Category: ಸುದ್ದಿ

  • ಕುಂದಾಪುರ: ಹಳೆ ಪಿಂಚಣಿಗೆ ಆಗ್ರಹಿಸಿ ಹೊಸ ಪಿಂಚಣಿ ನೌಕರರಿಂದ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ

    ಕುಂದಾಪುರ: ಹಳೆ ಪಿಂಚಣಿಗೆ ಆಗ್ರಹಿಸಿ ಹೊಸ ಪಿಂಚಣಿ ನೌಕರರಿಂದ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ (ರಿ), ಬೆಂಗಳೂರು ಇದರ ಉಡುಪಿ ಜಿಲ್ಲಾ ಹಾಗೂ ಕುಂದಾಪುರ ತಾಲೂಕು ಘಟಕದ ವತಿಯಿಂದ ಹೊಸ ಪಿಂಚಣಿ ಯೋಜನೆಯನ್ನು ಎನ್.ಪಿ.ಎಸ್. ಹಿಂಪಡೆದು ಈ ಹಿಂದಿನಂತೆ ಹಳೆ ಪಿಂಚಣಿ ಯೋಜನೆಯನ್ನು ಒಪಿಎಸ್ ಮರು ಅನುಷ್ಠಾನ ಮಾಡಲು ಶಿಫಾರಸ್ಸು ಮಾಡುವಂತೆ ಬೆಂಬಲ ಕೋರಿ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.

    ಈ ಸಂದರ್ಭ ಮಾತನಾಡಿದ ಕುಂದಾಪುರ ತಾಲೂಕು ಸರ್ಕಾರೀ ಹೊಸ ಪಿಂಚಣಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, 2010ರಿಂದ ನಮ್ಮ ಹೋರಾಟ ಶಾಂತಿಯುತವಾಗಿ ನಡೆಯುತ್ತಾ ಬಂದಿದೆ. ಬೆಂಗಳೂರಿನಲ್ಲಿ 15 ದಿನಗಳ ಕಾಲ ಮಾಡು ಇಲ್ಲವೇ ಮಡಿ ಎನ್ನುವ ಹೋರಾಟ ನಡೆದಿದೆ. ರಾಜ್ಯದ 2 ಲಕ್ಷಕ್ಕೂ ಹೆಚ್ಚಿನ ಸರ್ಕಾರೀ ನೌಕರರಿಗೆ ನಿಶ್ಚಿತ ಪಿಂಚಣಿ ಇಲ್ಲದೇ ಅತಂತ್ರವಾಗಿದ್ದು, ನಮ್ಮ ಸಂಧ್ಯಾಕಾಲದಲ್ಲಿ ಜೀವನ ಭದ್ರತೆಯ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

    ಹೊಸ ಪಿಂಚಣಿ ಯೋಜನೆಯಲ್ಲಿ, ನೌಕರರ ಪ್ರತಿ ತಿಂಗಳ ಸಂಬಳದಲ್ಲಿ ಶೇ. 10 ರಷ್ಟು ಕಟಾವಣೆ ಮಾಡಿ, ಸರ್ಕಾರ ಶೇ.14 ಹಣವನ್ನು ಸೇರಿಸಿ ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸಲಾಗುತ್ತಿದೆ. ಇದು ಅವೈಜ್ಞಾನಿಕ ಹಾಗೂ ಮಾರಕ ಪದ್ದತಿಯಾಗಿದ್ದು, ನಿವೃತ್ತಿ ನಂತರದಲ್ಲಿ ಲಭಿಸುವ ಅಲ್ಪ ಮೊತ್ತದ ಹಣದಿಂದಾಗಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ಸರ್ಕಾರ ಈಗಾಗಲೇ ಒಪ್ಪಿಕೊಂಡಂತೆ ಆರನೇ ಗ್ಯಾರಂಟಿಯಾಗಿ ಎನ್.ಪಿ.ಎಸ್. ತೆಗೆದು ಒಪಿಎಸ್ ಅಳವಡಿಸಬೇಕು. ಅಲ್ಲಿಯ ವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಶಿಕ್ಷಕಿ ಚೈತ್ರ ಬಿ ಶೆಟ್ಟಿ ಆಗ್ರಹಿಸಿದರು.

    ಸರ್ಕಾರ ಈಗಾಗಲೇ ತನ್ನ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್. ಬದಲು ಒಪಿಎಸ್ ಅಳವಡಿಸುವ ಭರವಸೆ ನೀಡಿದೆ. ಆದರೆ ಅದರ ಅನುಷ್ಠಾನವಾಗಿಲ್ಲ. ತಕ್ಷಣ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಗಣೇಶ್ ಶೆಟ್ಟಿ ಆಗ್ರಹಿಸಿದರು.

    ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ, ಕುಂದಾಪುರ ಘಟಕದ ಉಪಾಧ್ಯಕ್ಷೆ ಸುನೀತಾ, ರಾಘವೇಂದ್ರ ಎಂ, ಖಜಾಂಜಿ ಗುರುಮೂರ್ತಿ, ಕುಂದಾಪುರ ತಾಲೂಕು ಆಸ್ಪತ್ರೆ ಶುಶ್ರುಷಾಧಿಕಾರಿ ಭಾರತಿ, ಪಲ್ಲವಿ, ಸಂಧ್ಯಾ ಶೆಟ್ಟಿ, ರಾಜೀವ ಶೆಟ್ಟಿ ಕಳಿ, ಹಾಗೂ ಇತರ ಎಂ ಪಿ ಎಸ್ ನೌಕರರ ಪದಾಧಿಕಾರಿಗಳು ಹಾಜರಿದ್ದರು.

  • ವಡ್ಡರ್ಸೆ – ಮಧುವನ ಜುಮ್ಮಾ ಮಸೀದಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

    ವಡ್ಡರ್ಸೆ – ಮಧುವನ ಜುಮ್ಮಾ ಮಸೀದಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀನಿವಾಸ ಶೆಟ್ಟಿಯವರ ಅನುದಾನದಿಂದ ನಿರ್ಮಾಣಗೊಂಡ ಮಧುವನ ಜುಮ್ಮಾ ಮಸೀದಿಗೆ ಹೋಗುವ ಕಾಂಕ್ರೀಟ್ ರಸ್ತೆಯನ್ನು ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಾಜಿ ಶಾಸಕರ ಮತ್ತು ಪಂಚಾಯತ್ ಸದಸ್ಯರಾದ ಕೋಟಿ ಪೂಜಾರಿ ಅವರ ಪ್ರಯತ್ನದಿಂದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಮದುವನ ಜಮಾತ್ ನವರಿಗೆ ಇದರಿಂದ ಅನೂಕೂಲವಾಗಿದೆ ಎಂದು ಹೇಳಿದರು.

    ತಾಲೂಕು ಪಂಚಾಯತ್ ಸದಸ್ಯರಾದ ಗುಂಡು ಶೆಟ್ಟಿ, ಪಂಚಾಯತ್ ಸದಸ್ಯರಾದ ಕೋಟಿ ಪೂಜಾರಿ, ಮದುವನ ಜುಮ್ಮಾ ಮಸೀದಿಯ ಅಧ್ಯಕ್ಷ ಕಲಂದರ್ ಬ್ಯಾರಿ, ಕಾರ್ಯದರ್ಶಿಗಳಾದ ಇಲ್ಯಾಸ್,ಗುತ್ತಿಗೆದಾರರಾದ ಅಬ್ದುಲ್ಲ, ಮಸೀದಿಯ ಖತೀಬ್ ರಾದ ಜಲಾಲುದ್ದೀನ್ ಶಾಫಿ ಸಅಧಿ ಹಾಜರಿದ್ದರು. ಜೊತೆ ಕಾರ್ಯದರ್ಶಿ ಎಂ. ಕೆ. ಮೊಹಮ್ಮದ್ ಸ್ವಾಗತಿಸಿ ನಿರ್ವಹಿಸಿದರು.

  • ಉಡುಪಿ :ಪ್ರಸನ್ನ ಅವರ ಕಾರ್ಯ ವೈಖರಿ ಅಧಿಕಾರಿ, ಸಿಬ್ಬಂದಿಗಳಿಗೆ ಮಾದರಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

    ಉಡುಪಿ :ಪ್ರಸನ್ನ ಅವರ ಕಾರ್ಯ ವೈಖರಿ ಅಧಿಕಾರಿ, ಸಿಬ್ಬಂದಿಗಳಿಗೆ ಮಾದರಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

    ಕುಂದಾಪುರ ಮಿರರ್ ಸುದ್ದಿ…      

    ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷ ಏಳು ತಿಂಗಳಿಗಿಂತಲೂ ಹೆಚ್ಚು ಕಾಲ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆಗಿ ಸೇವೆ ಸಲ್ಲಿಸಿ, ದಕ್ಷ ಹಾಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ಪ್ರಸನ್ನ ಅವರ ಕಾರ್ಯವೈಖರಿ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಅಚಾರ್ಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಸಿ. ಇ.ಓ ಅವರ ಬೀಳ್ಕೊಡುಗೆ ಹಾಗೂ ನೂತನ ಸಿ. ಇ . ಓ ಅವರಿಗೆ ಸ್ವಾಗತಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಸೇವೆಯಲ್ಲಿ ವರ್ಗಾವಣೆ ಸರ್ವೇ ಸಾಮಾನ್ಯವಾಗಿದೆ. ಪ್ರಸನ್ನ ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಮಸ್ಯೆಗಳು ಇದ್ದಾಗ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡು ಕೊಳ್ಳುತ್ತಿದ್ದರು. ಜಿಲ್ಲೆಯಲ್ಲಿ ಬಾಕಿ ಇರುವ ಅಭಿವೃದ್ಧಿ ಕೆಲಸ ಕಾರ್ಯಗಳ ಕಡೆ ಗಮನ ಹರಿಸಿದ್ದಾರೆ. ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ, ಅರ್ಥಪೂರ್ಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಿದ್ದಾರೆ ಎಂದರು.

    ನೇಕಾರಿಕೆ, ಹಡಿಲು ಭೂಮಿ ಕೃಷಿ ಅಭಿವೃದ್ಧಿ, ಸಂಜೀವಿನಿ ಬ್ರಾಂಡ್ ಕಜೆ ಅಕ್ಕಿ, ಹೆಬ್ರಿ ಹನಿ, ಸಿ. ಇ. ಟಿ ಕೋಚಿಂಗ್, ಸಂಜೀವಿನಿ ಸ್ವ -ಸಹಾಯ ಸಂಘಗಳಿಗೆ ಪ್ರೋತ್ಸಾಹ, ಸ್ವೀಪ್ ಕಾರ್ಯಕ್ರಮ ಸೇರಿದಂತೆ ಹಲವು ನೆಲೆಗಳಲ್ಲಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಮುಂದಿನ ದಿನಗಳಲ್ಲಿ ಅವರ ವೃತ್ತಿ ಜೀವನ ಹಾಗೂ ಕೌಟುಂಬಿಕ ಜೀವನ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

    ನಿರ್ಗಮಿತ ಸಿ. ಇ. ಓ ಪ್ರಸನ್ನ ಮಾತನಾಡಿ, ಸಮಸ್ಯೆಗಳು ಬಂದಾಗ ಕುಗ್ಗದೆ, ಸಕಾರಾತ್ಮಕ ಚಿಂತನೆಗಳಿಂದ ಉತ್ತಮ ಕೆಲಸ ಮಾಡಲು ಸಾಧ್ಯ. ಯಾವುದೇ ಸಂದರ್ಭ ಗಳಲ್ಲಿಯೂ ಕರ್ತವ್ಯದಲ್ಲಿ ಲೋಪವಾಗದ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಹಕಾರ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ವ್ಯವಸ್ಥಿತ ರೀತಿಯಲ್ಲಿ ಇದ್ದು, ಸಿಬ್ಬಂದಿಗಳು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು ಭೂ ಸ್ವಾಧೀನ ಸಮಸ್ಯೆ, ಜಲ್ ಜೀವನ್ ಮಿಷನ್, ಸ್ಯಾನಿಟರಿ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.

    ಜನರಿಗೆ ಸೇವೆ ನೀಡುವುದು ನಮ್ಮ ಆದ್ಯ ಕರ್ತವ್ಯ ಆಗಿದ್ದು, ಪ್ರಾಮಾಣಿಕವಾಗಿ ಶಕ್ತಿ ಮೀರಿ ಜನರಿಗೆ ಹಾಗೂ ಹುದ್ದೆಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ ಎಂದ ಅವರು , ತಮ್ಮ ಸೇವಾವಧಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಸಹಕಾರ ನೀಡಿದ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ, ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

    ನೂತನ ಸಿ. ಇ. ಓ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಸಿ. ಇ.ಓ ಆಗಿ ಪ್ರಸನ್ನ ಅವರು ಮಾಡಿದ ಕೆಲಸ ಕಾರ್ಯಗಳ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ , ಪಿ.ಡಿ . ಓ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಜು ಮೊಗವೀರ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.

  • ಯಡಾಡಿ – ಮತ್ಯಾಡಿ :ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಸ್ಥೆಯ ಲಿಟ್ಲ್‌ ಸ್ಟಾರ್ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ

    ಯಡಾಡಿ – ಮತ್ಯಾಡಿ :ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಸ್ಥೆಯ ಲಿಟ್ಲ್‌ ಸ್ಟಾರ್ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ

    ದೇಶದ ಭವಿಷ್ಯ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದೆ- ವಿಧುಶೇಖರ ಭಾರತಿ ಸ್ವಾಮೀಜಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ನಾವು ನೀಡುವ ಶಿಕ್ಷಣದಿಂದ ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ. ವಿದ್ಯಾವಂತರು ಯಾವತ್ತೂ ವಿನಯಶಾಲಿಗಳಾಗಿರುತ್ತಾರೆ. ಇಂದಿನ ಸುಶಿಕ್ಷಿತ ಶಿಕ್ಷಕರನ್ನು ಹೊಂದಿರುವ ವಿದ್ಯಾಸಂಸ್ಥೆಗಳು ದೇಶದ ಭವಿಷ್ಯವನ್ನು ತೀರ್ಮಾನಿಸುತ್ತವೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿಯವರು ಹೇಳಿದರು

    ಅವರು ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಸ್ಥೆಯ ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

    ಶಿಕ್ಷಣವೆಂದರೆ ಕೇವಲ ಪಠ್ಯ ಶಿಕ್ಷಣವಲ್ಲ. ನಮ್ಮ ಸಂಸ್ಕೃತಿಯಲ್ಲಿ ನಾವು ಅತ್ಯಂತ ಶ್ರದ್ಧಾಳುಗಳಾಗಿರಬೇಕು. ತಂದೆ ತಾಯಿ ಗುರು ಹಿರಿಯರಲ್ಲಿ ಶ್ರದ್ಧೆಯಿಟ್ಟು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರವಂತರಾದಾಗ ಬದುಕು ಸಾರ್ಥಕವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. ಮೊಬೈಲ್ ಅಭ್ಯಾಸವನ್ನು ಕಡಿಮೆ ಮಾಡಿ ಓದಿನ ಕಡೆಗೆ ಹೆಚ್ಚು ಗಮನ ಕೊಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸ್ಪರ್ಧಾತ್ಮಕ ದಿನದಲ್ಲಿ ಪೋಷಕರಿಗೆ ಆಂಗ್ಲ ಮಾಧ್ಯಮ ಅನಿವಾರ್ಯ ಎಂಬಂತಾಗಿದೆ. ಶಾಲೆಯೇ ಶಾರದೆಯ ದೇಗುಲ. ಆ ನಿಟ್ಟಿನಲ್ಲಿ ಸರ್ಕಾರ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ಕೊಡಬೇಕಾಗಿದೆ. ಶಿಕ್ಷಣವನ್ನು ಶಿಕ್ಷಕರಿಂದ ಕಲಿತರೆ ಸಂಸ್ಕಾರವನ್ನು ಪೋಷಕರಿಂದ ಕಲಿಯಬೇಕು. ಮಕ್ಕಳು ಶಿಕ್ಷಣದ ಜೊತೆಗೆ ಲಲಿತಕಲೆಗಳನ್ನು ಅಭ್ಯಾಸ ಮಾಡಬೇಕು. ಆ ಮೂಲಕ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಿಕೊಂಡು ಕಷ್ಟದ ದಿನಗಳನ್ನು ಎದುರಿಸುವ ಶಕ್ತಿ ತುಂಬಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಕರು ಮತ್ತು ಪೋಷಕರು ಶ್ರಮವಹಿಸಬೇಕಿದೆ ಎಂದರು.

    ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಮಾಜಿ ಶಾಸಕ ಅಪ್ಪಣೆ ಹೆಗ್ಡೆ ಮಾತನಾಡಿ, ಸಮಾಜಕ್ಕೆ ಹಿತಕರವಾದ ಉತ್ತಮ ನಾಗರಿಕರಾಗುವ ವಿದ್ಯೆ ಅತ್ಯಗತ್ಯ. ವಿದ್ಯೆ ನಮ್ಮ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕು ಎಂದರು.

    ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ರಮೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಜಿ ಭರತ್ ಶೆಟ್ಟಿ, ಸೌಕೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಮಂಜಯ್ಯ ಶೆಟ್ಟಿ, ಮಹೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

  • ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೊಲ್ಲೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಇಂದು ಕುಟುಂಬ ಸಮೇತ ಪ್ರಸಿದ್ಧ ಯಾತ್ರಾಸ್ಥಳ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

    ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು. ನಾಡಿನ ಒಳಿತಿಗಾಗಿ ಮೂಕಾಂಬಿಕಾ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಸತ್ಕರಿಸಲಾಯಿತು. ಕುಟುಂಬ ಸದಸ್ಯರೊಂದಿಗೆ ಭೋಜನ ಸ್ವೀಕರಿಸಿದರು.

    ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
    ಸಚಿವರನ್ನು ದೇವಸ್ಥಾನದ ಆವರಣದಲ್ಲಿ ಕಂಡ ತಕ್ಷಣ ಅಭಿಮಾನಿಗಳು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಸಚಿವರ ಭೇಟಿ ಹಿನ್ನೆಲೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

  • ಕುಂದಾಪುರ :ಹಕ್ಕುಪತ್ರಗಳ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಕುಂದಾಪುರ :ಹಕ್ಕುಪತ್ರಗಳ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬಾಕಿ ಉಳಿದಿರುವ ಹಕ್ಕುಪತ್ರಗಳ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

    ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕುಂದಾಪುರ ತಾಲೂಕಿನಲ್ಲಿ ಸುಮಾರು ಸಾವಿರಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೂ ಮುನ್ನ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪಕ್ಷಾತೀತವಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲೆ ಹಕ್ಕು ಪತ್ರಗಳ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು. ಜನಪ್ರತಿನಿಧಿಗಳಿಗೆ ಅಧಿಕಾರ ಮುಖ್ಯ ಅಲ್ಲ, ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

    ಉಡುಪಿ ಉಸ್ತುವಾರಿ ಸಚಿವೆಯಾಗಿರುವುದು ನನ್ನ ಭಾಗ್ಯ
    ಉಡುಪಿ ಜಿಲ್ಲೆ ತನ್ನದೇ ವೈಶಿಷ್ಟ್ಯಗಳನ್ನು ಹೊಂದಿದೆ. ಇಂಥ ಜಿಲ್ಲೆಗೆ ಉಸ್ತುವಾರಿ ಸಚಿವೆ ಆಗಿರುವುದು ನನ್ನ ಭಾಗ್ಯ ಎಂದರು.

    ಸಮಾರಂಭದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

  • ಕೋಟ :ಸಂಘಟಿತ ಯುವಕರಿಂದ ಸಮಾಜದ ಅಭಿವೃದ್ಧಿ ಸಾಧ್ಯ- ಶ್ರೀನಿವಾಸ ಪೂಜಾರಿ :ಸ್ಪರ್ಶ -2024 ಸಂಪನ್ನ

    ಕೋಟ :ಸಂಘಟಿತ ಯುವಕರಿಂದ ಸಮಾಜದ ಅಭಿವೃದ್ಧಿ ಸಾಧ್ಯ- ಶ್ರೀನಿವಾಸ ಪೂಜಾರಿ :ಸ್ಪರ್ಶ -2024 ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಪ್ರತಿಯೊಂದು ಊರಿನಲ್ಲಿಯೂ ಯುವಕರೇ ಸಂಘಟಿತರಾಗಿ ಮಾಡುವ ಕಾರ್ಯಕ್ರಮಗಳು ಸಮಾಜವನ್ನು ಮುಟ್ಟುತ್ತವೆ ಎನ್ನುವುದಕ್ಕೆ ಕೋಟದಲ್ಲಿ ನಡೆಯುವ ಸ್ಪರ್ಷ ಕಾರ್ಯಕ್ರಮವೇ ಸಾಕ್ಷಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಅವರು ಬಾಳೆಬೆಟ್ಟು ಮಣೂರು ಬಾಳೆಬೆಟ್ಟು ಫ್ರೆಂಡ್ಸ್ (ರಿ.)ಬಾಳೆಬೆಟ್ಟು , ಭಗತ್ ಸಿಂಗ್ ಯುವ ವೇದಿಕೆ (ರಿ.)ಕೋಟ ವತಿಯಿಂದ ನಡೆದ “ಸ್ಪರ್ಶ – 2024” ಸಾಮರಸ್ಯದ ಭಾವಕೋಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಚದುರಿಹೋದ ಸಮಾಜಕ್ಕೆ ಯುವಕರ ಸಹಾಯ ಹಸ್ತಗಳ ಅಗತ್ಯವಿದೆ. ಸಮಾಜಮುಖಿ ಚಿಂತನೆಗಳೊಂದಿಗೆ ಯುವಕರು ಸಂಘಟಿತರಾದಲ್ಲಿ ಸಶಕ್ತ ಭಾರತ ಸಂಕಲ್ಪ ನಿಜವಾಗುತ್ತದೆ ಎಂದರು.

    ಮಣೂರು ಪಡುಕೆರೆ ಗೀತಾನಂದ ಫೌಂಡೇಶನ್ ಪ್ರರ್ವತಕ ಆನಂದ್ ಸಿ.ಕುಂದರ್ ನೂತನ ಲಾಂಛನ ಅನಾವರಣ ಮಾಡಿದರು. ಸಾಲಿಗ್ರಾಮದ ಪ್ರಖ್ಯಾತ ವೈದ್ಯರು ಡಾ.ಪಿ.ಸಿ ಸುಧಾಕರ್ ಅವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು. ಕಾಂತಾರ ಚಲನಚಿತ್ರದ ನಟಿ ಸಪ್ತಮಿ ಗೌಡರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

    ಸ್ಥಳೀಯ ಸಮಾಜ ಸೇವಕರು ಮತ್ತು ಕೃಷಿ ಕ್ಷೇತ್ರದ ಸಾಧಕರಾದ ಪ್ರಗತಿಪರ ಕೃಷಿಕ ಶಿವ ಮೂರ್ತಿ ಐತಾಳ್, ಅಣ್ಣಪ್ಪ ಪೂಜಾರಿ, ಗಣೇಶ್ ಕೊರಗ, ರಾಜು ಪೂಜಾರಿ ಬಾಳೆಬೆಟ್ಟು, ಗಣೇಶ್ ಭಂಡಾರಿ ಕೋಟ, ಪ್ರದೀಪ್ ಕುಮಾರ್ ಬಸ್ರೂರು ವಿಶೇಷವಾಗಿ ಅಭಿನಂದಿಸಲಾಯಿತು.

    ಪರಿಸರದ ಮಾದರಿ ಸಂಘಟನೆಗಳಾದ ಮಹಿಳಾ ಮಂಡಲ ಕೋಟ, ಮಿತ್ರ ಸಂಘಮ ಬೀಜಾಡಿ-ಗೋಪಾಡಿ, ಉಡುಪಿ ಕಿನಾರ ಮಿನುಗಾರರ ಉತ್ಪಾದಕ ಕಂಪೆನಿ ನಿಯಮಿತ ಗೌರವ ಸಮರ್ಪಣೆ ನೀಡಲಾಯಿತು. ಅಶಕ್ತರಿಗೆ ಸಹಾಯಧನ ಮತ್ತು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

    ಉಡುಪಿ ಮಾಜಿ ಶಾಸಕ ರಘಪತಿ ಭಟ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಗಣೇಶ್ ಕಿಣಿ ಬೆಳ್ವೆ, ಬ್ರಹ್ಮಾವರ ಪ್ರಿಯಾ ಅಸೋಸಿಯೆಟ್ಸ್ ಅಕ್ಷತ್ ರಾಜ್, ಕೋಟ ಗ್ರಾ.ಪಂ.ಉಪಾಧ್ಯಕ್ಷ ಪಾಂಡು ಪೂಜಾರಿ, ಕುಶಲ್ ಶೆಟ್ಟಿ, ಉಮೇಶ್ ಪೂಜಾರಿ ಬಾಳೆಬೆಟ್ಟು, ಸಿ.ಎ. ರಾಘವೇಂದ್ರ ಶೆಟ್ಟಿ, ಮಣೂರು ಮಹಾಲಿಂಗ ದೇವಸ್ಥಾನದ ಅಧ್ಯಕ್ಷ ಸತೀಶ್ ಹೆಚ್.ಕುಂದರ್ ಉಪಸ್ಥಿತರಿದ್ದರು.

    ಸ್ಥಳೀಯ ನೃತ್ಯ ತಂಡ KDC ಡ್ಯಾನ್ಸ್ ಧಮಾಕ ಮತ್ತು ಅಂಗನವಾಡಿ ಪುಟಾಣಿಗಳ ನೃತ್ಯ ವೈವಿಧ್ಯ, ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಾಲಮಿತಿ ಯಕ್ಷಗಾನ ಶಿವರಂಜಿನಿ ನಡೆಯಿತು. ಪ್ರಸಾದ ಬಿಲ್ಲವ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

  • ಕೋಟ – ಬಾಂಧವ್ಯ ಫೌಂಡೇಶನ್‍ನಿಂದ 10ನೇ ಮನೆ ಉದ್ಘಾಟನೆ

    ಕೋಟ – ಬಾಂಧವ್ಯ ಫೌಂಡೇಶನ್‍ನಿಂದ 10ನೇ ಮನೆ ಉದ್ಘಾಟನೆ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಇಲ್ಲಿನ ಕೋಟ ಗ್ರಾ.ಪಂ ವ್ಯಾಪ್ತಿಯ ಮಣೂರು ಕಂಬಳಗದ್ದೆ ನಿವಾಸಿ ಸವಿತಾ ಮರಕಾಲರವರಿಗೆ ಬಾಂಧವ್ಯ ಫೌಂಡೇಶನ್‍ನಿಂದ ನೂತನ ಮನೆ ನಿರ್ಮಿಸಿದ್ದು ಇದರ ಉದ್ಘಾಟನೆ ಸಮಾರಂಭ ಭಾನುವಾರ ಜರಗಿತು.

    ಈ ವೇಳೆ ಮನೆಯ ಕೀ ಹಸ್ತಾಂತರಿಸುವ ಮೂಲಕ ಮನೆಯನ್ನು ಉದ್ಘಾಟಿಸಲಾಯಿತು.

    ಈ ಸಂದರ್ಭದಲ್ಲಿ ರಾಜ್ಯ ಉತ್ತಮ ಪ್ರಶಸ್ತಿ ವಿಜೇತ ನರೇಂದ್ರ ಕುಮಾರ್ ಕೋಟ, ಹೃದಯ ವಿಭಾಗದಲ್ಲಿ ಪಿಎಚ್‍ಡಿ ಪದವಿದರೆ ಡಾ.ಜ್ಯೋತಿ ಸಾಮಂತ್ ಸೇರಿದಂತೆ ಮನೆ ನಿರ್ಮಾಣದ ಸ್ವಯಂ ಸೇವಕರನ್ನು ಗೌರವಿಸಲಾಯಿತು. ಇವರುಗಳನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಬಾಂಧವ್ಯ ಫೌಂಡೇಶನ್‍ನ ಸ್ಥಾಪಾಕಾಧ್ಯಕ್ಷ ದಿನೇಶ್ ಬಾಂಧವ್ಯ ಯೋಜನೆ ನೆಡೆದು ಬಂದ ಕುರಿತು ಪ್ರಾಸ್ತಾವಿಕ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಅರ್ಜುನ್ ಭಂಡಾರ್ಕರ್, ಆಸರೆ ಅನಿಮಲ್ ಟ್ರಸ್ಟ್‌ನ ಸಾಕ್ಷಿ ಸುನೀಲ್ ಕಾಮತ್, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್ ಪಿ, ಉಡುಪಿ ಟೌನ್ ಪೊಲೀಸ್ ಠಾಣೆ ಎ.ಎಸ್.ಐ ಜಯಕರ್ ಐರೋಡಿ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟಿವಿ ನಿರೂಪಕ ಪ್ರಣುತ್ ಗಾಣಿಗ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

  • ಕೋಟ :ಕಾರ್ಕಡದಲ್ಲಿ ಯಕ್ಷ ಕಲಾವಿದರಿಗೆ ಸನ್ಮಾನ

    ಕೋಟ :ಕಾರ್ಕಡದಲ್ಲಿ ಯಕ್ಷ ಕಲಾವಿದರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಕಲೆ ಸಾಹಿತ್ಯ ಬದುಕಿನ ಜೀವಾಳ, ಧಾರ್ಮಿಕ ಆರಾಧನೆಯಷ್ಟೇ ಕಲಾರಾಧನೆಯು ಮುಖ್ಯ, ಹರಕೆ ಬಯಲಾಟಗಳ ಮೂಲಕ ಭಗವತ್ ಕೃಪೆಯನ್ನು ಹೊಂದುವ ಸನಾತನ ಸಂಸ್ಕೃತಿ ನಮ್ಮದಾಗಿದೆ. ಕಲೆ ಕಲಾವಿದರನ್ನು ಗೌರವಿಸುವ ಮೂಲಕ ನಮ್ಮ ಸಾಂಸ್ಕೃತಿಕ ಜಗತ್ತು ಜೀವಂತವಾಗಿಡುವಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಗುರುತರವಾದುದು ಎಂದು ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಹೇಳಿದರು.

    ಕಾರ್ಕಡ ಸುಬ್ರಾಯ ಹೊಳ್ಳ ಮತ್ತು ಜಲಜಾಕ್ಷಿ ಹೊಳ್ಳ ಕುಟುಂಬದ ಪೂರ್ವಜರ ಹರಕೆಯಾಟವಾಗಿ ಕಾರ್ಕಡದ ಮೂಲ ಮನೆ ಸದಾನಂದದಲ್ಲಿ ನಡೆದ ಕೋಟ ಅಮೃತೇಶ್ವರಿ ಮೇಳದ ಪ್ರದರ್ಶನ ಸಂದರ್ಭದ ಸನ್ಮಾನ ಕಾರ್ಯಕ್ರಮದಲ್ಲಿ ಕಲ್ಕೂರರು ಮಾತನಾಡಿದರು.

    ಮೇಳದ ಹಿರಿಯ ಸ್ತ್ರೀವೇಷ ಕಲಾವಿದ ಮೊಳಹಳ್ಳಿ ಕೃಷ್ಣ ನಾಯಕ್ ಮತ್ತು ಎರಡನೇ ವೇಷಧಾರಿ ಕೋಟ ಸುರೇಶ್ ಅವರನ್ನು ಹೊಳ್ಳ ಕುಟುಂಬದ ಪರವಾಗಿ ಗೌರವ ಧನದೊಂದಿಗೆ ಸನ್ಮಾನಿಸಲಾಯಿತು. ಸ್ಥಳೀಯ ಯುವ ಪ್ರತಿಭೆ ಅಮೃತೇಶ್ವರಿ ಮೇಳದ ಸಂಗೀತಗಾರ ಚಂದ್ರಕಾಂತ್ ಅವರನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು.

    ಕಲಾ ಸಾಹಿತಿ ಎಚ್. ಜನಾರ್ದನ ಹಂದೆ ಅಭಿನಂದನೆಯ ಮಾತುಗಳನ್ನಾಡಿದರು. ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಕಲಾ ಸಂಘಟಕ ವಿಶ್ವೇಶ್ವರ ಹೊಳ್ಳ, ಕುಟುಂಬದ ಸದಸ್ಯರಾದ ಮಲ್ಲಿಕ ಹೊಳ್ಳ, ಕಾತ್ಯಾಯಿನಿ ಸದಾನಂದ ಹೊಳ್ಳ, ಸುಧೀಂದ್ರ ಹೊಳ್ಳ, ಇಂದಿರಾ ಹೊಳ್ಳ, ರವೀಂದ್ರ ಹೊಳ್ಳ, ಲಲನ ಹೊಳ್ಳ, ಪವನ ಹೊಳ್ಳ, ಚೇತನಾ ರಾಘವೇಂದ್ರ ರಾವ್, ಅನುಷ, ಮನಿಷ ಉಪಸ್ಥಿತರಿದ್ದರು.

    ಯಕ್ಷ ಕಲಾವಿದ, ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ಕಾರ್ಯಕ್ರಮ ನಿರ್ವಹಿಸಿದರು.

  • ಕುಂದಾಪುರ: ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ಮಕರಸಂಕ್ರಮಣ, ಜಾತ್ರೋತ್ಸವ ಸಂಪನ್ನ

    ಕುಂದಾಪುರ: ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ಮಕರಸಂಕ್ರಮಣ, ಜಾತ್ರೋತ್ಸವ ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎನ್ನುವ ಪ್ರಸಿದ್ಧಿಯನ್ನು ಹೊಂದಿರುವ ಶ್ರೀ ಕ್ಷೇತ್ರ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಉತ್ಸವ ಹಾಗೂ ವಾರ್ಷಿಕ ಗೆಂಡ ಸೇವೆ, ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿದರು.

    ಜ.14ರ ಭಾನುವಾರ ಬೆಳಿಗ್ಗೆಯಿಂದಲೇ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರದ ಉತ್ಸವಕ್ಕಾಗಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಬಂದು ದೇವರ ದರ್ಶನ ಪಡೆದು, ಹೂ ಹಣ್ಣು ಕಾಯಿ ನೆರವೇರಿಸಿ, ಹರಕೆ ಸಲ್ಲಿಸಿರು.

    ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೃಷ್ಣಮೂರ್ತಿ ಮಂಜ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಸುಕುಮಾರ್ ಶೆಟ್ಟಿ, ರಘುರಾಮ ಶೆಟ್ಟಿ , ದೇಗುಲದ ಪಾತ್ರಿಗಳು, ಗಣ್ಯರು ಉಪಸ್ಥಿತರಿದ್ದರು.
    ರಾತ್ರಿ ಗೆಂಡಸೇವೆ ನಡೆಯಲಿದೆ.