Category: ಸುದ್ದಿ

  • ಬೈಂದೂರು : ಬಡಾಕೆರೆ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

    ಬೈಂದೂರು : ಬಡಾಕೆರೆ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೋವಿಡ್ ಸಂಕಷ್ಟದಂತ ಸಂದರ್ಭದಲ್ಲಿಯೂ 3000 ಕೋಟಿ.ರೂ ವಿಶೇಷವಾದ ಅನುದಾನವನ್ನು ಬೈಂದೂರು ವಿಧಾನಸಭೆ ಕ್ಷೇತ್ರಕ್ಕೆ ತರಲಾಗಿದ್ದು ಕ್ಷೇತ್ರವನ್ನು ಸಮಗ್ರವಾದ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ 60,000 ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡುವಂತ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

    ಅವರು 57.72 ಲಕ್ಷ.ರೂ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಬೈಂದೂರು ವಿಧಾನಸಭೆ ಕ್ಷೇತ್ರದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ಬುಧವಾರ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

    ವೇದಮೂರ್ತಿ ಲೋಕೇಶ್ ಅಡಿಗ ಪ್ರಾಂತೀಯ ಧರ್ಮ ಅಧಿಕಾರಿ ಶ್ರೀ ಶಾರದಾ ಪೀಠಂ ಶೃಂಗೇರಿ ಅವರು ಮಾತನಾಡಿ
    ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮಿಸಿದ ಶಾಸಕರಿಗೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ನಾಡ ಗ್ರಾ.ಪಂ ಉಪಾಧ್ಯಕ್ಷೆ ಪದ್ದು ಪೂಜಾರ್ತಿ, ಸದಸ್ಯ ಶ್ರೀಧರ್ ಬಡಾಕೆರೆ,ಮಾಧವ ಅಡಿಗ,ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ, ಉದ್ಯಮಿ ಅಶೋಕ್ ಶೆಟ್ಟಿ,ಶರತ್ ಶೆಟ್ಟಿ ಉಪ್ಪುಂದ, ಮಹೇಶ್ ಮೆಂಡನ್, ,ಉಮೇಶ್ ಶೆಟ್ಟಿ ಕಲ್ಗದ್ದೆ, ,ಪ್ರಥ್ವಿಶ್ ಕೋಣ್ಕಿ,ನಿತ್ತು ಶೇಟ್ ನಾಡ, ಮಂಜುನಾಥ್ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.

  • ಇತಿಹಾಸ ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವೈಭವದ ಶ್ರೀ ಮನ್ಮಹಾರಥೋತ್ಸವ ಸಂಪನ್ನ

    ಇತಿಹಾಸ ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವೈಭವದ ಶ್ರೀ ಮನ್ಮಹಾರಥೋತ್ಸವ ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಪುರಾಣ ಹಾಗೂ ಇತಿಹಾಸ ಪ್ರಸಿದ್ದವಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವೈಭವದ ಶ್ರೀ ಮನ್ಮಹಾರಥೋತ್ಸವ ಬುಧವಾರ ವೈಭವದಿಂದ ಸಂಪನ್ನಗೊಂಡಿತು. ಶ್ರೀ ದೇವಿಯ ವಿಜ್ರಂಭಣೆಯ ಉತ್ಸವಕ್ಕೆ ಆಸು ಪಾಸಿನ ಗ್ರಾಮಗಳಿಂದ, ರಾಜ್ಯದ ವಿವಿಧ ಭಾಗಗಳಿಂದ ಹೊರರಾಜ್ಯದಿಂದ ಹಾಗೂ ವಿದೇಶದಿಂದ ಬಂದಿದ್ದ ದೊಡ್ಡ ಸಂಖ್ಯೆಯ ಭಕ್ತರು ಸಾಕ್ಷಿಗಳಾದರು.

    ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ರಥೋತ್ಸವದ ಆಚರಣೆಯಲ್ಲಿ ಅತ್ಯಂತ ಪ್ರಮುಖ ವಿಧಿಗಳನ್ನು ಪೂರೈಸುವ ತಂತ್ರಿ ರಾಮಚಂದ್ರ ಅಡಿಗಳ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ 12.30 ರ ಮುಥುನ ಲಗ್ನದಲ್ಲಿ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯಿತು. ಸಂಜೆ 5 ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುರಿಸಿ ರಥಬೀದಿಯಲ್ಲಿ ಬ್ರಹ್ಮರಥವನ್ನು ಶಂಕರಾಶ್ರಮದವರೆಗೆ ಕೊಂಡೊಯ್ಯಲಾಯಿತು. ಜಾತ್ರೆಯ ತೇರಿನ ಈ ವೈಭವಕ್ಕೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷೀಯಾದರು. ರಥಬೀದಿಯ ಸಂಭ್ರಮದ ಉತ್ಸವಾಚರಣೆಯ ಬಳಿಕ ಶ್ರೀ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು.
    ದೇವಸ್ಥಾನದ ತಂತ್ರಿ ಕೆ.ರಾಮಚಂದ್ರ ಅಡಿಗರ ನೇತೃತ್ವದಲ್ಲಿ ಪೂಜಾ ವಿಧಾನಗಳು ನಡೆಯಿತು ಹಿರಿಯ ಖುತ್ವೀಜರಾದ ಕೆ.ಎನ್.ನರಸಿಂಹ‌ ಅಡಿಗ, ಶ್ರೀಧರ ಅಡಿಗ, ಕೆ.ಎನ್.ಗೋವಿಂದ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಘ್ನೇಶ್ ಅಡಿಗ‌ ಇದ್ದರು. ಕಳೆದ ಕೆಲ ವರ್ಷಗಳಿಂದ ಜಾರಿಯಲ್ಲಿ ಇದ್ದ ಕೋವಿಡ್ 19 ನಿಯಮಗಳು ಈ ಬಾರಿಯ ರಥೋತ್ಸವದಲ್ಲಿ ಇಲ್ಲದೆ ಇದ್ದುದರಿಂದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ನೇತ್ರತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಮಾ.5 ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶ್ರೀ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆಯ ಅಂಗವಾಗಿ ಪ್ರತಿ ದಿನವೂ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾ.9 ರಂದು ಮಾಂಗಲ್ಯೋತ್ಸವ ಮಯೂರಾರೋಹಣೋತ್ಸವ, ಮಾ.10 ರಂದು ಡೋಲಾರೋಹಣೋತ್ಸವ, ಮಾ.11 ರಂದು ಪುಷ್ಪಮಂಟಪಾರೋಹಣೋತ್ಸವ, ಮಾ.12 ರಂದು ವೃಷಭಾರೋಹಣೋತ್ಸವ, ಮಾ.13 ರಂದು ಗಜಾರೋಹಣೋತ್ಸವ, ಮಾ.14 ರಂದು ಸಿಂಹಾರೋಹಣೋತ್ಸವ ಆಚರಣೆಗಳನ್ನು ನಡೆಸಲಾಗಿತ್ತು. ಗುರುವಾರ ಓಕುಳಿ ಹಾಗೂ ಅವಭೃತ ಸ್ನಾನ, ಶುಕ್ರವಾರ ಅಶ್ವರೋಹಣೋತ್ಸವ, ಮಹಾಪೂರ್ಣಾಹುತಿ, ಧ್ವಜವರೋಹಣ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆ ನಡೆಯಲಿದೆ.

    ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಕೆರಾಡಿ, ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ, ಡಾ.ಅತುಲಕುಮಾರ ಶೆಟ್ಟಿ, ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್, ಕೆ.ಪಿ.ಶೇಖರ್, ಬ್ರಹ್ಮರಥ ದಾನಿ ಉದ್ಯಮಿ ಸುನೀಲ್ ಶೆಟ್ಟಿ, ವೀರಭದ್ರ ದೇವಸ್ಥಾನದ ನಿರ್ಮಾತೃ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಹಿಂದಿನ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ಚುಚ್ಚಿ ನಾರಾಯಣ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು ಇದ್ದರು.

  • ಮಾ.16.ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ರಥೋತ್ಸವ, ಫ್ರೆಂಡ್ಸ್ ವಡ್ಡರ್ಸೆ ಹಾಗೂ ರಥಬೀದಿ ಫ್ರೆಂಡ್ಸ್ ವತಿಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜನೆ

    ಮಾ.16.ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ರಥೋತ್ಸವ, ಫ್ರೆಂಡ್ಸ್ ವಡ್ಡರ್ಸೆ ಹಾಗೂ ರಥಬೀದಿ ಫ್ರೆಂಡ್ಸ್ ವತಿಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜನೆ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ಶ್ರೀ ಮನ್ಮಹಾರಥೋತ್ಸವ ಮಾ.16 ಗುರುವಾರ ಜರಗಲಿದ್ದು, 17ರ ಶುಕ್ರವಾರ ತುಲಾಭಾರ ಸೇವೆ 18ರಂದು ಶನಿವಾರ ಬಸವನ ಕಾಣಿಕೆ ಕಾರ್ಯಕ್ರಮಗಳು ನಡೆಯಲಿದ್ದು ಅದೇ ದಿನ ಅಪರಾಹ್ನ 12-30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ . ಜಾತ್ರೆಯ ಪ್ರಯುಕ್ತ ಮಾ. 16 ಗುರುವಾರ ಫ್ರೆಂಡ್ಸ್ ವಡ್ಡರ್ಸೆ ಇವರ ಆಶ್ರಯದಲ್ಲಿ ಸಂಭ್ರಮ 2023 ಕಾರ್ಯಕ್ರಮದ ಅಂಗವಾಗಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಯಕ್ಷಗಾನ ಪಾವನ ತುಳಸಿ ಪ್ರದರ್ಶನಗೊಳ್ಳಲಿದೆ, ಮಾ. 18ರ ಶನಿವಾರ ರಾತ್ರಿ ರಥಬೀದಿ ಫ್ರೆಂಡ್ಸ್ ವಡ್ಡರ್ಸೆ ಇವರ ವಾರ್ಷಿಕೋತ್ಸವ ವಿವಿಧ ಸಾಂಸ್ಕ್ರತಿಕ,ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ.

  • ಹರ್ತಟ್ಟು- ನೂತನ ಪೌಳಿಲೋಕಾರ್ಪಣೆ ,ಅಷ್ಟಬಂಧ ಬ್ರಹ್ಮಕಲಶಕ್ಕೆ ಚಪ್ಪರ ಮುಹೂರ್ತ, ಮಾ.20ರಂದು ಹೊರಕಾಣಿಕೆ ಸಮರ್ಪಣೆ

    ಹರ್ತಟ್ಟು- ನೂತನ ಪೌಳಿಲೋಕಾರ್ಪಣೆ ,ಅಷ್ಟಬಂಧ ಬ್ರಹ್ಮಕಲಶಕ್ಕೆ ಚಪ್ಪರ ಮುಹೂರ್ತ, ಮಾ.20ರಂದು ಹೊರಕಾಣಿಕೆ ಸಮರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟ ಗಿಳಿಯಾರು ಗ್ರಾಮದ ಹರ್ತಟ್ಟಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತು ಪೌಳಿ ಲೋಕಾರ್ಪಣೆ ಶ್ರೀ ದೇವಳದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಇದೇ ಬರುವ ಮಾರ್ಚ್ 23,24ರಂದು ಜರಗಲಿದೆ.ಆ ಪ್ರಯುಕ್ತ ಬುಧವಾರ ಶ್ರೀದೇವಳದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ದೇವಳದ ಅರ್ಚಕ ಸುಧೀರ್ ಐತಾಳ್ ನೇತ್ರತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ, ಕಾರ್ಯದರ್ಶಿ ಹರೀಷ್ ದೇವಾಡಿಗ, ಕೋಶಾಧಿಕಾರಿ ಶ್ರೀಕಾಂತ್ ಶೆಣೈ, ತಿಮ್ಮ ಕಾಂಚನ್, ಆದಿತ್ಯ ಕೋಟ,ನಾಗರಾಜ ಗಾಣಿಗ, ಏಕದಂತ ಶಾಮಿಯಾನ ಮಾಲಿಕ ಅಯ್ಯಪ್ಪ ದೇವಾಡಿಗ,ಬಾಬು ಶೆಟ್ಟಿ,ಚಂದ್ರ ಹಾಡಿಕೆರೆ ಮತ್ತಿತರರು ಉಪಸ್ಥಿತರಿದ್ದರು.

    ಸುತ್ತಮುತ್ತಲಿನ ಗ್ರಾಮಸ್ಥರು ಹೊರೆಕಾಣಿಕೆ ಸಮರ್ಪಿಸುವವರು ಮಾ.20ರ ದಿನ ನಿಗದಿಪಡಿಸಲಾಗಿದೆ.ಎಂದು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ ತಿಳಿಸಿದ್ದಾರೆ.

  • ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ

    ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…


    ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಒಂದೇ ಸರಕಾರದ ಅವಧಿಯಲ್ಲಿ ಅನುಮೋದನೆ ದೊರೆತು ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಡಬ್ಬಲ್ ಇಂಜಿನ್ ಸರಕಾರದಿಂದ ಸಾಧ್ಯವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

    ಅವರು ಬುಧವಾರ ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ತಾಲೂಕು ಕೇಂದ್ರಕ್ಕೆ ಅವಶ್ಯವಿದ್ದ ನೂತನ ಆಡಳಿತ ಸೌಧಕ್ಕೆ 10 ಕೋಟಿ ಅನುದಾನ ಮಂಜೂರಾಗಿ ಎರಡು ವರ್ಷದಲ್ಲಿ ಸುಂದರ ಕಟ್ಟಡ ತಲೆಯೆತ್ತಿದೆ. 785 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದು, 43 ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿ ಮನೆಗೂ ನೀರಿನ ಪೂರೈಕೆ ಮಾಡಲಾಗುತ್ತದೆ. ಮೀನುಗಾರರಿಗೆ ಅನುಕೂಲವಾಗುವ ಯೋಜನೆ, ಬಂದರು ಸೇರಿದಂತೆ ಮೂಲಭೂತ ಸೌಲಭ್ಯಗಳೊಂದಿಗೆ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಅವಭಿವೃದ್ಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೆರವಿನಿಂದಾಗಿ ವಿಶೇಷ ಒತ್ತು ನೀಡಲಾಗಿದೆ ಎಂದರು.

    ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುತೇಕ ಮನೆಗಳಿಗೆ ವಿದ್ಯುತ್ ಸೌಲಭ್ಯ ಶೈಕ್ಷಣಿಕ ಅಭಿವೃದ್ಧಿಯಡಿಯಲ್ಲಿ ಪ್ರತಿ ಶಾಲೆಗಳಿಗೆ ಸುಸಜ್ಜಿತ ಕೊಠಡಿ ನಿರ್ಮಾಣ, ರಸ್ತೆ, ಏತ ನೀರಾವರಿ ಮೊದಲಾದ ಯೋಜನೆಗಳನ್ನು ಬೈಂದೂರಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.

    ಈ ವೇಳೆ ಆಡಳಿತ ಸೌಧವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ ಗೃಹ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು.

    ಈ ವೇಳೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್., ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರೆ ಸಿ.ಕೆ. ಮಂಜುಳ, ಸಹಾಯಕ ಕಾರ್ಯಪಾಲಕ ಅಭಿಯಂತರೆ ಎಮ್. ಸಹನ, ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ, ಯೋಜನಾ ಆಯೋಗದ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಬೆಸ್ಕೂರು, ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

    ಬೈಂದೂರು ತಾಲೂಕು ಶಿಕ್ಷಕಿಯರು ಪ್ರಾರ್ಥನೆಗೈದರು. ಬೈಂದೂರು ತಹಶಿಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ವಂದಿಸಿದರು. ಶಿಕ್ಷಕರುಗಳಾದ ಸುಧಾಕರ ಪಿ ಹಾಗೂ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಸಿದರು.

  • ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನಮಠ, ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಆಯ್ಕೆ

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನಮಠ, ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕರ್ನಾಟಕ ಕಾರ್ಯನಿರತ ಸಂಘ ಉಡುಪಿ‌ ಜಿಲ್ಲಾ ಸಂಘದ ಅಧೀನ ಸಂಸ್ಥೆಯಾದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇದರ ನೂತನ ತಾಲೂಕು ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನಮಠ ಹಾಗೂ ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಆಯ್ಕೆಯಾಗಿದ್ದಾರೆ.

    ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ನಾಗರಾಜ ರಾಯಪ್ಪನಮಠ ಆಯ್ಕೆಯಾದರು.

    ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಚಂದ್ರಮ ತಲ್ಲೂರು, ರಾಘವೇಂದ್ರ ಪೈ, ಜೊತೆ ಕಾರ್ಯದರ್ಶಿಗಳಾಗಿ ಯೋಗೀಶ ಕುಂಭಾಶಿ ಹಾಗೂ ರಾಘವೇಂದ್ರ ಬಳ್ಕೂರು, ಕೋಶಾಧಿಕಾರಿಯಾಗಿ ಲೋಕೇಶ್ ಆಚಾರ್ಯ, ಕಾರ್ಯಕಾರಿ‌ ಸಮಿತಿ ಸದಸ್ಯರಾಗಿ ಉದಯ ಕುಮಾರ್, ಶಶಿಧರ ಹೆಮ್ಮಾಡಿ, ಮಂಜುನಾಥ ಶೆಣೈ ಜನ್ನಾಡಿ, ಸತೀಶ್ ಆಚಾರ್ಯ ಉಳ್ಳೂರು, ವಿನಯ್ ಪಾಯಸ್, ರಾಮಕೃಷ್ಣ ಹೇರಳೆ, ಶ್ರೀಕಾಂತ ಹೆಮ್ಮಾಡಿ, ಸಂತೋಷ್ ಕುಂದೇಶ್ವರ ಆಯ್ಕೆಯಾಗಿದ್ದಾರೆ.

    ಉಡುಪಿ ಜಿಲ್ಲಾ‌ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

    ನಿರ್ಗಮಿತ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅವರು ನೂತನ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭಹಾರೈಸಿದರು.

    ಈ ಸಂಘದ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜಿಲ್ಲಾ ಸಂಘದ ರಜತ ಮಹೋತ್ಸವ ಸಮಿತಿ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.

  • ಬೀಜಾಡಿ :ಮನುಷ್ಯ ಜೀವಿಯನ್ನು ಕಾಪಾಡುವ ದೊಡ್ಡ ಶಕ್ತಿ ನಾಗದೇವರಿಗಿದೆ – ಬಿ.ಅಪ್ಪಣ್ಣ ಹೆಗ್ಡೆ

    ಬೀಜಾಡಿ :ಮನುಷ್ಯ ಜೀವಿಯನ್ನು ಕಾಪಾಡುವ ದೊಡ್ಡ ಶಕ್ತಿ ನಾಗದೇವರಿಗಿದೆ – ಬಿ.ಅಪ್ಪಣ್ಣ ಹೆಗ್ಡೆ

    ಏಕಪವಿತ್ರ ನಾಗಮಂಡಲೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಕರಾವಳಿ ಭಾಗದಲ್ಲಿ ನಾಗದೇವರಿಗೆ ವಿಶೇಷವಾದ ಸ್ಥಾನಮಾನವನ್ನು ಕೊಟ್ಟು ಆರಾಧನೆಯನ್ನು ಮಾಡಲಾಗುತ್ತದೆ. ಈ ನೆಲೆಯಲ್ಲಿ ಸೇವಾಕರ್ತರು ಮಾಡಿದ ಈ ಸೇವೆಯಿಂದ ಇಡೀ ಜಗತ್ತೇ ಲೋಕ ಕಲ್ಯಾಣವಾಗುವಂತೆ ನಾಗದೇವರು ಅನುಗ್ರಹಿಸಲಿ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ನುಡಿದರು.

    ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀರ್ವಾದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನವಾದ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಸೋಮವಾರ ಜರುಗಿದ ಏಕಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ದೈವರಾಧನೆ ಮತ್ತು ನಾಗರಾಧನೆಯ ಹಿಂದೆ ಈ ಮಣ್ಣಿನ ಸೊಗಡಿದೆ. ಅವಿಭಜಿತ ಜಿಲ್ಲೆಗಳಲ್ಲಿ ಬಿಟ್ಟರೇ ಬೇರೆ ಜಿಲ್ಲೆಗಳಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ಈ ಕ್ಷೇತ್ರಗಳೆಲ್ಲವೂ ದೇವಭೂಮಿ ಎನ್ನಬಹುದು ಎಂದರು.

    ಕೋಟೇಶ್ವರ ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗರ್ವನರ್ ಪ್ರಭಾಕರ್ ಬಿ ಕುಂಭಾಸಿ, ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.

    ಈ ಸಂದರ್ಭ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ಯಕ್ಷಗುರು ಕಡ್ಲೆ ಗಣಪತಿ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಂಡಿತ್ತು.
    ಬಿ.ಆರ್.ಅರವಿಂದ್ ಕೋಟೇಶ್ವರ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪಾಂಡುರಂಗ ವಂದಿಸಿದರು.

  • ಕುಂದಾಪುರ :ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ದುರ್ಬಳಕೆಗೆ ಅವಕಾಶ ಕೊಡೆವು – ಸುರೇಶ ಕಲ್ಲಾಗರ

    ಕುಂದಾಪುರ :ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ದುರ್ಬಳಕೆಗೆ ಅವಕಾಶ ಕೊಡೆವು – ಸುರೇಶ ಕಲ್ಲಾಗರ

    ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದಿಂದ ಪ್ರತಿಭಟನಾ ಧರಣಿ

    Video:

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕಾರ್ಮಿಕ ಕಲ್ಯಾಣ ಮಂಡಳಿ ರಚನೆ ಮಾಡಿರುವುದು 1996ರಲ್ಲಿ ಎಡಪಕ್ಷಗಳ ಬೆಂಬಲದಿಂದ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ. ಇದೀಗ ಬಿಜೆಪಿ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ 12 ಸಾವಿರ ಕೋಟಿಯ ಮೇಲೆ ಕಣ್ಣಿಟ್ಟಿದೆ. ಕಾರ್ಮಿಕ ಮಂಡಳಿಯ ಹಣ ಯಾವುದೇ ಕಾರಣಕ್ಕೂ ದುರ್ಬಳಕೆಯಾಗಬಾರದು ಅದು ಕಾರ್ಮಿಕರ ಶ್ರೇಯೋಭಿವೃದ್ದಿಗೆ ಬಳಕೆಯಾಗಬೇಕು ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ ಕಲ್ಲಾಗರ ಹೇಳಿದರು.

    ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ( ಸಿಡಬ್ಲ್ಯುಎಫ್‍ಐ-ಸಿಐಟಿಯು) ನೇತೃತ್ವದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಶೈಕ್ಷಣಿಕ ಧನಸಹಾಯ ಪಡೆಯಲು ಕುಟುಂಬ ಐಡಿ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಲು- ನಿಯಮಾವಳಿ ಸರಳಗೊಳಿಸಲು ಆಗ್ರಹಿಸಿ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ನಡೆದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು.
    ಕಟ್ಟಡ ನಿರ್ಮಾಣ ಕಾರ್ಮಿಕರು ಈ ದೇಶವನ್ನು ಕಟ್ಟುವವರು ಎಂದು ಸುಪ್ರೀಂಕೋರ್ಟ್ ಹೇಳಿದೆ. ನಿರ್ಮಾಣ ಕಾರ್ಮಿಕರ ಸಲುವಾಗಿ ಇರುವ ಹಣ ರಾಜಕೀಯ ಉದ್ದೇಶಗಳಿಗೆ ಬಳಕೆ ಮಾಡಬಾರದು ಎಂದೂ ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿದೆ. ಸಾಮಾಜಿಕ ಬದ್ದತೆಯಿಂದ ಸರ್ಕಾರ ಕಾರ್ಮಿಕರ ಹಿತದೃಷ್ಟಿಗೆ ಒತ್ತು ನೀಡಬೇಕು ಎಂದರು.

    ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2022-23 ನೇ ಸಾಲಿನ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಮಂಡಳಿ ಕಳೆದ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುವ ವಿಧಾನಗಳನ್ನು ಹಲವು ಬಾರಿ ನಿಯಮಾವಳಿ ಬದಲಾಯಿಸುತ್ತಾ ಬಂದಿರುತ್ತದೆ. ಹೀಗೆ ದಿಡೀರ್ ಬದಲಾವಣೆ ಮಾಡುವಾಗ ನೋಂದಾಯಿತ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಯಾವುದೇ ಮಾಹಿತಿ ನೀಡುವುದೇ ಕಡೆಗಣಿಸಲಾಗುತ್ತಿದೆ.

    ಈ ಬಾರಿಯೂ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಹಲವು ಬದಲಾವಣೆ ಮಾಡಿರುವುದು ಕಟ್ಟಡ ಕಾರ್ಮಿಕರ ಮಕ್ಕಳನ್ನು ಶೈಕ್ಷಣಿಕ ಧನಸಹಾಯದಿಂದ ವಂಚಿಸುವ ಕ್ರಮವಾಗಿದೆ. ಈ ನಿಯಮಗಳನ್ನು ಮಂಡಳಿ ಪರಿಶೀಲಿಸಿ ಸರಳಗೊಳಿಸಲು ಕ್ರಮವಹಿಸಿ ಶೈಕ್ಷಣಿಕ ಧನಸಹಾಯ ಪಡೆಯಲು ಅನುಕೂಲ ಮಾಡಬೇಕೆಂದು ಮನವಿ ಮಾಡಿದರು.

    ಕರೋನ ನಂತರದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಟೂಲ್ ಕಿಟ್, ಶಾಲಾ ಕಿಟ್ ಗಳನ್ನು ಕೆಲವು ಕಂಪೆನಿಗಳಿಂದ ವಿಪರೀತವಾಗಿ ಖರೀದಿಸಲಾಗಿದೆ. ಈ ಖರೀದಿಯಲ್ಲಿ ಕಮಿಷನ್ ಗಳು ಹಾಗೂ ವ್ಯಾಪಕ ಭ್ರಷ್ಟಾಚಾರ ತನಿಖೆಗೆ ಒಳಪಡಿಸಬೇಕು. ಅಲ್ಲದೇ ಈ ಕಿಟ್ ಗಳನ್ನು ಅತಿ ಹೆಚ್ಚು ನಕಲಿ ಕಾರ್ಮಿಕರು ಪಡೆದಿರುವ ಬಗ್ಗೆ ತನಿಖೆ ನಡೆಸಿ ಮಂಡಳಿ ಹಣ ರಕ್ಷಿಸಬೇಕು ಎಂದರು.

    ಮಂಡಳಿಯ ನಕಲಿ ಕಾರ್ಮಿಕರ ಪತ್ತೆ ಹಚ್ಚುವ ಆಂದೋಲನ ಯಶಸ್ವಿಯಾಗಿಲ್ಲ ಇಂದು ಕೆಲವು ಖಾಸಗಿ ವ್ಯಕ್ತಿಗಳು ಕೆಲವು ನಕಲಿ ಅಸಲಿ ಕಾರ್ಮಿಕರನ್ನು ವಂಚಿಸಿ ಗುರುತು ಚೀಟಿ ನೋಂದಣಿ ಮಾಡಿಕೊಡಲು ಖಾಸಗಿ ಸೈಬರ್ ಗಳ ಜೊತೆ ಕೆಲವು ಕಾರ್ಮಿಕ ಇಲಾಖೆ ಜೊತೆ ಶಾಮೀಲಾಗಿ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡಿ ರಶೀದಿಗಳು ನೀಡದೇ ದಂಧೆ ನಡೆಸಿ ವಿಪರೀತ ನಕಲಿ ಕಾರ್ಡುಗಳನ್ನು ಮಾಡಲಾಗುತ್ತಿದೆ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
    ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಪ್ರಧಾನ ಕಾರ್ಯದರ್ಶಿ ಸಂತೋಷ ಹೆಮ್ಮಾಡಿ, ಕಾರ್ಮಿಕ ಮುಖಂಡರಾದ ಕೆ.ಶಂಕರ್ ಮೊದಲಾದವರು ಭಾಗವಹಿಸಿದ್ದರು.

  • ವಿವಿಧ ಬೇಡಿಕೆ ಆಗ್ರಹಿಸಿ ಕೆ.ಪಿ.ಟಿ.ಸಿ.ಎಲ್ ಹಾಗೂ ಮೆಸ್ಕಾಂನ ಅಧಿಕಾರಿಗಳು ಸೇರಿದಂತೆ ನೌಕರರ ಅನಿರ್ಧಿಷ್ಟಾವಧಿ ಪ್ರತಿಭಟನೆ

    ವಿವಿಧ ಬೇಡಿಕೆ ಆಗ್ರಹಿಸಿ ಕೆ.ಪಿ.ಟಿ.ಸಿ.ಎಲ್ ಹಾಗೂ ಮೆಸ್ಕಾಂನ ಅಧಿಕಾರಿಗಳು ಸೇರಿದಂತೆ ನೌಕರರ ಅನಿರ್ಧಿಷ್ಟಾವಧಿ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮೆಸ್ಕಾಂ ಕೋಟ ಉಪವಿಭಾಗ ವ್ಯಾಪ್ತಿಯ ಎಲ್ಲಾ ಕೆ.ಪಿ.ಟಿ.ಸಿ.ಎಲ್ ಹಾಗೂ ಮೆಸ್ಕಾಂನ ಅಧಿಕಾರಿಗಳು ನೌಕರರು ಅನಿರ್ಧಿಷ್ಟಾವಧಿ ಮುಷ್ಕರವನ್ನು ಮಾ.16 ರಂದು ಗುರುವಾರದಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ತನಕ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬ್ಯಾನರ್ ಮತ್ತು ಭಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಚಾಲನೆ ನೀಡಲಾಯಿತು.

    ಈ ಸಂದರ್ಭದಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್, ಕಾರ್ಯದರ್ಶಿ ಚಂದ್ರ ದೇವಾಡಿಗ,ಶಾಖಾಧಿಕಾರಿಯವರಾದ ಪ್ರಶಾಂತ ಶೆಟ್ಟಿ, ಮಹೇಶ ಕೆ ,ತಾಂತ್ರಿಕ ಸಹಾಯಕ ಶ್ರೀಕಾಂತ್,ಮೇಲ್ವಿಚಾರಕ ಚಂದ್ರ ಕೋಟ,ಉಮೇಶ ಶಿರಿಯಾರ,ಕಂದಾಯ ಶಾಖೆಯ ಗಣೇಶ,ಅಶೋಕ,ಶ್ರೀನಾಥ್ ಮುನುಜ ಹಾಗೂ ಸಿಬ್ಬಂದಿ ವರ್ಗ ಎಲ್ಲಾ ಶಾಖೆಯ ನೌಕರ ವರ್ಗ ಉಪಸ್ಥಿತಿತರಿದ್ದರು.

  • ಉಪ್ಲಾಡಿ- ಕೃಷಿಯಿಂದ ವಿಮುಖರಾದರೆ ಆಪತ್ತು ತಪ್ಪಿದಲ್ಲ – ಯುವ ಕೃಷಿಕ ಸುರೇಶ್ ಪೂಜಾರಿ

    ಉಪ್ಲಾಡಿ- ಕೃಷಿಯಿಂದ ವಿಮುಖರಾದರೆ ಆಪತ್ತು ತಪ್ಪಿದಲ್ಲ – ಯುವ ಕೃಷಿಕ ಸುರೇಶ್ ಪೂಜಾರಿ

    ಪಂಚವರ್ಣ ಸಂಸ್ಥೆಯ ರೈತರೆಡೆಗೆ 23ನೇ ಮಾಲಿಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಕೃಷಿಯಿಂದ ವಿಮುಖರಾದರೆ ದೇಶಕ್ಕೆ ಆಪತ್ತು ತಪ್ಪಿದಲ್ಲ ಈ ದಿಸೆಯಲ್ಲಿ ಹೆಚ್ಚು ಹೆಚ್ಚು ಯುವಕರು ಕೃಷಿಯಲ್ಲಿ ತೋಡಗಿಕೊಳ್ಳಬೇಕು ಎಂದು ಯುವ ಕೃಷಿಕ ಉಪ್ಲಾಡಿ ಸುರೇಶ್ ಪೂಜಾರಿ ಹೇಳಿದರು.

    ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಡುಕರೆ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 23ನೇ ಸರಣಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರಸ್ತುತ ಎಲ್ಲರೂ ವಿದ್ಯಾಭ್ಯಾಸ ಪಡೆಯಲಿ ಆದರೆ ಅದರ ನಂತರ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿಸುವುದು ಅಗತ್ಯವಾಗಿದೆ. ಭೂಮಿಯನ್ನು ಯಾವುದೇ ಕಾರಣಕ್ಕೂ ಹಡಿಲು ಬಿಡಬೇಡಿ ಅದರಲ್ಲಿ ಕೃಷಿ ಮಾಡಿ ಪ್ರತಿಯೊಂದು ಕ್ಷೇತದಲ್ಲೂ ಸೋಲು ಗೆಲುವ ಸಹಜ ಆದರೆ ಕೃಷಿ ಲಾಭದಾಯಕ ಅಲ್ಲ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಅಲ್ಲಗೆಳೆದ ಅವರು ಕೃಷಿಗೆ ಸರಕಾರ ಇನ್ನಷ್ಟು ಉತ್ತೇಜನ ನೀಡಿ ಯುವ ಸಮೂಹವನ್ನು ಕೃಷಿ ಕ್ಷೇತ್ರಕ್ಕೆ ಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು ಸಿದ್ಧಪಡಿಸಿ ಎಂದು ಸರಕಾರವನ್ನು ಒತ್ತಾಯಿಸಿ ಪಂಚವರ್ಣ ಸೇರಿದಂತೆ ವಿವಿಧ ಸಂಘಟನೆಗಳು ರೈತರ ಮನೆ ಬಾಗಿಲಿಗೆ ತೆರಳಿ ಗೌರವಿಸುವ ಕಾರ್ಯಕ್ರಮ ನಿಜಕ್ಕೂ ರೈತ ಸಮುದಾಯಕ್ಕೆ ಇನ್ನಷ್ಟು ಪ್ರೇರಣೆಯನ್ನು ನೀಡಿದಂತೆ ಎಂದು ಸಂಘಸಂಸ್ಥೆಗಳ ಕಾರ್ಯಕ್ರಮವನ್ನು ಕೊಂಡಾಡಿದರು.

    ಈ ಸಂದರ್ಭದಲ್ಲಿ ಕೃಷಿ ಪರಿಕರಗಳನ್ನು ನೀಡಿ ಸುರೇಶ್ ಪೂಜಾರಿಯವರನ್ನು ಗೌರವಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ವಡ್ಡರ್ಸೆ ಗ್ರಾಮಪಂಚಾಯತ್ ಸದಸ್ಯರಾದ ಕೋಟಿ ಪೂಜಾರಿ, ತೀರ್ಥೆಶ್ ,ಕೋಟ ಗ್ರಾ.ಪಂ ಘನತ್ಯಾಜ್ಯ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೋತ್ವಾಲ್, ಮೂಲ್ಕಿ ನಗರಸಭೆಯ ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಸಾಲಿಗ್ರಾಮ ಪ.ಪಂ ಸದಸ್ಯ ಪುನಿತ್ ಪೂಜಾರಿ, ಸಂಯಯಕ್ತ ಸಂಘಟನೆಗಳ ಸಂಯೋಜಕ ಸತ್ಯನಾರಾಯಣ ಆಚಾರ್ಯ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಡುಕರೆ ಅಧ್ಯಕ್ಷ ಶಶಿಧರ ತಿಂಗಳಾಯ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು. ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಸ್ವಾಗತಿಸು ಪ್ರಾಸ್ತಾವನೆ ಸಲ್ಲಿಸಿದರು.
    ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಶಕೀಲ ಪೂಜಾರಿ ಸನ್ಮಾನಪತ್ರವನ್ನು ವಾಚಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು.ಕಾರ್ಯಕ್ರಮ ಸಂಯೋಜಕ ರವೀಂದ್ರ ಕೋಟ ವಂದಿಸಿದರು.