Category: ಸುದ್ದಿ

  • ಬೈಂದೂರಿನಲ್ಲಿ ಗಮಕ ಕಾರ್ಯಕ್ರಮ

    ಬೈಂದೂರಿನಲ್ಲಿ ಗಮಕ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು : ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಲಾವಣ್ಯ (ರಿ) ಬೈಂದೂರು ಹಾಗೂ ಸುರಭಿ (ರಿ) ಬೈಂದೂರು ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ ಕರ್ಣಾಟಕ ಸಂಭ್ರಮ 50 ‘ಸಾಂಸ್ಕೃತಿಕ ಸೌರಭ 2023-24’ ಕಾರ್ಯಕ್ರಮದ ಅಂಗವಾಗಿ ಇತ್ತಿಚೆಗೆ ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ಕೋಟ ಸುಜಯೀಂದ್ರ ಹಂದೆ ಮತ್ತು ಬಳಗದವರಿಂದ ಗಮಕ ವಾಚನ ಕಾರ್ಯಕ್ರಮ ನೆರವೇರಿತು.

    ಅನುಭಾವಿ ಸಂತ ಕವಿ ಕನಕದಾಸರ ನಳ ಚರಿತ್ರೆಯ ಕಾರ್ಕೋಟಕ ದಂಶನ ಭಾಗದ ಕಥಾವಸ್ತುವನ್ನು ಆಯ್ದುಕೊಂಡಿದ್ದು, ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಕನ್ನಡ ಉಪನನ್ಯಾಸಕ ಸುಜಯೀಂದ್ರ ಹಂದೆ ಎಚ್ ಗಮಕ ವಾಚನ ಮಾಡಿ, ಉಡುಪಿ ಎಂ. ಜಿ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ರಾಘವೇಂದ್ರ ತುಂಗ ವ್ಯಾಖ್ಯಾನ ನಡೆಸಿಕೊಟ್ಟರು.

    ಬೈಂದೂರು ವಿಧಾನ ಸಭಾ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಪ್ರಾಂಶುಪಾಲ ಮಂಜುನಾಥ ಪಿ. ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಉಪ ಪ್ರಾಂಶುಪಾಲ ಪದ್ಮನಾಭ ಪಿ, ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಸುರಭಿ ಅಧ್ಯಕ್ಷ ನಾಗರಾಜ ಪಿ. ಉಪಸ್ಥಿತರಿದ್ದರು. ಸುರಭಿಯ ಸುಧಾಕರ ಪಿ. ವಂದಿಸಿದರು. ಗಣಪತಿ ಹೋಬಳಿದಾರ್ ನಿರ್ವಹಿಸಿದರು.

  • ಉಡುಪಿ :ಬರ ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಉಡುಪಿ :ಬರ ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಬರ ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಸರ್ಕಾರ ಜಿಲ್ಲೆಯ ಕಾರ್ಕಳ, ಹೆಬ್ರಿ ಹಾಗೂ ಬ್ರಹ್ಮಾವರ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಪ್ರಸಕ್ತ ಸಾಲಿಗೆ ವಾಡಿಕೆ ಮಳೆಯು 4,535 ಇದ್ದು, ವಾಸ್ತವಿಕವಾಗಿ 3525 ಮಿ.ಮೀ. ನಷ್ಟು ಮಳೆಯಾಗಿ ಶೇ.22 ರಷ್ಟು ಕಡಿಮೆ ಮಳೆಯಾಗಿ, ಅಂತರ್‌ಜಲ ಮಟ್ಟ ಹಾಗೂ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಈಗಿನಿಂದಲೇ ಎಚ್ಚರ ವಹಿಸಿ, ವ್ಯತ್ಯಯ ಉಂಟಾಗದಂತೆ ಕಾರ್ಯಪ್ರವೃತ್ತರಾಗಬೇಕು ಎಂದರು.

    ಜಿಲ್ಲೆಯಾದ್ಯಂತ ಪ್ರಸಕ್ತ ಮಾಹೆಯಲ್ಲಿ 44.1 ಮಿ.ಮೀ. ನಷ್ಟು ಮಳೆಯಾಗಿರುವ ಹಿನ್ನೆಲೆ, ನೀರಿನ ಕೊರತೆ ಆಗುವ ಸಾಧ್ಯತೆಗಳಿಲ್ಲದಿದ್ದರೂ ಸಹ ಅಂತರ್‌ಜಲ ಕುಸಿತಗೊಂಡು ಜಿಲ್ಲೆಯ ಯಾವುದೇ ಗ್ರಾಮ ಹಾಗೂ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂಬ ಬಗ್ಗೆ ಗಮನ ಹರಿಸುವುದರೊಂದಿಗೆ ಗುರುತಿಸಿ, ಹತ್ತಿರದಲ್ಲಿ ಲಭ್ಯತೆ ಇರುವ ನೀರಿನ ಮೂಲ ಅಥವಾ ಬೋರ್‌ವೆಲ್‌ಗಳಿಂದ ನೀರೊದಗಿಸಲು ಗುರುತಿಸಿಕೊಂಡು, ಸಮಸ್ಯೆಗಳು ಉಂಟಾದಾಗ ಅವುಗಳ ಬಳಕೆ ಮಾಡಿಕೊಳ್ಳಬೇಕು. ಒಂದೊಮ್ಮೆ ಟ್ಯಾಂಕರ್ ಮೂಲಕ ನೀರು ಒದಗಿಸುವುದು ಅನಿವಾರ್ಯವಾಗುವ ಸಾಧ್ಯತೆಗಳಿರುವ ಹಿನ್ನೆಲೆ, ಟೆಂಡರ್ ಕರೆದು ತಯಾರಿರಬೇಕು ಎಂದರು.
    ಪ್ರತೀ ಹದಿನೈದು ದಿನಗಳಿಗೊಮ್ಮೆ ವಿಧಾನಸಭಾ ಕ್ಷೇತ್ರಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಬರಪೀಡಿತ ತಾಲೂಕುಗಳ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯನ್ನು ಕರೆದು, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ 2,25,000 ಕ್ಕೂ ಹೆಚ್ಚು ಜಾನುವಾರುಗಳಿದ್ದು, 2,41,925 ಟನ್‌ನಷ್ಟು ಮೇವು ಲಭ್ಯವಿದೆ. ರೈತರಿಗೆ ಪಶುಸಂಗೋಪನಾ ಇಲಾಖೆಯಿಂದ 1426 ಕಿಟ್‌ಗಳು ಹಾಗೂ ಕೆ.ಎಂ.ಎಫ್ ವತಿಯಿಂದ 3,000 ಕ್ಕೂ ಹೆಚ್ಚುಮೇವಿನ ಕಿಟ್ ಅನ್ನು ವಿತರಿಸಲಾಗಿದೆ ಎಂದ ಅವರು, ಕೃಷಿ, ತೋಟಗಾರಿಕೆ ಇಲಾಖೆಗೆ ಸೇರಿದ ಫಾರ್ಮ್ಗಳಲ್ಲಿ ಮೇವುಗಳನ್ನು ಬೆಳೆಯಲು ಕ್ರಮ ವಹಿಸಬೇಕು. ಹಡಿಲು ಭೂಮಿಗಳಲ್ಲಿ ಮೇವು ಬೆಳೆಯಲು ರೈತರಿಗೆ ಅಥವಾ ಸಂಜೀವಿನಿ ಸಂಘದ ಸದಸ್ಯರುಗಳಿಗೆ ಪ್ರೋತ್ಸಾಹಿಸಬೇಕು ಎಂದರು.

    ಮಳೆ-ಗಾಳಿಯಿಂದ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳು ತುಂಡಾದಲ್ಲಿ ಶೀಘ್ರದಲ್ಲಿಯೇ ಅವುಗಳನ್ನು ಬದಲಾಯಿಸಲು ಕ್ರಮ ಕೈಗೊಂಡು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಬೇಕು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ತೋಡು ಹಾಗೂ ಚರಂಡಿಗಳಲ್ಲಿರುವ ಹೂಳು, ತರಗೆಲೆ, ಕಸ-ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್‌ಲೈನ್ ದುರಸ್ಥಿ, ಶುದ್ಧ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ, ಸರಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿರುವ ಕಸ-ಕಡ್ಡಿಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ಎಸ್ ಸಿದ್ಧಲಿಂಗಪ್ಪ ಹಾಗೂ ಕೆ.ಎಸ್ ಹೆಗ್ಡೆ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕಿನ ತಹಶೀಲ್ದಾರ್‌ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕೋಟತಟ್ಟು- ವಸತಿ ಯೋಜನೆಯ ಮಂಜೂರಾತಿ ಆದೇಶ ಪತ್ರ ವಿತರಣೆ

    ಕೋಟತಟ್ಟು- ವಸತಿ ಯೋಜನೆಯ ಮಂಜೂರಾತಿ ಆದೇಶ ಪತ್ರ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟತಟ್ಟು ಗ್ರಾಮ ಪಂಚಾಯತ್‍ನಲ್ಲಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮಾಹಿತಿ ಕಾರ್ಯಗಾರ ಹಾಗೂ ರೋಜ್‍ಗಾರ್ ದಿನಾಚರಣೆಯನ್ನು ಜ.9ರ ಮಂಗಳವಾರ ಕಾರಂತ ಥೀಂ ಪಾರ್ಕನಲ್ಲಿ ಜರಗಿತು.

    ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅತಿ ಹೆಚ್ಚು ಮಾನವ ದಿನ ಸೃಜಿಸಿ ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಸಹ ಮುಂದುವರೆಯುವ ಬಗ್ಗೆ ತಿಳಿಸಿದರು ಹಾಗೂ ವಯಕ್ತಿಕ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಲು ಮನವಿ ಮಾಡಿದರು.

    ಗೀತಾನಂದ ಫೌಂಡೇಶನ್‍ನ ಪ್ರವರ್ತಕ ಆನಂದ್.ಸಿ ಕುಂದರ್ ಅವರು ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ರಾಬರ್ಟ್ ರೋಡ್ರಿಗಸ್, ಅಶ್ವಿನಿ, ವಿದ್ಯಾ ಪಿ, ಸೀತಾ, ಕಂದಾಯ ನಿರೀಕ್ಷಕರಾದ ಮಂಜುನಾಥ ಬಿಲ್ಲವ, ಗ್ರಾಮ ಆಡಳಿತಾಧಿಕಾರಿ ರಾಘವೇಂದ್ರ, ಎಂ.ಜಿ.ಎನ್.ಆರ್.ಇ.ಜಿ.ಎ ತಾಲೂಕು ಸಂಯೋಜಕರಾದ ಅಕ್ಷಯ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಕೋಟ – ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಜಾತ್ರೋತ್ಸವ ಸಂಪನ್ನ

    ಕೋಟ – ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಜಾತ್ರೋತ್ಸವ ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ತುಲಾಭಾರ ಸೇವೆ ಕಾರ್ಯಕ್ರಮಗಳು ಗುರುವಾರ ಶ್ರೀ ಕ್ಷೇತ್ರದಲ್ಲಿ ನಡೆದವು.

    ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಬುಧವಾರ ಹಾಗೂ ಗುರುವಾರ ಸಂಪನ್ನಗೊಂಡಿತು.

    ಬುಧವಾರ ರಾತ್ರಿ ಹಾಲಿಟ್ಟು ಸೇವೆ, ಗೆಂಡಸೇವೆ ಕಾರ್ಯಕ್ರಮಗಳು ಭಕ್ತ ಸಮುದಾಯದ ಹರಕೆಯೊಂದಿಗೆ ಪೂರ್ಣಗೊಂಡಿತು.
    ಸಾವಿರಾರು ಭಕ್ತರು ಗೆಂಡಸೇವೆ,ಮಹಾ ಅನ್ನಸಂತಪರ್ಣೆಯಲ್ಲಿ ಭಾಗಿಯಾದರು.

    ಗುರುವಾರ ಪೂರ್ವಾಹ್ನ ಢಕ್ಕೆ ಬಲಿ, ತುಲಾಭಾರ ಸೇವೆ , ಮಹಾಅನ್ನಪ್ರಸಾದ ವಿತರಣೆ ನಡೆಯಿತು.

    ಶ್ರೀ ದೇಗುಲದ ಆಡಳಿತಾಧಿಕಾರಿ, ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಟ್ರಸ್ಟಿ ಸದಸ್ಯರು,ಅರ್ಚಕ ಪ್ರತಿನಿಧಿಗಳು ಮತ್ತಿತರರು ಇದ್ದರು.

  • ಕುಂದಾಪುರ : CIER  ಮೂಲಕ ಪತ್ತೆ ಹಚ್ಚಲಾದ ಮೊಬೈಲ್ ಗಳನ್ನು ವಾರೀಸುದಾರರಿಗೆ ಹಿಂತಿರುಗಿಸಿದ ಪೊಲೀಸರು – ಸಾರ್ವಜನಿಕರಿಗೆ ಜಾಗೃತಿ ಮಾಹಿತಿ

    ಕುಂದಾಪುರ : CIER ಮೂಲಕ ಪತ್ತೆ ಹಚ್ಚಲಾದ ಮೊಬೈಲ್ ಗಳನ್ನು ವಾರೀಸುದಾರರಿಗೆ ಹಿಂತಿರುಗಿಸಿದ ಪೊಲೀಸರು – ಸಾರ್ವಜನಿಕರಿಗೆ ಜಾಗೃತಿ ಮಾಹಿತಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಫುರ: ಕಳೆದ ಎರಡು ವರ್ಷಗಳಲ್ಲಿ ಮೊಬೈಲ್ ಕಳೆದಕೊಂಡು ಪೊಲೀಸ್ ದೂರು ನೀಡಿದ್ದ ಸಂತ್ರಸ್ಥ ದೂರುದಾರರ ಪೈಕಿ ಒಟ್ಟು 20 ಮೊಬೈಲ್ ಗಳನ್ನು ಕುಂದಾಪುರ ಪೊಲೀಸರ ತಂಡ ಪತ್ತೆ ಹಚ್ಚಿದ್ದು, ಪತ್ತೆ ಹಚ್ಚಲಾದ ಮೊಬೈಲ್ ಗಳನ್ನು ಗುರುವಾರ ಪೊಲೀಸರು ವಾರೀಸುದಾರರಿಗೆ ಹಿಂತಿರುಗಿಸಿದ್ದಾರೆ.

    ಪತ್ತೆ ಹಚ್ಚಲಾಗಿದ್ದ 20 ಮೊಬೈಲ್ ಗಳ ಪೈಕಿ ಒಂದು ಮೊಬೈಲ್ ನ್ನು ಜಾರ್ಖಂಡಿನ ಹಜಾರಿಭಾಗ್ ಎಂಬಲ್ಲಿ ಮತ್ತು ಇನ್ನೊಂದು ಮೊಬೈಲನ್ನು ಆಂದ್ರ ಪ್ರದೇಶದ ಗೊಂಡಾಲಾ ಎಂಬಲ್ಲಿ ವಶಕ್ಕೆ ಪಡೆಯಲಾಗಿದೆ. ಉಳಿದ 18 ಮೊಬೈಲ್ ಗಳನ್ನು ಕರ್ನಾಟಕದ ವಿವಿಧೆಡೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗುರುವಾರ ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ CIER ಮೂಲಕ ಬ್ಲಾಕ್ ಮಾಡಲಾಗಿದ್ದ ಮೊಬೈಲ್ ಗಳನ್ನು ಅನ್ ಬ್ಲಾಕ್ ಮಾಡುವುದು ಹೇಗೆ ಮತ್ತು ಬಳಸುವುದು ಹೇಗೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಮೊಬೈಲ್ ಕಳೆದುಹೋದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನೂ ಇದೇ ಸಂದರ್ಭ ವಿವರಿಸಲಾಯಿತು.

    ಈ ಸಂದರ್ಭ CIER ಮೂಲಕ ಪತ್ತೆ ತಂಡಕ್ಕೆ ಉಡುಪಿ ಎಸ್ಪಿ ಡಾ. ಕೆ.ಅರುಣ್ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ. ಎಎಸ್ಪಿಗಳಾದ ಪರಮೇಶ್ವರ ಹೆಗ್ಡೆ ಹಾಗೂ ಸಿದ್ಧಲಿಂಗಯ್ಯ ನಿರ್ದೇಶನ ನೀಡಿದ್ದಾರೆ. ಡಿವೈಎ್ಸಪಿ ಬೆಳ್ಳಿಯಪ್ಪ ನೃತೃತ್ವ ವಹಿಸಿ ವೃತ್ತ ನಿರೀಕ್ಷಕ ನಂದಕುಮಾರ್ ಹಾಗೂ ಉಪ ನಿರೀಕ್ಷಕರಾದ ವಿನಯ್ ಕೊರ್ಲಹಳ್ಳಿ ಹಾಗೂ ಪ್ರಸಾದ್ ಕಾರ್ಯಾಚರಣೆ ನಡೆಸಿದ್ದಾರೆ. ಸಿಬ್ಬಂದಿಗಳಾದ ಸಿದ್ಧಪ್ಪ, ಮಾರುತಿ ಹಾಗೂ ಅವಿನಾಶ ತಂಡದಲ್ಲಿದ್ದರು.

  • ಕುಂದಾಪುರ : ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

    ಕುಂದಾಪುರ : ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಕುಂದಾಪುರ ನಗರದ ಒಳಗೆ ವಾಹನ ದಟ್ಟಣೆ ಹೆಚ್ಚಿರುವ ಹಿನ್ನೆಲೆ, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳಾದ 1989ರ ಕಲಂ 221(ಎ)(2) &(5) ರ ಅನ್ವಯ ವಾಹನ ದಟ್ಟನೆ ಇರುವ ಈ ಕೆಳಕಂಡ ಮಾರ್ಗಗಳ ರಸ್ತೆಗಳಲ್ಲಿ ಏಕಮುಖ ಸಂಚಾರ ರಸ್ತೆ ಹಾಗೂ ಘನ ವಾಹನಗಳ ಸಂಚಾರ ನಿಷೇಧ ರಸ್ತೆಯನ್ನಾಗಿ ಮಾರ್ಪಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

    ಕುಂದಾಪುರ ಪುರಸಭಾ ವ್ಯಾಪ್ತಿಯ ಚಿಕ್ಕನ್ ಸ್ಟಾಲ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಮಾಸ್ತಿಕಟ್ಟೆ ರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಪೂರ್ವದಿಂದ ಪಶ್ಚಿಮಕ್ಕೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕುಂದಾಪುರ ಶಾಸ್ತ್ರಿ ಸರ್ಕಲ್‌ನಿಂದ ಹೊಸ ಬಸ್ ನಿಲ್ದಾಣದ ವರೆಗೆ ಪುರಸಭೆ ರಸ್ತೆಯ ಪಶ್ಚಿಮ ಬದಿಯ ರಸ್ತೆಯಲ್ಲಿ ಎಲ್ಲಾ ವಾಹನಗಳು ಉತ್ತರಾಭಿಮುಖವಾಗಿ ಸಂಚರಿಸಬೇಕು.

    ಹೊಸ ಬಸ್ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ ವರೆಗೆ ಪುರಸಭೆಯ ಪೂರ್ವ ಬದಿಯ ರಸ್ತೆಯಲ್ಲಿ ಎಲ್ಲಾ ವಾಹನಗಳು ದಕ್ಷಿಣಾಭಿಮುಖವಾಗಿ ಸಂಚರಿಬೇಕು. ಕುಂದಾಪುರ ಪುರಸಭೆ ವ್ಯಾಪ್ತಿಯ ಬೇಗಂ ಹಜರತ್ ಮಹಲ್ ರಸ್ತೆ (ಸಟ್ಟಾಡಿ ಡಿಪಾರ್ಟ್ಮೆಂಟಲ್ ಸ್ಟೋರ್ ಪಕ್ಕದ ರಸ್ತೆ)ಯು ಪುರಸಭೆ ರಸ್ತೆಯ ಪೂರ್ವಕ್ಕೆ ರಾ.ಹೆ 66 ಕ್ಕೆ ಕೂಡು ರಸ್ತೆಯಾಗಿ ಹಾದುಹೋಗಿರುವ ಕಿರಿದಾದ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಪುರಸಭೆ ರಸ್ತೆಯ ಪಶ್ಚಿಮದಿಂದ ಪೂರ್ವಕ್ಕೆ ರಾ.ಹೆ.66 ಕಡೆಗೆ ವಾಹನಗಳನ್ನು ಸಂಚರಿಸಲು ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿರುತ್ತದೆ.

    ಕುಂದಾಪುರ ಪುರಸಭೆ ವ್ಯಾಪ್ತಿಯ ಗ್ರ್ಯಾಂಡ್ ಶಿವಪ್ರಸಾದ್ ಪಕ್ಕದ ರಸ್ತೆಯು ಕಿರಿದಾಗಿದ್ದು, ಈ ರಸ್ತೆಯು ಪೂರ್ವಕ್ಕೆ ರಾ.ಹೆ. 66 ಅನ್ನು ಸಂಪರ್ಕಿಸಿದೆ. ಈ ರಸ್ತೆಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಪುರಸಭೆಯ ಮುಖ್ಯ ರಸ್ತೆಗೆ ವಾಹನಗಳು ಸಂಚರಿಸಲು ಹಾಗೂ ಪುರಸಭಾ ರಸ್ತೆಯಿಂದ ರಾ.ಹೆ. 66 ರ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  • ಕೋಟೇಶ್ವರ :ಅಯೋಧ್ಯೆ ಶ್ರೀ ರಾಮ ಮಂದಿರ ಮಂತ್ರಾಕ್ಷತೆ ವಿತರಣೆ – ಶಾಸಕ ಕಿರಣ್ ಕೊಡ್ಗಿ ಭಾಗಿ

    ಕೋಟೇಶ್ವರ :ಅಯೋಧ್ಯೆ ಶ್ರೀ ರಾಮ ಮಂದಿರ ಮಂತ್ರಾಕ್ಷತೆ ವಿತರಣೆ – ಶಾಸಕ ಕಿರಣ್ ಕೊಡ್ಗಿ ಭಾಗಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಕೋಟೇಶ್ವರ ಗ್ರಾಮದ ಅಂಕದಕಟ್ಟೆ ವಾರ್ಡ್ ನ ಮನೆ ಮನೆಗೆ ತೆರಳಿ ಶ್ರೀ ರಾಮ ಮಂದಿರದ ಪವಿತ್ರ ಮಂತ್ರಾಕ್ಷೆಯನ್ನು ವಿತರಿಸಿದರು.

    ಈ ಸಂದರ್ಭ ಗ್ರಾಮಸ್ಥರು ಬಹಳ ಸಂಭ್ರಮದಿಂದ ಆರತಿ ಬೆಳಗಿ, ರಾಮ ಮಂತ್ರ ಜಪಿಸಿ ಮಂತ್ರಾಕ್ಷತೆ ಸ್ವೀಕರಿಸಿದರು.

    ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ :ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ – ಸಿಎ ಫಲಿತಾಂಶದಲ್ಲಿ ಶ್ರೇಷ್ಠ ಸಾಧನೆ

    ಕುಂದಾಪುರ :ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ – ಸಿಎ ಫಲಿತಾಂಶದಲ್ಲಿ ಶ್ರೇಷ್ಠ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಿಎ/ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ಥೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ನವೆಂಬರ್ 2023ರಲ್ಲಿ ನೆಡೆಸಿದ ಸಿಎ ಫೈನಲ್ ಮತ್ತು ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ.

    ಸಂಸ್ಥೆಯ ವಿದ್ಯಾರ್ಥಿಯಾದ ಷಣ್ಮುಖ ಕೆ. ಎಸ್.(256) ಸಿಎ ಅಂತಿಮ ಪರೀಕ್ಷೆಯನ್ನು ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.

    ಸಂಸ್ಥೆಯ ವಿದ್ಯಾರ್ಥಿಯಾದ ಧನುಷ್ 518 ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಎರಡು ಹಂತದ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದುವುದರ ಮೂಲಕ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

    ಆಯೆಷಾ ತುಬಾ(260), ವೈಷ್ಣವಿ ಶೆಟ್ಟಿ (249), ಅಮೃತ (234), ಕೆ.ಆರ್.‌ ದೀಕ್ಷಾ (228) ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯೆಟ್ ದ್ವಿತೀಯ ಗ್ರೂಪ್ ಪರೀಕ್ಷೆಯನ್ನು ತೇರ್ಗಡೆ ಹೊಂದುದರ ಮೂಲಕ ಸಿಎ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಶೃದ್ಧಾ ಬಿ. ಸಾಲ್ಯಾನ್(270)‌, ಪಂಚಮಿ ಕಿಣಿ (261), ರಕ್ಷಿತಾ (235), ಸುದೀಪ್‌ರಾಜ್(227)‌, ಕಿಶನ್‌ ಅಡಿಗ (216), ವೈಷ್ಣವಿ ವಿ. ಮೊಪಗಾರ್‌ (216), ರೋಹಿತ್‌ ಆಚಾರ್ಯ(210), ಸುಶ್ಮಿತಾ ಉದಯ್‌ ಪೂಜಾರಿ (203), ಮತ್ತು ಶ್ರೀಜಿತ್ (200) ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಮೊದಲ ಗ್ರೂಪ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

    ಶಿಕ್ಷ ಪ್ರಭ ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಬಂದಿದ್ದು ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ನ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗದಲ್ಲಿದ್ದಾರೆ. ಸಂಸ್ಥೆಯಲ್ಲಿ ಬೋಧಕ ಸಿಬ್ಭಂದಿಗಳಾಗಿ ಆಗಮಿಸುವ ಅನುಭವಿ ಲೆಕ್ಕ ಪರಿಶೋಧಕರು, ತರಬೇತುದಾರರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುವುದರ ಪರಿಣಾಮ ಪ್ರತಿ ಬ್ಯಾಚ್‌ನಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಬೋಧಕ ಸಿಬ್ಬಂಧಿ ವರ್ಗದವರಿಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

    “ದೇವರ ಅನುಗ್ರಹ, ತಂದೆ ತಾಯಿಯ ನಿರಂತರ ಪ್ರೋತ್ಸಾಹ, ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಜೀವನದಲ್ಲಿ ಗುರಿ ಹಾಗೂ ಅದನ್ನು ಸಾಧಿಸುವ ಛಲ ಇದ್ದರೆ ಯಶಸ್ಸು ತಾನಾಗಿಯೇ ಒಲಿಯುತ್ತದೆ.” ಸಿಎ ಅಂತಿಮ ಪರೀಕ್ಷೆಉತ್ತೀರ್ಣ ವಿದ್ಯಾರ್ಥಿ ಷಣ್ಮುಖ ಕೆ. ಎಸ್.

  • ಕುಂದಾಪುರ :ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಪಿಎಚ್.ಡಿ ಪದವಿ

    ಕುಂದಾಪುರ :ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಪಿಎಚ್.ಡಿ ಪದವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾಗಿರುವ ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.

    ಮಂಗಳೂರಿನ ಥಿಯೋಲಾಜಿಕಲ್ ಸಂಶೋಧನಾ ಕೇಂದ್ರದ ಮೂಲಕ ಪ್ರಸಿದ್ಧ ಅಂಕಣ ಬರಹಗಾರ, ಲೇಖಕ, ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ| ನರೇಂದ್ರ ರೈ ದೇರ್ಲ ಅವರ ಮಾರ್ಗದರ್ಶನದಲ್ಲಿ “ಕರ್ನಾಟಕ ಕರಾವಳಿಯ ಪ್ರಾದೇಶಿಕ ಅಧ್ಯಯನದ ವಿಭಿನ್ನ ಪ್ರವೃತ್ತಿಗಳು” ಎಂಬ ವಿಷಯದ ಕುರಿತು ಸಿದ್ಧಪಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪದವಿ ನೀಡಲಾಗಿದೆ. ಇವರು 2014ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ “ಗ್ರಾಮ ಚರಿತ್ರೆ ಕೋಶ” ಯೋಜನೆಗೆ ಹಿರಿಯ ಜಾನಪದ ವಿದ್ವಾಂಸ ಪ್ರೋ. ಎ.ವಿ. ನಾವಡ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕಿನ ಕ್ಷೇತ್ರತಜ್ಞರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಇವರಿಗೆ ನೇಶನ್ ಬಿಲ್ಡರ್, ಯುವರತ್ನ ಪ್ರಶಸ್ತಿಗಳು ಲಭಿಸಿವೆ. ಇವರು ಕ್ರೋಢ ಬೈಲೂರು ಕೆಳಾಮನೆ ಬಾಲಕೃಷ್ಣ ಶೆಟ್ಟಿ ಹಾಗೂ ಕೋವಾಡಿ ಗೌರಿ ಬಿ. ಶೆಟ್ಟಿ ದಂಪತಿಯ ಪುತ್ರ.

  • ಕೋಟ ಅಮೃತೇಶ್ವರಿ ಜಾತ್ರಾ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

    ಕೋಟ ಅಮೃತೇಶ್ವರಿ ಜಾತ್ರಾ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಮಂಗಳವಾರ ವಿದ್ಯುಕ್ತವಾಗಿ ಚಾಲನೆಗೊಂಡಿತು.

    ಪೂರ್ವಾಹ್ನ ಪ್ರಾರ್ಥನಾ, ಫಲನ್ಯಾಸಪೂರ್ವಕ ಸಾಮೂಹಿಕ ಪ್ರಾರ್ಥನೆ, ಶ್ರೀ ದೇವಿಗೆ ಪಂಚವಿಂಶತಿ, ದ್ರವ್ಯ ಕಲಶಪೂರ್ವಕ ಕಲಾತತ್ವ ಹೋಮ ಹಾಗೂ ಪರಿವಾರ ದೇವರುಗಳಿಗೆ ನವಕ ಪ್ರದಾನ ಕಲಾಧಿವಾಸ ಹೋಮ ಕಾರ್ಯಕ್ರಮಗಳು
    ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ನೆರವೆರಿತು.

    ಶ್ರೀ ದೇಗುಲದ ಆಡಳಿತ ಮಂಡಳಿದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ಅಪರಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿತು.

    ದೇಗುಲದ ಆಡಳಿತಾಧಿಕಾರಿ ಶ್ರೀಕಾಂತ್ ಎಸ್ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ದೇಗುಲದ ಅರ್ಚಕ ಪ್ರತಿನಿಧಿ ಕೃಷ್ಣ ಜೋಗಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರುಗಳು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

    ಗೆಂಡೋತ್ಸವ, ಗುರುವಾರ ಢಕ್ಕೆ ಬಲಿ,ತುಲಾಭಾರ ಸೇವೆ ಕಾರ್ಯಕ್ರಮ,ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಲಿದೆ.