ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ದೃಷ್ಟಿ ಪ್ರದಾನ ಯೋಜನೆ 2026-27 ರ ಅಂಗವಾಗಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಸ್ಪತ್ರೆ ಕುಂದಾಪುರ, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು, ರೋಟರಿ ಕ್ಲಬ್ ಕುಂದಾಪುರ ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರಿನಲ್ಲಿ ಮೇ.19ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ರೋಟೇರಿಯನ್ ನಾಗರಾಜ್ ಶೆಟ್ಟಿ ವಹಿಸಿದ್ದರು. ಸಮಾಜದ ಆರೋಗ್ಯವೇ ನಿಜವಾದ ಸಂಪತ್ತು ಎಂಬ ಸಂದೇಶದೊಂದಿಗೆ ಡಾ. ಮನೋಜ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಕಾರ್ಯದರ್ಶಿ ನವೀನ್ ಶೆಟ್ಟಿ, ಖಜಾಂಚಿ ಮತ್ತು ಶಾಲೆಯ ಶೈಕ್ಷಣಿಕ ಸಂಚಾಲಕರಾದ ಸುಭಾಷ್ಚಂದ್ರ ಶೆಟ್ಟಿ ಕೊಡ್ಲಾಡಿ, ಶಿರೂರು ಮುದ್ದುಮನೆ ನೇತ್ರ ಚಿಕಿತ್ಸೆ ಆಸ್ಪತ್ರೆಯ ಆಡಳಿತಾಧಿಕಾರಿ ಶಂಕರ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸರ್ವೋದಯ ಪೂಜಾರಿ, ನಿಯೋಜಿತ ಅಧ್ಯಕ್ಷರಾದ ಸತೀಶ್ ಹೆಗ್ಡೆ, ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಯ ನ್ಸಡ್ ಕೌನ್ಸಿಲರ್ ವೀಣಾ ಉಪಸ್ಥಿತರಿದ್ದರು.

ಉದ್ಘಾಟನಾ ಭಾಷಣದಲ್ಲಿ ಡಾ. ಮನೋಜ್ ಭಟ್ ಅವರು “ಕಣ್ಣುಗಳು ದೇವರ ಅಮೂಲ್ಯ ಕೊಡುಗೆ. ಅವುಗಳ ಆರೈಕೆ ಪ್ರತಿಯೊಬ್ಬರ ಜವಾಬ್ದಾರಿ” ಎಂದು ಹೇಳಿ, ಇಂದಿನ ಜೀವನಶೈಲಿಯಿಂದ ಉಂಟಾಗುತ್ತಿರುವ ಕಣ್ಣಿನ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು. ನಿಯಮಿತ ನೇತ್ರ ತಪಾಸಣೆ, ಸಮತೋಲನ ಆಹಾರ ಮತ್ತು ಸರಿಯಾದ ಆರೋಗ್ಯಕರ ಅಭ್ಯಾಸಗಳ ಅಗತ್ಯವನ್ನು ಮನಮುಟ್ಟುವಂತೆ ವಿವರಿಸಿದರು.
ಶಂಕರ ಶೆಟ್ಟಿ ಅವರು ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಸೇವಾ ಧ್ಯೇಯಗಳನ್ನು ವಿವರಿಸಿದರು. ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ತಲುಪಿಸುವ ಉದ್ದೇಶದಿಂದ ಟ್ರಸ್ಟ್ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅದರ ಸೇವಾ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಎಂದು ತಿಳಿಸಿದರು.

ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಉದ್ದೇಶಗಳು, ಶಿಕ್ಷಣ ಹಾಗೂ ಸಮಾಜಮುಖಿ ಸೇವೆಗಳ ಕುರಿತು ಮಾತನಾಡಿದರು. “ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ದೊರಕಬೇಕು ಎಂಬುದು ನಮ್ಮ ಕನಸು” ಎಂದು ಹೇಳಿ, ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದತ್ತ ಟ್ರಸ್ಟ್ ಕೈಗೊಂಡಿರುವ ವಿವಿಧ ಯೋಜನೆಗಳನ್ನು ಪರಿಚಯಿಸಿದರು.
ಆರೋಗ್ಯ ಇಲಾಖೆಯ ಕೌನ್ಸಿಲರ್ ವೀಣಾ ಅವರು ಆರೋಗ್ಯಕರ ಜೀವನಶೈಲಿಯ ಅಗತ್ಯತೆಯನ್ನು ಒತ್ತಿಹೇಳಿದರು. ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯ ಮಹತ್ವವನ್ನು ತಿಳಿಸಿ, ಸಾರ್ವಜನಿಕರು ಇಂತಹ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ರೋಟೇರಿಯನ್ ನಾಗರಾಜ್ ಶೆಟ್ಟಿ ಅವರು ರೋಟರಿ ಕ್ಲಬ್‌ನ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿ, “ಮಾನವ ಸೇವೆಯೇ ಮಹಾಸೇವೆ” ಎಂಬ ಸಂದೇಶವನ್ನು ನೀಡಿದರು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಆಯೋಜಿಸಲಾದ 11ನೇ ನೇತ್ರ ಶಿಬಿರ ಇದಾಗಿದ್ದು, ಸಮಾಜದ ಹಿತಕ್ಕಾಗಿ ರೋಟರಿ ಕ್ಲಬ್ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು.
ಸುಭಾಷ್ಚಂದ್ರ ಶೆಟ್ಟಿ ಕೊಡ್ಲಾಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಚೈತ್ರ ಯಡಿಯಾಳ ಇವರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.

Comments

Leave a Reply

Your email address will not be published. Required fields are marked *

More posts

Exit mobile version