Category: ಸುದ್ದಿ

  • ಕುಂದಾಪುರ ರೈಲು ನಿಲ್ದಾಣದಲ್ಲಿ ಇನ್ನು ಮುಂದೆ ಪ್ರಿಪೈಡ್ ಅಟೋ ರಿಕ್ಷಾ ಕೌಂಟರ್ ಆರಂಭ

    ಕುಂದಾಪುರ ರೈಲು ನಿಲ್ದಾಣದಲ್ಲಿ ಇನ್ನು ಮುಂದೆ ಪ್ರಿಪೈಡ್ ಅಟೋ ರಿಕ್ಷಾ ಕೌಂಟರ್ ಆರಂಭ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡ್ ಅಟೋ ರಿಕ್ಷಾ ಕೌಂಟರ್ ಸೋಮವಾರದಿಂದ ಆರಂಭಗೊಳ್ಳಲಿದ್ದು, ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ .

    ಬೆಂಗಳೂರು ಮುಂಬೈಗಳಿಂದ ಬೆಳಿಗ್ಗೆ ಬರುವ ಪ್ರಯಾಣಿಕರಿಂದ ಹಿಡಿದು ,ಗೋವಾ ,ಕೇರಳಗಳಿಂದ ಬರುವ ಅಸಂಖ್ಯಾತ ರೈಲು‌ ಪ್ರಯಾಣಿಕರಿಗೆ ಈ‌ ಪ್ರೀಪೇಯ್ಡ್ ಅಟೋ ರಿಕ್ಷಾ ಕೇಂದ್ರ ವರದಾನವಾಗಲಿದೆ.

    ಕಳೆದ ಹಲವಾರು ವರ್ಷಗಳಿಂದ ಪತ್ರಿಕೆಗಳ ವಾಚಕರ ವಿಭಾಗ ಹಾಗು ಪುರವಣಿಗಳಲ್ಲಿ ಸಾರ್ವಜನಿಕರ ಪ್ರೀಪೇಯ್ಡ್ ಬೇಡಿಕೆ ನಿರಂತರವಾಗಿ ಬರುತಿದ್ದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಪ್ರೀಪೇಯ್ಡ್ ಆಟೋ ಟೆಂಡರ್ ಕರೆದಿತ್ತು .

    ಇದರ ಜತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಆಯೋಜಿಸಿದ್ದ
    ಕೊಂಕಣ ರೈಲ್ವೆ ಅದಿಕಾರಿಗಳ ಸಭೆಯಲ್ಲೂ ಪ್ರಯಾಣಿಕರ ದೂರು ದುಮ್ಮಾನಗಳ ಆಲಿಸುವಿಕೆಯ ಸಂದರ್ಭದಲ್ಲೂ
    ಪತ್ರಿಕಾ ಮಾದ್ಯಮಗಳು ಜನರ ಸಮಸ್ಯೆಯನ್ನು ಅಧಿಕಾರಿಗಳ ಮುಂದಿಟ್ಟಿದ್ದರು .

    ಕುಂದಾಪುರ ರೈಲು‌ ನಿಲ್ದಾಣದಲ್ಲಿ ಇಳಿದು ಯಾವುದೇ ಭಾಗಕ್ಕೂ ರಾಜ್ಯ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಅಟೋ ಬಾಡಿಗೆಗೆ ಲಭ್ಯವಾಗಲಿದೆ.

    ಕುಂದಾಪುರ ರೈಲು‌ ನಿಲ್ದಾಣದ ಹಲವಾರು ಜನ ರಿಕ್ಷಾ ಚಾಲಕರು
    ಪ್ರಯಾಣಿಕರ ದೂರು ಗೊಂದಲಗಳ ನಿವಾರಿಸಲು ಪ್ರಿಪೈಡ್ ಅಟೋ ಆರಂಭವಾಗಲಿ ಎಂದೇ ಬಯಸಿದ್ದು‌ ಕುಂದಾಪುರ ರೈಲು ಪ್ರಯಾಣಿಕರ‌ ಹಿತರಕ್ಷಣಾ ಸಮಿತಿಯ ಗಮನಕ್ಕೆ ತಂದಿದ್ದರು‌.

    ಪ್ರಿಪೈಡ್ ಅಟೋ ಆರಂಭವಾಗುವ ಮೂಲಕ
    ಪ್ರಯಾಣಿಕರು ಮನೆಗಳಿಂದ ಅಥವಾ ಪರಿಚಯದ ವಾಹನಗಳನ್ನು ನಿಲ್ದಾಣಕ್ಕೆ ಮುಂಚಿತವಾಗಿ ಬರ ಹೇಳಬೇಕಾದ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದ್ದು ಈ ಮೂಲಕ ನಿಲ್ದಾಣದ ಪರಿಸರದ ಅಟೋ ಚಾಲಕರಿಗೇ ಬಾಡಿಗೆ ಹೆಚ್ವಾಗುವ ಆಶಾ ಭಾವನೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಗಿದೆ.

    ಗೋವಾ ಬೆಂಗಳೂರಿನಿಂದ ಬರುವ ಟಿಕೇಟ್ ದರಕ್ಕಿಂತ ನಿಲ್ದಾಣದಿಂದ ಕುಂದಾಪುರಕ್ಕೆ ತೆರಳುವ ಅಟೋ ಬಾಡಿಗೆ ಜಾಸ್ತಿ ಎಂಬ ಬಗ್ಗೆ ನಿರಂತರವಾಗಿ ಸಮಾಜಿಕ ಜಾಲತಾಣಗಳಲ್ಲಿ ಬರುತಿದ್ದ ದೂರುಗಳಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದ್ದು
    ಜನಸಾಮಾನ್ಯರು ಈ ಸೌಲಭ್ಯದ ಸದುಪಯೋಗ ಪಡೆಯ ಬಹುದು ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ತಿಳಿಸಿದೆ.

  • ಕುಂದಾಪುರ: ನೀತಾ ಎ. ಶೆಟ್ಟಿಗೆ ಮಹಿಳಾ ಸಾಧಕಿ ಎಕನಾಮಿಕ್ಸ್ ಅವಾರ್ಡ್

    ಕುಂದಾಪುರ: ನೀತಾ ಎ. ಶೆಟ್ಟಿಗೆ ಮಹಿಳಾ ಸಾಧಕಿ ಎಕನಾಮಿಕ್ಸ್ ಅವಾರ್ಡ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮುಂಬಯಿನಲ್ಲಿ ಎಕನಾಮಿಕ್ ಟೈಮ್ಸ್ ವತಿಯಿಂದ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಶಿಕ್ಷಣ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್‌ನ ಪ್ರಿನ್ಸಿಪಾಲ್ ನೀತಾ ಎ. ಶೆಟ್ಟಿ ಯವರಿಗೆ ಶ್ರೇಷ್ಠ ಮಹಿಳಾ ಸಾಧಕಿ ಎಕನಾಮಿಕ್ಸ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತಿ ಉದ್ಯಮಿ ಅಭಿನಂದನ್ ಶೆಟ್ಟಿ ಅವರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.

  • ತ್ರಾಸಿ :ಡಾ. ಹೆಚ್.ಎಸ್.ಶೆಟ್ಟರಿಗೆ ಸನ್ಮಾನ, ತ್ರೀ ಹಂಡ್ರೆಡ್ ಟ್ರೀಸ್, ಸಮೃದ್ಧ ಬೈಂದೂರು ಯೋಜನೆ ಅನಾವರಣ

    ತ್ರಾಸಿ :ಡಾ. ಹೆಚ್.ಎಸ್.ಶೆಟ್ಟರಿಗೆ ಸನ್ಮಾನ, ತ್ರೀ ಹಂಡ್ರೆಡ್ ಟ್ರೀಸ್, ಸಮೃದ್ಧ ಬೈಂದೂರು ಯೋಜನೆ ಅನಾವರಣ

    ಸಮೃದ್ಧ ಬೈಂದೂರು ಕಟ್ಟಬೇಕೆಂಬ ಪರಿಕಲ್ಪನೆ ಮೂಡಿರುವುದು ನಿಜವಾಗಿಯೂ ಅಧ್ಭುತ ಪರಿಕಲ್ಪನೆ – ಕೋಟ ಶ್ರೀನಿವಾಸ ಪೂಜಾರಿ
    ಕುಂದಾಪುರ ಮಿರರ್ ಸುದ್ದಿ…
    ಗಂಗೊಳ್ಳಿ : ಕನಸಗಳೇ ಇಲ್ಲದೆ ಸಮಾಜ ಕಟ್ಟುವುದು ಕಷ್ಟ. ಅನೇಕ ವರ್ಷಗಳಿಂದ ಸಮೃದ್ಧ, ಶಕ್ತಿಶಾಲಿ, ಸ್ವಾಭಿಮಾನಿ ಭಾರತ ಕಟ್ಟಬೇಕೆಂದು ಕೋಟ್ಯಾಂತರ ಮಂದಿ ಭಾರತೀಯರು ಕನಸು ಕಂಡಿದ್ದರೆ, ಇಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಸಮೃದ್ಧ ಬೈಂದೂರು ಕಟ್ಟಬೇಕೆಂಬ ಪರಿಕಲ್ಪನೆ ಮೂಡಿರುವುದು, ಸಮೃದ್ಧ ಬೈಂದೂರು ಕಟ್ಟಬೇಕೆಂಬ ಕನಸು ಕಂಡಿರುವುದು ನಿಜವಾಗಿಯೂ ಅಧ್ಭುತ ಪರಿಕಲ್ಪನೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ತ್ರಾಸಿಯ ಕೊಂಕಣಿ ಖಾರ್ವಿ ಸಭಾಭವನದಲ್ಲಿ ಶನಿವಾರ ನಡೆದ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ (ಡಾ.ಎಚ್.ಎಸ್.ಶೆಟ್ಟಿ) ಅಭಿನಂದನಾ ಸಮಾರಂಭ, ‘300 TREES’  ಉದ್ಘಾಟನಾ ಸಮಾರಂಭ ಹಾಗೂ ಸಮೃದ್ಧ ಬೈಂದೂರು ಪರಿಕಲ್ಪನೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು ಶೇ.40 ರಷ್ಟು ಹುದ್ದೆಗಳು ಖಾಲಿ ಇದೆ. ಶೇ.1ರಷ್ಟು ಸರಕಾರ ಉದ್ಯೋಗ ಸೃಷ್ಟಿಸಿದರೆ ಸುಮಾರು 6.5 ಲಕ್ಷ ಉದ್ಯೋಗ ಸೃಷ್ಟಿಸಬಹುದು. ಹೀಗಾಗಿ ಸ್ವಉದ್ಯೋಗ, ಗುಡಿ ಕೈಗಾರಿಕೆಗಳಂತಹ ಕಸುಬುಗಳನ್ನು ಮಾಡುವ ಕನಸು ಸಮೃದ್ಧ ಬೈಂದೂರಿನಲ್ಲಿದೆ. ರಾಜ್ಯದಲ್ಲಿರುವ ಸುಮಾರು 45 ಸಾವಿರ ಸರಕಾರಿ ಶಾಲೆಗಳ ಪೈಕಿ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 10 ಸಾವಿರ ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿಗೆ ತಲುಪಲಿದೆ. ಹೀಗಾಗಿ ಸರಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗಾಗಿ ವಿಶಿಷ್ಟ ಯೋಜನೆಯನ್ನು ಸಮೃದ್ಧ ಬೈಂದೂರು ರೂಪಿಸಿರುವುದು ಉತ್ತಮ ಕೆಲಸ. ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 37 ಜನರ ಆರೋಗ್ಯ ಸುಧಾರಣೆಗೆ ಮುಂದಾಗಿರುವುದು ಕ್ರಾಂತಿಕಾರಿ ಕಲ್ಪನೆಯಾಗಿದ್ದು, ಎದುರಾಗಲಿರುವ ಸವಾಲುಗಳನ್ನು, ಸಮಸ್ಯೆಗಳನ್ನು ದಾಟಿ ಸಮೃದ್ಧ ಬೈಂದೂರು ಪರಿಕಲ್ಪನೆ ಯಶಸ್ವಿಯಾಗಲಿ ಎಂದು ಹಾರೈಸಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೈಂದೂರು ವಿಧಾನಸಭಾ ಕ್ಷೇತ್ರವು ಅಭಿವೃದ್ಧಿಗೆ ಪೂರಕವಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. ಸ್ಪಷ್ಟವಾದ ಯೋಜನೆಗಳು, ಪೂರಕವಾದ ಸಂಪನ್ಮೂಲಗಳು, ಅಗತ್ಯವಾದ ಅನುಷ್ಠಾನಗಳ ಕೊರತೆಯಿಂದ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ. ಬೈಂದೂರಿನ ಅಭಿವೃದ್ಧಿಯಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜೊತೆಯಲ್ಲಿ ಪ್ರವಾಸೋದ್ಯಮ, ತಂತ್ರಜ್ಞಾನ, ವಾಣಿಜ್ಯೀಕರಣ, ಮತ್ಸ್ಯೋದ್ಯಮ ಕ್ಷೇತ್ರಗಳ ಬೆಳವಣಿಗೆಗೆ ಇರುವಂತಹ ವಿಪುಲ ಅವಕಾಶಗಳನ್ನು ಬಳಸಿಕೊಂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯತ್ತ ಹೆಜ್ಜೆ ಹಾಕುವ ಕಾರ್ಯಕ್ರಮವೇ ಸಮೃದ್ಧ ಬೈಂದೂರು ಪರಿಕಲ್ಪನೆ ಎಂದರು.
    ವಿಸ್ತಾರ ನ್ಯೂಸ್‍ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಶುಭಾಶಂಸನೆಗೈದರು. ಸರಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಯ ‘300 Trees’  ಯೋಜನೆಯನ್ನು ಅನಾವರಣಗೊಳಿಸಿದ ಡಾ.ಎಚ್.ಎಸ್.ಶೆಟ್ಟಿ ಶುಭ ಹಾರೈಸಿದರು.
    ಸಮೃದ್ಧ ಬೈಂದೂರು ಲೋಗೋವನ್ನು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಫೇಸ್‍ಬುಕ್ ಪೇಜ್‍ನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆರಾಡಿ ಚಂದ್ರಶೇಖರ ಶೆಟ್ಟಿ, ಇನ್ಸ್ಟಾಗ್ರಾಂನ್ನು ಕಾರವಾರ ಮೆಡಿಕಲ್ ಕಾಲೇಜಿ ಪ್ರೊಫೆಸರ್ ಡಾ.ಅಣ್ಣಪ್ಪ ಶೆಟ್ಟಿ, ಎಕ್ಸ್ (ಟ್ವಿಟ್ಟರ್)ನ್ನು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಯೂ ಟ್ಯೂಬ್‍ನ್ನು ಭಗವದ್ಗೀತೆ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕ ರಾಮಕೃಷ್ಣ ಶೇರಿಗಾರ್ ಅನಾವರಣಗೊಳಿಸಿದರು.
    ಇದೇ ಸಂದರ್ಭ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ‘ಡಾಕ್ಟರ್ ಆಫ್ ಸೈನ್ಸ್ ಗೌರವ ಪುರಸ್ಕøತ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಮಂಗಳೂರಿನ ಚಾರ್ಟೆಡ್ ಎಕೌಂಟೆಂಟ್ ಶಾಂತಾರಾಮ ಶೆಟ್ಟಿ, ಮುಂಬೈನ ಉದ್ಯಮಿ ಜನಾರ್ದನ ದೇವಾಡಿಗ ಉಪಸ್ಥಿರಿದ್ದರು.
    ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಬಿ.ಎಸ್.ಸುರೇಶ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು.
  • ಸಹಕಾರಿ ವ್ಯವಸಾಯಕ ಸಂಘ ಕೋಟ ಸಿಬ್ಬಂದಿ ತರಬೇತಿ ಕಾರ್ಯಾಗಾರ ಮತ್ತು ವಿವೇಕ ವಿದ್ಯಾಸಂಸ್ಥೆಯ ನೂತನ ಕಟ್ಟಡ ನಿರ್ಮಾಣ ಯೋಜನೆಗೆ ಸಂಘದ ವತಿಯಿಂದ ಧನಸಹಾಯ ಹಸ್ತಾಂತರ ಕಾರ್ಯಕ್ರಮ

    ಸಹಕಾರಿ ವ್ಯವಸಾಯಕ ಸಂಘ ಕೋಟ ಸಿಬ್ಬಂದಿ ತರಬೇತಿ ಕಾರ್ಯಾಗಾರ ಮತ್ತು ವಿವೇಕ ವಿದ್ಯಾಸಂಸ್ಥೆಯ ನೂತನ ಕಟ್ಟಡ ನಿರ್ಮಾಣ ಯೋಜನೆಗೆ ಸಂಘದ ವತಿಯಿಂದ ಧನಸಹಾಯ ಹಸ್ತಾಂತರ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಹಕಾರಿ ವ್ಯವಸಾಯಕ ಸಂಘ ಕೋಟ, ಇವರ ಆಶ್ರಯದಲ್ಲಿ ಸಂಘದ ಸಿಬ್ಬಂದಿಯವರಿಗೆ ತರಬೇತಿ ಕಾರ್ಯಾಗಾರ ಇತ್ತೀಚಿಗೆ ಸಂಘದ ಪ್ರಧಾನ ಕಛೇರಿಯ ಬಿ. ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಜರಗಿತು.

    ಸಂಘದ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಶೆಟ್ಟಿ ಇವರು ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮತ್ತು ತರಬೇತಿ ಕಾರ್ಯಗಾರದ ಆಗತ್ಯತೆಯ ಬಗ್ಗೆ ವಿವರಿಸಿದರು.

    ಸಂಘದ ಅಧ್ಯಕ್ಷರಾದ ಜಿ. ತಿಮ್ಮ ಪೂಜಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಿಬ್ಬಂದಿಯವರು ಗ್ರಾಹಕರಿಗೆ ಸೇವೆ ನೀಡುವ ಸಂದರ್ಭ ಸರಿಯಾದ ಅನುಭವ ಹೊಂದಿ ಸೇವೆ ನೀಡಿದಲ್ಲಿ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವೆಂದು ತಿಳಿಸಿದರು.

    ಸಂಘದ ಸಿಬ್ಬಂದಿಯವರು ತರಬೇತಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ವಿವೇಕ ವಿದ್ಯಾಸಂಸ್ಥೆಯ ನೂತನ ಕಟ್ಟಡ ಕಾಮಗಾರಿ ಯೋಜನೆಗೆ ಸಂಘದ ವತಿಯಿಂದ ಧನಸಹಾಯ ಹಸ್ತಾಂತರ ಕಾರ್ಯಕ್ರಮ ಜರಗಿತು. ಮುಖ್ಯ ಅತಿಥಿಗಳಾಗಿ ವಿವೇಕ ವಿದ್ಯಾ ಸಂಸ್ಥೆ, ಕೋಟ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಪ್ರಭಾಕರ ಮಯ್ಯ, ಜತೆ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ, ವಿವೇಕ ಪದವಿ ಪೂರ್ವ ಕಾಲೇಜು, ಕೋಟ ಇದರ ಪ್ರಾಂಶುಪಾಲರಾದ ಜಗದೀಶ ನಾವಡ, ಸಂಘದ ಉಪಾಧ್ಯಕ್ಷರಾದ ಜಿ. ರಾಜೀವ ದೇವಾಡಿಗ, ನಿರ್ದೇಶಕರಾದ ಕೆ. ಉದಯಕುಮಾರ್ ಶೆಟ್ಟಿ, ಡಾ. ಕೃಷ್ಣ ಕಾಂಚನ್, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ಎಚ್. ನಾಗರಾಜ ಹಂದೆ, ರಂಜಿತ್ ಕುಮಾರ, ಗೀತಾ ಶಂಭು ಪೂಜಾರಿ, ಪ್ರೇಮಾ ಎಸ್. ಪೂಜಾರಿ, ಭಾಸ್ಕರ ಶೆಟ್ಟಿ ಇವರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿವೇಕ ವಿದ್ಯಾ ಸಂಸ್ಥೆ, ಕೋಟ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಪ್ರಭಾಕರ ಮಯ್ಯ ಇವರನ್ನು ಸನ್ಮಾನಿಸಿದರು.

    ವಿವೇಕ ವಿದ್ಯಾಸಂಸ್ಥೆಯ ಕೋರಿಕೆಯ ಮೇರೆಗೆ ಆಡಳಿತ ಮಂಡಳಿಯ ನಿರ್ಣಯದಂತೆ ಮಹಾಸಭೆಯ ಅನುಮೋದನೆ ಪಡೆದು ವಿದ್ಯಾ ಸಂಸ್ಥೆಯ ಒಂದು ಕೊಠಡಿ ನಿರ್ಮಾಣಕ್ಕೆ ಧನಸಹಾಯ ಹಸ್ತಾಂತರಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಸಂಘದ ಸಿಬ್ಬಂದಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

     

  • ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ

    ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‍ನಲ್ಲಿ ಸರ್ಕಾರದ ಆದೇಶದಂತೆ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಯನ್ನು ಅ.7ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‍ನಿಂದ ರಥಬೀದಿ ತನಕ ಜಾಥದ ಮೂಲಕ ಆಚರಿಸಲಾಯಿತು. ಜಾಥದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು-ಮಣೂರು-ಪಡುಕೆರೆಯ ವಿಧ್ಯಾರ್ಥಿಗಳು ಭಾಗವಹಿಸಿದರು,.ಪ.ಪಂ ಮುಖ್ಯಾಧಿಕಾರಿ ಶಿವನಾಯ್ಕ್ ಪ.ಪಂ ಕಿ.ಆರೋಗ್ಯ ನಿರಿಕ್ಷಕಿ ಮಮತಾ, ಸದಸ್ಯರಾದ ಅನಸೂಯ ಹೇರ್ಳೆ, ಸಂಜೀವ ದೇವಾಡಿಗ ಹಾಗೂ ಪಟ್ಟಣ ಪಂಚಾಯತ್‍ನ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.

  • ಕೋಟ :ಕಾರಂತ ಥೀಂ ಪಾರ್ಕ ಕಲೆ-ಸಂಸ್ಕೃತಿಯ ಸೊಬಗು ತಾಣ – ಸಚಿವೆ ಶೋಭಾ ಕರಂದ್ಲಾಜೆ

    ಕೋಟ :ಕಾರಂತ ಥೀಂ ಪಾರ್ಕ ಕಲೆ-ಸಂಸ್ಕೃತಿಯ ಸೊಬಗು ತಾಣ – ಸಚಿವೆ ಶೋಭಾ ಕರಂದ್ಲಾಜೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕಲೆ-ಸಂಸ್ಕೃತಿಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅವುಗಳನ್ನು ಉಳಿಸಿ-ಬೆಳೆಸಬೇಕಾದ ಕಾರ್ಯ ಪ್ರತಿ ಗ್ರಾಮ-ಗ್ರಾಮದಲ್ಲೂ ನಡೆಯಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

    ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಕೋಟತಟ್ಟು ಗ್ರಾ.ಪಂ., ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕಾರಂತ ಹುಟ್ಟೂರ ಪ್ರತಿಷ್ಠಾನ ಆಶ್ರಯದಲ್ಲಿ, ಕಾರಂತ ಜನ್ಮದಿನಾಚರಣೆ, ಹುಟ್ಟೂರು ಪ್ರಶಸ್ತಿ ಪ್ರದಾನ ಪ್ರಯುಕ್ತ ನಡೆಯುತ್ತಿರುವ ಕಾರಂತೋತ್ಸವ ಕಾರ್ಯಕ್ರಮಕ್ಕೆ ಅ.7ರಂದು ಭೇಟಿ ನೀಡಿ ಮಾತನಾಡಿದರು.

    ಗ್ರಾಮೀಣ ಪ್ರದೇಶವೊಂದರಲ್ಲಿ ಕಾರಂತ ಕಲಾಭವನದಂತಹ ಭವ್ಯ ಸಂಸ್ಥೆಯನ್ನು ಕಟ್ಟಿಬೆಳೆಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

    ಗ್ರಾ.ಪಂ. ಅಧ್ಯಕ್ಷ ಸತೀಶ್ ಬಾರಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭ ಕಾರ್ಯಕ್ರಮದ ಸಂಘಟಕರಾದ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಸಚಿವೆ ಶೋಭಾ ಕರಂದ್ಲಾಜೆಯವರನ್ನು ಗೌರವಿಸಿದರು.

    ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಿಲ್ಲಾ ನಿರ್ದೇಶಕಿ ಪೂರ್ಣಿಮಾ, ಕೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್, ಕೋಟತಟ್ಟು ಗ್ರಾ.ಪಂ. ಉಪಾಧ್ಯಕ್ಷೆ ಸರಸ್ವತಿ, ಕೋಟ ಗ್ರಾ.ಪಂ. ಉಪಾಧ್ಯಕ್ಷ ಪಾಂಡು ಮೊದಲಾದವರು ಉಪಸ್ಥಿತರಿದ್ದರು.

    ಪಿಡಿಒ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

  • ಬೈಂದೂರು: ಶನಿವಾರ ತ್ರಾಸಿಯಲ್ಲಿ ಡಾ. ಹೆಚ್.ಎಸ್.ಶೆಟ್ಟರಿಗೆ ಸನ್ಮಾನ, ತ್ರೀ ಹಂಡ್ರೆಡ್ ಟ್ರೀಸ್, ಸಮೃದ್ಧ ಬೈಂದೂರು ಯೋಜನೆ ಅನಾವರಣ

    ಬೈಂದೂರು: ಶನಿವಾರ ತ್ರಾಸಿಯಲ್ಲಿ ಡಾ. ಹೆಚ್.ಎಸ್.ಶೆಟ್ಟರಿಗೆ ಸನ್ಮಾನ, ತ್ರೀ ಹಂಡ್ರೆಡ್ ಟ್ರೀಸ್, ಸಮೃದ್ಧ ಬೈಂದೂರು ಯೋಜನೆ ಅನಾವರಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬೈಂದೂರು ತಾಲೂಕಿನ ತ್ರಾಸಿಯ ಕೊಂಕಣ ಖಾರ್ವಿ ಭವನದಲ್ಲಿ ಶನಿವಾರದಂದು
    ಡಾ.ಹೆಚ್.ಎಸ್.ಶೆಟ್ಟರಿಗೆ ಸನ್ಮಾನ, ತ್ರೀ ಹಂಡ್ರೆಡ್ ಟ್ರೀಸ್ ಉದ್ಘಾಟನೆ ಹಾಗೂ ಸಮೃದ್ಧ ಬೈಂದೂರು ಲೋಕಾರ್ಪಣೆಗೊಳ್ಳಲಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ

    ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉದ್ಯೋಗ, ಆರೋಗ್ಯ, ಶಿಕ್ಷಣ, ಮತ್ಸ್ಯೋದ್ಯಮ ಕೈಗಾರಿಕೆ ಹೀಗೇ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಖಾಸಗೀ ಸಹಭಾಗಿತ್ವದೊಂದಿಗೆ ಅಭಿವೃದ್ಧಿಯತ್ತ ಸಾಗುವ ದಿಟ್ಟ ಹೆಜ್ಜೆಯೇ ತ್ರೀ ಹಂಡ್ರೆಡ್ ಟ್ರೀಸ್ ಮತ್ತು ಸಮೃದ್ದ ಬೈಂದೂರು ಯೋಜನೆ.

    ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಗೌರವ ಡಾಕ್ಟರೇಟ್ ಪಡೆದ ಸಾಧಕ, ಡಾ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಹಾಯಧನ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೇ ಇದೇ ಸಂದರ್ಭ 300 ಶಾಲೆಗಳ ಅಭಿವೃದ್ದಿ ಯೋಜನೆಯ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಲಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿನಂತಿಸಿದ್ದಾರೆ.

  • ಉಡುಪಿ :ಲಸಿಕೆ ವಂಚಿತ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳಿಗೆ ತಪ್ಪದೇ ಲಸಿಕೆ ನೀಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಉಡುಪಿ :ಲಸಿಕೆ ವಂಚಿತ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳಿಗೆ ತಪ್ಪದೇ ಲಸಿಕೆ ನೀಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ : ಇಂದ್ರಧನುಷ್ ಅಭಿಯಾನದಡಿ ನೀಡುತ್ತಿರುವ ಲಸಿಕಾಕರಣಗಳಿಂದ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಲಸಿಕೆ ಪಡೆಯದೇ ಇರುವ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೂರನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮದ ಕುರಿತ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ದೇಶದಾದ್ಯಂತ ಮೂರನೇ ಹಂತಗಳಲ್ಲಿ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಮೊದಲನೇ ಹಾಗೂ ಎರಡು ಹಂತದ ಇಂದ್ರಧನುಷ್ ಲಸಿಕಾಯನ್ನು ನೀಡಲಾಗಿದೆ. ಮೂರನೇ ಹಂತವು ಅಕ್ಟೋಬರ್ 9 ರಿಂದ 14 ರ ವರೆಗೆ ನಡೆಯಲಿದೆ ಎಂದರು.

    ಮೊದಲನೇ ಹಂತದಲ್ಲಿ 3,212 ಮಕ್ಕಳಿಗೆ ಲಸಿಕೆ ನೀಡಲು ಗುರಿ ಹೊಂದಿದ್ದು, 3,203 ಮಕ್ಕಳಿಗೆ ಲಸಿಕೆ ನೀಡಿ, ಶೇ. 99.72 ರಷ್ಟು, 708 ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲು ಗುರಿ ಹೊಂದಿ 708 ಜನರಿಗೂ ಲಸಿಕೆ ನೀಡಿ ಶೇ. 100 ರಷ್ಟು ಪ್ರಗತಿ ಸಾಧಿಸಲಾಗಿದೆ. ಎರಡನೇ ಹಂತದಲ್ಲಿ 1870 ಮಕ್ಕಳಿಗೆ ಗುರಿ ಹೊಂದಿ 2173 ಮಕ್ಕಳಿಗೆ ಲಸಿಕೆ ನೀಡಿ, ಶೇ. 116 ರಷ್ಟು, 335 ಗರ್ಭಿಣಿ ಹೆಣ್ಣುಮಕ್ಕಳಿಗೆ ಗುರಿ ಹೊಂದಿ 439 ಲಸಿಕೆ ನೀಡಿ, ಶೇ. 131 ರಷ್ಟು ಪ್ರಗತಿ ಸಾಧಿಸಲಾಗಿದೆ. ಮೂರನೇ ಹಂತದಲ್ಲಿ 1447 ಮಕ್ಕಳಿಗೆ ಹಾಗೂ 260 ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

    ಇಂದ್ರಧನುಷ್ ಅಭಿಯಾನದಲ್ಲಿ ಅರ್ಹರಿರುವ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರು ಲಸಿಕೆ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಈ ಲಸಿಕೆ ಹಾಕಿಸಲು ಹಿಂದೇಟು ಹಾಕುವ ಪಾಲಕರಿಗೆ ಮನವೊಲಿಸಿ, ಅವರುಗಳ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ, ಪ್ರತಿಶತಃ ನೂರರಷ್ಟು ಲಸಿಕಾ ಪ್ರಗತಿ ಸಾಧಿಸಬೇಕು ಎಂದರು.

    ಲಸಿಕೆ ಪಡೆಯದಿರುವ ಬಗ್ಗೆ ಅಂಗನವಾಡಿಗಳು ಹಾಗೂ ಶಾಲೆಗಳಲ್ಲಿ ಮಾಹಿತಿ ಸಂಗ್ರಹಿಸಿ, ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ತಪ್ಪದೇ ಲಸಿಕೆ ನೀಡುವಲ್ಲಿ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

    ಇಂದ್ರಧನುಷ್ ಕಾರ್ಯಕ್ರಮದಲ್ಲಿ ದನುರ್ವಾಯು, ದಡಾರ, ನಾಯಿಕೆಮ್ಮು,ಪೊಲೀಯೋ ಸೇರಿದಂತೆ ಮತ್ತಿತರ ರೋಗಗಳ ವಿರುದ್ಧ ಲಸಿಕಾಕರಣವನ್ನು ಮಾಡಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಇದನ್ನು ಪಡೆಯುವುದರಿಂದ ಭವಿಷ್ಯದಲ್ಲಾಗುವ ಲಾಭದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.

    ಇಂದ್ರಧನುಷ್ ಅಭಿಯಾನದ ಮೇಲ್ವಿಚಾರಣೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮಾಡಬೇಕೆಂದು ಸೂಚನೆ ನೀಡಿದರು.

    ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ರಾಮ್‌ರಾವ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಪ್ರಶಾಂತ್ ಗಣಪತಿ ಭಟ್, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ, ಡಾ. ಅರುಣ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಹೆಮ್ಮಾಡಿ :‌ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರದ ಅನ್ನದಾಸೋಹಕ್ಕೆ ಚಾಲನೆ

    ಹೆಮ್ಮಾಡಿ :‌ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರದ ಅನ್ನದಾಸೋಹಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಅನ್ನದಾಸೋಹ ನಡೆಸುವುದರಿಂದ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ವೃದ್ದಿಯಾಗುತ್ತದೆ. ಮೊಗವೀರ ಸಮಾಜದ ಎಲ್ಲ ದೇವಸ್ಥಾನಗಳಲ್ಲಿಯೂ ಅನ್ನದಾಸೋಹ ಚಿಂತನೆಗಳು ಇವೆ. ಈಗಾಗಲೇ ಉಚ್ಚಿಲದಲ್ಲಿ ನಿತ್ಯ ಅನ್ನದಾಸೋಹ, ಬೆಣ್ಣೆಕುದ್ರುವಿನಲ್ಲಿ ವಾರಕ್ಕೆ ಮೂರು ದಿನ ಅನ್ನಸಂತರ್ಪಣೆ ನಡೆಯುತ್ತಿದೆ. ಬಗ್ವಾಡಿಯಲ್ಲಿ ವಾರದಲ್ಲಿ ಎರಡು ದಿನ ಅನ್ನದಾಸೋಹ ನಡೆಯುವಂತಾಗಲಿ. ಬಗ್ವಾಡಿಯ ಅನ್ನದಾಸೋಹದ ನಿಧಿಯಲ್ಲಿ 70 ಲಕ್ಷ ಸಂಗ್ರಹವಾಗಿದೆ. ಚಿತ್ರಪೂರ್ಣಿಮೆಯ ರಥೋತ್ಸವದ ಒಳಗೆ ಅದು 1 ಕೋಟಿ ತಲುಪಲಿ. ಅದರ ಬಡ್ಡಿ ಹಣದಿಂದಲೇ ಅನ್ನದಾಸೋಹ ಸೇವೆ ನಡೆಯಲಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ.ಜಿ.ಶಂಕರ್ ಹೇಳಿದರು.

    ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಡಾ.ಜಿ.ಶಂಕರ್ ಅವರ 68ನೇ ಜನ್ಮದಿನಾಚರಣೆಯ ಸವಿನೆನಪಿನಲ್ಲಿ ಪ್ರತಿ ಶುಕ್ರವಾರದ ಅನ್ನದಾಸೋಹ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಮೊಗವೀರ ಸಮುದಾಯ ಇವತ್ತು ಪ್ರಗತಿ ಹೊಂದುತ್ತಿದೆ. ಯುವ ಸಂಘಟನೆಯಿಂದ ಶಾಸಕರಾಗುವ ಮಟ್ಟಕ್ಕೆ ಯುವ ಜನತೆ ಬೆಳೆದಿದ್ದಾರೆ. ನಾಯಕತ್ವ ಬೆಳೆಸಿಕೊಂಡಿದ್ದಾರೆ. ಮೊಗವೀರ ಯುವ ಸಮುದಾಯ ಬಲಿಷ್ಠವಾಗಿ ಬೆಳೆಯಲಿ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ವಹಿಸಿದ್ದರು.

    ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‍ಪಾಲ್ ಸುವರ್ಣ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್, ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಮಾಜಿ ಅಧ್ಯಕ್ಷ ರಮೇಶ ಬಂಗೇರ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಬಗ್ವಾಡಿ ಶಾಖೆಯ ನಿಕಟಪೂರ್ವ ಅಧ್ಯಕ್ಷ ಕೆ.ಕೆ ಕಾಂಚನ್, ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ,ಕೋಟ್ಯಾನ್, ಉಚ್ಚಿಲ ಕ್ಷೇತ್ರಾಡಳಿತದ ಅಧ್ಯಕ್ಷ ವಾಸುದೇವ ಸಾಲ್ಯಾನ್, ಉಚ್ಚಿಲ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ಚಿಕ್ಕಮಗಳೂರು ಮೊಗವೀರ ಸಂಘಟನೆಯ ನಾರಾಯಣ ಬಿ., ರಾಣೆಬೆನ್ನೂರು ಮೊಗವೀರ ಸಂಘಟನೆ ಅಧ್ಯಕ್ಷ ನಿತ್ಯಾನಂದ ಜೆ ಕುಂದಾಪುರ, ದ.ಕ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಸುಧಾಕರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನಾ ಆರ್.ಕುಂದರ್, ಮೊಗವೀರ ಮಹಾಜನ ಸಂಘ ಮುಂಬಯಿ ಸಂಘಟನೆಯ ರಾಜೇಂದ್ರ ಚಂದನ್, ರಾಜು ತಗ್ಗರ್ಸೆ, ಮೊಗವೀರ ಸ್ತ್ರೀಶಕ್ತಿಯ ಅಧ್ಯಕ್ಷ ಶ್ಯಾಮಲ ಜಿ.ಚಂದನ್ ಉಪಸ್ಥಿತರಿದ್ದರು.

    ಪ್ರಾಸ್ತಾವಿಕ ಮಾತುಗಳನ್ನಾಡಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶಕ್ತಿ ಕೇಂದ್ರವಾಗಿರುವ ಬಗ್ವಾಡಿಯಲ್ಲಿ ಮಧ್ಯಾಹ್ನ ಭಕ್ತರ ಉದರ ತಂಪಾಗಿಸುವ ನಿತ್ಯ ಅನ್ನಸಂತರ್ಪಣೆಗೆ ಯೋಜನೆ ರೂಪಿಸಬೇಕೆಂಬುದು ಭಕ್ತ ಜನರ ಬಹುದಿನದ ಕನಸು. ನಿತ್ಯ ಅನ್ನದಾನ ಕಾರ್ಯಕ್ರಮಕ್ಕೆ ಪೂರಕವಾಗಿ ಶ್ರೀ ಮಹಿಷಾಸುರಮರ್ದಿನಿ ಅನ್ನದಾಸೋಹ ನಿಧಿ ಸ್ಥಾಪಿಸಿ, ಭವಿಷ್ಯದ ನಿರಂತರ ಅನ್ನದಾಸೋಹದ ಹಿತದೃಷ್ಟಿಯಿಂದ ದೊಡ್ಡ ಮೊತ್ತದಲ್ಲಿ ಹಣ ಕ್ರೋಢೀಕರಿಸಿ ನಿಧಿಯಾಗಿಟ್ಟು ಅದರ ಮೂಲಕ ಅನ್ನದಾನದ ವ್ಯವಸ್ಥೆ ಮಾಡುವ ಸದುದ್ದೇಶದಿಂದ ಕನಿಷ್ಠ 365 ಸದ್ಭಕ್ತರಿಂದ ತಲಾ ರೂ. 10,000 ಮತ್ತು ಮೇಲ್ಪಟ್ಟು ಹಣ ಸಂಗ್ರಹಿಸುವ ಗುರಿ ಇಟ್ಟುಕೊಂಡು ಕಾರ್ಯಪ್ರವೃತ್ತವಾಗಿದೆ ಎಂದರು.

    68ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವ ಡಾ.ಜಿ.ಶಂಕರ್ ಹಾಗೂ ಶ್ಯಾಮಿಲಿ ಜಿ.ಶಂಕರ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿಯೇ ಅನ್ನಪೂಜೆ ನೆರವೇರಿಸಲಾಯಿತು. ಅನ್ನ ಸೇರಿದಂತೆ ಎಲ್ಲಾ ಭಕ್ಷ್ಯಗಳನ್ನು ಬಡಿಸಲಾಯಿತು. ಐವರು ಹಿರಿಯ ದಂಪತಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

    ಕ್ಷೇತ್ರದ ಪುರೋಹಿತರಾದ ಗಿರೀಶ್ ಭಟ್ ವೇದಘೋಷ ಪಠಿಸಿದರು. ಮೊಗವೀರ ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಸತೀಶ ಎಂ.ನಾಯ್ಕ್ ಸ್ವಾಗತಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ ವಂದಿಸಿದರು. ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.

  • ಬೆಂಗಳೂರು :ಕಾನೂನು ಬಾಹಿರ ಗಣಿಗಾರಿಕೆಗೆ ಅವಕಾಶವಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಬೆಂಗಳೂರು :ಕಾನೂನು ಬಾಹಿರ ಗಣಿಗಾರಿಕೆಗೆ ಅವಕಾಶವಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಉಡುಪಿ ಜಿಲ್ಲೆಯ ವ್ಯಾಪ್ತಿಯ ಮರಳು, ಕೆಂಪುಕಲ್ಲಿನ ಗಣಿಗಾರಿಕೆ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಬೆಂಗಳೂರು: ಕಾನೂನು ಬಾಹಿರ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಕೆಂಪು ಕಲ್ಲು ಹಾಗೂ ಮಣ್ಣಿನ ವಿಚಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

    ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

    ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್ ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ಪ್ರಾಧಿಕಾರದ ತಿಂಗಳಿಗೊಮ್ಮೆ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕೆಂದು ಮುಖ್ಯ ಮಂತ್ರಿಗಳು ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.

    ಹೊಸ ಮರಳು ನೀತಿ 2020 ನ್ನು 1.12.2021 ರಂದು ಜಾರಿಗೆ ತಂದಿದ್ದು, ಸಣ್ಣ ಬ್ಲಾಕ್ ಗಳಿವೆ. ಕಟ್ಟಡ ನಿರ್ಮಾಣ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರ ಹಿತಾಸಕ್ತಿ ಯನ್ನೂ ಕಾಪಾಡಬೇಕಿದೆ . ಕಾರ್ಮಿಕರಿಗೆ ಸಮಸ್ಯೆಯಾಗದಂತೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.

    Non CRZ ಪ್ರದೇಶದಲ್ಲಿ ಟೆಂಡರ್ ಕಂ ಹರಾಜು ಮೂಲಕ ಗುತ್ತಿಗೆ ಮಂಜೂರು ಮಾಡಲು 39 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಈ ಪೈಕಿ 9 ಬ್ಲಾಕ್ ಗಳ ಟೆಂಡರ್ ಪ್ರಕ್ರಿಯೆ ಯಶಸ್ವಿಯಾಗಿದ್ದು, 30 ಮರಳು ಬ್ಲಾಕ್ ಗಳಿಗ ಮರುಹಾರಾಜು ಪ್ರಕ್ರಿಯೆ ಶೀಘ್ರ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಭೆಗೆ ಮಾಹಿತಿ ಒದಗಿಸಿದರು.

    8 ಲಕ್ಷ ಟನ್ ಮರಳು ಅಗತ್ಯವಿದೆ. ಜೆಲ್ಲಿ, ಕೆಂಪುಕಲ್ಲಿನ ಸಮಸ್ಯೆ ಇದೆ.

    ಮಂಗಳೂರು, ಉಡುಪಿಯಲ್ಲಿನ ಹವಾಗುಣಕ್ಕಾಗಿ ಗೃಹನಿರ್ಮಾಣಕ್ಕೆ ಬಳಕೆಯಾಗುತ್ತದೆ. ಇದರಲ್ಲಿ ಬಾಕ್ಸೈಟ್ ಇದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ಇದನ್ನು ಬಳಸುತ್ತವೆ. ಜಿಲ್ಲೆಯಿಂದ ಹೊರಗೆ ಕಳಿಸುವುದು ಬೇಡ ಎಂಬ ಅಭಿಪ್ರಾಯ ಜನರಲ್ಲಿದೆ.

    ಮರಳು ಗಣಿಗಾರಿಕೆಗೆ ಪರವಾನಗಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪರವಾನಗಿ ನೀಡಲಿ. ಮನೆ ಕಟ್ಟಲು ಅಗತ್ಯವಿರುವ ಸೈಜುಗಲ್ಲುಗಳಿಗೆ ಗಣಿಗಾರಿಕೆ ಮಾಡಲು ಕಾಯ್ದೆಯ ಸರಳೀಕರಣ ಮಾಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.

    ಕೆಂಪುಕಲ್ಲಿನ( Laterite) ಗಣಿಗಾರಿಕೆ ಗೆ 71 ಕಾರ್ಯಾದೇಶಗಳನ್ನು ಒಂದು ವರ್ಷದ ಅವಧಿಗೆ ನೀಡಲಾಗಿದೆ. ಖನಿಜವನ್ನು ಬಾಕ್ಸೈಟ್ ಆಗಿ ವಿಂಗಡಿಸಿರುವುದರಿಂದ 17.03.2023 ರಂದು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994 ಗೆ ತಿದ್ದುಪಡಿ ತಂದು ತಿದ್ದುಪಡಿ ನಿಯಮ 2023 ಜಾರಿಗೊಳಿಸಲಾಗಿದೆ. ಹೀಗಾಗಿ ಲ್ಯಾಟರೈಟ್ ಖನಿಜಕ್ಕೆ ಕಾರ್ಯಾದೇಶ ನೀಡುವುದನ್ನು ಕೈಬಿಡಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

    ಸ್ಥಳೀಯ ಜಿಲ್ಲೆಗೆ ಅಗತ್ಯವಿರುವಂತೆ ಕಾಯ್ದೆಗೆ ತಿದ್ದುಪಡಿ ಮಾಡಬಹುದು. Laterite ಸಂಬಂಧಿಸಿದಂತೆ ಹಿಂದಿನ ಸರ್ಕಾರ ಮಾಡಲಾಗಿರುವ ತಿದ್ದುಪಡಿಯನ್ನು ಪುನಃ ತಿದ್ದುಪಡಿ ಮಾಡಿ ವಾಹನಗಳಿಗೆ ಅನುಮತಿ ನೀಡಬಹುದು. ಕ್ರಶಿಂಗ್ ಮಾಡಲಾದ ಮಣ್ಣನ್ನು ಜಿಲ್ಲೆಯೊಳಗಿನ ಬಳಕೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

    ಜಿಲ್ಲಾ ಆಸ್ಪತ್ರೆಯಲ್ಲಿ 9 ಡಯಾಲಿಸಿಸ್ ಯಂತ್ರಗಳು ಕೆಟ್ಟಿದೆ. ಒಂದೇ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಕೂಡಲೇ ವೇತನ ನೀಡುವಂತೆ ಸಿಎಂ ಸೂಚಿಸಿದರು.

    ಸಭೆಯಲ್ಲಿ
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಸಚಿವರಾದ ಎಚ್.ಸಿ. ಮಹದೇವಪ್ಪ, ಚಲುವರಾಯಸ್ವಾಮಿ, ಬಿ.ನಾಗೇಂದ್ರ, ಹಿಂದುಳಿದ ವರ್ಗಗಳ ಆಯೋಗದ ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ, ಮಂಜುನಾಥ್ ಭಂಡಾರಿ, ಮಾಜಿ‌ ಸಚಿವ ವಿನಯ್ ಕುಮಾರ್ ಸೊರಕೆ, ಮುಖಂಡರಾದ ಗೋಪಲ್ ಪೂಜಾರಿ, ಪ್ರಸಾದ್ ಕಾಂಚನ್, ಉದಯ್ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಲಿ, ಎಂ.ಎ.ಗಫೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾದ ಗಿರೀಶ್, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹಾಜರಿದ್ದರು.