Category: ಸುದ್ದಿ

  • ಸಾಲಿಗ್ರಾಮ – ಶ್ರಾವಣ ಸಿರಿ : ಭಜನೋತ್ಸವ

    ಸಾಲಿಗ್ರಾಮ – ಶ್ರಾವಣ ಸಿರಿ : ಭಜನೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: : ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಅತಿ ಸುಲಭ ಮಾರ್ಗ ಭಜನೆ. ಮಹಾ ಭಜಕ, ಪರಮ ಭಾಗವತ ಎಂದು ಇತಿಹಾಸ ಕೊಂಡಾಡುವ ಪ್ರಹ್ಲಾದನನ್ನು ಉದ್ದರಿಸಲೆಂದೇ ಅವತರಿಸಿದವ ನರಸಿಂಹ. ಹೀಗೆ ಭಜನೆಗೂ ನರಸಿಂಹನಿಗೂ ಅವಿನಾಭಾವ ಸಂಬಂಧವಿದೆ. ಅಂತಹ ನರಸಿಂಹನನ್ನೇ ಗುರುವಾಗಿ ಸ್ವೀಕರಿಸಿರುವ ಕ್ಷೇತ್ರ ಸಾಲಿಗ್ರಾಮದಲ್ಲಿ ಭಜನೋತ್ಸವ ನಡೆಯುತ್ತಿರುವುದು ಅತ್ಯಂತ ಪ್ರಸ್ತುತ ಎಂದು ಖ್ಯಾತ ಯೋಗಗುರು, ಚಿಂತಕ ವಿದ್ವಾನ್ ಡಾ. ವಿಜಯ ಮಂಜರ್ ಹೇಳಿದರು.

    ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಮತ್ತು ಅಂಗ ಸಂಸ್ಥೆಗಳ ಸಹಯೋಗದಲ್ಲಿ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದ ಆಶ್ರಯದಲ್ಲಿ ಮಹಿಳಾ ವೇದಿಕೆಯವರು ದೇವಳದಲ್ಲಿ ಆಯೋಜಿಸಿದ ಅಧಿಕ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ “ಶ್ರಾವಣ ಸಿರಿ” ಭಜನೋತ್ಸವಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

    ಶ್ರಾವಣ ಮಾಸ ಶ್ರೇಷ್ಠವಾದುದು. ಅಧಿಕ ಶ್ರಾವಣ ಇನ್ನೂ ಶ್ರೇಷ್ಠ. ಈ ಅಧಿಕ ಶ್ರಾವಣದಲ್ಲಿ ಭಜನೆಯನ್ನು ಶ್ರವಣ ಮತ್ತು ಗಾಯನ ಮಾಡುವುದು ತುಂಬಾ ಪುಣ್ಯಕರ ಎಂಬುದು ಶಾಸ್ತ್ರ
    ವಾಕ್ಯ ಎಂದು ಬಣ್ಣಿಸಿದ ಅವರು, ಧಾರ್ಮಿಕ ಕಾರ್ಯಕ್ರಮಗಳನ್ನು ಮುಕ್ತ ಮನದಿಂದ ಸ್ವಾಗತಿಸಿ ಸಹಕರಿಸುವ ದೇವಳದ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.

    ದೇವಳ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಶುಭ ಹಾರೈಸಿ, ಶಾಸ್ತ್ರಗಳು ಹೇಳುವಂತೆ ಒಳ್ಳೆಯದನ್ನೇ ಕೇಳಿ, ಕಂಡು, ಆಚರಿಸಲು ಮತ್ತು ದೇವರು ಮೆಚ್ಚುವಂತೆ ನಮ್ಮ ಆಯುಷ್ಯ ಕಳೆಯಲು ಭಜನೆ ಸೂಕ್ತ ಮಾರ್ಗ ಎಂದು ವಿವರಿಸಿ, ಭಜನೆ ಇತ್ಯಾದಿ ಎಲ್ಲಾ ಒಳ್ಳೆಯ ಧಾರ್ಮಿಕ ಕಾರ್ಯಕ್ರಮಗಳಿಗೂ ದೇವಳ ಸಮಿತಿ ಸದಾ ಸಹಕಾರ ನೀಡುತ್ತದೆ ಎಂದು ಹೇಳಿದರು.

    ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್. ಸತೀಶ ಹಂದೆ, ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಬ್ರಾಹ್ಮಣ ಮಹಾಸಭಾದ ಸಾಲಿಗ್ರಾಮ ವಲಯಾಧ್ಯಕ್ಷ ಶಿವರಾಮ ಉಡುಪ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ರೂಪಾ ಶಾಸ್ತ್ರಿ, ಸಂಚಾಲಕಿ ಶಾಂತಾ ಗಣೇಶ್, ಅಂಗ ಸಂಸ್ಥೆಯ ಜೊತೆ ಕಾರ್ಯದರ್ಶಿ ಸುರೇಶ್ ತುಂಗ, ಪಟ್ಟಾಭಿರಾಮ ಸೋಮಯಾಜಿ, ರಾಜಾರಾಮ ಐತಾಳ, ಮಂಜುನಾಥ ಉಪಾಧ್ಯ, ಮಹಿಳಾ ವೇದಿಕೆ ಕಾರ್ಯದರ್ಶಿ ಶಿವಪ್ರಭಾ ಅಲ್ಸೆ ಮೊದಲಾದವರು ಉಪಸ್ಥಿತರಿದ್ದರು.

    ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಸಿ. ಹೊಳ್ಳ ಸ್ವಾಗತಿಸಿದರು. ಸುಮಂಗಲಿ ಕಾರ್ಯಕ್ರಮ ನಿರ್ವಹಿಸಿದರು.

    ನಂತರ ನಡೆದ ಶ್ರಾವಣ ಶ್ರೀ ಭಜನೋತ್ಸವದಲ್ಲಿ ಖ್ಯಾತ ಗಾಯಕರಾದ ಸಂಗೀತಾ ಬಾಲಚಂದ್ರ, ಎ. ಎಂ. ಮೋಹನ್ ರಾವ್, ಮಾಲಾತಿ ಜೆ. ಅಡಿಗ, ವಿದ್ವಾನ್ ಶಂಭು ಭಟ್, ಲಲಿತಾ ಶ್ರೀರಾಮ್, ಪಲ್ಲವಿ ತುಂಗ, ಪವಿತ್ರ ವಿ. ಮಯ್ಯ ಹಾಗೂ ವಿವಿಧ ಭಜನಾ ತಂಡಗಳವರು ಸುಶ್ರಾವ್ಯ ಭಜನೆಗಳನ್ನು ಹಾಡಿದರು.

    ಪಕ್ಕವಾದ್ಯದಲ್ಲಿ ಸುರೇಶ್ ಅಡಿಗ (ಹಾರ್ಮೋನಿಯಂ), ರವಿಕುಮಾರ್ (ಪಿಟೀಲು), ದಯಾನಂದ ವಾರಂಬಳ್ಳಿ (ತಬಲಾ)ಮತ್ತು ದೇವದಾಸ್ ರಾವ್ (ಮದ್ದಳೆ) ಸಹಕರಿಸಿದರು.

  • ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಸಭೆ

    ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ ಇದರ 12ನೇ ವಾರ್ಷಿಕ ಸಭೆ ಕೋಟದ ಮಾಂಗಲ್ಯ ಮಂದಿರದಲ್ಲಿ ನಡೆಯಿತು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಆನಂದ್ ಕುಂದರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

    ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಅಧ್ಯಕ್ಷೆ ಸುಶೀಲ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದಭದಲ್ಲಿ ಸಮಾಜಸೇವಕ ಆನಂದ್ ಸಿ ಕುಂದರ್ ರವರನ್ನು ಸನ್ಮಾನಿಸಲಾಯಿತು.

    ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಸಂಘದ ಸಲಹೆಗಾರರಾದ ರಾಜು ದೇವಾಡಿಗ ,ಉಪಾಧ್ಯಕ್ಷೆ ಗೀತಾ ಬಂಗೇರ, ನಿರ್ದೇಶಕರುಗಳಾದ ಲಕ್ಷ್ಮಿ ಮಾಧವ, ಲಕ್ಷ್ಮಿ ,ಕಮಲ, ಗುಲಾಬಿ, ಬೇಬಿ ,ರತ್ನ, ಭಾರತಿ ಸುಧಾಕರ ಇದ್ದರು.

    ನಿರ್ದೇಶಕಿ ಚೇತನ ರಮೇಶ್ ಸ್ವಾಗತಿಸಿ ವರದಿ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಕುಂತಲ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಆಶಾ ಅಶೋಕ್ ಧನ್ಯವಾದ ಸಮರ್ಪಿಸಿದರು.

  • ಕುಂದಾಪುರ: ಶ್ರಮಿಕರ ಸ್ವಾತಂತ್ರೋತ್ಸವ ಪ್ರಚಾರಾಂದೋಲನ

    ಕುಂದಾಪುರ: ಶ್ರಮಿಕರ ಸ್ವಾತಂತ್ರೋತ್ಸವ ಪ್ರಚಾರಾಂದೋಲನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಕ ವರ್ಗ ಹೋರಾಟಗಳನ್ನು ನಡೆಸಿದೆ ಅದರ ಪ್ರತಿಫಲ ನ್ಯಾಯ ಬದ್ಧವಾಗಿ ಸಿಗಬೇಕು. ಸ್ವಾತಂತ್ರ್ಯ ನಂತರ ಪಡೆದ 44 ಕಾರ್ಮಿಕ ಕಾನೂನುಗಳು 2020 ಕೋವಿಡ್ ಸಂದರ್ಭದಲ್ಲಿ 4 ಹೊಸ ಸಂಹಿತೆಗಳಾದ ವೇತನ ಸಂಹಿತೆ, ಕೈಗಾರಿಕೆ ಬಾಂಧವ್ಯಗಳ ಸಂಹಿತೆ, ಸಾಮಾಜಿಕ ಸುರಕ್ಷತಾ ಸಂಹಿತೆ, ವ್ರತ್ತಿ ಸುರಕ್ಷತೆ, ಉದ್ಯೋಗ ಸೇವಾ ಷರತ್ತುಗಳ ಸಂಹಿತೆ ತರಲಾಗಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ವ್ಯಾಪಕ ಹೋರಾಟ ಮುಷ್ಕರ ನಡೆಸಿದರೂ ಕೇಂದ್ರ ಸರ್ಕಾರ ಕಾರ್ಮಿಕ ಪರ ನಿಂತಿಲ್ಲ. ಶಾಸನ ಸಭೆಯಲ್ಲಿ ಈ ಕಾಯ್ದೆಗಳ ವಿರುದ್ಧ ಹೋರಾಡಿದ ಕಾರ್ಮಿಕರ ಸಂಸದರನ್ನು ಅಮಾನತು ಮಾಡಿ ಅಂಗೀಕರಿಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

    ರೈತರು ಕಾರ್ಮಿಕರು ಕೂಲಿಕಾರರ ಮುಂದಿನ ದಿನಗಳಲ್ಲಿ ದೇಶದಾದ್ಯಂತ ತೀವ್ರ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

    ಅವರು ಸ್ವಾತಂತ್ರೋತ್ಸವದ ಅಂಗವಾಗಿ ಶ್ರಮಿಕರ ಪ್ರಚಾರಾಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.

    ಪ್ರಚಾರಾಂದೋಲನದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್,ಜಿಲ್ಲಾ ಕಾರ್ಯದರ್ಶಿ ಎಚ್ ನರಸಿಂಹ,ಮಹಾಬಲ ವಡೇರಹೋಬಳಿ, ಬಲ್ಕೀಸ್, ಲಕ್ಷ್ಮಣ ಡಿ ಇದ್ದರು. ಪ್ರಚಾರಾಂದೋಲನದ  ಚಂದ್ರಶೇಖರ ವಿ. ಸ್ವಾಗತಿಸಿದರು.

  • ಕಾವ್ರಾಡಿ: ಸಹಕಾರಿ ಸಂಘ ಬಿಜೆಪಿ ಬೆಂಬಲಿತರ ತೆಕ್ಕೆಗೆ – ಅಧ್ಯಕ್ಷರಾಗಿ ಬಳ್ಕೂರು ಸದಾನಂದ ಮೊಗವೀರ

    ಕಾವ್ರಾಡಿ: ಸಹಕಾರಿ ಸಂಘ ಬಿಜೆಪಿ ಬೆಂಬಲಿತರ ತೆಕ್ಕೆಗೆ – ಅಧ್ಯಕ್ಷರಾಗಿ ಬಳ್ಕೂರು ಸದಾನಂದ ಮೊಗವೀರ

    ಕುಂದಾಪುರ ಮಿರರ್ ಸುದ್ದಿ….

    ಕುಂದಾಪುರ : ಕಾವ್ರಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪಕ್ರಿಯೆ ಶುಕ್ರವಾರ ಬೆಳಿಗ್ಗೆ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಸದಾನಂದ ಮೊಗವೀರ ಬಳ್ಕೂರು ಹಾಗೂ ಉಪಾಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿ ಆಯ್ಕೆಯಾದರು.

    ಆಡಳಿತ ಮಂಡಳಿಗೆ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಆರು ಸ್ಥಾನಗಳನ್ನು ಕಾಂಗ್ರೆಸ್, ಏಳು ಸ್ಥಾನಗಳು ಬಿಜೆಪಿ ಬೆಂಬಲಿತರು‌
    ಸುಧಾಕರ ನಾಯಕ್‌, ಕೃಷ್ಣರಾಜ ಬಿ., ಸಂದೇಶ ಕುಮಾರ ಶೆಟ್ಟಿ, ಕಾಮರಾಜ ಶೆಟ್ಟಿ ಹಳ್ಳಾಡು, ಚಂದ್ರಶೇಖರ ಹೆಗ್ಡೆ, ಕೃಷ್ಣ ಗಾಣಿಗ, ದೇವಾನಂದ ಶೆಟ್ಟಿ, ಪೂರ್ಣಿಮಾ, ಜ್ಯೋತಿ ವಿ ಪುತ್ರನ್, ಚಂದ್ರ ಕೆ, ಸುರೇಶ ಕುಮಾರ್ ನಿರ್ದೇಶಕರಾಗಿ ಆಯ್ಕೆಯಾದರು.

    ಸಹಕಾರಿ ಇಲಾಖೆಯ ಜ್ಯೋತಿ ಡಿ. ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸ್ಟಾಫ್ ವೆಲ್‍ಫೇರ್ ಅಸೋಸಿಯೇಶನ್ ಆಯೋಜಿಸಿದ ಸಿಬ್ಬಂದಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ ಪಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಹಕರಿಸಿದ ಪ್ರಾಧ್ಯಾಪಕರನ್ನು ಶ್ಲಾಘಿಸಿದರು.

    ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಬೀಳ್ಕೊಡುಗೆ ಸ್ವೀಕರಿಸಿದ ವಾಣಿಜ್ಯ ಪ್ರಾಧ್ಯಾಪಕಿಯರಾದ ಸುಶ್ಮಿತಾ ಸಾಲಿಗ್ರಾಮ, ಅರ್ಪಣಾ ಶೆಟ್ಟಿ, ಗಣಿತ ಶಾಸ್ತ್ರದ ಪ್ರಾಧ್ಯಾಪಕಿ ಮೇಘನಾ ಹೆಬ್ಬಾರ್ ಮತ್ತು ಭೌತಶಾಸ್ತ್ರ ಪ್ರಾಧ್ಯಾಪಕಿ ಸೌಮ್ಯ ಗಾಣಿಗ ಸಂಸ್ಥೆಯಲ್ಲಿನ ತಮ್ಮ ಸೇವಾನುಭವನ್ನು ಹಂಚಿಕೊಂಡರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಹಾಗೂ ರಸಾಯನಶಾಸ್ತ್ರ ಪ್ರಾಧ್ಯಾಪಕಿ ರಕ್ಷಿತಾ ಶೆಟ್ಟಿ ಅನಿಸಿಕೆ ಹಂಚಿಕೊಂಡರು.

    ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕಿ ನಿರ್ಮಲಾ ಪ್ರಾರ್ಥಿಸಿ, ಸಿಬ್ಬಂದಿ ಸಂಘದ ಸಂಯೋಜಕ ಮಹೇಶ್ ನಾಯ್ಕ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಸತೀಶ್ ಶೆಟ್ಟಿ ಹೆಸ್ಕತ್ತೂರು ನಿರೂಪಿಸಿದರು.

  • ಕುಂದಾಪುರ :ಕನ್ನಡ ಭಾಷಣ ಸ್ಪರ್ಧೆಯಲ್ಲಿ ಸಾಧನೆ ಮೆರೆದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

    ಕುಂದಾಪುರ :ಕನ್ನಡ ಭಾಷಣ ಸ್ಪರ್ಧೆಯಲ್ಲಿ ಸಾಧನೆ ಮೆರೆದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬಿಎಮ್ಆರ್ ಬಿಲ್ಡರ್ಸ & ಡೆವಲಪರ್ಸ(BMR BUILDERS & DEVELOPERS)ಮಂಗಳೂರು‌ ಇವರ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ “ನನ್ನ ಕಲ್ಪನೆಯ ಭಾರತ” ಈ ವಿಷಯದ ಕುರಿತಾಗಿ ಆಯೋಜಿಸಿದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿಕಾ ಉಭಯ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವರ್ಷಾ ರವಿಶಂಕರ್ ಚತುರ್ಥ ಸ್ಥಾನ ಪಡೆದಿರುತ್ತಾರೆ. ವಿವಿಧ ಕಾಲೇಜುಗಳಿಂದ 110 ಸ್ಪರ್ಧಿಗಳು ಭಾಗವಹಿಸಿದ ಸ್ಪರ್ಧೆ ಇದಾಗಿತ್ತು. ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘ: ಪಕ್ಷೇತರರಿಗೆ ಒಲಿದ ಅಧ್ಯಕ್ಷ ಗಾದಿ :ನೂತನ ಅಧ್ಯಕ್ಷರಾಗಿ ಸುರೇಶ ಅಡಿಗ ಆಯ್ಕೆ

    ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘ: ಪಕ್ಷೇತರರಿಗೆ ಒಲಿದ ಅಧ್ಯಕ್ಷ ಗಾದಿ :ನೂತನ ಅಧ್ಯಕ್ಷರಾಗಿ ಸುರೇಶ ಅಡಿಗ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ ಅಡಿಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೋವಿಂದ ಪೂಜಾರಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ ಪಕ್ರಿಯೆ ಗುರುವಾರ ಮಧ್ಯಾಹ್ನ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.

    ಸಹಕಾರಿ ಇಲಾಖೆಯ ರೋಹಿತ್ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ನಿರ್ದೇಶಕರಾದ ಚಂದ್ರಮೋಹನ್, ಶ್ರೀಧರ ಪಿ.ಎಸ್., ಆನಂದ ಗಾಣಿಗ, ಎ ರಮೇಶ್ ಕಾರಂತ್, ವಿಜಯ ಪೂಜಾರಿ, ಅರುಣ ಪೂಜಾರಿ ವೈ. ಕಿರಣ್ ಥಾಮಸ್ ಡಯಾಸ್, ಲೀಲಾವತಿ ಗಂಗಾಧರ ಪೂಜಾರಿ, ಕಮಲ ಆಚಾರ್, ಶೇಖರ ಗದ್ದೆಮನೆ, ಪ್ರೀತಿ ಉಪಸ್ಥಿತರಿದ್ದರು.

    ಕಳೆದ ರವಿವಾರ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು. ಒಟ್ಟು 13 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. ಉಳಿದ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ತಲಾ ಆರು ಸ್ಥಾನಗಳನ್ನು ಕಾಂಗ್ರೆಸ್, ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದರು. ಒಂದು ಸ್ಥಾನ ಪಕ್ಷೇತರ ಪಾಲಾಗಿತ್ತು.

    ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸುರೇಶ ಅಡಿಗರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಗೋವಿಂದ ಪೂಜಾರಿ ಉಪಾಧ್ಯಕ್ಷಾಗಿ ಆಯ್ಕೆಗೊಂಡಿದ್ದಾರೆ.

  • ಕಂಡ್ಲೂರು :ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

    ಕಂಡ್ಲೂರು :ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕಂಡ್ಲೂರು :ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು ಶಾಸಕ ಗುರುರಾಜ್ ಗಂಟಿಹೊಳೆ ಗುರುವಾರ ಭೇಟಿ ನೀಡಿ ಆಸ್ಪತ್ರೆಯ ಕುಂದುಕೊರತೆ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಆಸ್ಪತ್ರೆಯೆಂದರೆ ಮೂಗು ಮುರಿಯುವ ವೈದ್ಯರೇ ಇರುವ ಈಗಿನ ಕಾಲದಲ್ಲಿ ಕೆಲವೊಂದು ಆಸ್ಪತ್ರೆಯಲ್ಲಿ ಉತ್ತಮ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಗ್ರಾಮೀಣ ಭಾಗದ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಂಡ್ಲೂರು, ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯ ವ್ಯವಸ್ಥೆ, ಸಿಬ್ಬಂದಿ ಕೊರತೆ,ಪಿಠೋಪಕರಣ, ಮೂಲಸೌಕರ್ಯಗಳ ಬಗ್ಗೆ ಸಿಬ್ಬಂದಿಗಳ ಜೊತೆ ಚರ್ಚಿಸಿದರು.

    ನಂತರ ಕಾವ್ರಾಡಿ ಗ್ರಾಮ ಪಂಚಾಯತ್‌ಗೆ ಪ್ರಥಮ ಭಾರಿಗೆ ಭೇಟಿ ನೀಡಿ ನೂತನ ಗ್ರಾಮ ಪಂಚಾಯತ್ ಕಟ್ಟಡ ಬಗ್ಗೆ ಪಂಚಾಯತ್ ಸದ್ಯಸರ ಜೊತೆ ಚರ್ಚಿಸಿದ್ದಾರೆ

    ಈ ಸಂದರ್ಭದಲ್ಲಿ ಸಾಮ್ರಾಟ್ ಶೆಟ್ಟಿ, ದಿನೇಶ್ ಆಚಾರ್ಯ, ವಿಜಯ ಪುತ್ರನ್ ಪಕ್ಷದ ಪ್ರಮುಖರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಆಸ್ಪತ್ರೆ ಸಿಬ್ಬಂದಿ ವರ್ಗದವರು, ಮತ್ತಿತರು ಉಪಸ್ಥಿತರಿದ್ದರು.

  • ಕಂಡ್ಲೂರು: ನೂತನ ತರಗತಿ ಕೊಠಡಿ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ

    ಕಂಡ್ಲೂರು: ನೂತನ ತರಗತಿ ಕೊಠಡಿ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಇಲ್ಲಿನ ಕಂಡ್ಲೂರು ರಾಮ್ಸನ್ ಸರಕಾರಿ ಪ್ರೌಢಶಾಲೆಯ ನೂತನ ತರಗತಿ ಕೊಠಡಿ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬೈಂದೂರು ಶಾಸಕ ಗುರುರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.

    ಕೊಠಡಿ ಉದ್ಘಾಟಿಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, “ಶಿಕ್ಷಣಕ್ಕೆ ಅಪಾರ ಶಕ್ತಿ ಇದೆ ಶಿಕ್ಷಕರು ವಿದ್ಯಾರ್ಥಿಗಳು ಊರಿನವರು ಕ್ರಿಯಾಶೀಲರಾದರೆ ಮಾದರಿ ವಿದ್ಯಾರ್ಥಿ ಹಾಗೂ ಮಾದರಿ ಶಾಲೆಯ ನಿರ್ಮಾಣ ಸಾಧ್ಯ” ಎಂದರು.

    ಇದೇ ಸಂದರ್ಭ 2022- 23ನೇ ಸಾಲಿನ ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸಲಾಯಿತು. ಶಿಕ್ಷಕರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು. ಗುತ್ತಿಗೆದಾರ ಅಶೋಕ್ ಶೆಟ್ಟಿ ಹೊಸಂಗಡಿಯವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.

    ಕಾರ್ಯಕ್ರಮದಲ್ಲಿ ಕಂಡ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಪುತ್ರನ್, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, ಶಿವ ಮೊಗವೀರ, ಶಾಮಲಾ ದೇವಾಡಿಗ, ರಾಜಶ್ರೀ ನಾಯಕ್, ಶಾಲಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಎಸ್.ಡಿ.ಎಂ.ಸಿ. ಸದಸ್ಯರಾದ ರಾಘವೇಂದ್ರ ಶೆಟ್ಟಿ ಕಲ್ಲೋಳಿ ಮನೆ, ಉದಯ ಸೇರಿಗಾರ್, ಗಣೇಶ ಉಡುಪ, ದಿನೇಶ್ ಆಚಾರ್ಯ ಕಂಡ್ಲೂರು, ವ್ಯವಸಾಯ ಸೇವಾ ಸಹಕಾರಿ ಸಂಘ ಕಾವ್ರಾಡಿ ಇದರ ಅಧ್ಯಕ್ಷ ಸದಾನಂದ ಬಳ್ಕೂರು, ಮುಖ್ಯೋಪಾಧ್ಯಾಯ ಸುರೇಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸುಧಾಕರ್, ರಾಘವೇಂದ್ರ, ರಿತೇಶ್ ಶೆಟ್ಟಿ ಹಳನಾಡು, ಶುಶಾಂತ ನಾಯಕ್, ಶ್ರೀ ಪ್ರಕಾಶ್ ಶೆಟ್ಟಿ ಮುಖ್ಯೋಪಾಧ್ಯಾಯರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಕಂಡ್ಲೂರು, ಹಳೆ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ಗೇರುಬೀಜ ಸಂಸ್ಕರಣ ಉದ್ಯಮ : ಸಾಲ ಮರು ಪಾವತಿ ಅವಧಿ ವಿಸ್ತರಣೆ- ಬಡ್ಡಿದರ ಕಡಿತಕ್ಕೆ ಸಂಸದ ಮನವಿ

    ಗೇರುಬೀಜ ಸಂಸ್ಕರಣ ಉದ್ಯಮ : ಸಾಲ ಮರು ಪಾವತಿ ಅವಧಿ ವಿಸ್ತರಣೆ- ಬಡ್ಡಿದರ ಕಡಿತಕ್ಕೆ ಸಂಸದ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕರಾವಳಿ ಭಾಗದ ಗೇರುಬೀಜ ಉದ್ದಿಮೆಗಳು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಉದ್ಯಮಿಗಳ ಸಮಸ್ಯೆಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿ ಮಾಡಿದ ಸಂಸದರು ಈ ಸಂಬಂಧ ಮನವಿ ಸಲ್ಲಿಸಿದರು. ಗೋಡಂಬಿ ಸಂಸ್ಕರಣಾ ಉದ್ಯಮ ಎದುರಿಸುತ್ತಿರುವ ಎರಡೆರಡು ಇಎಂಐ ಪಾವತಿಯ ಭಾರದ ಬಗ್ಗೆ ಅವರ ಗಮನ ಸೆಳೆದರು. ಈ ಸಂಬಂಧ ಮಧ್ಯಪ್ರವೇಶಿಸಿ, ಈ ಇಎಂಐ ಭಾರ ಕಡಿಮೆ ಮಾಡಲು ಅವರು ಮನವಿ ಮಾಡಿದ್ದಾರೆ.

    ಕರಾವಳಿ ಕರ್ನಾಟಕವು ಗೋಡಂಬಿ ಸಂಸ್ಕರಣಾ ಉದ್ಯಮಗಳ ಕೇಂದ್ರವಾಗಿದೆ. ಗ್ರಾಮೀಣ ಭಾಗದ 1.50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಉದ್ಯಮ ಜೀವನೋಪಾಯ ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಆದರೆ ಕೋವಿಡ್ ಬಳಿಕ ಗೋಡಂಬಿ ಸಂಸ್ಕರಣಾ ಘಟಕಗಳು ಸಾಲ ಮರುಪಾವತಿಸಲು ಗಂಭೀರ ಸಮಸ್ಯೆ ಎದುರಿಸುತ್ತಿವೆ. ವಿಯೆಟ್ನಾಂನಿಂದ ಕಡಿಮೆ ಗುಣಮಟ್ಟದ ಕಚ್ಚಾ ಗೋಡಂಬಿ ಆಮದು ಉದ್ಯಮ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

    ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ (ಡಬ್ಲ್ಯೂಟಿಎಲ್) ಸಾಲದ ಮರುಪಾವತಿಯನ್ನು ಕನಿಷ್ಠ 18 ತಿಂಗಳುಗಳ ಕಾಲ ಅಮಾನತು (ಮೊರಟೋರಿಯಂ)ಗೊಳಿಸಿ ಮತ್ತು ಅದಕ್ಕೆ ಅನುಗುಣವಾಗಿ ಮರುಪಾವತಿಯ ಅವಧಿಯನ್ನು ವಿಸ್ತರಿಸುವುದು, ಗ್ಯಾರಂಟಿಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) 1.0ರ ಇಎಂಐ ಪಾವತಿ ಮುಕ್ತಾಯ ಹಂತದವರೆಗೆ, ಗ್ಯಾರಂಟಿಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ವಿಸ್ತರಣೆ ಸಾಲದ (ಕೋವಿಡ್ ಸಾಲ 2.0)ದ ಇ ಇಎಂಐ ಅಮಾನತುಗೊಳಿಸುವುದು, ಹಾಗು ಅದರ ಮರು ಪಾವತಿ ಅವಧಿಯನ್ನು ವಿಸ್ತರಿಸುವುದು, ನಿಧಿಯ ಬಡ್ಡಿ ಅವಧಿಯ ಸಾಲ (ಎಫ್ ಐ ಟಿ ಎಲ್)ವನ್ನು ಒದಗಿಸಲು ಅವರು ಕೋರಿದ್ದಾರೆ. ಅದೇ ರೀತಿ ಈಗಾಗಲೇ ಆರ್ಥಿಕ ದುಸ್ಥಿತಿಯಲ್ಲಿರುವುದರಿಂದ, ವರ್ಕಿಂಗ್ ಕ್ಯಾಪಿಟಲ್ ಟರ್ಮ್ನ ಸಾಲ ಹಾಗು ಕೋವಿಡ್ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವಂತೆ ಸಚಿವರನ್ನು ಅವರು ಒತ್ತಾಯಿಸಿದ್ದಾರೆ.