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇಂತಹ ಅಪೂರ್ವ ಅವಕಾಶ ದೊರಕುತ್ತಿರುವುದು ಶ್ಲಾಘನೀಯ,” ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು, “ ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಲ್ಲ; ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಅವಕಾಶ ಕಲ್ಪಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಶಿಕ್ಷಣ ಹಾಗೂ ನೂತನ ಕಲಿಕಾ ವಿಧಾನಗಳನ್ನು ತಲುಪಿಸುವುದು ಟ್ರಸ್ಟ್‌ನ ಪ್ರಮುಖ ಧ್ಯೇಯವಾಗಿದೆ,” ಎಂದು ತಿಳಿಸಿದರು.

ಆಡಳಿತಾಧಿಕಾರಿಯಾದ ಚೈತ್ರ ಯಡಿಯಾಳ ಅವರು ಸ್ವಾಗತಿಸಿ, ಗಾಂಧಾರಿ ವಿದ್ಯೆ ತರಬೇತಿಯ ಮಹತ್ವ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಇಂತಹ ವಿಶಿಷ್ಟ ಕಾರ್ಯಾಗಾರವನ್ನು ತಲುಪಿಸುವ ಉದ್ದೇಶದ ಕುರಿತು ವಿವರ ನೀಡಿದರು.

ರೋಟರಿ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷರು, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಖಜಾಂಚಿ ಹಾಗೂ ಶಾಲೆಯ ಶೈಕ್ಷಣಿಕ ಸಂಚಾಲಕರಾದ ಸುಭಾಷ್‌ಚಂದ್ರ ಶೆಟ್ಟಿ ಕೊಡ್ಲಾಡಿ ಅವರು ಮಾತನಾಡಿ, “ ಸಂಸ್ಥೆಯು ಶಾಲಾ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ. ಮಿಡ್ ಬ್ರೈನ್ ಆ್ಯಕ್ಟಿವೇಷನ್‌ನ ಪ್ರಯೋಜನಗಳನ್ನು ತಿಳಿದು ಗ್ರಾಮೀಣ ವಿದ್ಯಾರ್ಥಿಗಳಿಗೂ ಇದರ ಸದುಪಯೋಗ ದೊರಕಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,” ಎಂದರು.

ಚಿಗುರು ಮಿಡ್ ಬ್ರೈನ್ ಆ್ಯಕ್ಟಿವೇಷನ್ ಅಕಾಡೆಮಿಯ ಸಂಸ್ಥಾಪಕರು ಹಾಗೂ ತರಬೇತುದಾರಾದ ಮಹೇಶ್ ಕಾರ್ಯಾಗಾರದ ಉದ್ದೇಶ, ಅದರ ಪ್ರಯೋಜನಗಳು ಹಾಗೂ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಇದು ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು.

ಶಿಕ್ಷಕಿ ಸರೋಜಾ ಅವರು ಕಾರ್ಯಕ್ರಮ ನಿರೂಪಣೆ ನಡೆಸಿದರು. ಧನ್ವಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ದೊರೆಯಿತು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಕಾರ್ಯಾಗಾರವು ಯಶಸ್ವಿಯಾಗಿ ಆರಂಭಗೊಂಡಿತು.

Comments

Leave a Reply

Your email address will not be published. Required fields are marked *

More posts

Exit mobile version