Category: ಸುದ್ದಿ

  • ಉಡುಪಿ :ಅಶಿಸ್ತು, ವಿಳಂಬ ಸಹಿಸುವುದಿಲ್ಲ – ಲಕ್ಷ್ಮಿ ಹೆಬ್ಬಾಳ್ಕರ್

    ಉಡುಪಿ :ಅಶಿಸ್ತು, ವಿಳಂಬ ಸಹಿಸುವುದಿಲ್ಲ – ಲಕ್ಷ್ಮಿ ಹೆಬ್ಬಾಳ್ಕರ್

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಜಿಲ್ಲೆಯ ಯಾವುದೇ ಇಲಾಖೆಯಲ್ಲಿ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ಆಶಿಸ್ತು ಕಂಡುಬಂದಲ್ಲಿ ಅಂತಹ ಅಧಿಕಾರಿಗಳು ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.

    ಅವರು ಇಂದು ಉಡುಪಿಯ ತಾಲೂಕು ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

    ರಾಜ್ಯದಲ್ಲಿ ಪ್ರಸ್ತುತ ನೂತನ ಸರ್ಕಾರ ಜಾರಿಗೆ ಬಂದಿದೆ, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸರಕಾರಕ್ಕೆ ಒಳ್ಳೆಯ ಹೆಸರು ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ಕಾರ್ಯದಲ್ಲಿ ಅನಗತ್ಯ ವಿಳಂಬ ಹಾಗೂ ಅಶಿಸ್ತು ತೋರಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಸೂಚನೆ ನೀಡಿದರು.
    ಸರ್ಕಾರದ ಪ್ರಮುಖ ಯೋಜನೆಗಳಾದ ಅನ್ನಬಾಗ್ಯ, ಗೃಹಲಕ್ಷಿ್ಮ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯಲ್ಲಿ ಅರ್ಹರಿರುವ ಫಲಾನುಭವಿಗಳ ಸಂಖ್ಯೆ, ಹಾಗೂ ಯೋಜನೆಯನ್ನು ಅವರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ವಿವರಗಳನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಅಧಿಕಾರಿಗಳು ಜನಪರವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದ ಅವರು, ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಮೊಬೈಲ್ ನ್ನು ಸ್ವಿಚ್ ಆಫ್ ಮಾಡದೇ , ಕೇಂದ್ರಸ್ಥಾನದಲ್ಲೇ ಇದ್ದು, ಅಗತ್ಯ ಸಂದರ್ಭದಲ್ಲಿ ತಕ್ಷಣವೇ ಸಂಪರ್ಕಕ್ಕೆ ಸಿಗುವಂತಿರಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಾಗ ಅನಗತ್ಯ ವಿಳಂಬ ಹಾಗೂ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಿದೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರಿಗೆ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ತಿಳಿಸಿದರು.
    ಪ್ರಸ್ತುತ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ, ಪ್ರಾಕೃತಿಕ ವಿಕೋಪ ಎದುರಿಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಿದ್ದತೆಗಳು, ಸಮುದ್ರ ಕೊರೆತ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದ ಸಚಿವರು, ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದರು.

    ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಶೀಘ್ರದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ , ಗಂಟುರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಶೀಘ್ರದಲ್ಲಿ ಪರಿಹಾರ ವಿತರಿಸುವಂತೆ ಹಾಗೂ ಮಳೆಗಾಲದಲ್ಲಿ ರೈತರಿಗೆ ಭಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯದಂತೆ ಎಚ್ಚರವಹಿಸುವಂತೆ ಮತ್ತು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

    ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃಧ್ದಿಗೆ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು , ಸಮನ್ವಯದಿಂದ ಜನಪರ ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

    ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಮ್ ಹಾಕೆ, ಕಾರ್ಕಳ ವಿಭಾಗದ ಡಿಎಫ್ ಓ ಗಣಪತಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ , ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

  • ಕುಂದಾಪುರ :ಉಚಿತ ಪ್ರಯಾಣದ ಸೌಲಭ್ಯವನ್ನು ಅಧಿಕೃತಗೊಳಿಸಲು ಮೂರು ತಿಂಗಳೊಳಗೆ ಶಕ್ತಿ ಕಾರ್ಡ್ ಮಾಡಿಸಿಕೊಳ್ಳಿ- ತಹಸೀಲ್ದಾರ್ ಶೋಭಾಲಕ್ಷ್ಮಿ

    ಕುಂದಾಪುರ :ಉಚಿತ ಪ್ರಯಾಣದ ಸೌಲಭ್ಯವನ್ನು ಅಧಿಕೃತಗೊಳಿಸಲು ಮೂರು ತಿಂಗಳೊಳಗೆ ಶಕ್ತಿ ಕಾರ್ಡ್ ಮಾಡಿಸಿಕೊಳ್ಳಿ- ತಹಸೀಲ್ದಾರ್ ಶೋಭಾಲಕ್ಷ್ಮಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಇಂದು ರಾಜ್ಯದೆಲ್ಲೆಡೆ “ಶಕ್ತಿ” ಯೋಜನೆ ಲೋಕಾರ್ಪಣೆಗೊಂಡಿದ್ದು ಮುಂದಿನ ಮೂರು ತಿಂಗಳುಗಳ ಒಳಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಶಕ್ತಿ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಹೇಳಿದರು.

    ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವತಿಯಿಂದ ಕರ್ನಾಟಕದಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂರತ ಸರ್ಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣ “ಶಕ್ತಿ ಯೋಜನೆ” ಯನ್ನು ಕುಂದಾಪುರ ಸರ್ಕಾರೀ ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿ ಮಾತನಾಡಿದರು.

    ಇಂದಿನಿಂದ ಯೋಜನೆ ಆರಂಭವಾಗಿದ್ದು, ಪ್ರಯಾಣಿಸುವ ಮಹಿಳೆಯರು ತಾತ್ಕಾಲಿಕವಾಗಿ ಕರ್ನಾಟಕದಲ್ಲಿ ವಾಸ್ತವ್ಯವಿರುವ ದಾಖಲೆಗಳನ್ನು ಬಸ್ ಕಂಡಕ್ಟರ್ ಗೆ ತೋರಿಸಬೇಕು. ಕಂಡಕ್ಟರ್ ಉಚಿತ ಪ್ರಯಾಣದ ಟಕೆಟ್ ನೀಡುತ್ತಾರೆ. ಪ್ರಯಾಣಿಕರು ಪ್ರಯಾಣ ಮುಗಿಯುವ ವರೆಗೂ ಉಚಿತ ಟಕೆಟನ್ನು ಜೊತೆಗಿಟ್ಟುಕೊಳ್ಳಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ದೀಪ ಬೆಳಗಿಸುವಲ್ಲಿ ಹಾಜರಿದ್ದುದು ವಿಶೇಷವಾಗಿತ್ತು.

    ಬೈಂದೂರು ತಹಸೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಕುಂದಾಪುರ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ.ಎನ್., ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ರಾಜೇಶ್ ಎಂ., ಮಂಗಳೂರು ವಿಭಾಗದ ಸಹಾಯಕ ಆಡಳಿತ ಅಧಿಕಾರಿ ರಾಜು ಉಪಸ್ಥಿತರಿದ್ದರು.

    ಬಳಿಕ “ಶಕ್ತಿ” ಯೋಜನೆಯ ಅಂಗವಾಗಿ ಶೃಂಗರಿಸಿದ್ದ ಬಸ್ಸಿಗೆ ಕಟ್ಟಲಾಗಿದ್ದ ರಿಬ್ಬನ್ ಕಟ್ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ತಹಸೀಲ್ದಾರ್ ಶೋಭಾಲಕ್ಷ್ಮೀ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಹಿಳೆಯರು ಎರಡು ಬಸ್ಸುಗಳಲ್ಲಿ ಕುಂದಾಪುರದ ಬಸ್ ನಿಲ್ದಾಣದಿಂದ ತ್ರಾಸಿ ವರೆಗೆ ಪ್ರಯಾಣಿಸಿ ವಾಪಾಸ್ಸಾಗುವ ಮೂಲಕ ಉಚಿತ ಪ್ರಯಾಣವನ್ನು ಖಚಿತಗೊಳಿಸಿದರು.

    ಎಡಬ್ಲ್ಯೂಎಸ್ ಕುಂದಾಪುರ ಬಿ.ಟಿ.ನಾಯಕ್ ಸ್ವಾಗತಿಸಿದರು. ರಾಜೇಶ್ ಮೊಗವೀರ ಪ್ರಾಸ್ತಾವಿಸಿ, ಯೋಗೀಶ್ ಬಂಗೇರಾ ವಂದಿಸಿದರು. ನೆರದಿದ್ದವರಿಗೆ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.

  • ಸಿದ್ದಾಪುರ : ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿದ್ಧಾಪುರ ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ

    ಸಿದ್ದಾಪುರ : ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿದ್ಧಾಪುರ ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ

    Video:

    ಕುಂದಾಪುರ ಮಿರರ್ ಸುದ್ದಿ….


    ಕುಂದಾಪುರ :ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿದ್ಧಾಪುರ ಶಾಖೆಯ ಸ್ವಂತ ಕಟ್ಟಡ ಬ್ರಾಹ್ಮೀ ಇದರ ಉದ್ಘಾಟನಾ ಕಾರ್ಯಕ್ರಮ ಜೂನ್ 9 ಶುಕ್ರವಾರ ನಡೆಯಿತು.

    ನವೀಕೃತ ಕಟ್ಟಡವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನಾ ಮಾತುಗಳನ್ನಾಡಿದ ವಿನಯ ಕುಮಾರ್ ಸೂರಿಂಜೆ ಅವರು, ಕಳೆದ ಇಪ್ಪತ್ತು ವರ್ಷಗಳಿಂದಿಚೆ ಸಹಕಾರ ಸಂಘಗಳ ಸುದೃಢವಾಗಿ ಬೆಳೆದಿದೆ. ಹಿಂದೆ ಸದಸ್ಯರಿಗೆ ಸಾಲ ಕೊಡಲು ಸಮಸ್ಯೆಯಾಗುತ್ತಿತ್ತು. ಈಗ ಹಾಗಿಲ್ಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಂಪನ್ಮೂಲ ಕ್ರೋಢೀಕರಿಸಿಕೊಡುತ್ತಿದೆ. ಪ್ರಾಮಾಣಿಕತೆ, ಸಹಕಾರಿ ಮನೋಭಾವದಡಿ ಕೆಲಸ ಮಾಡಿದರೆ ಅಭಿವೃದ್ದಿ ಸಾಧ್ಯ ಎನ್ನುವುದಕ್ಕೆ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘವೇ ಸಾಕ್ಷಿ ಎಂದರು.

    ಭದ್ರತಾ ಕೊಠಡಿಯನ್ನು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆ ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಸ್.ಸಚ್ಚಿದಾನಂದ ಚಾತ್ರ ಉದ್ಘಾಟಿಸಿದರು. ಭದ್ರತಾ ಕೋಶದ ಉದ್ಘಾಟನೆಯನ್ನು ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ನೆರವೇರಿಸಿದರು.
    ಠೇವಣಿ ಪತ್ರವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ ವಿತರಿಸಿದರು. ಸಾಲ ಪತ್ರವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ ವಿತರಿಸಿದರು.

    ಸ್ವ-ಸಹಾಯ ಗುಂಪುಗಳ ಸಾಲ ವಿತರಣೆಯನ್ನು ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಕುಲಾಲ ನೆರವೇರಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ಲಾಕರ್ ಕೀ ಹಸ್ತಾಂತರ ಮಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಶಂಕರನಾರಾಯಣ ಯಡಿಯಾಳ ಮಾತನಾಡಿ, ನಾನು ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗ ಮೂರು ಮಹತ್ವದ ಕನಸುಗಳಿದ್ದವು. ಸಂಸ್ಥೆಯ ಸಂಸ್ಥಾಪಕರಾದ ಮಾನಂಜೆ ನಾರಾಯಣ ರಾವ್ ಪ್ರತಿಮೆ ನಿರ್ಮಾಣ, ಸಿದ್ದಾಪುರದಲ್ಲಿ ಸ್ವಂತ ಶಾಖಾ ಕಟ್ಟಡ ನಿರ್ಮಾಣ, ಹಾಗೂ ಮೂರು ಲಕ್ಷದ ತನಕ ಬೆಳೆಸಾಲ ಮಾಡಿದ ರೈತ ಮರಣಹೊಂದಿದರೆ ಆ ಸಾಲಮನ್ನಾ ಆಗಬೇಕು ಎನ್ನುವ ಹಿನ್ನೆಲೆ ಪ್ರಯತ್ನಗಳು ನಡೆಯುತ್ತಿದೆ ಎಂದರು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ ಕುಮಾರ್ ಎಸ್.ವಿ., ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿರಿಯ ಸದಸ್ಯರಾದ ಎಸ್.ವಾಸುದೇವ ಯಡಿಯಾಳ, ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್ ಭಾಗವಹಿಸಿದ್ದರು.

    ಸಂಘದ ಉಪಾಧ್ಯಕ್ಷರಾದ ರಘುರಾಮ ಶೆಟ್ಟಿ, ನಿರ್ದೇಶಕರಾದ ಎಂ.ಎಸ್.ವಿಷ್ಣುಮೂರ್ತಿ, ರವಿ ಗಾಣಿಗ, ಹೆಚ್.ರಾಜೀವ ಪೂಜಾರಿ, ರತ್ನಾಕರ ಶೆಟ್ಟಿ, ಜಯರಾಮ ನಾಯ್ಕ, ನಾಗಪ್ಪ ಪೂಜಾರಿ, ಇ.ಸುಬ್ರಾಯ ಹೆಗ್ಡೆ, ಶ್ರೀಮತಿ ಅಂಬಿಕಾ ಮಯ್ಯ, ಶ್ರೀಮತಿ ಜ್ಯೋತಿ, ಎಸ್,.ರಾಜು, ಯು.ಕರುಣಾಕರ ನಾಯ್ಕ, ಯು.ಪ್ರಭಾಕರ ನಾಯ್ಕ, ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎ.ಉದಯ ಶೆಟ್ಟಿ, ಶಾಖಾ ವ್ಯವಸ್ಥಾಪಕರಾದ ಎಸ್.ಸತ್ಯನಾರಾಯಣ ಕನ್ನಂತ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡ ಇಂಜಿನಿಯರ್ ಎಸ್.ಚಂದ್ರಶೇಖರ ಯಡಿಯಾಳ, ಕಟ್ಟಡದ ವಿನ್ಯಾಸ ರೂಪಿಸಿದ ಸತೀಶ್ ಭಟ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಎಸ್.ಶಂಕರನಾರಾಯಣ ಯಡಿಯಾಳ ಅವರನ್ನು ಸನ್ಮಾನಿಸಲಾಯಿತು.

    ಗುಲಾಬಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಸಂಘದ ನಿರ್ದೇಶಕ ಜಯರಾಮ ನಾಯ್ಕ ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಮಂಜುನಾಥ ನಾಯ್ಕ ಸಂಘದ ವರದಿ ವಾಚಿಸಿದರು. ಎ.ಜಿ.ಎಂ. ಚೆನ್ನ ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

  • ಕೋಡಿ ಕನ್ಯಾಣ- ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಮೂಲಕ ವಿವಿಧ ಕಾಮಗಾರಿ

    ಕೋಡಿ ಕನ್ಯಾಣ- ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಮೂಲಕ ವಿವಿಧ ಕಾಮಗಾರಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೋಡಿ ಕನ್ಯಾಣದ 3 ಕೆರೆ ಹೂಳೆತ್ತುವ ಕಾಮಗಾರಿ, ಕೃಷಿ ಭೂಮಿ, ರಸ್ತೆ ಕಾಮಗಾರಿ ಹಾಗೂ ಶಾಲಾ ಕಾಂಪೌಂಡ್ ಕಾಮಗಾರಿಯನ್ನು ಬ್ರಹ್ಮಾವರ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಮಹೇಶ್ ಹಾಗೂ ಜಿಲ್ಲಾ ಪಂಚಾಯತ್ ಎ.ಡಿ.ಪಿ.ಸಿ ವಿಜಯ್ ಶ್ಯಾಮ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

    ಕೋಡಿ ಗ್ರಾಮ ಪಂಚಾಯತ್‍ನಿಂದ ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಸುಮಾರು 86 ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್, ಪಂಚಾಯತ್ ಕಾರ್ಯದರ್ಶಿ ಉಷಾಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಉಚಿತ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ

    ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಉಚಿತ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸ.ಹಿ.ಪ್ರಾ ಶಾಲೆ ಕೋಟದ ವಿದ್ಯಾರ್ಥಿಗಳಿಗೆ ಕಾಮಧೇನು ವಿವಿಧೋದ್ದೇಶ ಸಹಕಾರ ಸಂಘ ಹಂದಟ್ಟು ಹಾಗೂ ಮಣಿಪಾಲ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿಮಿಟೆಡ್ ಇವರುಗಳು ಜಂಟಿಯಾಗಿ ನೀಡಿದ ನೋಟ್ ಬುಕ್ , ಸ್ಕೂಲ್ ಬ್ಯಾಗ್‍ಗಳ ವಿತರಣಾ ಸಮಾರಂಭ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.

    ಗಣ್ಯರ ಸಮ್ಮುಖದಲ್ಲಿ ನೋಟ್ ಬುಕ್ , ಸ್ಕೂಲ್ ಬ್ಯಾಗ್‍ಗಳ ವಿತರಣೆ ಮಾಡಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ನಿವೃತ್ತ ಪಶುವೈದ್ಯಾಧಿಕಾರಿ ಡಾ .ಎಸ್. ಮೋಹನ್, ನ್ಯಾಯವಾದಿ ಮಂಜುನಾಥ ಎಸ್ ಕೆ , ಕಾಮಧೇನು ವಿ.ಸ. ಸಂಘದ ಕಾರ್ಯದರ್ಶಿ ಸತೀಶ್ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮಿ ಸೋಮಯಾಜಿ ,ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಹೊಳ್ಳ ಉಪಸ್ಥಿತರಿದ್ದರು.

    ಸಹ ಶಿಕ್ಷಕರಾದ ರೋಬಿ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ವಿನಯಕುಮಾರಿ ಸ್ವಾಗತಿಸಿ, ಗೌರವ ಶಿಕ್ಷಕಿ ಶಾರದ ವಂದಿಸಿದರು. ಸಹಶಿಕ್ಷಕಿಯರಾದ ಪುಷ್ಪಲತಾ ಮಾನಸ , ರಂಜಿತಾ ಸಹಕರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕೊಡುಗೆಯಾಗಿ ನೀಡಿದ ಒಳಾಂಗಣ ಕ್ರೀಡಾ ಸಾಮಗ್ರಿಗಳನ್ನು ಗ್ರಾಮ ಪಂಚಾಯತ್, ಶಾಲಾ ಮುಖ್ಯ ಶಿಕ್ಷಕರಿಗೆ
    ಹಸ್ತಾಂತರಿಸಿದರು.

     

  • ಕುಂದಾಪುರ :ರೈತರೆಡೆಗೆ ನಮ್ಮ ನಡಿಗೆ 26ನೇ ಸರಣಿ ಕಾರ್ಯಕ್ರಮ – ಹಿರಿಯ ಕೃಷಿಕ. ಶ್ರೀಧರ(ಸಿದ್ಧ) ದೇವಾಡಿಗ ಆಯ್ಕೆ

    ಕುಂದಾಪುರ :ರೈತರೆಡೆಗೆ ನಮ್ಮ ನಡಿಗೆ 26ನೇ ಸರಣಿ ಕಾರ್ಯಕ್ರಮ – ಹಿರಿಯ ಕೃಷಿಕ. ಶ್ರೀಧರ(ಸಿದ್ಧ) ದೇವಾಡಿಗ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಕೋಟ ಹೋಬಳಿ ವ್ಯಾಪ್ತಿಯಲ್ಲಿ ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 26ರ ಸಂಭ್ರಮ ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಬರುವ ಜೂ.11ರ ಬೆಳಿಗ್ಗೆ 10.ಗ ನಡೆಯಲಿದೆ. ಈ ಬಾರಿ ಕೋಟ ಹರ್ತಟ್ಟು ಪರಿಸರದ ಹಿರಿಯ ಕೃಷಿ ಕಾಯಕ ಜೀವಿ ಶ್ರೀಧರ (ಸಿದ್ಧ) ದೇವಾಡಿಗ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಗುವುದು ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕುಂದಾಪುರ: ಗೋಪಾಲ ಪೂಜಾರಿಗೆ ಸ್ಥಾನ ನೀಡುವಂತೆ ಗೃಹ ಸಚಿವರಿಗೆ ಮನವಿ

    ಕುಂದಾಪುರ: ಗೋಪಾಲ ಪೂಜಾರಿಗೆ ಸ್ಥಾನ ನೀಡುವಂತೆ ಗೃಹ ಸಚಿವರಿಗೆ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ದಿದ್ದ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿಯವರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಕೊಲ್ಲೂರು ಕಾಂಗ್ರೆಸ್ ಸಮಿತಿ ವತಿಯಿಂದ ಮನವಿ ಮಾಡಲಾಯಿತು.

    ಬುಧವಾರ ಗೃಹಸಚಿವ ಕುಟುಂಬ ಸಮೇತ ಕೊಲ್ಲೂರಿಗೆ ಆಗಮಿಸಿ ಚಂಡಿಕಾಯಾಗದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದ ಬಳಿಕ ನಡೆದ ಸಭೆಯಲ್ಲಿ ಈ ಮನವಿ ಮಾಡಲಾಯಿತು.

    ಮಾಜೀ ಶಾಸಕ ಕೆ. ಗೋಪಾಲ ಪೂಜಾರಿಯವರು ಈ ಹಿಂದೆ ಕೆ.ಎಸ್.ಆರ್.ಟಿ.ಸಿ ನಿಗಮ ಅಧ್ಯಕ್ಷರಾಗಿದ್ದ ಸಂದರ್ಭ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯ ಒದಗಿಸಿದ್ದರು. ಬೈಂದೂರಿನಲ್ಲಿ ಬಸ್ ಡಿಪೋ ಹಾಗೂ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಅನುಮೋದನೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಸ್ಥಾನಮಾನ ನೀಡಿದಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಲಾಯಿತು.

    ಅಲ್ಲದೇ ಕೊಲ್ಲೂರು ದೇವಸ್ಥಾನಕ್ಕೆ ಖಾಯಂ ಪೊಲೀಸರನ್ನು ನೇಮಿಸುವಂತೆ ಬೇಡಿಕೆ ಸಲ್ಲಿಸಲಾಯಿತು. ಈ ಸಂದರ್ಭ ಕೊಲ್ಲೂರು ಕಾಂಗ್ರೆಸ್ ಸಮಿತಿ ವತಿಯಿಂದ ಗೃಹಸಚಿವರನ್ನು ಸನ್ಮಾನಿಸಲಾಯಿತು.

    ಮಾಜೀ ಸಚಿವ ವಿನಯಕುಮಾರ್ ಸೊರಕೆ, ಮಾಜೀ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ರಮೇಶ್ ಗಾಣಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ ಗಿರಿಧರ್ ಭಿಡೆ, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ವಾಸು, ವಿನಾಯಕ ಆಚಾರ್ಯ, ಚಂದ್ರ ಬಳೆಗಾರ್, ಹರೀಶ್ ಸಿ ವಿ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಭಾರತೀಯ ಸಂವಿಧಾನ ಪುಸ್ತಕ ಬಿಡುಗಡೆ

    ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಭಾರತೀಯ ಸಂವಿಧಾನ ಪುಸ್ತಕ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ ಹಾಗೂ ಉಡುಪಿಯ ಎಮ್.ಜಿ.ಎಮ್. ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕಿ ಸ್ಫೂರ್ತಿ ಎಸ್. ಫೆರ್ನಾಂಡಿಸ್‍ರವರು ರಚಿಸಿದ ಭಾರತೀಯ ಸಂವಿಧಾನ ಪುಸ್ತಕವನ್ನು ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಮ್.ಜಿ.ಎಮ್. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ| ಕೆ. ಸುರೇಂದ್ರನಾಥ ಶೆಟ್ಟಿ ಬಿಡುಗಡೆಗೊಳಿಸಿದರು.

    ಈ ಪುಸ್ತಕವನ್ನು ನೂತನ ರಾಷ್ಟ್ರೀಯ ಶಿಕ್ಷಣಾ ನೀತಿಯ ಅನ್ವಯ ಮಂಗಳೂರು ವಿ.ವಿ. ರೂಪಿಸಿದ ಪಠ್ಯಕ್ರಮಕ್ಕೆ ಅನುಗುಣವಾಗಿ ಮೂರನೇ ಅಥವಾ ನಾಲ್ಕನೇಯ ಸೆಮಿಸ್ಟರ್ ಕಡ್ಡಾಯ ಪತ್ರಿಕೆ (ಂಇಅಅ) ‘ಭಾರತೀಯ ಸಂವಿಧಾನ’ದ ಕುರಿತಾಗಿ ರಚಿಸಲಾಗಿದೆ.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ ಮತ್ತು ಪ್ರೀತಿ ಹೆಗ್ಡೆ, ವಿದ್ಯಾರ್ಥಿ ಪ್ರತಿನಿಧಿ ವಿಘ್ನೇಶ್ ಶೆಟ್ಟಿ ಉಪಸ್ಥಿತರಿದ್ದರು. ವ್ಯವಹಾರ ನಿರ್ವಹಣಾ ವಿಭಾಗದ ಪ್ರಾಧ್ಯಾಪಕಿ ಅವಿತಾ ಕೊರೆಯಾ ನಿರೂಪಿಸಿದರು.

     

  • ಕೊಲ್ಲೂರು : ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೊಲ್ಲೂರಿಗೆ ಭೇಟಿ

    ಕೊಲ್ಲೂರು : ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೊಲ್ಲೂರಿಗೆ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಗೃಹಮಂತ್ರಿಗಳಾಗಿರುವ ಡಾ. ಜಿ. ಪರಮೇಶ್ವರ್ ಅವರು ಕುಟುಂಬ ಸಮೇತರಾಗಿ ಬುಧವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೆಟಿ ನೀಡಿ ಮೂಕಾಂಬಿಕೆಯ ದರ್ಶನ ಭಾಗ್ಯ ಪಡೆದರು.

    ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ನಡೆದ ಚಂಡಿಕಾಹೋಮ ಕಾರ್ಯಕ್ರಮದಲ್ಲಿ ಗೃಹ ಸಚಿವರು ಭಾಗಿಯಾದರು. ನೂತನ ಗೃಹ ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

  • ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಕುಂದಾಪುರ ವಲಯ ಸಂಸತ್ತ್‌ ಮಾದರಿ ಚುನಾವಣೆ ಇವಿಎಮ್ ಆ್ಯಪ್ ಮೂಲಕ ಮತ ಚಲಾಯಿಸಿದ ವಿದ್ಯಾರ್ಥಿಗಳು

    ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಕುಂದಾಪುರ ವಲಯ ಸಂಸತ್ತ್‌ ಮಾದರಿ ಚುನಾವಣೆ ಇವಿಎಮ್ ಆ್ಯಪ್ ಮೂಲಕ ಮತ ಚಲಾಯಿಸಿದ ವಿದ್ಯಾರ್ಥಿಗಳು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಆಯ್ಕೆಗಾಗಿ ಸಂಸತ್ತ್‌ ಮಾದರಿಯ ಚುನಾವಣೆಯನ್ನು ನಡೆಸಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಚುನಾವಣೆ ಪ್ರಕ್ರಿಯೆಯ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವುದು, ಚಿಹ್ನೆ ನೀಡುವಿಕೆ, ಪ್ರಚಾರ ಹೀಗೆ ಎಲ್ಲಾ ಹಂತಗಳ ನಂತರ ಮಕ್ಕಳಿಗೆ ಇವಿಎಮ್ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಯಿತು. ಮಕ್ಕಳು ತುಂಬಾ ಸಂಭ್ರಮದಿಂದ ಮತ ಚಲಾಯಿಸಿದರು. ನೋಟಾ ಕ್ಕೂ ಅವಕಾಶ ನೀಡಲಾಗಿತ್ತು.

    ನಾಯಕನ ಸ್ಥಾನಕ್ಕೆ ಮೂವರು ಮತ್ತು ಉಪನಾಯಕನ ಸ್ಥಾನಕ್ಕೆ ಐವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾ ನಾಯಕಿಯಾಗಿ 8ನೇ ತರಗತಿ ಸ್ನೇಹಾ ಮತ್ತು ಉಪನಾಯಕಿಯಾಗಿ 7ನೇ ತರಗತಿ ಅನುಷ್ಕಾ ಆಯ್ಕೆಯಾದರು.

    ಚುನಾವಣಾ ಅಧಿಕಾರಿಯಾಗಿ ಸಹ ಶಿಕ್ಷಕ ಆನಂದ ಕುಲಾಲ ಕರ್ತವ್ಯ ನಿರ್ವಹಿಸಿದರೆ ಸಹ ಶಿಕ್ಷಕರಾದ ನಾರಾಯಣ ಅಡಿಗ, ಸಂತೋಷ, ಸಂದ್ಯಾ ಕೆ, ಗೌರವ ಶಿಕ್ಷಕಿಯರಾದ ಪ್ರಮೀಳಾ ಮತ್ತು ಸಯನ ಮತಗಟ್ಟೆ ಅಧಿಕಾರಿಗಳಗಿ ಕರ್ತವ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಗಿರಿಜಾ ಡಿ. ಮಾರ್ಗದರ್ಶನ ಮಾಡಿದರು.