Category: ಸುದ್ದಿ

  • ಉಡುಪಿ :ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ

    ಉಡುಪಿ :ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆಯ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಪ್ರತೀ ವರ್ಷದಂತೆ ಈ ಬಾರಿಯೂ ಜನವರಿ 26 ರಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದು, ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನಡೆಸಿ, ಸಂದೇಶ ನೀಡಲಿದ್ದಾರೆ ಎಂದರು.

    ಸಮಾರಂಭದಲ್ಲಿ ಪೊಲೀಸ್, ಅರಣ್ಯ, ಗೃಹ ರಕ್ಷಕ, ಎನ್.ಸಿ.ಸಿ. ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕವಾಯತು ನಡೆಯಲಿದ್ದು, ನಂತರ ಶಾಲಾ ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

    ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿ, ಜನಪ್ರತಿನಿಧಿಗಳಿಗೆ, ಗಣ್ಯರಿಗೆ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಕುಟುಂಬದವರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳು ತಪ್ಪದೇ ಭಾಗವಹಿಸಬೇಕು ಎಂದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

    ಕಾರ್ಯಕ್ರಮದ ಯಶಸ್ವಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು. ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ತರಬೇತಿ ನಿರತ ಐ.ಪಿ.ಎಸ್ ಅಧಿಕಾರಿ ಹರ್ಷ ಪ್ರಿಯಂವದ, ಎಎಸ್‌ಪಿ ಸಿದ್ಧಲಿಂಗಪ್ಪ, ಪೌರಾಯುಕ್ತ ರಾಯಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಐ.ಎಮ್.ಜೆ.ಐ.ಎಸ್.ಸಿ ಯಂಗ್ ಲೀಡರ್ ಅವಾರ್ಡ್-2024 ಪ್ರದಾನ

    ಕುಂದಾಪುರ :ಐ.ಎಮ್.ಜೆ.ಐ.ಎಸ್.ಸಿ ಯಂಗ್ ಲೀಡರ್ ಅವಾರ್ಡ್-2024 ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ದೇಶದ ಪ್ರಗತಿಗೆ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಯುವ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಮತ್ತು ಯುವನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಜೆ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮೂಡ್ಲಕಟ್ಟೆ ಐ.ಎಮ್.ಜೆ.ಐ.ಐಸ್.ಸಿ ಯಂಗ್ ಲೀಡರ್ ಅವಾರ್ಡ್-2024 ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯ ಮೂಲ ಉದ್ದೇಶ ಯುವ ನಾಯಕತ್ವವನ್ನು ಉತ್ತೇಜಿಸುವುದು ಮತ್ತು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು. ಒಬ್ಬ ವಿದ್ಯಾರ್ಥಿ ಯುವ ನಾಯಕನಾಗಿ ರೂಪುಗೊಳ್ಳಬೇಕಾದರೆ ಅವನಿಗೆ ಇರಬೇಕಾದ ಅರ್ಹತೆ ಮತ್ತು ತಯಾರಿ ಹೇಗಿರಬೇಕು ಮತ್ತು ಸಂವಹನ ಕಲೆಯು ವಿದ್ಯಾರ್ಥಿ ಜೀವನದಲ್ಲಿ ಹೇಗೆ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸ್ಪರ್ಧೆ ಆಯೋಜನೆಯ ಪರಿಕಲ್ಪನೆಯಾಗಿದೆ. ಸ್ಪರ್ಧೆಯ ಅಂತಿಮ ಸುತ್ತು ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.12 ಸ್ವಾಮಿ ವಿವೇಕಾನಂದ ಜನ್ಮದಿನದಂದು ಕಾಲೇಜಿನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|| ರಾಮಕೃಷ್ಣ ಹೆಗ್ಡೆ ತಿಳಿಸಿದರು.

    ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಸಂಸ್ಥೆಯ ಪ್ರಾಂಶುಪಾಲೆ ಡಾ| ಪ್ರತಿಭಾ ಪಟೇಲ್ ಎಮ್ ಮಾತನಾಡಿ, ಈ ಸ್ಪರ್ಧೆಯನ್ನು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ದ ಪಿ.ಯು ಸಿ. ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು ಸ್ಪರ್ಧೆಯಲ್ಲಿ ಸರಿ ಸುಮಾರು 20 ಕ್ಕೂ ಹೆಚ್ಚಿನ ಕಾಲೇಜಿನ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೊದಲನೆಯ ಹಂತವು ‘ಜಸ್ಟ್ ಆ ಮಿನಿಟ್’ ಎನ್ನುವ ಸ್ಪರ್ಧೆಯಾಗಿದ್ದು ಸ್ಪರ್ಧಿಸುವ ವಿದ್ಯಾರ್ಥಿಯು ತಾನು ಆಯ್ಕೆ ಮಾಡಿದ ವಿಷಯದ ಕುರಿತು ಒಂದು ಅಥವಾ ಎರಡು ನಿಮಿಷದಲ್ಲಿ ಮಾತನಾಡಬೇಕು. ಈ ಹಂತದಲ್ಲಿ ವಿದ್ಯಾರ್ಥಿಯ ಸಂವಹನ ಕಲೆ, ವಿಷಯದ ನೈಪುಣ್ಯತೆ ಹಾಗು ಸ್ಪಷ್ಟತೆ ಆದರದ ಮೇಲೆ ಅಗ್ರ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಆಯಾ ಕಾಲೇಜಿನಲ್ಲೇ ನೀಡಲಾಗಿದೆ. ಆಯ್ಕೆಗೊಂಡ ಈ ವಿದ್ಯಾರ್ಥಿಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮೊದಲ ಹಂತದಲ್ಲಿ ಸ್ಪರ್ದಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಈಗಾಗಲೇ 90 ಕಾಲೇಜಿನ 60 ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ಜನವರಿ 12 ರಂದು ಮೂಡ್ಲಕಟ್ಟೆ ಕ್ಯಾಂಪಸ್ ನಲ್ಲಿ ನೆಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಉಪಪ್ರಾಂಶುಪಾಲರಾದ ಪ್ರೊ ಜಯಶೀಲ ಕುಮಾರ್ ಮಾತನಾಡಿ, ಯಂಗ್ ಲೀಡರ್ ಅವಾರ್ಡ್ 2024 ಇದರ ಅಂತಿಮ ಸ್ಪರ್ಧೆಯನ್ನು ಜನವರಿ 12 ರಂದು ಮೂಡ್ಲಕಟ್ಟೆ ಕ್ಯಾಂಪಸ್ ನಡೆಯಲಿದೆ. ಸ್ಪರ್ಧೆಯಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ಕೆಗೊಂಡ ಪ್ರತಿಷ್ಠಿತ ಪಿ.ಯು ಸಿ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಸ್ಪರ್ಧೆ ರೋಚಕವಾಗಿ ಮೂಡಿಬರಲಿದೆ. ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗೆ ಐ ಎಮ್.ಜಿ. ಐಸ್.ಸಿ ಯಂಗ್ ಲೀಡರ್ ಅವಾರ್ಡ್ 2024 ನೀಡಲಾಗುತ್ತದೆ. ವಿಜೇತ ವಿದ್ಯಾರ್ಥಿ ಆಕರ್ಷಕ ಟ್ರೋಫಿ ಜೊತೆಯಲ್ಲಿ ನಗದು ಬಹುಮಾನ ರೂಪಾಯಿ 5000 ಮತ್ತು ಪ್ರಮಾಣ ಪತ್ರ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ನಗದು ಬಹುಮಾನ ರೂಪಾಯಿ 2000 ಮತ್ತು ಪ್ರಮಾಣ ಪತ್ರ ನೀಡಲಾಗುವುದು.

    ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ನ ಮಾಜಿ ಡಿಸ್ಟ್ರಿಕ್ಸ್ ಗವರ್ನರ್ ಹಾಗು ಅಂತಾರಾಷ್ಟ್ರೀಯ ಮೋಟಿವೇಶನಲ್ ಸ್ಪೀಕರ್ ನೀಲಕಂಠ ಎಮ್ ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರತಿಭಾ ಪಟೇಲ್ ಎಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಮತ್ತು ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ||ರಾಮಕೃಷ್ಣ ಹೆಗ್ಡೆ ಹಾಗೂ ಉಪಪ್ರಾಂಶುಪಾಲರು ಉಪಸ್ಥಿತರಿರುವರು.

    ಸಮಾರೋಪ ಸಮಾರಂಭದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಅವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಐ. ಎಮ್. ಜೆ. ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿಯವರು ವಹಿಸಲಿದ್ದಾರೆ ಎಂದರು.

  • ಕುಂದಾಪುರ :ಜನವರಿ 14 : ಬ್ಯಾರೀಸ್ ಶಿಕ್ಷಣ ಸಂಸ್ಥೆಯಿಂದ ವಿಶ್ವಶಾಂತಿ ಸಂದೇಶ – ಸಾಂಸ್ಕೃತಿಕ ಕಾರ್ಯಕ್ರಮ

    ಕುಂದಾಪುರ :ಜನವರಿ 14 : ಬ್ಯಾರೀಸ್ ಶಿಕ್ಷಣ ಸಂಸ್ಥೆಯಿಂದ ವಿಶ್ವಶಾಂತಿ ಸಂದೇಶ – ಸಾಂಸ್ಕೃತಿಕ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬ್ಯಾರೀಸ್ ಶಿಕ್ಷಣ ಸಂಸ್ಥೆ ಈ ವರ್ಷ ವಿಶ್ವಶಾಂತಿ ಸಂದೇಶ ಸಾರುವ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥಾಪಕರ ದಿನಾಚರಣೆಯನ್ನು ಮತ್ತು ವಾರ್ಷಿಕೋತ್ಸವವನ್ನು ಜ.14 ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದೆ. ಈ ಸುಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್’ ಉದ್ಘಾಟನೆಗೊಳ್ಳಲಿದೆ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಲಾಂಛನ ಅನಾವರಣಗೊಳಿಸಲಾಗುವುದು ಎಂದು ಅಧ್ಯಕ್ಷರಾದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಹೇಳಿದರು.

    ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ಯು.ಟಿ ಖಾದರ್, ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ ಪಾಟೀಲ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಸರಾಂತ ಪರಿಸರವಾದಿಗಳಾದ ಪದ್ಮಶ್ರೀ ತುಳಸಿ ಗೌಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮುಸ್ಲಿಂ ಎಜ್ಯುಕೇಶನಲ್ ಇನ್ಸಿಟಿಟ್ಯೂಟ್ ಫೆಡರೇಶನ್ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಇವರನ್ನು ಸನ್ಮಾನಿಸಲಾಗುವುದು ಎಂದರು.

    ಪ್ರೊ.ಹಯವದನ ಉಪಾಧ್ಯ ಮಾತನಾಡಿ 1906ರಲ್ಲಿ ಶಿಕ್ಷಣದ ಮೊಳಕೆ ಎಂಬಂತೆ ಕೋಡಿಯಲ್ಲಿ ಸಣ್ಣ ಶಾಲೆಯೊಂದು ಹುಲ್ಲಿನ ಹೊದಿಕೆಯಿಂದ ಕೂಡಿದ ಚಪ್ಪರದಡಿಯಲ್ಲಿ ಅಕ್ಷರ ಪ್ರಪಂಚವನ್ನು ಪರಿಚಯಿಸಿತು. ಕೀರ್ತಿಶೇಷರಾದ ದಿವಂಗತ ಹಾಜಿ ಮಾಸ್ಟರ್ ಮಹಮೂದ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಅಂಗಸಂಸ್ಥೆಗಳು ಊರ ಪರವೂರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿಯಾಯಿತು. ಪ್ರಸ್ತುತ ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಅವರ ನೇತೃತ್ವದಲ್ಲಿ, ಸಂಚಾಲಕರಾದ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರ ಮಾರ್ಗದರ್ಶನದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಪರಿಸರ ಮುಖಿ ಚಿಂತನೆಯೊಂದಿಗೆ ಪ್ರತಿ ತಿಂಗಳು ನಡೆಸುತ್ತಿರುವ `ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನವು 28 ಹಂತವನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.

    ಬ್ಯಾರಿಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿದ್ದಪ್ಪ ಕೆ. ಎಸ್, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು.

  • ಕುಂದಾಪುರ :ಕಲಾಕ್ಷೇತ್ರ- ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ಜ.14ರಂದು 12ನೇ ವರ್ಷದ ‘ಇನಿದನಿ’ ಕಾರ್ಯಕ್ರಮ

    ಕುಂದಾಪುರ :ಕಲಾಕ್ಷೇತ್ರ- ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ಜ.14ರಂದು 12ನೇ ವರ್ಷದ ‘ಇನಿದನಿ’ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ಸತತ 12ನೇ ವರ್ಷದ ‘ಇನಿದನಿ’ ಸುಮಧುರ ಕನ್ನಡ ಚಿತ್ರಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ಜನವರಿ 14 ರವಿವಾರ ಸಂಜೆ 6 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ ಎಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ತಿಳಿಸಿದರು.

    ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಹನ್ನೇರಡರ ಸಂಭ್ರಮದಲ್ಲಿರುವ ಇನಿದನಿಯ ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಗಾಯಕ/ಗಾಯಕಿಯರಾದ ಅಜೇಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನೀಲ್, ಸಮನ್ವಿತಾ ಶರ್ಮ, ಭಾಗವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರಿನ ವೈ ಎನ್. ರವೀಂದ್ರ, ಸ್ಥಳೀಯರಾದ ಅಶೋಕ ಸಾರಂಗ್, ಯುವ ಪ್ರತಿಭೆ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ ಹಾಗೂ ಕಮಲ್ ಕಿಶೋರ್ ಕುಂದಾಪುರ ಭಾಗವಹಿಸಲಿದ್ದು, ಹಿಮ್ಮೇಳದಲ್ಲಿ ರಾಜೇಶ್ ಭಾಗವತ್-ತಬಲಾ, ವಾಮನ್ ಕಾರ್ಕಳ-ಪ್ಯಾಡ್ ಮತ್ತು ಡ್ರಮ್ಸ್, ಗಣೇಶ್ ನವಗಿರಿ-ಕಾಂಗೋ, ಭಾಸ್ಕರ ಕುಂಬ್ಳೆ- ಡೋಲಕ್, ಶಿಜಿಮೂನ್ ಕ್ಯಾಲಿಕಟ್ ಹಾಗೂ ದೀಪಕ್ ಶಿವಮೊಗ್ಗ-ಕೀಬೋರ್ಡ್, ವರುಣ್-ಕೊಳಲು, ಸುಮುಖ್ ಆಚಾರ್ಯ-ಸಿತಾರ್, ಮೆಲ್ವಿನ್-ಟ್ರಂಪೆಟ್, ಟೋನಿ ಡಿ’ಸಿಲ್ವ ಬೇಸ್ ಗಿಟಾರ್ ಮತ್ತು ಮಂಗಳೂರಿನ ರಾಜ್ ಗೋಪಾಲ ಆಚಾರ್ಯ- ಗಿಟಾರ್ ನುಡಿಸಲಿದ್ದು ತಂಡದ ನೇತೃತ್ವ ವಹಿಸಲಿದ್ದಾರೆ ಎಂದರು.

    ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಾಗಿ ಹಳೆಯ ಗೀತೆಗಳ ಮಾಧುರ್ಯ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ 2010 ರಲ್ಲಿ ಇನಿದನಿ ವಿನೂತನ ರೀತಿಯ ಸಂಗೀತ ರಸಮಂಜರಿಯೊಂದು ವಿಭಿನ್ನ ಶೈಲಿಯೊಂದಿಗೆ ಕುಂದಾಪುರಕ್ಕೆ ಪರಿಚಯಿಸಲ್ಪಟ್ಟಿತ್ತು. ಅದರಲ್ಲಿ 70-80ರ ದಶಕದ ಕನ್ನಡ ಚಲನಚಿತ್ರದ ಹಾಡುಗಳನ್ನಷ್ಟೇ ಹಾಡಿಸಲಾಗುತ್ತಿತ್ತು. ಈ ಕಾರ್ಯಕ್ರಮವು ಸಂಗೀತದ ಮೇಲಿನ ಶ್ರದ್ದೆ ಮತ್ತು ಪ್ರಾಮಾಣಿಕತೆಯ ಪ್ರತೀಕ, ಅಚ್ಚುಕಟ್ಟಾದ ಆಯೋಜನೆ, ಮಿಮಿಕ್ರಿ ಇಲ್ಲದ, ಡ್ಯಾನ್ಸ್ ಇಲ್ಲದ, ಸಂಗೀತದ ವಿಷಯ ಬಿಟ್ಟು ಇನ್ನೇನನ್ನು ಮಾತನಾಡದಿರುವ, ಪರಿಶುದ್ಧವಾದ ಸಂಗೀತ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇನಿದನಿಯಿಂದ ಮನಸೂರೆಗೊಂಡ ಪ್ರೇಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಯಿತು. 2010ರಲ್ಲಿ 150 ಮಂದಿ ಪ್ರೇಕ್ಷಕರಿದ್ದ ಇನಿದನಿಗೆ ಇದೀಗ 8 ಸಾವಿರಕ್ಕೂ ಅಧಿಕ ಮಂದಿ ಕೇಳುಗರು ಸೇರುತ್ತಾರೆ. ಮುಂದಿನ ವರ್ಷದ ಇನಿದನಿಗಾಗಿ ಕಾತುರದಿಂದ ಕಾಯುತ್ತಾರೆ. ಒಟ್ಟಿನಲ್ಲಿ ಇನಿದನಿ ಎಂದರೆ ಶಿಸ್ತುಬದ್ದವಾದದ್ದು, ಸಮಯಪಾಲನೆ ಮಾಡುವಂತದ್ದು ಎಂಬ ಖ್ಯಾತಿಗೆ ಒಳಗಾಗಿದೆ. ಈ ಇನಿದನಿಯ ನೇತೃತ್ವದ ಹೊಣೆ ಹೊತ್ತದ್ದು ಕಲಾಕ್ಷೇತ್ರ- ಕುಂದಾಪುರ ಟ್ರಸ್ಟ್. ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಕಾಳಜಿಯ ಪ್ರತಿರೂಪವಾದ ಕಲಾಕ್ಷೇತ್ರ ಸಂಸ್ಥೆಯು ಈಜು ತರಬೇತಿ, ಸುಗಮ ಸಂಗೀತ ತರಬೇತಿ, ಕನ್ನಡ ರಾಜ್ಯೋತ್ಸವ ಆಚರಣೆ, ವಿಚಾರ ಸಂಕಿರಣ, ಚಲನಚಿತ್ರ ಪ್ರದರ್ಶನ, ಯಕ್ಷಗಾನ, ತಾಳಮದ್ದಲೆ, ಹುಲಿವೇಷ ನೃತ್ಯ ಆಯೋಜನೆ, ಕುಂದಾಪ್ರ ಕನ್ನಡ ದಿನಾಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕುಂದಾಪುರದ ಜನತೆಗೆ ನೀಡುತ್ತಲೇ ಬಂದಿದೆ ಎಂದರು.

    ಸುದ್ಧಿಗೋಷ್ಠಿಯಲ್ಲಿ ಗೀತಗಾಯನ ಕಾರ್ಯಕ್ರಮದ ಪ್ರಮುಖರಾದ ಸನತ್ ಕುಮಾರ್ ರೈ, ಕೆ,ಆರ್ ನಾಯಕ್, ರಾಜೇಶ ಕಾವೇರಿ, ಪ್ರಶಾಂತ್ ಸಾರಂಗ್ ಉಪಸ್ಥಿತರಿದ್ದರು.

  • ಬೆಳ್ವೆ :ಪ್ರತಿಯೊಬ್ಬರೂ ದೇಶದ ಅಭಿವೃದ್ಧಿ ಜೊತೆ ಹೆಜ್ಜೆ ಹಾಕಿದರೆ 2047ರಲ್ಲಿ ಭಾರತ ನಂ 1 ಆಗಲಿದೆ : ಶೋಭಾ ಕರಂದ್ಲಾಜೆ

    ಬೆಳ್ವೆ :ಪ್ರತಿಯೊಬ್ಬರೂ ದೇಶದ ಅಭಿವೃದ್ಧಿ ಜೊತೆ ಹೆಜ್ಜೆ ಹಾಕಿದರೆ 2047ರಲ್ಲಿ ಭಾರತ ನಂ 1 ಆಗಲಿದೆ : ಶೋಭಾ ಕರಂದ್ಲಾಜೆ

    Video :

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ವಿಕಸಿತ ಭಾರತ ಸಂಕ್ಲಪ ಯಾತ್ರೆ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮ ಅಲ್ಲ. ಬದಲಾಗಿ ಸ್ವಾತಂತ್ರ್ಯ ಸಿಕ್ಕಿದ ನೂರು ವರ್ಷದೊಳಗೆ ಭಾರತ ನಂ 1 ಆಗಬೇಕಾದರೆ ಯಾವ ರೀತಿಯ ಅಭಿವೃದ್ಧಿಯಲ್ಲಿ ನಾವು ಸಾಗಬೇಕು ಎನ್ನು ಸಂಕಲ್ಪ ಯಾತ್ರೆ. ದೇಶದ ಪ್ರತಿಯೊಬ್ಬರೂ ಹೆಜ್ಜೆ ಹಾಕಿದರೆ ಭಾರತ ವಿಶ್ವದಲ್ಲಿ ನಂಬರ್ 1 ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದರು.

    ಅವರು ಸೋಮವಾರ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಪ್ರತಿಯೊಬ್ಬರೂ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ. ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ ಕೆಲಸ ಮಾಡಿದರೆ, ಮನೆಯಲ್ಲಿ ಇರುವ ಮಹಿಳೆಯರು ತಮ್ಮ ಮನೆಯ ಮತ್ತು ಕುಟುಂಬದ ಸ್ವಚ್ಛತೆಯ ಬಗ್ಗೆ ನಿಗಾವಹಿಸಬೇಕು ಜೊತೆಗೆ ಸ್ವಂತ ಕಾಲ ಮೇಲೆ ನಿಲ್ಲುವುದನ್ನು ಕಲಿಯಬೇಕು. ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ಮನೆ, ಕುಟುಂಬದ ಸ್ವಾವಲಂಬನೆಯಾಗಬೇಕು ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಣಿಪಾಲ ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಶ್ರೀಪಂಡಿತ್ ಎಂ.ಜಿ., ಸಹಾಯಕ ಪ್ರಬಂಧಕ ಶ್ರೀಜಿತ್ ಕೆ., ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭಾಶಂಕರ್ ಪುರಾಣಿಕ, ಕೆವಿಕೆ ಬ್ರಹ್ಮಾವರದ ಡಾ. ನವೀನ್ ಕುಮಾರ್, ಉಡುಪಿ ಎನ್.ಐ.ಸಿ.ಯ ಮಂಜುನಾಥ್, ಮಂಗಳೂರು ಆಕಾಶವಾಣಿಯ ಮೋಹಿನಿ, ಎ.ಜಿ, ರಾಜೇಶ್ವರಿ ಮೊದಲಾದವರು ಇದ್ದರು.

  • ಕೋಟ :ಕಾರಂತರ ಲೋಕದಿಂದ ಸಾಹಿತ್ಯ ಕ್ಷೇತ್ರ ಇನ್ನಷ್ಟೂ ಶ್ರೀಮಂತ-ಡಾ.ಹೆಚ್. ಎಸ್. ಶೆಟ್ಟಿ

    ಕೋಟ :ಕಾರಂತರ ಲೋಕದಿಂದ ಸಾಹಿತ್ಯ ಕ್ಷೇತ್ರ ಇನ್ನಷ್ಟೂ ಶ್ರೀಮಂತ-ಡಾ.ಹೆಚ್. ಎಸ್. ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತರು ನುಡಿದಂತೆ ಬದುಕಿ ತೋರಿಸಿದವರು, ಅವರ ಪರಿಸರ ಕಾಳಜಿ, ಅನ್ಯಾಯದ ವಿರುದ್ಧ ಧ್ವನಿ, ಸಾಂಸ್ಕೃತಿಕ ಕ್ಷೇತ್ರದಲ್ಲೂ ವಿನೂತನ ಪ್ರಯೋಗಗಳು ಎಲ್ಲವೂ ಅವಿಸ್ಮರಣೀಯ, ಕಾರಂತರನ್ನು ಮಾತುಗಳಲ್ಲಿ ವರ್ಣಿಸಲು ಕಷ್ಟ, ಕನ್ನಡ ಸಾಹಿತ್ಯ ಕ್ಷೇತ್ರವು ಕಾರಂತರ ಲೋಕದಿಂದ ಶ್ರೀಮಂತವಾಗಿದೆ. ಇಂತಹ ಮಹಾನ್ ವ್ಯಕ್ತಿಯ ನೆನಪು ಚಿರಸ್ಥಾಯಿಯಾಗಿರಿಸಲು ಕಾರಂತ ಥೀಮ್ ಪಾರ್ಕ್ ಸಹಕಾರಿ, ಇಲ್ಲಿನ ಚಟುವಟಿಕೆಗಳು ಮಾದರಿಯಾಗಿದೆ ಎಂದು ಸಮಾಜ ಸೇವಕ, ಉದ್ಯಮಿ ಡಾ. ಹೆಚ್.ಎಸ್. ಶೆಟ್ಟಿ ಅವರು ಹೇಳಿದರು.

    ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರಂಗಮಂದಿರ, ಗ್ರಂಥಾಲಯ, ಆರ್ಟ್ ಗ್ಯಾಲರಿ, ಸಂಗೀತ ಕಾರಂಜಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ವಾಸು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

  • ಫೆ.20ಕ್ಕೆ ಕೋಟದಲ್ಲಿ ಗೋ ಕರುಗಳ ಪ್ರದರ್ಶನ – ಪೂರ್ವಭಾವಿ ಸಭೆ

    ಫೆ.20ಕ್ಕೆ ಕೋಟದಲ್ಲಿ ಗೋ ಕರುಗಳ ಪ್ರದರ್ಶನ – ಪೂರ್ವಭಾವಿ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ಕೋಟ ಸಹಕಾರಿ ವ್ಯವಸಾಯಕ ಸಂಘ, ಉಡುಪಿ ಜಿಲ್ಲಾ ಪಂಶು ಸಂಗೋಪನಾ ಇಲಾಖೆ, ಕೆ.ಎಂ ಎಫ್ ಇವರುಗಳ ಜಂಟಿ ಆಶ್ರಯದಲ್ಲಿ ಇದೇ ಬರುವ ಫೆ.20ರಂದು ಕೋಟದಲ್ಲಿ ಸಮಾಜಸೇವಕ ಆನಂದ್ ಸಿ ಕುಂದರ್ ಹುಟ್ಟುಹಬ್ಬದ ಅಮೃತಮಹೋತ್ಸವ ಹಿನ್ನಲೆಯಲ್ಲಿ ಬೃಹತ್ ಗೋ ಕರುಗಳ ಸ್ಪರ್ಧೆ, ಪ್ರದರ್ಶನ,ಹಾಗೂ ರಾಸುಗಳ ಹಾಲು ಕರೆಯುವ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಶುಕ್ರವಾರ ಕೋಟ ಸಹಕಾರಿ ವ್ಯವಸಾಯಕ ಸಂಘದ ಕಛೇರಿಯಲ್ಲಿ ಜರಗಿತು.

    ಕೋಟ ಸಹಕಾರಿ ವ್ಯವಸಾಯಕ ಸಂಘದ ಅದ್ಯಕ್ಷ ಜಿ ತಿಮ್ಮ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆನಂದ್ ಸಿ ಕುಂದರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.

    ಬ್ರಹ್ಮಾವರ ತಾಲೂಕು ಪಶುಪಾಲನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಪ್ರದೀಪ್ ಕುಮಾರ್ ,ಕೋಟ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್, ಕೋಟ ಸಿ ಎ ಬ್ಯಾಂಕ್ ಸಿ ಇ ಒ ಶರತ್ ಕುಮಾರ್ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೆ.ಎಂ.ಎಫ್ ಇದರ ವೈದ್ಯಾಧಿಕಾರಿ ಡಾ. ನಿಜಾಮ್ ಪಾಟೀಲ್, ಮಾಜಿ ನಿರ್ದೇಶಕಿ ಜಾನಕಿ ಹಂದೆ, ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ್ ಕುಂದರ್, ಕೋಟ ಗ್ರಾ.ಪಂ ಸದಸ್ಯ ಅಜಿತ್ ದೇವಾಡಿಗ, ವಿವಿಧ ಭಾಗಗಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

  • ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿಯ ಬಾಲಾಜಿ ಭಜನೋತ್ಸವ 2024, ಕುಣಿತ ಭಜನಾ ಸ್ಪರ್ಧೆ

    ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿಯ ಬಾಲಾಜಿ ಭಜನೋತ್ಸವ 2024, ಕುಣಿತ ಭಜನಾ ಸ್ಪರ್ಧೆ

    ಪೋಷಕರು ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು- ಬಾಳೆಕುದ್ರು ಶ್ರೀ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆ ಭಜನೆಗಳಿಂದ ಸಾಧ್ಯ ಎಂಬುವುದು ಪ್ರಸ್ತುತ ಭಜಕರ ಮೂಲಕ ತಿಳಿದುಕೊಳ್ಳಬೇಕಾಗಿದೆ ಎಂದು ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.

    ಶನಿವಾರ ಶ್ರೀ ಬ್ರಹ್ಮಸ್ಥಾನ ಪಾಂಡೇಶ್ವರದಲ್ಲಿ ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಪಾಂಡೇಶ್ವರ, ಸಾಸ್ತಾನ ಶ್ರೀ ಬಾಲಾಜಿ ಭಜನೋತ್ಸವದ 15ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಆಶ್ರೀವಚನ ನೀಡಿ ಮಾತನಾಡಿ ಮನೆಯಲ್ಲಿ ಅಥವಾ ಶಾಲೆಯಲ್ಲಿ ಸಿಗಬೇಕಾದ ಸಂಸ್ಕಾರ ಸಮರ್ಪಕವಾಗಿ ಸಿಗುತ್ತಿಲ್ಲ, ಪೋಷಕರು ಮಕ್ಕಳಿಗೆ ನೈಜ ಸಂಸ್ಕಾರ ತಿಳಿಹೇಳುತ್ತಿಲ್ಲ ಇತ್ತ ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣಗೊಳ್ಳುತ್ತಿದೆ ಹೀಗಾದರೆ ಮಕ್ಕಳ ಭವಿಷ್ಯ ಭದ್ರ ಬುನಾದಿ ಹಾಕುವರಾರು ಎಂದು ವಿಷಾದ ವ್ಯಕ್ತಪಡಿಸಿ, ಭಾರತೀಯ ಸಂಸ್ಕ್ರತಿಯನ್ನು ವಿದೇಶಿಯರು ಅಳವಡಿಸಿಕೊಳ್ಳುತ್ತಿದ್ದಾರೆ ನಾವುಗಳು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ ಹೀಗಾದರೆ ಮುಂದಿನ ದಿನಗಳು ಕ್ಲಿಷ್ಟಕರವಾಗುವುದರಲ್ಲಿ ಅನಯಮಾನವೇ ಇಲ್ಲ ಈ ದಿಸೆಯಲ್ಲಿ ಮನೆಯಲ್ಲಿ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲು ಪೋಷಕರು ಮುಂದಡಿ ಇಡಬೇಕಾಗಿದೆ ಎಂದರು.

    ಪಾಂಡೇಶ್ವರ ಅಷ್ಟಾಂಗ ಯೋಗಗುರುಕುಲದ ಮುಖ್ಯಸ್ಥ ವಿದ್ವಾನ್ ಡಾ.ವಿಜಯ್ ಮಂಜರ್ ಶುಭನುಡಿಗಳನ್ನಾಡಿ ಭಕ್ತಿಯನ್ನೆ ಕೇಂದ್ರವಾಗಿಸಿ ಸಂಘಸಂಸ್ಥೆಗಳು ಹುಟ್ಟಿಕೊಳ್ಳಬೇಕು ಆ ಮೂಲಕ ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಬೆಳೆಯಬೇಕು, ತಾಳ ಹಿಡಿಯುವ ಕೈಗಳು ಮೊಬೈಲ್ ಹಿಡಿಯುವ ಸ್ಥಿತಿಗೆ ಬಂದು ತಲುಪಿದೆವು ಆದರೆ ಕೆಲವೊಂದು ಭಾಗಗಳಲ್ಲಿ ಪುಟಾಣಿಗಳ ಕೈಯಲ್ಲಿ ಭಜನಾಸಂಕಿರ್ತನಾ ಮನಸ್ಥಿತಿ ಆಶಾದಾಯಕ ಬೆಳವಣಿಗೆಯಾಗಿದೆ, ಭಕ್ತಿ ಎನ್ನುವುದು ಪ್ರೇಮದ ಸಂಕೇತವಾಗಿದೆ, ಆ ಮೂಲಕ ಭಗವಂತನನ್ನು ಸನಿಹದಲ್ಲಿ ನೋಡುವಂತರಾಗಿ ಪ್ರತಿ ಮನೆ ಮನದಲ್ಲೂ ಭಜನೆ ಸಂಸ್ಕಾರ ಬೆಳೆಯಲಿ ಆ ಮೂಲಕ ಮಾನಸಿಕ ನೆಮ್ಮದಿ ಭಕ್ತಿಯ ಪರಾಕಾಷ್ಠೆ ನೆಲೆಯೂರುವಂತ್ತಾಗಲಿ ಎಂದರು.

    ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಭಜನಾ ಮಂಡಳಿ ಪಾಂಡೇಶ್ವರ ಇದರ ಹಿರಿಯ ಭಜಕ ಶಿವಣ್ಣ ಇವರನ್ನು ಸನ್ಮಾನಿಸಲಾಯಿತು.

    ಅಧ್ಯಕ್ಷತೆಯನ್ನು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್, ಶ್ರೀ ಬ್ರಹ್ಮಶ್ರೀ ಬಿಲ್ಲವ ಸೇವಾ ಸಂಘ ಬ್ರಹ್ಮಬೈದರ್ಕಳ ಗೋಳಿಗರಡಿ ಇದರ ಅಧ್ಯಕ್ಷ ಎಂ.ಸಿ ಚಂದ್ರಶೇಖರ, ಐರೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಪಾಂಡೇಶ್ವರ ರಕ್ತೇಶ್ವರ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ, ಉದ್ಯಮಿ ಶೇಖರ್ ಪೂಜಾರಿ ಮೂಡಕಟ್ಟು, ಉದ್ಯಮಿಗಳಾದ ವಿಕ್ರಮ್ ಮಂಜರ್, ನಿಲೇಶ್ ಪೂಜಾರಿ ಉಪಸ್ಥಿತರಿದ್ದರು.

    ಕುಣಿತ ಭಜನಾ ಸ್ಪರ್ಧೆಯಲ್ಲಿ ಮಿಂದೆದ್ದ ಬಾಲ ಭಜಕರು
    ಭಾರತೀಯ ಸಂಸ್ಕೃತಿಯಲ್ಲಿ ಭಜನೆ ತನ್ನದೆ ಆದ ವೈಶಿಷ್ಟ್ಯತೆಯನ್ನು ಹೊಂದಿದೆ ಆದರೆ ಬದಲಾದ ಕಾಲಘಟ್ಟದಲ್ಲಿ ಭಜನೆ ಎಂಬುವುದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಬಂದಿತು.ಆದರೆ ದಾಸಶ್ರೇಷ್ಠರು ನೀಡಿದ ಭಜನೆಕ್ಕೆ ಅಂತ್ಯ ಎಂಬುವುದೇ ಇಲ್ಲ ಎನ್ನುವಂತೆ ಇಲ್ಲಿನ ಕರಾವಳಿ ಕಡಲ ತಟದಲ್ಲಿ ಹಿರಿಯ ಭಜಕರು ಭಜನೆಯನ್ನೆ ಜೀವಾಳವಾಗಿರಿಸಿಕೊಂಡು ಮೀನುಗಾರಿಗೆ ವೃತ್ತಿ ಸೇರಿದಂತೆ ಇನ್ನಿತರ ಕಾಯಕದಲ್ಲಿ ಮಗ್ನರಾಗುತ್ತಾ ಬಂದಿದ್ದಾರೆ.

    ಅದರಲ್ಲಿ ವಿಶೇಷವಾಗಿ ಭಜನೆ ದಿನದಿಂದ ದಿನಕ್ಕೆ ವಿಶೇಷತೆ ಪಡೆದುಕೊಂಡಿತ್ತಲ್ಲದೆ.ಪ್ರಸ್ತುತ ವಿದ್ಯಮಾನದಲ್ಲಿ ಬಾಲಭಜಕರಿಗೆ ತನ್ನ ಭಜನೆಯನ್ನು ಬಳುವಳಿಯಾಗಿ ನೀಡಿದ್ದಾರೆ ಇದಕ್ಕೆ ಪುಷ್ಠಿ ನೀಡುವಂತೆ ಅವಿಭಜಿತ ಜಿಲ್ಲೆಗಳಲ್ಲಿ ಬಹು ಪ್ರಾಮುಖ್ಯತೆ ಪಡೆದುಕೊಂಡ ಕುಣಿತ ಭಜನೆ ವಿಶೇಷವಾಗಿ ಪುಟಾಣಿ ಆಕರ್ಷಿಸಿ ಪ್ರತಿ ಊರು ಕೇರಿಗಳಲ್ಲಿ ಕುಣಿತ ಅಥವಾ ಕುಳಿತು ಭಜನೆ ಪಾಡುವ ಕಾರ್ಯ ನಡೆಯುತ್ತಿದೆ.

    ಪಾಂಡೇಶ್ವರದಲ್ಲಿ ಮಿಂದೆದ್ದ ಬಾಲ ಭಜಕರು
    ಪಾಂಡೇಶ್ಚರದಲ್ಲಿ ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ತನ್ನ 15ನೇ ವರ್ಷದ ವರ್ಷಾಚರಣೆ ಅಂಗವಾಗಿ ಶ್ರೀ ಬಾಲಾಜಿ ಭಜನೋತ್ಸವ ಮಕ್ಕಳ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಡಪಿ ಜಿಲ್ಲೆಗಳಿಂದ ಒಟ್ಟು 15 ಬಾಲಭಜಕರ ತಂಡಗಳು ಈ ಭಜನೋತ್ಸವದಲ್ಲಿ ಪಾಲ್ಗೊಂಡರಲ್ಲದೆ ನೋಡುಗರ ಕಣ್ಮನ ಸೆಳೆದರು, ಅಲ್ಲದೆ ವಿವಿಧ ರೀತಿಯ ದಾಸರ ಭಕ್ತಿಗೀತೆಗಳನ್ನು ತನ್ನ ವಿವಿಧ ಭಂಗಿಯ ಕುಣಿತದಲ್ಲಿ ಮೇಳೈಸಿದರು.

    ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ ಕರಾವಳಿಯ ನೆಚ್ಚಿನ ಸಂಸ್ಕೃತಿಯಲ್ಲಿ ಭಜನೆಯೂ ಒಂದು ಆ ಕಾಲಘಟ್ಟದಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಭಜನೆ ಪಾಡಿದರೆ ಮಾತ್ರ ಊಟ ಹಾಕುತ್ತಿದ್ದರು ಆದರೆ ಇಂದು ವೈಭೋಗದ ಜೀವನದಲ್ಲಿ ಭಜನೆಯನ್ನೆ ಮರೆಯುವ ಕಾಲಕ್ಕೆ ಬಂದು ನಿಂತಿದ್ದೇವೆ,ಭಗವಂತನನ್ನು ಹತ್ತಿರದಿಂದ ನೋಡುವ ಸಾಧನ ಇದ್ದರೆ ಅದು ಭಜನೆಯಿಂದ ಮಾತ್ರ ಸಾಧ್ಯ ಈ ದಿಸೆಯಲ್ಲಿ ಪ್ರತಿಯೊಂದು ಮನೆಯೂ ಭಜಕರ ಸಾನಿಧ್ಯವಾಗಲಿ ಆ ಮೂಲಕ ಭಕ್ತಿರ ರಸಧಾರೆ ವಿಶ್ವವ್ಯಾಪಿ ಪಸರಿಸಲಿ ಎಂದುಹಾರೈಸಿದರು.

    ವಿಶೇಷತೆ
    ಮಧ್ಯಾಹ್ನ 2.30ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಮೆರವಣಿಗೆ ಶ್ರೀ ಶಂಕರನಾರಾಯಣ ದೇವಸ್ಥಾನ ತೀರ್ಥಬೈಲುನಿಂದ ಶ್ರೀ ಬ್ರಹ್ಮಸ್ಥಾನ, ಪಾಂಡೇಶ್ವರ ತನಕ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮ,ರಾತ್ರಿ ಗಂಟೆ: 7.00ಕ್ಕೆ ಸಾರ್ವಜನಿಕ ಮಹಾಅನ್ನಸಂತರ್ಪಣೆ ಜರಗಿತು.

  • ಕೋಟ :ಮಾಜಿ ಸಚಿವ ಕೋಟ ಮಂತ್ರಾಕ್ಷತೆಯಲ್ಲಿ ಭಾಗಿ ಕೋಟತಟ್ಟು ವಿವಿಧ ಭಾಗಗಳಲ್ಲಿ ಶ್ರೀ ರಾಮ ಮಂತ್ರಾಕ್ಷತೆ

    ಕೋಟ :ಮಾಜಿ ಸಚಿವ ಕೋಟ ಮಂತ್ರಾಕ್ಷತೆಯಲ್ಲಿ ಭಾಗಿ ಕೋಟತಟ್ಟು ವಿವಿಧ ಭಾಗಗಳಲ್ಲಿ ಶ್ರೀ ರಾಮ ಮಂತ್ರಾಕ್ಷತೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟತಟ್ಟು ಪಡುಕರೆ, ಹಂದಟ್ಟು, ಚೆಚ್ಚಕೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಶ್ರೀರಾಮ ಭಕ್ತರು ಮಂತ್ರಾಕ್ಷತೆಯನ್ನು ನೀಡಿ ಅದರ ಮಹತ್ವವನ್ನು ತಿಳಿಪಡಿಸಿದರು. ಕೋಟ ಗ್ರಾಮಪಂಚಾಯತ್, ಸಾಲಿಗ್ರಾಮ ಪಟ್ಟಣಪಂಚಾಯತ್, ಐರೋಡಿ ಗ್ರಾ.ಪಂ, ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿ,ವಡ್ಡರ್ಸೆ ಗ್ರಾಮಪಂಚಾಯತ್ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ನೀಡಿದರು.

    ಕೋಟತಟ್ಟುವಿನಲ್ಲಿ ಮಾಜಿ ಸಚಿವ ಭಾಗಿ
    ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟತಟ್ಟು ಬಾರಿಕೆರೆ ವ್ಯಾಪ್ತಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಳಿ ಪಂಚೆ ಕೇಸರಿ ಶಾಲು ಧರಿಸಿ ಮನೆ ಮನೆಗೆ ತೆರಳಿ ಶ್ರೀ ರಾಮ ಮಂತ್ರಾಕ್ಷತೆ ನೀಡಿ ಅದರ ಮಹತ್ವ ಸಾರಿದರು. ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಇದ್ದರು.

  • ಪಡುಕೋಣೆ :ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

    ಪಡುಕೋಣೆ :ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬೈಂದೂರು ತಾಲೂಕಿನ ಪಡುಕೋಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಜಿ ಫೌಂಡೇಶನ್, ಕುಂದಾಪುರ ಇವರ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡ, ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ, ಶ್ರೀ ಮಹಾವಿಷ್ಣು ಫ್ರೆಂಡ್ಸ್ ಸರ್ಕಲ್, ಪಡುಕೋಣೆ ಫ್ರೆಂಡ್ಸ್ ಪಡುಕೋಣೆ, ವಿಶ್ವ ದೇವಾಡಿಗ ಮಹಾ ಮಂಡಲ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ಪಡುಕೋಣೆ ಎಜುಕೇಶನ್ & ಸ್ಪೋಟ್ಸ್ ಪ್ರಮೋಟರ್ಸ್, ನಾಡ, ಜನ ಶಕ್ತಿ ಸೇವಾ ಟ್ರಸ್ಟ್ (ರಿ.), ನಾಡ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.

    ಉದ್ಯಮಿ ಡಾ.ವಿಜಯಕೃಷ್ಣ ಪಡುಕೋಣೆ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರಿಗೂ ಅಗತ್ಯವಾಗಿದ್ದು,ಕಾಲ ಕಾಲಕ್ಕೆ ಸೂಕ್ತವಾದ ತಪಾಸಣೆ ಮಾಡಿಕೊಂಡಾಗ ಮಾತ್ರ ಪ್ರಾಥಮಿಕ ಹಂತದಲ್ಲಿಯೇ ಆರೋಗ್ಯದ ಗುಣಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಶಿಬಿರಗಳನ್ನು ಆಯೋಜಿಸುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.

    ಎಲ್.ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ ಪಡುಕೋಣೆ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬರಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇವೊಂದು ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಂಡು ಸಣ್ಣ ಸಣ್ಣ ವಾಟ್ಸ್ ಆ್ಯಪ್ ಗ್ರೂಪ್ ನಿಂದಲೂ ಜನ ಸೇವಾ ಕಾರ್ಯಗಳನ್ನು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

    ಈ ಸಂದರ್ಭದಲ್ಲಿ ಜನಶಕ್ತಿ ಸೇವಾ ಟ್ರಸ್ಟ್ (ರಿ) ಫಿಲಿಪ್ ಡಿ’ಸಿಲ್ವ, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ, ಆನಗೋಡು ತ್ರಾಸಿ ನಾಟಿ ವೈದ್ಯ ಮಾಕ್ಸಿಮ್ ಓಲವೇರಾ, ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ಸ್ಥಾಪಕ ಗಣೇಶ್ ಶೇರಿಗಾರ್ ಇವರನ್ನು ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಕುಂದಾಪುರ ಉಪವಿಭಾಗೀಯ ಸರಕಾರಿ ಆಸ್ಪತ್ರೆಯ ವೈದ್ಯಕೀಯ ತಜ್ಜ ಡಾ.ನಾಗೇಶ್, ದೇವಾಡಿಗ ಅಕ್ಷಯ ಕಿರಣ ಪೌಂಡೇಶನ್ ಎಂ.ಡಿ.ಮಧುಕರ ದೇವಾಡಿಗ, ದೇವಾಡಿಗ ವಿಶ್ವ ಮಹಾ ಮಂಡಲದ ಉಪಾಧ್ಯಕ್ಷ ಡಾ.ದೇವರಾಜ್ ಕೆ., ಪಡುಕೋಣೆ ಎಜುಕೇಶನ್ ಹಾಗೂ ಸ್ಪೋರ್ಟ್ಸ್ ಪ್ರಮೋಟರ್ಸ ನಾಡ ಅಧ್ಯಕ್ಷ ಡಾಲ್ಫಿ ಡಿಸಿಲ್ವ,ಪಡುಕೋಣೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ, ಹಿರಿಯ ಸಂಶೋಧನಾ ವಿಜ್ಜಾನಿ ಪೂರ್ಣಿಮಾ ದಯಾನಂದ ದೇವಾಡಿಗ, ನಾಡ ಗ್ರಾ.ಪಂ.ಸದಸ್ಯ ಅರವಿಂದ ಪೂಜಾರಿ, ರಘರಾಮ ದೇವಾಡಿಗ ಆಲೂರು, ಕುಸುಮಾ ನಾಗರಾಜ ಪಡುಕೋಣೆ ಉಪಸ್ಥಿತರಿದ್ದರು.

    ಎಲ್.ಜಿ.ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ.ಪಡುಕೋಣೆ ಪ್ರಾಸ್ತಾವಿಕ ಮಾತನಾಡಿದರು. ರಾಮ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ನಿಹಾರಿಕ ದೇವಾಡಿಗ ಪ್ರಾರ್ಥಿಸಿದರು. ಪುರುಷೋತ್ತಮ ವಂದಿಸಿದರು‌.