Category: ಸುದ್ದಿ

  • ಕೋಟ :ಪಂಚವರ್ಣ ಸಂಸ್ಥೆಯಿಂದ ಪುನಿತ್ ರಾಜ್‍ಕುಮಾರ್ ಸ್ಮರಣಾರ್ಥ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ

    ಕೋಟ :ಪಂಚವರ್ಣ ಸಂಸ್ಥೆಯಿಂದ ಪುನಿತ್ ರಾಜ್‍ಕುಮಾರ್ ಸ್ಮರಣಾರ್ಥ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ

    ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ – ಆನಂದ್ ಸಿ ಕುಂದರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಓರ್ವ ನಟನ ಹೆಸರಿನಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಯೋಜನೆ ರೂಪಿಸುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ನಟ ದಿ. ಪುನಿತ್ ರಾಜ್ ಕುಮಾರ್ ಹೆಸರಿನಲ್ಲಿ ರೂಪಿಸಿದ ವಿದ್ಯಾನಿಧಿ ಯೋಜನೆಯ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರದ 4ನೇ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಕರ ವಿತರಿಸಿ ಮಾತನಾಡಿ ಶೈಕ್ಷಣಿಕವಾಗಿ ಹಿಂದುಳಿದ ಅಶಕ್ತ ಕುಟುಂಬಗಳ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪಂಚವರ್ಣದ ಯೋಜನೆ ಇತರ ಯುವಕ ಮಂಡಲಕ್ಕೆ ಪ್ರೇರಣೆಯನ್ನು ನೀಡಲಿದೆ. ಯುವಕ ಮಂಡಲಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಆ ಭಾಗಗಳು ಸುಭಿಕ್ಷೆಗೊಳ್ಳುತ್ತದೆ ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಮನೆಮಾತಾಗಿ ಬೆಳೆದು ನಿಂತಿದೆ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ನಮ್ಮ ಸಂಸ್ಥೆ ಪಂಚವರ್ಣದ ಮೂಲಕ ಪಡೆದುಕೊಳ್ಳಲಿದೆ ಎಂದರು.

    ಇದೇ ವೇಳೆ ವಿದ್ಯಾನಿಧಿ ಯೋಜನೆಯ ಎರಡನೇ ಬಡ ವಿದ್ಯಾರ್ಥಿಯನ್ನು ಸ್ನೇಹಕೂಟದ ಭಾರತಿ ವಿಷ್ಣುಮೂರ್ತಿ ಮಯ್ಯ ಪಂಚವರ್ಣ ಸಂಸ್ಥೆಯ ಮೂಲಕ ದತ್ತು ಸ್ಚೀಕರಿಸಿದರು.

    ಪಂಚವರ್ಣ ಸಂಸ್ಥೆ ಶೈಕ್ಷಣಿಕ ದತ್ತು ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ಅಧಿಕ ಮೌಲ್ಯದ ಪರಿಕರಗಳನ್ನು ಆನಂದ್ ಸಿ ಕುಂದರ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಸ್ನೇಹಕೂಟದ ಭಾರತಿ ವಿಷ್ಣುಮೂರ್ತಿ ಮಯ್ಯ ದಂಪತಿಗಳು,ಕೋಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಇದ್ದರು.

    ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾರ ಎಂ.ಬಾಯರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಸದಸ್ಯ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

  • ಕುಂದಾಪುರ :ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಸಹಕಾರ ಸಾನಿಧ್ಯ ಉದ್ಘಾಟನೆ

    ಕುಂದಾಪುರ :ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಸಹಕಾರ ಸಾನಿಧ್ಯ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    Video :

    ಕುಂದಾಪುರ :ಸರಕಾರ ಸಹಕಾರ ಕ್ಷೇತ್ರಗಳಲ್ಲಿಯೂ ಸರಕಾರ ಠೇವಣಿ ಇಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಸಹಕಾರ ಕ್ಷೇತ್ರ ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದೆ. ಈಗಾಗಲೇ ಮೂರು ಲಕ್ಷದ ತನಕ ಬಡ್ಡಿ ಸಾಲ ನೀಡುತ್ತಿದೆ. ಇದರಲ್ಲಿ 1.5% ಸಂಘದಿಂದಲೇ ಹೋಗುತ್ತದೆ. ಸರಕಾರ ನೀಡುವ ಹಣ ಮೂರು ವರ್ಷದಿಂದ ಬಾಕಿ ಇದೆ. ಸರಕಾರ ಸೂಕ್ತ ಸಹಕಾರ ನೀಡಿದರೆ ನಾವು ಸಾಲ ನೀಡಲು ಸಿದ್ಧ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

    ಅವರು ಬಿದ್ಕಲ್ ಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಸಹಕಾರ ಸಾನಿಧ್ಯ ಉದ್ಘಾಟಿಸಿ ಮಾತನಾಡಿದರು.

    ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಶತಮಾನಗಳ ಇತಿಹಾಸವಿದೆ. 1 ಕೋಟಿ ವೆಚ್ಚದಲ್ಲಿ ಭವ್ಯವಾದ ಹವಾನಿಯಂತ್ರಿತವಾದ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಹೇಳಿದ ಅವರು ಸಂಘಕ್ಕೆ 10 ಲಕ್ಷ ರೂ ನೀಡುವುದಾಗಿ ಘೋಷಿಸಿದರು.

    ಮೊಳಹಳ್ಳಿ ಶಿವರಾವ್ ಸಭಾಂಗಣವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಮಾತನಾಡಿ, ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ ರೈತರಿಗೆ ನಿಬಡ್ಡಿ ಸಾಲವನ್ನು 5 ಲಕ್ಷಕ್ಕೆ ಏರಿಸಿಬೇಕು, 3ಶೇ ಬಡ್ಡಿಯಲ್ಲಿ ನೀಡುವ ಸಾಲವನ್ನು 15 ಲಕ್ಕೆ ಹೆಚ್ಚಳ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

    ಭದ್ರತಾಕೊಠಡಿಯನ್ನು ವಿಧಾನ ಪರಿಷತ್ತಿನ ಮಾಜಿ ಸಬಾಪತಿಗಳಾದ ಕೆ. ಪ್ರತಾಪಚಂದ್ರ ಶೆಟ್ಟಿ ಉದ್ಘಾಟಿಸಿದರು. ಗೋದಾಮನ್ನು ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಉದ್ಘಾಟಿಸಿದರು. ನವೀಕೃತ ಶಿವರಾವ್ ಪ್ರತಿಮೆಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನಿನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ನೆರವೇರಿಸಿದರು.

    ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಕುಂದಾಪುರ ಉಪ-ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ ಎಸ್.ವಿ., ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕುಂದಾಪುರ ಇದರ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಎಚ್. ಹರಿಪ್ರಸಾದ ಶೆಟ್ಟಿ, ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಂ. ದಿನೇಶ ಹೆಗ್ಡೆ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ ಕೋಟ್ಯಾನ್, ಅಶೋಕ್ ಕುಮಾರ್ ಶೆಟ್ಟಿ, ಮೊನಪ್ಪ ಶೆಟ್ಟಿ ಎಕ್ಕಾರು, ಜಯರಾಜ್ ಜೈ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ. ಚಂದ್ರಶೇಖರ ಶೆಟ್ಟಿ, ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ, ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೀಪಾ ಆರ್. ಶೆಟಿ ಆಗಮಿಸಿದ್ದರು.

    ಎಂ.ಮಹೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಸ್ತುತ 7 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. 2 ಕೋಟಿಗೂ ಮಿಕ್ಕಿ ಪಾಲು ಬಂಡವಾಳವನ್ನು ಹೊಂದಿದೆ. 40 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದೆ. ಸದಸ್ಯರಿಗೆ 50 ಕೋಟಿಗೂ ಮಿಕ್ಕಿ ಸಾಲವನ್ನು ವಿತರಿಸಿದೆ. ಇದೀಗ ಪ್ರಧಾನ ಕಛೇರಿಯನ್ನು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಗೋದಾಮು, ಪ್ರಧಾನ ಕಛೇರಿ, ಸಭಾಂಗಣ ನಿರ್ಮಿಸಲಾಗಿದ್ದು ಸಂಪೂರ್ಣ ಹವಾನಿಯಂತ್ರಿತವಾಗಿದೆ ಎಂದರು.

    ಸಂಘದ ಉಪಾಧ್ಯಕ್ಷರಾದ ಸಿ.ಜಗನ್ನಾಥ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾರ್ವತಿ ಎಂ. ನಿರ್ದೇಶಕರಾದ ಎಚ್.ದೀನಪಾಲ ಶೆಟ್ಟಿ, ಎಚ್.ಹರಿಪ್ರಸಾದ್ ಶೆಟ್ಟಿ, ಎಂ.ದಿನೇಶ್ ಹೆಗ್ಡೆ, ಲವಕರ ಶೆಟ್ಟಿ, ಎಚ್.ಬಾಲಕೃಷ್ಣ ಹೆಗ್ಡೆ, ಪ್ರಶಾಂತ, ಅನಿತ್ ಕುಮಾರ್ ಶೆಟ್ಟಿ, ಶ್ರೀಮತಿ ಉಷಾ ಶೆಟ್ಟಿ, ಶ್ರೀಮತಿ ಚೈತ್ರಾ ಅಡಪ, ಗಣೇಶ, ರಾಜು, ಉದಯ ಕುಲಾಲ್, ಸಂದೀಪ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.

    ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

    ಅಶೋಕ ಸಾರಂಗ ಪ್ರಾರ್ಥನೆಗೈದು, ರೈತಗೀತೆ ಹಾಡಿದರು. ಅನುಷಾ ಸನ್ಮಾನಿತರ ಪರಿಚಯಿಸಿದರು. ಸಂಘದ ನಿರ್ದೇಶಕ ದೀನಪಾಲ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

  • ಬೈಂದೂರು: ಗೋವು ಕಳ್ಳತನ, ಬೆದರಿಕೆಗಳ ವಿರುದ್ಧ ಕ್ರಮ ಜರುಗಿಸಲು ನಮೋ ಬಳಗ ಮನವಿ

    ಬೈಂದೂರು: ಗೋವು ಕಳ್ಳತನ, ಬೆದರಿಕೆಗಳ ವಿರುದ್ಧ ಕ್ರಮ ಜರುಗಿಸಲು ನಮೋ ಬಳಗ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಬೈಂದೂರು ತಾಲೂಕಿನ ಶಿರೂರು ಸೇರಿದಂತೆ ವಿವಿಧ ಭಾಗಗಳಲ್ಲಿ ನಿರಂತರವಾಗಿ ಗೋವು ಕಳ್ಳತನ ಹಾಗೂ ದುಷ್ಕರ್ಮಿಗಳಿಂದ ಜೀವ ಬೇದರಿಕೆ ಒಡ್ಡುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಮೋ ಬಳಗ ಬೈಂದೂರು ಬೈಂದೂರು ತಹಶಿಲ್ದಾರರು ಹಾಗೂ ಪೊಲೀಸರಲ್ಲಿ ಮನವಿ ಮಾಡಿದೆ.

    ಬೆಳಗಿನ ಜಾವ 4ಗಂಟೆಯ ವೇಳೆಯ ಶಿರೂರು ಪೇಟೆಯ ಮಂಜುನಾಥ ಹೋಟೆಲ್ ಎದುರಿನ ಖಾలి ಜಾಗದಲ್ಲಿ ಮಲಗಿದ್ದ ಗೋವುಗಳನ್ನು ದುಷ್ಕರ್ಮಿಗಳು ಮಹೇಂದ್ರ ಎಸ್.ಯು.ವಿ ವಾಹನದಲ್ಲಿ ತೆರಳಿ ಕದ್ದೊಯ್ದಿದ್ದಾರೆ. ಇದನ್ನು ಪ್ರಶ್ನಿಸಿದ ವ್ಯಕ್ತಿಯೋರ್ವರಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಒಂದು ವಾರದ ಹಿಂದೆಯೂ ಶಿರೂರು ಮಾರ್ಕೆಟ್ ಅಂಡರ್ ಪಾಸ್ ಬಳಿ ವಾಹನದಲ್ಲಿ ಬಂದು ಗೋವುಗಳನ್ನು ಹೊತ್ತೊಯ್ದಿರುವ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

    ಕೆಲ ಸಮಯದಿಂದ ಶಿರೂರು, ಬೈಂದೂರು, ಯಡ್ತರೆ, ಬಾಡ ಹಾಗೂ ಸೂರ್ಕುಂದ ಭಾಗಗಳಲ್ಲಿನ ಮನೆಯ ಕೊಟ್ಟಿಗೆಯಲ್ಲಿನ ದನಕರುಗಳ ಕಳವಾಗುತ್ತಿದ್ದು, ಕೃಷಿ ಹಾಗೂ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ದುಷ್ಕರ್ಮಿಗಳು ಘಟನೆಯನ್ನು ತಡೆಯಲು ಬರುವವರಿಗೂ ಬೆದರಿಸುವ ಪ್ರಕರಣಗಳು ನಡೆದಿವೆ. ಹಾಗಾಗಿ ಬೈಂದೂರು ಪೊಲೀಸರು ಹಾಗೂ ತಹಶೀಲ್ದಾರರ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಮೋ ಬಳಗ ಆಗ್ರಹಿಸಿದೆ.

  • ತೆಕ್ಕಟ್ಟೆ :ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಶಾಖೆಯ ಉದ್ಘಾಟನೆ

    ತೆಕ್ಕಟ್ಟೆ :ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಶಾಖೆಯ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಪಾರದರ್ಶಕ ವ್ಯವಹಾರ, ಪ್ರಾಮಾಣಿಕ ಸೇವೆಯಿಂದ ಸಹಕಾರ ಕ್ಷೇತ್ರ ಬೆಳೆಯಲು ಸಾಧ್ಯ. ಜನರ ಸಹಕಾರ, ಷೇರುದಾರರ ಪ್ರೋತ್ಸಾಹ, ಆಡಳಿತ ಮಂಡಳಿ, ಸಿಬ್ಬಂದಿಗಳ ಶ್ರದ್ಧೆ, ಆಸಕ್ತಿಯಿಂದ ಸಹಕಾರಿ ಸಂಘಗಳು ಅಭಿವೃದ್ಧಿಯಾಗುತ್ತವೆ. ಕಳೆದ 31 ವರ್ಷಗಳ ಹಿಂದೆ ಆರಂಭಗೊಂಡ ಈ ಸಂಘ 31 ಕೋಟಿ ಠೇವಣಿ ಹೊಂದಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಸಹಕಾರ ಚಳವಳಿ ಚೆನ್ನಾಗಿ ಬೆಳೆದಿದೆ. ಇಲ್ಲಿನ ಸಹಕಾರ ವ್ಯವಸ್ಥೆ ಕೂಡಾ ಜನರ ವಿಶ್ವಾಸ ಗಳಿಸಿಕೊಂಡಿದೆ ಎಂದು ಆನಂದ ಸಿ.ಕುಂದರ್ ಹೇಳಿದರು.

    ತೆಕ್ಕಟ್ಟೆಯಲ್ಲಿ ಶುಕ್ರವಾರ ನೂತನವಾಗಿ ಶುಭಾರಂಭಗೊಂಡ ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರ ಸಂಘದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಶೇಖರ ಕಾಂಚನ್ ಕೊಮೆ ಅಧ್ಯಕ್ಷತೆ ವಹಿಸಿದ್ದರು.

    ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿಯನ್ನು ಹಾಗೂ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್ ಗಣಕ ಯಂತ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

    ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ, ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಸಂತೋಷ ನಾಯಕ್, ನಿವೃತ್ತ ಮೆಸ್ಕಾಂ ಅಭಿಯಂತರಾದ ಟಿ.ಸತ್ಯನಾರಾಯಣ ಹೆಬ್ಬಾರ್, ಕಟ್ಟಡ ಮಾಲಿಕ ಡಾ.ಕೃಷ್ಣಯ್ಯ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭನಾ, ಕುಂಭಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಪೂಜಾರಿ, ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಕೃಷ್ಣ ಪೂಜಾರಿ, ನಿರ್ದೇಶಕರಾದ ಗಣಪತಿ ಟಿ ಶ್ರೀಯಾನ್, ರಾಜು ತೋಟದ ಬೆಟ್ಟು, ಶ್ರೀನಿವಾಸ ವೈದ್ಯ, ಎಂ.ರಾಮ ಕಾಂಚನ್, ರವೀಶ್ ಎಸ್ ಕೊರವಡಿ, ಶೇಖರ, ಲೋಕೇಶ್, ವಿನೋದ, ಆಶಾಲತಾ ಶೆಟ್ಟಿ, ಚಂದ್ರಮತಿ, ಪ್ರೇಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

    ಈ ಸಂದರ್ಭ ಸಂಸ್ಥೆಗೆ ಸಹಕಾರ ನೀಡಿದ ಮಾಜಿ ಅಧ್ಯಕ್ಷರಾದ ಟಿ.ಸತ್ಯನಾರಾಯಣ ಹೆಬ್ಬಾರ್ ಮತ್ತು ವೃತ್ತಿಯಿಂದ ಮುಂದಿನ ದಿನದಲ್ಲಿ ನಿವೃತ್ತಿಗೊಳ್ಳಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಶಾಲೆಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

    ಕುಂಭಾಸಿ ಶಾಖೆಯ ಮ್ಯಾನೇಜರ್ ಚಂದ್ರ ದೇವಾಡಿಗ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿರ್ದೇಶಕ ರಾಜು ತೋಟದ ಬೆಟ್ಟು ಮತ್ತು ಸಿಬ್ಬಂದಿ ಚಂದ್ರ ಇಂಬಾಳಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಗಣಪತಿ ಟಿ ಶ್ರೀಯಾನ್ ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ಖ್ಯಾತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ವೈಭವ ಕಾರ್ಯಕ್ರಮ ನಡೆಯಿತು.

  • ಕುಂದಾಪುರ :ನೀಟ್ ಫಲಿತಾಂಶ- 2024 :ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ 

    ಕುಂದಾಪುರ :ನೀಟ್ ಫಲಿತಾಂಶ- 2024 :ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ 

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 05 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಹೆಮ್ಮಾಡಿಯ ಜನತಾ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಜಿ.553, ಆಕಾಶ್ ಹೆಬ್ಬಾರ್ 552, ಕ್ಷಮಾ ಪಡಿಯಾರ್ 496, ರಿಷಿಕಾ ಮೊಂಟೆರಿಯೊ456, ಪವಿತ್ರಾ 444 ಅಂಕಗಳನ್ನು ಪಡೆದು ಅರ್ಹತೆ ಪಡೆದಿರುತ್ತಾರೆ.

    ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಕಾಲೇಜು ಪ್ರಾರಂಭದ ದ್ವಿತೀಯ ವರ್ಷವೂ ಅತ್ತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ.

    ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಕುಂದಾಪುರ :ಖಾರ್ವಿಕೇರಿಯ ವೆಂಕಟೇಶ್ ಖಾರ್ವಿ ಮಾಲಕತ್ವದ ಬಾಲಾಜಿ ಹೆಸರಿನ ಚಿಪ್ಪು ಸಾಗಿಸುವ ದೋಣಿ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ

    ಕುಂದಾಪುರ :ಖಾರ್ವಿಕೇರಿಯ ವೆಂಕಟೇಶ್ ಖಾರ್ವಿ ಮಾಲಕತ್ವದ ಬಾಲಾಜಿ ಹೆಸರಿನ ಚಿಪ್ಪು ಸಾಗಿಸುವ ದೋಣಿ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರದ ಪಂಚಾಗಂಗಾ ನದಿಯಲ್ಲಿ ಚಿಪ್ಪು ಸಾಗಾಟ ಮಾಡುತ್ತಿದ್ದ ಬಾಲಾಜಿ ಹೆಸರಿನ ಹಾಯಿ ದೋಣಿ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ಜೂನ್ 9ರಂದು ಹಸ್ತಾಂತರಿಸಲಾಗುವುದು. ಕುಂದಾಪುರ ಖಾರ್ವಿಕೇರಿಯ ಮಧ್ಯಕೇರಿಯ ನಿವಾಸಿ ದಿ. ಶಂಕರ್ ಖಾರ್ವಿಯವರ ಪುತ್ರ ವೆಂಕಟೇಶ್ ಅವರ ಮಾಲಿಕತ್ವದ ಈ ಹಾಯಿ ದೋಣಿ ಸೇವೆಯಿಂದ ಮುಕ್ತವಾಗಿದ್ದು ಅದರ ಸದ್ಭಳಕೆಯ ಉದ್ದೇಶದಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಲ್ಲಿ ಪ್ರಸ್ತಾವಿಸಿದ್ದು ಅವರು ಒಪ್ಪಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ದೋಣಿಯನ್ನು ಶ್ರೀ ಕ್ಷೇತ್ರಕ್ಕೆ ಕೊಂಕಣ ಖಾರ್ವಿ ಸಮಾಜದ ಕಾಣಿಕೆಯಾಗಿ ನೀಡಲಾಗುವುದು ಎಂದು ಕುಂದಾಪುರ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷರಾದ ಜಯಾನಂದ ಖಾರ್ವಿ ತಿಳಿಸಿದ್ದಾರೆ.

    ಅವರು ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಸುಮಾರು 14 ವರ್ಷಗಳ ಹಿಂದೆ ಚಿಪ್ಪು ಸಾಗಾಟದ ಉದ್ದೇಶಕ್ಕೆ ದೋಣಿಯ ನಿರ್ಮಾಣದ ಹುಡುಕಾಟದಲ್ಲಿದ್ದಾಗ ಕಂಡ್ಲೂರು ಸಮೀಪ ದೊರೆತ ಸುಮಾರು 20 ಅಡಿ ಸುತ್ತಳತೆಯ ಬೃಹತ್ ಮರದಿಂದ ದೋಣಿ ನಿರ್ಮಿಸಲಾಗಿದೆ. ಸುಮಾರು 51 ಅಡಿ ಉದ್ದ, 10 ಅಡಿ ಅಗಲದ ಈ ದೋಣಿಯಲ್ಲಿ ಒಂದು ಮುಕ್ಕಾಲು ಲೋಡ್ ಚಿಪ್ಪು ಸಾಗಾಟ ಮಾಡಲಾಗುತ್ತಿತ್ತು. ಅಂದಿನ ದಿನಗಳಲ್ಲಿಯೇ ದೋಣಿ ನಿರ್ಮಿಸಲು 2.5ಲಕ್ಷ ವೆಚ್ಚವಾಗಿತ್ತು ಎಂದರು.

    ಮುಂಬಯಿಂದ ಮಂಗಳೂರು ತನಕ ಸಮುದ್ರದ ತಟದಲ್ಲಿ ಬದುಕು ಕಟ್ಟಿಕೊಂಡಿರುವ ಕೊಂಕಣ ಖಾರ್ವಿ ಸಮಾಜ ಚಿಪ್ಪು, ಮೀನುಗಾರಿಕೆಯ ಮೂಲಕ ಜೀವನ ನಡೆಸುತ್ತಾರೆ. ಚಿಪ್ಪು ಸಂಗ್ರಹಣೆಯ ಉದ್ಯೋಗವೂ ಈಗ ನಶಿಸುತ್ತಿದ್ದು ಹೊಸ ತಲೆಮಾರು ಈ ವೃತ್ತಿಗೆ ಬರುತ್ತಿಲ್ಲ. ಅಲ್ಲದೇ ವೃತ್ತಿಯಿಂದ ಮುಕ್ತವಾಗುತ್ತಿರುವ ದೋಣಿಯನ್ನು ಶ್ರಮಸಂಸ್ಕøತಿಯ ಪ್ರತೀಕವಾದ ಕೊಂಕಣಖಾರ್ವಿ ಸಮಾಜದ ಸಂಕೇತವಾಗಿ ಈ ದೋಣಿಯನ್ನು ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ಪ್ರವಾಸಿಗರಿಗೆ ಸಿಗಲಿದೆ ಎಂದರು.

    ಜೂ 9ರಂದು ಕುಂದಾಪುರ ಫೇರ್ರಿ ರಸ್ತೆಯಿಂದ ಮೆರವಣೀಗೆಯ ಮೂಲಕ ದೋಣಿಯನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ತನಕ ಕರೆತಂದು ಬೀಳ್ಕೊಡಲಾಗುವುದು. ಧರ್ಮಸ್ಥಳದಲ್ಲಿ ವಿದ್ಯುಕ್ತವಾಗಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಗುವುದು ಎಂದರು.

    ದೋಣಿ ಮಾಲಿಕರಾದ ವೆಂಕಟೇಶ ಖಾರ್ವಿ ಮಾತನಾಡಿ, ನಮ್ಮ ತಂದೆಯವರಿಗೆ ದೊಡ್ಡ ದೋಣಿ ಮಾಡುವ ಕನಸಿತ್ತು. ಅವರು ತಾಂಡೇಲರಾಗಿದ್ದರು. ನಾನು ಟೈಲರಿಂಗ್ ವೃತ್ತಿ ಮಾಡುತ್ತಿದ್ದೆ. ತಂದೆ ನಿರ್ವಹಿಸುತ್ತಿದ್ದ ಕೆಲಸ ನಿರ್ವಹಿಸುವ ಇಚ್ಛೆಯಿಂದ ಈ ದೋಣಿ ಕಟ್ಟಿಸಿದೆ. ಈಗ ಚಿಪ್ಪು ಉದ್ಯಮಕ್ಕೆ ಜನರು ಬರುವುದು ಕಡಿಮೆಯಾಗಿದೆ. ಹಾಗಾಗಿ ದೋಣಿ ನಿರ್ವಹಣೆ ಇಲ್ಲದೆ ಹಾಳಾಗಬಾರದು. ನೂರಾರು ವರ್ಷ ಇರಬೇಕು. ಏಕೆಂದರೆ ಇದು ನಿರ್ಜಿವ ವಸ್ತುವಾದರೂ ನಮಗೆ ಬದುಕು ಕೊಟ್ಟಿದೆ. ಹಾಗಾಗಿ ಇಷ್ಟೊಂದು ಉದ್ದದ ದೋಣಿಯನ್ನು ಧರ್ಮಸ್ಥಳದ ವಸ್ತು ಪ್ರದರ್ಶನಾಲಯದಲ್ಲಿ ಇರಿಸುವ ಬಗ್ಗೆ ಹೆಗ್ಡೆಯವರಲ್ಲಿ ಮನವಿ ಮಾಡಿದಾಗ ಅನುಮತಿ ಸಿಕ್ಕಿತು. ಮೊದಲಿಂತೆ ದೋಣಿಯನ್ನು ವ್ಯವಸ್ಥಿತಗೊಳಿಸಿ, ಹಾಯ್ ಜೋಡಣೆ ಮಾಡಿಯೇ ಧರ್ಮಸ್ಥಳಕ್ಕೆ ನೀಡಲಾಗುವುದು ಎಂದರು.

    ಈ ಸಂದರ್ಭದಲ್ಲಿ ದಿನಕರ ಖಾರ್ವಿ, ಸತೀಶ್ ಖಾರ್ವಿ ಉಪಸ್ಥಿತರಿದ್ದರು.

  • ಸಾಸ್ತಾನ ಮೆಸ್ಕಾಂ ಕಛೇರಿಯಲ್ಲಿ ವಿಶ್ವಪರಿಸರ ದಿನಾಚರಣೆ

    ಸಾಸ್ತಾನ ಮೆಸ್ಕಾಂ ಕಛೇರಿಯಲ್ಲಿ ವಿಶ್ವಪರಿಸರ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ವಿಶ್ವ ಪರಿಸರದ ದಿನದಂದು ಕೋಟ ಉಪವಿಭಾಗದ ಸಾಸ್ತಾನ ಮೆಸ್ಕಾಂ ಕಛೇರಿಯ ಪರಿಸರದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

    ಗಿಡವನ್ನು ನೆಟ್ಟು ಮಾತಾಡಿದ ಶಾಖಾಧಿಕಾರಿ ಮಹೇಶ ಅವರು ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು ನಾವು ನೆಡುವ ಒಂದೊಂದು ಗಿಡಗಳು ನಮ್ಮ ಸುತ್ತಮುತ್ತಲಿನ ವಾತಾವರಣವನ್ನೆ ಬದಲಾಯಿಸುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಲು ಗಿಡಗಳನ್ನು ನೆಡಬೇಕು ಹಾಗೂ ಹಸಿರು ಮನೆ ಪರಿಣಾಮ ತಗ್ಗಿಸಲು ಹೇರಳವಾಗಿ ಮರ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಕೋಟ ಮೆಸ್ಕಾಂ ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ,ಮೆಸ್ಕಾಂನ ಮೆ.ಕ ದರ್ಜೆ 2 ಶಂಕರ್, ರಶೀದ್, ನೌಕರರಾದ ರಾಜು, ಸಂತೋಷ, ಅನಿಲ್,ಪ್ರಕಾಶ ಕರೆಯಪ್ಪ , ರಮೇಶ, ಕುಮಾರ, ಕ್ರಷ್ಣ, ಮಾನ್ಸೂನ್ ಗ್ಯಾಂಗ್ ರಾಘವೇಂದ್ರ, ನಿತೇಶ, ಸುರೇಶ, ದಿನೇಶ್ ಗುತ್ತಿಗೆದಾರಾದ ಈಶ್ವರ ನೈಲಾಡಿ ಉಪಸ್ಥಿತರಿದ್ದರು.

  • ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

    ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್(ಶುಭದಾ ಆಂಗ್ಲ ಮಾಧ್ಯಮ ಶಾಲೆ) ಕಿರಿಮಂಜೇಶ್ವರ ಜಂಟಿಯಾಗಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

    ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಜನತಾ ಕಾಲೇಜಿನ ಉಪ-ಪ್ರಾಂಶುಪಾಲರಾದ ರಮೇಶ ಪೂಜಾರಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಉದಯ ನಾಯ್ಕ್ ಬೋಧಕ, ಬೋಧಕೇತರ ವೃಂದದವರು ಜನತಾ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ಕುಂದಾಪುರ :ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ – ಅರುಣ್ ಹೆಗ್ಡೆ

    ಕುಂದಾಪುರ :ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ – ಅರುಣ್ ಹೆಗ್ಡೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಪ್ರತಿವರ್ಷವೂ ವನಮಹೋತ್ಸವ ಆಚರಿಸಿ ಗಿಡಗಳನ್ನು ನೀಡುತ್ತೇವೆ. ಆದರೆ ಅದರ ಸಂರಕ್ಷಣೆ ಕಷ್ಟಸಾಧ್ಯ. ಉತ್ತಮ ಜೀವನಕ್ಕಾಗಿ ಉತ್ತಮ ಪರಿಸರ ಅತ್ಯಗತ್ಯ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರರಾದ ಅರುಣ್ ಹೆಗ್ಡೆ ಹೇಳಿದರು.

    ಅವರು ಲಿಟ್ಲ್ ಸ್ಟಾರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ ಮತ್ಯಾಡಿ ಜೂನ್ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಯವರು ಮಾತನಾಡುತ್ತ ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಜಾಗೃತಿಯನ್ನು ಮೂಡಿಸಲು ಹೆಚ್ಚು ಸಹಕಾರಿ ಮತ್ತು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

    ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಕೋಟ ನೀಡಿದ 100 ಗಿಡಗಳನ್ನು ನೆಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಗಿಡಗಳನ್ನು ವಿತರಿಸಲಾಯಿತು.

    ಸಂಸ್ಥೆಯ ಪ್ರಾಂಶುಪಾಲರಾದ ಪ್ರದೀಪ್ ರವರು ಸ್ವಾಗತಿಸಿ, ಶಿಕ್ಷಕ ಸಂತೋಷ್ ಕುಮಾರ್ ನಿರೂಪಿಸಿ, ಶಿಕ್ಷಿಕಿ ಪ್ರೇಮ ವಂದಿಸಿದರು.

  • ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ  ಭರ್ಜರಿ ಗೆಲುವು

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಭರ್ಜರಿ ಗೆಲುವು

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪ್ರಚಂಡ ಜಯಭೇರಿ ಭಾರಿಸಿದ್ದಾರೆ. ಅವರು 732234 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಜಯಪ್ರಕಾಶ ಹೆಗ್ಡೆಯವರನ್ನು 259175 ಮತಗಳ ಅಂತರದಿಂದ ಜಯ ಗಳಿಸಿದರು.

    ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ 473059 ಮತಗಳನ್ನು ಪಡೆದರು.