Category: Uncategorized

  • ವಂಡ್ಸೆ ಮಾದರಿ ಶಾಲೆಗೆ 5 ಕೆವಿ ಸಾಮರ್ಥ್ಯದ ಸೋಲಾರ್ ಕೊಡುಗೆ

    ವಂಡ್ಸೆ ಮಾದರಿ ಶಾಲೆಗೆ 5 ಕೆವಿ ಸಾಮರ್ಥ್ಯದ ಸೋಲಾರ್ ಕೊಡುಗೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ:ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಶಾಲಾ ಪೂರ್ವ ವಿದ್ಯಾರ್ಥಿ ವಂಡ್ಸೆ ಕಟ್ಟೆಮನೆ ಸುಧಾಕರ ಶೆಟ್ಟಿಯವರ ಕೊಡುಗೆಯಾಗಿ ಅಂದಾಜು ರೂ.8 ಲಕ್ಷ ಮೊತ್ತದಲ್ಲಿ 5 ಕೆವಿ ಸಾಮರ್ಥ್ಯದ ಸೋಲಾರ್ ಅಳವಡಿಕೆಯಾಗಿದ್ದು ಆ.19ರಂದು ಶಾಲಾ ಬಳಕೆಗೆ ಹಸ್ತಾಂತರಿಸಲಾಯಿತು.

    ಶಾಲಾ ಬೇಡಿಕೆಗಳಲ್ಲಿ ಒಂದಾದ ಸೋಲಾರ್ ವ್ಯವಸ್ಥೆಯು ಅತೀ ಅಗತ್ಯವಾಗಿದ್ದು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಉಪಯುಕ್ತವಾಗಿದೆ. ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಾಜೆಕ್ಟರ್ ಇದ್ದು ಸೋಲಾರ್ ಅಳವಡಿಕೆ ಹೆಚ್ಚು ಅನುಕೂಲವಾಗಿದೆ. ಶಾಲೆಯ ಬಳಕೆಯಾಗಿ ಉಳಿಕೆ ವಿದ್ಯುತ್‍ನ್ನು ಮೆಸ್ಕಾಂ ನೀಡುವ ಯೋಜನೆಯೂ ಕೂಡಾ ಇದರೊಂದಿಗೆ ಜೋಡಿಸಿಕೊಳ್ಳಲಾಗಿದೆ.

    ಶಾಲೆಗೆ ಉಪಯೂಕ್ತವಾದ ಸೌರ ವಿದ್ಯುತ್ ಘಟಕವನ್ನು ಒದಗಿಸಿದ ದಾನಿಗಳಾದ ವಂಡ್ಸೆ ಕಟ್ಟೆಮನೆ ಸುಧಾಕರ್ ಶೆಟ್ಟಿಯವರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ ಕೃತಜ್ಞತೆ ಸಲ್ಲಿಸಿದರು.

    ಶತಮಾನೋತ್ಸವ ಆಚರಿಸಿಕೊಂಡಿರುವ ಈ ಶಾಲೆಯಲ್ಲಿ 2016ರಲ್ಲಿ 89 ವಿದ್ಯಾರ್ಥಿಗಳಿದ್ದು ಬಳಿಕ, ಆಂಗ್ಲಮಾಧ್ಯಮ ವಿಭಾಗ, ಪೂರ್ವ ಪ್ರಾಥಮಿಕ ತರಗತಿಗಳ ಆರಂಭದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ 1ರಿಂದ 7ನೇ ತರಗತಿ ತನಕ 319 ವಿದ್ಯಾರ್ಥಿಗಳಿದ್ದು, ಪೂರ್ವಪ್ರಾಥಮಿಕ ತರಗತಿ ಸೇರಿದಂತೆ 399 ವಿದ್ಯಾರ್ಥಿಗಳಿದ್ದಾರೆ. ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್, ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್, ರೋಟರಿ ಸಂಸ್ಥೆ ಸೇರಿದಂತೆ ದಾನಿಗಳ ಮೂಲಕ ಹಲವು ಮೂಲ ಸೌಕರ್ಯಗಳನ್ನು ಹೊಂದಿಸಿಕೊಂಡು ಮುನ್ನೆಡೆಯುತ್ತಿದೆ.
    ಈಗಾಗಲೇ ಶಾಲೆ ದಾನಿಗಳು, ಹಳೆ ವಿದ್ಯಾರ್ಥಿಗಳ ಉದಾರ ಕೊಡುಗೆಯಿಂದ ವಿವಿಧ ಸೌಕರ್ಯಗಳು ಶಾಲೆಗೆ ದೊರಕಿದ್ದು, ಗುಣಾತ್ಮಕ ಶಿಕ್ಷಣ ನೀಡುವಿಕೆಯಲ್ಲಿ ಸಕ್ರಿಯವಾಗಿರುವ ಅಧ್ಯಾಪಕ ವೃಂದದ ಪರಿಶ್ರಮದಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕೂಡಾ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

  • ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜಾ ಹಾಗೂ ಸಾಧಕರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಒಕ್ಕೂಟದ ಮಿನಿಹಾಲ್‌ನಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು.

    ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಶೋಭಾ ನಾಡಕರ್ಣಿ, ಸಿಂಗಾರಿ ಟೀಚರ್, ಸುಲೋಚನಾ ಭಟ್, ಮನೋರಮ ಶೇಟ್, ಮರಿಯಾ ಡಿಸೋಜಾ, ಚಂದ್ರಶೇಖರ ಹೆಗ್ಡೆ, ಮಂಜುನಾಥ ಕಾಮತ್, ಮಹೇಶ ಶೆಣೈ, ಆಶಾಲತಾ ಶೆಟ್ಟಿ, ಜ್ಯೋತಿ ಚಿಲ್ಡ್ರನ್‌ನ ಲೂಸಿ ಡಿಸೋಜ, ರೀನಾ ಡಿಕೋಸ್ತಾ, ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ, ರೋಟರಿ ಮಿಡ್ ಟೌನ್‌ನ ಸುಧಾಕರ ಶೆಟ್ಟಿ ಆವರ್ಸೆ, ಪಾರ್ವತಿ ಜಿ.ಐತಾಳ್, ಶ್ರೀನಿಧಿ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಪ್ರಸೂತಿ ತಜ್ಞರಾದ ಡಾ|ರಂಜಿತ್ ಕುಮಾರ್ ಶೆಟ್ಟಿ, ಮಲ್ಲಿಗೆ ಕೃಷಿಕರಾದ ಪ್ರೇಮಾ ಗಣೇಶ್ ಪೂಜಾರಿ, ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್.ಆರ್., ಡಾ|ಪದ್ಮನಾಭ ಆಚಾರ್ಯ, ಸಮಾಜ ಸೇವಕಿ ಆರತಿ ಆಜ್ರಿ ಅವರನ್ನು ಸನ್ಮಾನಿಸಲಾಯಿತು.

    ಸುಲೋಚನಾ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶಾಂತಿ ವಂದಿಸಿದರು.

  • ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ

    ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ

    ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ನಡೆಯಿತು.
    ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ ವತಿಯಿಂದ ಸರಳವಾಗಿ ವಿವಾಹ ನಡೆಯಿತು. ಒಟ್ಟು ನಾಲ್ಕು ಜೋಡಿ ನವ ದಂಪತಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಪದಾರ್ಪಣೆ ಮಾಡಿದರು.
    ಸರಕಾರದ ವತಿಯಿಂದ  ವರನಿಗೆ ಐದು ಸಾವಿರ ರೂ. ಮತ್ತು ವಧುವಿಗೆ 10 ಸಾವಿರ ರೂ., ಚಿನ್ನದ ತಾಳಿಯನ್ನು ನೀಡಲಾಯಿತು.  ಕೊಲ್ಲೂರು ದೇವಳದ ವತಿಯಿಂದ  ವಧುವಿಗೆ ಸೀರೆ, ವರನಿಗೆ ಪಂಚೆ ಮತ್ತು ಕೊಲ್ಲೂರು ದೇವಿಯ ಪೋಟೊವನ್ನು ನೀಡಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಶ್ರೀ ರವಿಶಂಕರ್ ಗುರೂಜಿ ಆಗಮಿಸಿ ವಧು ವರರನ್ನು ಆಶೀರ್ವದಿಸಿದರು.
    ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ,  ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿವಾಹವಾಗುವುದು ಯೋಗ. ಈ ಕ್ಷೇತ್ರದಲ್ಲಿ ವಿವಾಹವಾಗಲು ದೇವಿಯ ಅನುಗ್ರಹ ಬೇಕು. ವಿವಾಹಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ದೇವಾಲಯದ ಶಾಸ್ತ್ರೋಕ್ತವಾಗಿ ಸರಳ ವಿವಾಹವಾಗುವುದು ಉತ್ತಮ ಎಂದರು.
    ಕ್ಷೇತ್ರ ಪುರೋಹಿತರಾದ ಗಜಾನನ ಜೋಶಿಯವರ  ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಳದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿಯವರು ಉಪಸ್ಥಿತರಿದ್ದರು.