Category: ಸುದ್ದಿ

  • ಬ್ರಹ್ಮಾವರ: ಶೀಘ್ರ ನ್ಯಾಯದಾನ ವ್ಯವಸ್ಥೆಗಾಗಿ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್‌ಗೆ ತಿದ್ದುಪಡಿ : ಕಾನೂನು ಸಚಿವ ಹೆಚ್.ಕೆ.ಪಾಟೀಲ್

    ಬ್ರಹ್ಮಾವರ: ಶೀಘ್ರ ನ್ಯಾಯದಾನ ವ್ಯವಸ್ಥೆಗಾಗಿ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್‌ಗೆ ತಿದ್ದುಪಡಿ : ಕಾನೂನು ಸಚಿವ ಹೆಚ್.ಕೆ.ಪಾಟೀಲ್

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ರಾಜ್ಯದಲ್ಲಿ ಕಕ್ಷಿದಾರರಿಗೆ ಶೀಘ್ರದಲ್ಲಿ ನ್ಯಾಯದಾನ ವ್ಯವಸ್ಥೆ ತಲುಪಿಸುವ ಉದ್ದೇಶದಿಂದ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ ಮಾಡಲು ವಿಧಾನಸಭೆಯ 2 ಸದನಗಳಲ್ಲಿ ಅನುಮೋದನೆ ಪಡೆದಿದ್ದು, ಇದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದರು.

    ಅವರು ಇಂದು ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ ಮತ್ತು ವಕೀಲರ ಸಂಘ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

    ವಿಳಂಬ ನ್ಯಾಯದಾನ ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತಿದೆ. ಕಕ್ಷಿದಾರರಿಗೆ ಶೀಘ್ರದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ ಮಾಡಲಾಗಿದ್ದು, ಇದರನ್ವಯ 6 ತಿಂಗಳ ಒಳಗೆ ವ್ಯಾಜ್ಯಗಳನ್ನ ವಿಲೇವಾರಿ ಮಾಡುವ ಹಾಗೂ ಪ್ರಕರಣಗಳನ್ನು 3 ಕ್ಕಿಂತ ಹೆಚ್ಚು ಬಾರಿ ಮುಂದೂಡದಂತೆ ತಿದ್ದುಪಡಿ ಮಾಡಲಾಗಿದ್ದು, ಇದಕ್ಕೆ ಶೀಘ್ರದಲ್ಲಿ ರಾಷ್ಟ್ರಪತಿಗಳಗಳ ಅಂಕಿತ ದೊರೆಯಲಿದೆ ಎಂದರು.

    ಪ್ರಸ್ತುತ ಅನೇಕ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದ್ದು, ನ್ಯಾಯದಾನ ವ್ಯವಸ್ಥೆಯನ್ನೂ ಸಹ ಸಾರ್ವಜನಿಕರ ಮನೆ ಬಾಗಲಿಗೆ ತಲುಪಿಸಿ, ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸುವ ಉದ್ದೇಶದಿಂದ ಇದೇ ವರ್ಷ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತಿದ್ದು, 2 ರಿಂದ 3 ಪಂಚಾಯತ್‌ಗಳಿಗೆ ಒಂದರಂತೆ 2000 ಗ್ರಾಮ ನ್ಯಾಯಾಲಯಗಳನ್ನು ರಾಜ್ಯಾದ್ಯಂತ ಹಂತಹಂತವಾಗಿ ಆರಂಭಿಸಲಾಗುವುದು ಎಂದರು.

    ರಾಜ್ಯದಲ್ಲಿ ವ್ಯಾಜ್ಯ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಕಲ್ಪನೆ ಇದ್ದು, ಪ್ರತೀ ಗ್ರಾಮದಲ್ಲಿ ಕನಿಷ್ಠ ಇಬ್ಬರು ಉತ್ತಮ ಕೌನ್ಸಲಿಂಗ್ ಮಾಡುವ ವ್ಯಕ್ತಿಗಳಿದ್ದಲ್ಲಿ ಇದು ಸಾಧ್ಯವಾಗಲಿದೆ. ಸುಪ್ರೀಂ ಕೋರ್ಟ್ ನಿಂದ ಕೆಳ ನ್ಯಾಯಾಲಯಗಳ ವರೆಗೆ ಅನೇಕ ಪ್ರಕರಣಗಳು ಅವಧಿ ಮೀರಿದ್ದರೂ ಇತ್ಯರ್ಥಗೊಂಡಿಲ್ಲ. ವಕೀಲರು ಆದಷ್ಟು ಶೀಘ್ರದಲ್ಲಿ ಕಕ್ಷಿದಾರರಿಗೆ ನ್ಯಾಯ ದೊರಕಿಸಬೇಕು. ವ್ಯಾಜ್ಯಗಳು ಬೇಗ ಇತ್ಯರ್ಥಗೊಂಡಲ್ಲಿ ಸಮಾಜದಲ್ಲಿ ಸಂತೋಷ ಸಮಾಧಾನ ನೆಲೆಗೊಳ್ಳಲಿದೆ ಎಂದರು.

    ಬ್ರಹ್ಮಾವರದಲ್ಲಿ ಪ್ರಸ್ತುತ ನೂತನವಾಗಿ ಸೃಜಿಸಲ್ಪಟ್ಟ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಬದಲು ಖಾಯಂ ನ್ಯಾಯಾಲಯ ಆರಂಭಿಸುವ ಬಗ್ಗೆ ಮನವಿ ಬಂದಿದ್ದು, ಈ ಕುರಿತು ನ್ಯಾಯಾಂಗ ಇಲಾಖೆ ಮೂಲಕ ಅಗತ್ಯ ಕಡತ ಸಲ್ಲಿಕೆಯಾದಲ್ಲಿ 48 ಗಂಟೆಯೊಳಗೆ ಅನುಮತಿ ನೀಡಲಾಗುವುದು ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು. ಮಹಿಳಾ ವಕೀಲರು ಕಾನೂನು ಮೂಲಕ ಮಾತ್ರವಲ್ಲದೇ ಹೃದಯದ ಭಾವನೆಗಳ ಮೂಲಕ ವಾದ ಮಾಡಿ ಕಕ್ಷಿದಾರರಿಗೆ ಶೀಘ್ರದಲ್ಲಿ, ನ್ಯಾಯ ಕೊಡಿಸಬಲ್ಲರು. ವಿದ್ಯಾವಂತ ಮತ್ತು ಪ್ರಜ್ಞಾವಂತರ ಜಿಲ್ಲೆಯಾದ ಉಡುಪಿಯಲ್ಲಿ ಹೆಚ್ಚು ಮಹಿಳಾ ವಕೀಲರು ರೂಪುಗೊಳ್ಳಬೇಕು. ಬ್ರಹ್ಮಾವರ ವ್ಯಾಪ್ತಿಯಲ್ಲಿ 4000 ಕ್ಕೂ ಅಧಿಕ ವ್ಯಾಜ್ಯಗಳಿದ್ದು, ಇಲ್ಲಿಗೆ ಖಾಯಂ ನ್ಯಾಯಾಲಯ ಆರಂಭಿಸುವ ಬಗ್ಗೆ ಕಾನೂನು ಸಚಿವರು ಭರವಸೆ ನೀಡಿದ್ದಾರೆ. ನಮ್ಮ ದೇಶದ ಕಾನೂನು ಮತ್ತು ಸಂವಿಧಾನ ಬಗ್ಗೆ ಇಡೀ ವಿಶ್ವದಲ್ಲಿ ಮೆಚ್ಚುಗೆ ಇದೆ. ಕ್ಷಕಿದಾರರಿಗೆ ಶೀಘ್ರ ನ್ಯಾಯ ದೊರಕಿಸುವ ಮೂಲಕ ಕಾನೂನು ಮತ್ತು ಸಂವಿಧಾನ ಉದ್ದೇಶ ಸಾಕಾರಗೊಳ್ಳಬೇಕು ಎಂದರು.

    ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡಗಳ ಸಮಿತಿ ಅಧ್ಯಕ್ಷ ಪಿ. ಎಸ್. ದಿನೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಹೆಚ್ಚು ವ್ಯಾಜ್ಯಗಳಿರುವ ಅಂಕಿ ಅಂಶಗಳ ಆಧಾರದ ಮೇಲೆ ಮನೆ ಬಾಗಿಲಿಗೆ ಸೇವೆ ಉದ್ದೇಶದಿಂದ ಸಂಚಾರಿ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತಿದೆ. ಬ್ರಹ್ಮಾವರದ ಸಂಚಾರಿ ನ್ಯಾಯಾಲಯವು ವಾರದಲ್ಲಿ 2 ದಿನ ಕಾರ್ಯ ನಿರ್ವಹಿಸಲಿದ್ದು, ಇಲ್ಲಿ ಖಾಯಂ ನ್ಯಾಯಾಲಯ ಆರಂಭಿಸುವ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಎಂ. ಐ. ಅರುಣ್ ಅಧ್ಯಕ್ಷತೆ ವಹಿಸಿದ್ದರು.

    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಸ್ವಾಗತಿಸಿದರು.

    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಇಲಾಖೆ, ಕೇಂದ್ರ ವಲಯ, ಶಿವಮೊಗ್ಗದ ಪ್ರಭಾರ ಮುಖ್ಯ ಅಭಿಯಂತರರು (ಸಂ. ಮತ್ತು ಕ.) ಕೆ. ಜಿ. ಜಗದೀಶ್, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ, ಕಾರ್ಯದರ್ಶಿ ಶ್ರೀಪಾದ ರಾವ್ ಮತ್ತಿತರರು ಉಪಸ್ಥಿತರಿದ್ದರು

  • ಕಲ್ಮಾಡಿ ವೆಲಂಕಣಿ ಮಾತೆಗೆ 35 ವರ್ಷದ ಸಂಭ್ರಮ – ಒಂಭತ್ತು ದಿನಗಳ ಕಾಲ ಸಂಭ್ರಮದ ಜಾತ್ರೆ

    ಕಲ್ಮಾಡಿ ವೆಲಂಕಣಿ ಮಾತೆಗೆ 35 ವರ್ಷದ ಸಂಭ್ರಮ – ಒಂಭತ್ತು ದಿನಗಳ ಕಾಲ ಸಂಭ್ರಮದ ಜಾತ್ರೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಲ್ಮಾಡಿ ವೆಲಂಕಣಿ ಮಾತೆಗೆ ಈಗ 35 ವರ್ಷದ ಸಂಭ್ರಮದಲ್ಲಿದೆ. 1988ರ ಆಗಸ್ಟ್ 15ರಂದು ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದ ಅತೀ ವಂದನೀಯ ಡಾ. ಬಾಸಿಲ್ ಡಿ’ಸೋಜಾ ರವರು ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೂ ವೆಲಂಕಣಿ ಮಾತೆಯ ಸ್ಮರಣೆ ನಿರಂತರವಾಗಿ ಈ ಕೇಂದ್ರದಲ್ಲಿ ನಡೆಯುತ್ತಿದೆ ಹಾಗೂ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದು ಅನೇಕ ಪವಾಡಗಳಿಗೆ ಸಾಕ್ಷಿಯಾಗಿದ್ದಾರೆ. ಕಳೆದ ವರ್ಷವಷ್ಟೇ ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಲೋ ರವರು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಿಸಿದ್ದರು.

    ಪ್ರತಿ ವರ್ಷದಂತೆ ಈ ಬಾರಿ ಕೂಡ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು 15 ಅಗಸ್ಟ್ 2023 ಮಂಗಳವಾರ ದಂದು ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಆಗಸ್ಟ್ 6ರಿಂದ 14ರ ವರೆಗೆ ನವೇನಾ ಪ್ರಾರ್ಥನೆಗಳು ಪ್ರತಿದಿನ ಸಾಯಂಕಾಲ 4 ಗಂಟೆಗೆ ನಡೆಯಲಿದೆ. ಆಗಸ್ಟ್ 6ರ ಭಾನುವಾರ ಸಾಯಂಕಾಲ 3:45ಕ್ಕೆ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜೆರಾಲ್ ಆಗಿರುವ ಮೊನ್ಸಿ. ಫರ್ಡಿನಾಂಡ್ ಗೊನ್ಸಾಲ್ವಿಸ್ ರವರು ನವೇನಾ ಪ್ರಾರ್ಥನೆಗಳಿಗೆ ಚಾಲನೆ ನೀಡಲಿದ್ದಾರೆ.

    ಆಗಸ್ಟ್ 13ರಂದು ಭಾನುವಾರ ಮಧ್ಯಾಹ್ನ 2.30ಕ್ಕೆ ಆದಿಉಡುಪಿ ಜಂಕ್ಷನ್ ನಿಂದ ಕಲ್ಮಾಡಿ ದೇವಾಲಯದ ವರೆಗೆ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾಗಿರುವ ಅ. ವಂ. ಡಾ. ಲುವಿಸ್ ಪಾವ್ಲ್ ಡಿ’ಸೋಜಾ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಚಾಲನೆ ನೀಡಲಿದ್ದಾರೆ.

    ಆಗಸ್ಟ್ 15ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದಿವ್ಯ ಬಲಿಪೂಜೆ ನಡೆಯಲಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಡಾ. ಜೆರಾಲ್ಡ್ ಐಸಾಕ್ ಲೋಲೋ ನೆರೆವೇರಿಸಲಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಅನೇಕ ಧರ್ಮಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು. ಅದೇ ದಿನ ಮಧ್ಯಾಹ್ನ 2 ಗಂಟೆಗೆ, 4 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಕೊಂಕಣಿ ಭಾಷೆಯಲ್ಲಿ ಇತರೆ ಬಲಿಪೂಜೆಗಳು ನಡೆಯಲಿವೆ ಎಂದು ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ರೆಕ್ಟರ್ ವಂ. ಬ್ಯಾಪ್ಟಿಸ್ಟ್ ಮಿನೇಜಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕೋಟ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಆಯ್ಕೆ

    ಕೋಟ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಹಕಾರಿ ಹಾಲು ಉತ್ಪಾದಕರ ಸಂಘ ಕೋಟ ಇದರ ಐದು ವರ್ಷದ ಆಡಳಿತ ಅವಧಿಗೆ ಇತ್ತೀಚಿಗೆ ಚುನಾವಣೆ ನಡೆದಿದ್ದು ಅದರಂತೆ ೧೧ ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಉಪಾಧ್ಯಕ್ಷರ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಪುನರಾಯ್ಕೆಗೊಂಡಿದ್ದಾರೆ.

    ಉಪಾಧ್ಯಕ್ಷರಾಗಿ ಎಂ.ಎಸ್ ಶ್ರೀಕಾಂತ್ ಮಯ್ಯ , ನಿರ್ದೇಶಕರಾಗಿ ರಮಾನಂದ ಉರಾಳ, ಸುಧಾಕರ್ ಶೆಟ್ಟಿ, ಶಿವಾನಂದ ಅಡಿಗ,ವಿಲ್ಸನ್ ಪುಡ್ತಾಡೋ, ಚಂದ್ರಶೇಖರ, ಎಂ ಪ್ರಕಾಶ್ ಶೆಟ್ಟಿ, ಜಿ.ಕೃಷ್ಣ, ಸುಶೀಲ, ಶಾಂತಾ ಆಯ್ಕೆಯಾಗಿದ್ದಾರೆ.

    ಚುನಾವಣಾಧಿಕಾರಿಯಾಗಿ ಗಣೇಶ್ ಭಾಗವಹಿಸಿ ಆಯ್ಕೆಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

  • ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ : ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

    ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ : ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಉನ್ನತ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚಿಸಿ, ಎಲ್ಲಾ ಸಮಸ್ಯೆಗಳನ್ನು ನಿಗಧಿತ ಅವಧಿಯೊಳಗೆ ಪರಿಹರಿಸಲು ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.

    ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆ ಬಳಿಯ ಸಮಸ್ಯೆ, ಉಡುಪಿ- ಮಣಿಪಾಲ ಹೆದ್ದಾರಿಯಲ್ಲಿ ಬೀದಿ ದೀಪ ವ್ಯವಸ್ಥೆ, ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸಿಗ್ನಲ್ ಅಳವಡಿಕೆ ಈ ಎಲ್ಲಾ ಸಮಸ್ಯೆಗಳ ಕುರಿತಂತೆ ಆ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು ಮತ್ತು ಸಂಬಂಧಪಟ್ಟ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದರು.

  • ಆ.6ಕ್ಕೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಗ್ರಾಮೀಣ ಸೊಗಡಿನ ಆಸಾಡಿ ಒಡ್ರ್ ಕಾರ್ಯಕ್ರಮ ಆಯೋಜನೆ

    ಆ.6ಕ್ಕೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಗ್ರಾಮೀಣ ಸೊಗಡಿನ ಆಸಾಡಿ ಒಡ್ರ್ ಕಾರ್ಯಕ್ರಮ ಆಯೋಜನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಎರಡನೇ ವರ್ಷದ ಆಸಾಡಿ ಒಡ್ರ್ ಗ್ರಾಮೀಣ ಸೋಗಡಿನ ತಿಲ್ಲಾನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಇದೇ ಭಾನುವಾರ ಆ.6ರಂದು ಪೂರ್ವಾಹ್ನ 9.ಗ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿದೆ.

    ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ನಿರ್ದೇಶಕಿ ವೈಷ್ಣವಿ ರಕ್ಷಿತ್ ಕುಂದರ್ ಉದ್ಘಾಟಿಸಲಿದ್ದಾರೆ.

    ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಕೋಟದ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಅವಿಭಜಿತ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕಿ ಕುಸುಮಾ ದೇವಾಡಿಗ ಇವರಿಗೆ ಆಸಾಡಿ ಒಡ್ರ್ ಗೌರವ ನೀಡಿ ಗೌರವಿದಲಿದ್ದು, ವಿಶೇಷ ಆಹ್ವಾನಿತರಾಗಿ ಕುಂದಗನ್ನಡದ ರಾಯಭಾರಿ ಮನು ಹಂದಾಡಿ ಗ್ರಾಮೀಣ ಭಾಷೆ ಸೋಗಡುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ, ಗ್ರಾಮೀಣ ಪರಿಕರವನ್ನು ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ ಮತ್ತಿತರರು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಗ್ರಾಮೀಣ ತಿನಿಸುಗಳ ,ಪರಿಕರಗಳ ಪ್ರದರ್ಶನ ಸ್ಪರ್ಧೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ನೇಹಕೂಟ ಮಣೂರು ಇವರಿಂದ ಗ್ರಾಮೀಣ ನೃತ್ಯ ,ಪ್ರಹಸನ ಪ್ರದರ್ಶನಗೊಳ್ಳಲಿದೆ.

     

  • ಕೋಟ – ಆ.6ಕ್ಕೆ ಪಂಚವರ್ಣ ರಜತ ಗೌರವ ಪ್ರದಾನ ಸಮಾರಂಭ – ಕುಂದಗನ್ನಡದ ಭಾಷಾ ರಾಯಬಾರಿ ಮನೋಹರ್ ಹೆಗ್ಡೆ(ಮನು ಹಂದಾಡಿ) ಆಯ್ಕೆ

    ಕೋಟ – ಆ.6ಕ್ಕೆ ಪಂಚವರ್ಣ ರಜತ ಗೌರವ ಪ್ರದಾನ ಸಮಾರಂಭ – ಕುಂದಗನ್ನಡದ ಭಾಷಾ ರಾಯಬಾರಿ ಮನೋಹರ್ ಹೆಗ್ಡೆ(ಮನು ಹಂದಾಡಿ) ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು, ಈ ಹಿನ್ನಲ್ಲೆಯಲ್ಲಿ ಈ ತಿಂಗಳು ಕುಂದಗನ್ನಡದ ಭಾಷಾ ರಾಯಬಾರಿ ಮನೋಹರ್ ಹೆಗ್ಡೆ(ಮನು ಹಂದಾಡಿ) ಇವರನ್ನು ಇವರನ್ನು ಆಯ್ಕೆಗೊಳಿಸಲಾಗಿದೆ.

    ಪಂಚವರ್ಣ ಸಂಸ್ಥೆ ನೀಡುತ್ತಿರುವ ಎಂಟನೇ ಸಾಧಕ ಶಕ್ತಿಯಾಗಿದ್ದು, ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಕ್ಷೇತ್ರದ ಸಾಧಕ ಜಿ. ತಿಮ್ಮ ಪೂಜಾರಿ, ಸಮಾಜಸೇವಕ ಈಶ್ವರ್ ಮಲ್ಪೆ, ಅನಾಥರ ಬದುಕಿನ ಆಶಾಕಿರಣ ಹೊಸಬೆಳಕು ವಿನಯಚಂದ್ರ ಸಾಸ್ತಾನ, ವಿಶೇಷಚೇತನ ಸಾಧಕಿ ಲಲಿತಾ ಪೂಜಾರಿ, ಸಾಲಿಗ್ರಾಮದ ಹಿರಿಯ ವೈದ್ಯರಾದ ಡಾ. ವಿಶ್ವೇಶ್ವರ ತುಂಗ, ಸಹಕಾರಿ ಕ್ಷೇತ್ರದ ಕೊರಗ ಪೂಜಾರಿ , ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಪಾರಂಪಳ್ಳಿ ಗಣೇಶ್ ಅಡಿಗ,ವೆರಿಕೋಸ್ ತಜ್ಞ ಡಾ.ಎಂ ವಿ ಉರಾಳ ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.

    ಇದೇ ಆ.6 ರಂದು ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಆಸಾಡಿ ಒಡ್ರ್ ವೇದಿಕೆಯಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.

  • ಕುಂದಾಪುರ :ಬೇಳೂರಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

    ಕುಂದಾಪುರ :ಬೇಳೂರಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕುಂದಾಪುರ ತಾಲೂಕು ತೆಕ್ಕಟ್ಟೆ ವಲಯದ ಬೇಳೂರು ಕಾರ್ಯಕ್ಷೇತ್ರದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಬೇಳೂರಿನಲ್ಲಿ ಇತ್ತಿಚಿಗೆ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಕ್ಕಟ್ಟೆ ವಲಯದ ಜನಜಾಗೃತಿ ವಲಯಾಧ್ಯಕ್ಷ ಸುಧಾಕರ್ ಶೆಟ್ಟಿ ವಹಿಸಿದ್ದರು.

    ಸಂಪನ್ಮೂಲ ವ್ಯಕ್ತಿಯಾಗಿ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೋ. ಜಗದೀಶ್ ದುಶ್ಚಟಗಳು ಮತ್ತು ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕು ಯೋಜನಾಧಿಕಾರಿ ನಾರಾಯಣ್ ಪಾಲನ್ ದೀಪ ಬೆಳಗಿಸಿ ಉದ್ಘಾಟಿಸಿದರು.

    ಮುಖ್ಯ ಅತಿಥಿಗಳಾಗಿ ಕೊರ್ಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸೋನಿಕ್, ರೋಟರಿ ಕಾರ್ಯದರ್ಶಿ ಮುತಾರಿಫ್. ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ತೆಕ್ಕಟ್ಟೆವಲಯದ ಮೇಲ್ವಿಚಾರಕಿ ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು. ಬೇಳೂರು ಬಿ, ಒಕ್ಕೂಟದ ಸೇವಾ ಪ್ರತಿನಿಧಿ ಉಷಾ ಸ್ವಾಗತಿಸಿದರೆ, ಬೇಳೂರು ಎ ಒಕ್ಕೂಟದ ಸೇವಾ ಪ್ರತಿನಿಧಿ ಶಿವಾನಿ ವಂದಿಸಿದರು.

  • ಬೈಂದೂರು :ಕರಾವಳಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಂಸದ ಮನವಿ

    ಬೈಂದೂರು :ಕರಾವಳಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಂಸದ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿಯ ಸಮಸ್ಯೆಗಳಿಗೆ ಸ್ಪಂದಿಸುವಂತೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಬಂದರು ಹಾಗೂ ಮೀನುಗಾರಿಕಾ ಸಚಿವ ಸರ್ಬಾನಂದ್ ಸೋನುವಾಲ್ ಅವರನ್ನು ಭೇಟಿ ಮಾಡಿ ವಿನಂತಿಸಿದ್ದಾರೆ.

    ಶುಕ್ರವಾರ ಸಚಿವರನ್ನು ಭೇಟಿ ಮಾಡಿದ ಸಂಸದ ರಾಘವೇಂದ್ರ, ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗರಿಗೆ ರೂ 85.00ಕೋಟಿ ಮಂಜೂರಾಗಿದ್ದು,ಸಿ.ಆರ್.ಝೆಡ್. ಕ್ಲಿಯರೆನ್ಸ್ ಮಾಡಿ ಆದಷ್ಟು ಬೇಗ ಕಾಮಗಾರಿ ಕೈಗೊಳ್ಳಲು ಅನುಕೂಲ ಮಾಡುವುದು, ಉಪ್ಪುಂದ ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು ಮೃತಪಟ್ಟ ಸ್ಥಳದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಬ್ರೇಕ್ ವಾಟರ್ ಹಾಗೂ ಕಿರು ಬಂದರು ಮಂಜೂರು ಮಾಡಬೇಕು. ಬೈಂದೂರಿನಲ್ಲಿ ರೂ. 228.78 ಕೋಟಿ ವೆಚ್ಚದಲ್ಲಿ ಬಹು ಉದ್ಧೇಶಿತ ಹಾರ್ಬರ್ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಕರೆಯಲಾಗಿದ್ದ ಟೆಂಡರ್ ಪ್ರಕಾರ ಖಾಸಗೀ ಕಂಪೆನಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಇದರಿಂದ ಉದ್ಧೇಶಿತ ಯೋಜನೆಗಳಿಗೆ ಬ್ರೇಕ್ವಾಟರ್ ಮತ್ತು ಬರ್ತಿಂಗ್ ಸೌಲಭ್ಯಗಳ ಮೇಲೆ ಹೆಚ್ಚಿನ ಬಂಡವಾಳ ವೆಚ್ಚದ ಅಗತ್ಯವಿರುವುದರಿಂದ, ಕೇಂದ್ರ ಸರ್ಕಾರವೇ ಖುದ್ದಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಲಾಗಿದೆ. ಸಚಿವರು ಈ ಬಗ್ಗೆ ಸಕಾರಾಥ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರ ಪ್ರಕಟಣೆ ತಿಳಿಸಿದೆ.

  • ಕುಂದಾಪುರ: ಸಾಹಿತಿ ಇಂದ್ರಕುಮಾರ್ ಹೆಚ್.ಬಿ.ಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

    ಕುಂದಾಪುರ: ಸಾಹಿತಿ ಇಂದ್ರಕುಮಾರ್ ಹೆಚ್.ಬಿ.ಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಈ ವರ್ಷದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಕಾದಂಬರಿಕಾರ, ಸಾಹಿತಿ, ಶಿಕ್ಷಕ ಇಂದ್ರ ಕುಮಾರ್ ಹೆಚ್.ಬಿ ಅವರ ” ಎತ್ತರ” ಕಾದಂಬರಿಗೆ ದೊರೆತಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಇದೇ ಆಗಸ್ಟ್ ತಿಂಗಳಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಪ್ರಕಟಣೆ ತಿಳಿಸಿದೆ.

    “ಎತ್ತರ” ಕಾದಂಬರಿಯ ಮೊದಲ ಆವೃತ್ತಿಯು 2022ರಲ್ಲಿ ಪ್ರಕಟಗೊಂಡಿತ್ತು. ಕಥೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಇಂದ್ರಕುಮಾರ್ ಸರಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಲೇಖಕರುಗಳಾದ ಡಿ.ಎಸ್.ಚೌಗುಲೆ, ಶ್ರೀನಿವಾಸ ಮೂರ್ತಿ, ಅನುಪಮಾ ಪ್ರಸಾದ್ ಅವರು ನಿರ್ಣಾಯಕರಾಗಿ ಸಹಕರಿಸಿದ್ದಾರೆ.l

  • ಇಂದು ನಾಳೆ ಬಿರುಗಾಳಿ ಸಾಧ್ಯತೆ : ಎಚ್ಚರಿಕೆಯಿಂದಿರುವಂತೆ ಜಿಲ್ಲಾಧಿಕಾರಿ ಸೂಚನೆ

    ಇಂದು ನಾಳೆ ಬಿರುಗಾಳಿ ಸಾಧ್ಯತೆ : ಎಚ್ಚರಿಕೆಯಿಂದಿರುವಂತೆ ಜಿಲ್ಲಾಧಿಕಾರಿ ಸೂಚನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಆಗಸ್ಟ್ 3 ಮತ್ತು 4ನೇ ತಾರೀಖಿನಂದು ಉಡುಪಿ ಜಿಲ್ಲೆಯ ಹಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಸಮುದ್ರ, ನದಿ ತೀರ ಪ್ರದೇಶ, ಹಳ್ಳ, ಕೊಳ್ಳಗಳಲ್ಲಿ ಇಳಿಯುವುದನ್ನು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಅಪಾಯಕಾರಿ ಕಟ್ಟಡ, ಮರ, ಕಂಬಗಳ ಕೆಳಗೆ/ಹತ್ತಿರದಲ್ಲಿ ನಿಲ್ಲಬಾರದು, ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದೂ ಅವರು ಹೇಳಿದ್ದಾರೆ..