Category: Kundapura Exclusive

  • ಕೊರೋನಾ ಆತಂಕ :ಅರಳಿ ನಿಂತಿದೆ ಹೆಮ್ಮಾಡಿ ಸೇವಂತಿಗೆ

    ಕೊರೋನಾ ಆತಂಕ :ಅರಳಿ ನಿಂತಿದೆ ಹೆಮ್ಮಾಡಿ ಸೇವಂತಿಗೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಉಡುಪಿ ಜಿಲ್ಲೆಯಲ್ಲಿ ಬಹುಪ್ರಸಿದ್ಧಿ ಪಡೆದ ಹೆಮ್ಮಾಡಿ ಸೇವಂತಿಗೆ ಸರ್ಕಾರ, ಇಲಾಖೆಗಳ ಸೂಕ್ತ ಪ್ರೋತ್ಸಾಹ ಇವತ್ತು ಅವನತಿಯ ಹಂತ ತಲುಪಿದೆ.

    ಭೌಗೋಳಿಕತೆ, ಹವಮಾನ ಹಾಗೂ ತಳಿ ಪ್ರಬೇಧದಿಂದಾಗಿ ಹೆಮ್ಮಾಡಿ ಸೇವಂತಿಗೆ ಬಹು ಪ್ರಸಿದ್ಧ ಪುಷ್ಪ. ಬೆರಳಣೆಕೆಯ ಮಟ್ಟಕ್ಕೆ ಕುಸಿದ ಸೇವಂತಿಗೆಗೆ ಕಳೆದರೆಡು ವರ್ಷಗಳಿಂದ ಕರೋನಾಘಾತ. ಕರೋನಾ ನಿರ್ಬಂಧದಿಂದಾಗಿ ಸ್ಥಳೀಯ ಜಾತ್ರೆ, ಹಬ್ಬಗಳು ನಡೆಯದೇ ಇರುವುದರಿಂದ ಸೇವಂರಿಗೆ ಬೆಳೆಗಾರರು ಬಾರೀ ನಷ್ಟ ಅನುಭವಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಸೇವಂತಿಗೆ ಬೇಸಾಯ ಮಾಡಿದ ರೈತರು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.


    ಹೆಮ್ಮಾಡಿ ಸೇವಂತಿಗೆ ಜನವರಿಯಿಂದ ಮಾರ್ಚ್ ತನಕ ಹೂ ಬಿಡುತ್ತದೆ. ಚಳಿಯ ವಾತಾವರಣದಲ್ಲಿ ಚೆನ್ನಾಗಿ ಹೂ ಬಿಡುತ್ತದೆ. ಮಾರಣಕಟ್ಟೆ ಜಾತ್ರೆ ಸೇವಂತಿಗೆ ಬೆಳೆಗಾರರಿಗೆ ದೊಡ್ಡ ಹಬ್ಬ. ತುಳುನಾಡಿನ ಭಕ್ತರು ಬ್ರಹ್ಮಲಿಂಗೇಶ್ವರ ಸ್ವಾಮಿಗೆ ಬುಟ್ಟಿ ಹೂ ಸಮರ್ಪಣೆಗೆ ಆಯ್ಕೆ ಮಾಡುವುದು ಹೆಮ್ಮಾಡಿ ಸೇವಂತಿಗೆಯನ್ನೆ.ಕಳೆದ ಹದಿನಾರು ವರ್ಷದಿಂದ ಸೇವಂತಿಗೆ ಬೇಸಾಯ ಮಾಡುತ್ತಿರುವ ಹೆಮ್ಮಾಡಿಯ ಪ್ರಶಾಂತ್ ಅವರು ಹೇಳುವ ಪ್ರಕಾರ ಒಂದುವರೆ ಎಕ್ರೆ ಪ್ರದೇಶದಲ್ಲಿ ಸೇವಂತಿಗೆ ಬೇಸಾಯ ಮಾಡುತ್ತಿದ್ದೇನೆ. ಸೆಪ್ಟೆಂಬರ್‍ನಲ್ಲಿ ನರ್ಸರಿಯಿಂದ ಗಿಡಗಳ ನಾಟಿ ಮಾಡಿ ಸರಿಯಾಗಿ ನಿರ್ವಹಣೆ ಮಾಡಿದರೆ ಜನವರಿಯಿಂದ ಹೂವು ಕೊಯ್ಲಿಗೆ ಬರುತ್ತದೆ. ಕಾಲಮಾನ ನೋಡಿಕೊಂಡು ಮೂರು ಹಂತದಲ್ಲಿ ನಾಟಿ ಮಾಡುತ್ತೇವೆ. ಕಾರ್ಮಿಕರ ವೇತನ, ಗೊಬ್ಬರ, ಕೀಟನಾಶಕಗಳ ದುಬಾರಿಯಿಂದಾಗಿ 1.75 ಲಕ್ಷ ಖರ್ಚಾಗಿದೆ. ಈ ವರ್ಷ ಉತ್ತಮ ಹವಮಾನ ಇರುವುದರಿಂದ ಒಳ್ಳೆಯ ಹೂ ಬಿಟ್ಟಿದೆ. ಆದರೆ ಹಬ್ಬ, ಜಾತ್ರೆಗಳಿಲ್ಲದೇ ಆತಂಕ ಎದುರಾಗಿದೆ ಎನ್ನುತ್ತಾರೆ.
    ಪ್ರತಿದಿನ ಹೂ ಕೊಯ್ಯಬೇಕು. 30 ಜನ ಹೂ ಕೊಯ್ಲು ಮಾಡುತ್ತಾರೆ. 1000 ಹೂವಿನಂತೆ ವೇತನ ನೀಡಬೇಕು. ಹಬ್ಬ, ಜಾತ್ರೆಗೆ ನಿರ್ಭಂಧ ಹಾಕಿದರೆ ನಾವು ಏನು ಮಾಡುವುದು. ಕೊರೋನಾ ಮಾರ್ಗಸೂಚಿಯಂತೆ ಹಬ್ಬ ಮಾಡಲು ಅವಕಾಶ ನೀಡಿದರೆ ನಮ್ಮಂತಹ ಕೃಷಿಕರಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ. ಈಗಾಗಲೇ ನಾವು ಶಾಸಕರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಇಲಾಖೆಗಳಿಂದಲೂ ಸಹಕಾರದ ನಿರೀಕ್ಷೆ ಹೊಂದಿದ್ದೇವೆ ಎನ್ನುತ್ತಾರೆ.

    ಮಾನ್ಯತೆ ಬೇಕಿದೆ
    ಹೆಮ್ಮಾಡಿ ಸೇವಂತಿಗೆ ಕೃಷಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಸೇವಂತಿಗೆ ಬೆಳೆಗಾರರ ಸಂಘವನ್ನು ಹೊಂದಿದೆ. ಹೆಮ್ಮಾಡಿ ಸೇವಂತಿಗೆಯ ಬಗ್ಗೆ ಸಮರ್ಪಕ ಅಧ್ಯಯನಗಳು ಕೃಷಿ ವಿಜ್ಞಾನ ಕೇಂದ್ರಗಳು ನಡೆಸಬೇಕಿತ್ತು. ಸಾವಿರಾರು ವರ್ಷಗಳಿಂದ ಈ ಭೂಭಾಗದಲ್ಲಿ ಸೇವಂತಿಗೆ ಕೃಷಿ ಮಾಡುತ್ತಿರುವುದರಿಂದ ಇದರ ಹಿನ್ನೆಲೆ, ತಳಿಯ ಬಗ್ಗೆ ಸೂಕ್ತ ಅಧ್ಯಯನ ಅವಶ್ಯಕತೆ ಇತ್ತು. ಹತ್ತು ವರ್ಷಗಳ ಹಿಂದೆಯೇ ಅಧ್ಯಯನ ಮಾಡಿದ್ದರೆ ಇವತ್ತು ಹೆಮ್ಮಾಡಿ ಸೇವಂತಿಗೆ ಇಷ್ಟೊಂದು ಹಿನ್ನೆಡೆ ಕಾಣುತ್ತಿರಲ್ಲ. ಅಧ್ಯಯನಗಳ ಮೂಲಕ ಇದರ ಮಹತ್ವ, ವಿಶೇಷತೆಗಳನ್ನು ತಿಳಿಸುವ ಕೆಲಸ ಆಗಬೇಕಿತ್ತು.

  • ಕುಂದಾಪುರ: ಭಕ್ತರನ್ನು, ಚಾರಣಿಗರನ್ನು ತನ್ನತ್ತ ಆಕರ್ಷಿಸುತ್ತಿದೆ ವಿಹಂಗಮ ತಾಣ ಗಾಳಿಗುಡ್ಡ

    ಕುಂದಾಪುರ: ಭಕ್ತರನ್ನು, ಚಾರಣಿಗರನ್ನು ತನ್ನತ್ತ ಆಕರ್ಷಿಸುತ್ತಿದೆ ವಿಹಂಗಮ ತಾಣ ಗಾಳಿಗುಡ್ಡ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪು: ತಾಲೂಕಿನ ತುತ್ತ ತುದಿಯ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಹತ್ತಿರದ ಗಾಳಿಗುಡ್ಡ ಪ್ರಚಾರದಿಂದ ಬಹುದೂರವಿರುವ ಅತ್ಯಂತ ರಮ್ಯ ಮನೋಹರವಾದ ತಾಣ. ಹಸಿರು ಸೆರಗೊದ್ದು ಮಲಗಿದಂತೆ ಕಾಣುವ ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಇಂತಹ ಅಸಂಖ್ಯ ದೈವಿ ಕ್ಷೇತ್ರಗಳು, ಚಾರಣಿಗರಿಗೆ ಹೇಳಿ ಮಾಡಿಸಿರುವಂಥಹ ಸ್ಥಳಗಳನ್ನು ಒಳಗೊಂಡಿದೆ. ಜಡ್ಡಿನಗದ್ದೆ ಶಾಲೆಯಿಂದ ಸುಮಾರು 1.5 ಕಿ,ಮೀ ಎತ್ತರ ಬೆಟ್ಟವೇ ಗಾಳಿಗುಡ್ಡ. ಈ ಗುಡ್ಡದಲ್ಲಿ ಮಹಾಗಣಪತಿಯ ನೈಸರ್ಗದತ್ತ ಆಲಯವಿದೆ. ಶತಶತಮಾನಗಳ ಪೂರ್ವದ ಈ ದೈವೀ ಸಾನಿಧ್ಯ ತನ್ನದೇಯಾದ ವೈಶಿಷ್ಠ್ಯತೆ ಹಾಗೂ ಪ್ರಾದೇಶಿಕವಾದ ನಂಬಿಕೆಯನ್ನು ಹೊಂದಿದೆ.


    ಜಡ್ಡಿನಗದ್ದೆ, ಅಮಾಸೆಬೈಲು ತೀರಾ ಗ್ರಾಮೀಣ ಪ್ರದೇಶಗಳು. ದಟ್ಟ ಕಾನನದಂಚಿನ, ಪ್ರಕೃತಿಯ ಅಗರ್ಭ ಸಿರಿತನದ ಸುಂದರ ಗ್ರಾಮಗಳು. ಹಚ್ಚ ಹಸಿರ ಕಾನನ, ಸದಾ ತಂಪಾಗಿರುವ ಪರಿಸರ, ಕೃಷಿ ಆಧಾರಿತ ಜನಜೀವನ ಇಲ್ಲಿಯ ವಿಶೇಷ. ಎತ್ತ ಕಣ್ಣು ಹಾಯಿಸಿದರೂ ಕಾಡು ಕಾಡು ಕಾಡು. ಉದ್ದಕ್ಕೂ ಗೋಡೆಯಂತಿರುವ ಬರೆ, ಇನ್ನೊಂದೆಡೆ ಕಣ್ಣಾಯಿಸಿದರೆ ಎತ್ತರಕ್ಕೆ ಬೆಳೆದು ನಿಂತ ಬೆಟ್ಟ. ಹಸಿರನ್ನು ಮೈವೆತ್ತಂತೆ ಭಾಸವಾಗುವ ಈ ಬೆಟ್ಟವನ್ನು ಸ್ಥಳೀಯರು ಗಾಳಿಗುಡ್ಡ ಎಂದು ಕರೆಯುತ್ತಾರೆ. ಅದಕ್ಕೂ ಒಂದು ಹಿನ್ನೆಲೆ, ಒಂದಿಷ್ಟು ಐತಿಹ್ಯಗಳು ಇವೆ. ಅಕ್ಟೋಬರ್ ತಿಂಗಳಿಂದ ಹಿಡಿದು ಡಿಸೆಂಬರ್ 25 ರ ತನಕ ಅಮಾಸೆಬೈಲು ಹಾಗೂ ಜಡ್ಡಿನಗದ್ದೆ ಸುತ್ತ ಮುತ್ತ ಭಾರಿ ಗಾಳಿ ಬೀಸುತ್ತದೆ. ಈ ಮೂರು ತಿಂಗಳಲ್ಲಿ ಗಾಳಿಯ ರಭಸ ಮತ್ತು ತೀವ್ರತೆ ಜಾಸ್ತಿ ಇರುತ್ತದೆ. ಇಲ್ಲಿನ ಗಣಪತಿಯನ್ನು ಆರಾಧಿಸುವುದರಿಂದ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಇದು ತಲೆತಲೆಮಾರುಗಳಿಂದ ಬಂದ ಪ್ರತೀತಿ. ಹಾಗಾಗಿ ಪ್ರತೀ ವರ್ಷ ಡಿ. 25 ರಂದು ಮಹಾಗಣಪತಿ ಸನ್ನಿಧಿಯಲ್ಲಿ ಸಮಾರಾಧನೆ ಎನ್ನುವ ವಿಶಿಷ್ಠ ಧಾರ್ಮಿಕ ಕಾರ್ಯಕ್ರಮವನ್ನು ಇಲ್ಲಿ ನಡೆಸಲಾಗುತ್ತದೆ. ಅಂದು ಗಾಳಿಗುಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಗಾಳಿಗುಡ್ಡದ ಹಬ್ಬದ ಬಳಿಕ ಇಲ್ಲಿ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಎನ್ನುವ ಬಲವಾದ ನಂಬಿಕೆಯೂ ಇದೆ.

    ಗಾಳಿಗುಡ್ಡ ಏರುವುದೇ ಒಂದು ಆಹ್ಲಾದನುಭೂತಿ. ಕೆಳಗಡೆಯಿಂದ ನೋಡಿದರೆ ನಿನ್ನ ನಾ ಏರಬಲ್ಲೆನಾ ಎನ್ನುವ ಪ್ರಶ್ನೆ ಮೂಡುತ್ತದೆ. ಏಕೆಂದರೆ ಬೆಟ್ಟದ ಆಕೃತಿ ಕೆಳಗಿನಿಂದ ನೋಡಿದಾಗ ಭಯ ಬೀಳಿಸುತ್ತದೆ. ಕಾಲು ಹಾದಿಯಲ್ಲಿಯೇ ಏರುತ್ತಾ ಹೋಗಬೇಕು. ದುರ್ಗಮವೂ, ಕಡಿದಾದ ಹಾದಿಯದು. ಅಲ್ಲಲ್ಲಿ ಜಾರುವ ಕಲ್ಲುಗಳು, ಮುಳ್ಳಿನ ಪೊದೆಗಳು, ಸಣ್ಣಪುಟ್ಟ ಕಾಡು ಪ್ರಾಣಿಗಳು ಪ್ರತ್ಯಕ್ಷವಾಗುತ್ತವೆ. ಮೇಲೆ ಏರುತ್ತಾ ಹೋದಂತೆ ಕೆಳಗಿನ ಪ್ರದೇಶಗಳು ರಮ್ಯಾತಿರಮ್ಯವಾಗಿ ವಿಹಂಗಮಯವಾಗಿ ಕಾಣ ಸಿಗುತ್ತದೆ. ಗದ್ದೆಗಳು ಪುಟ್ಟ ಪುಟ್ಟ ಬಟ್ಟಲುಗಳಂತೆ ಕಂಡು ಬರುತ್ತದೆ. ಬರೆಯ ನೋಟವೂ ಅದ್ಬುತ. ಕೆಳಗಿನ ಬೃಹದೇತ್ತರ ಮರಗಳು ಪುಟ್ಟ ಪುಟ್ಟ ಸಸಿಗಳಂತೆ ಕಂಡು ಬರುತ್ತವೆ. ಹೀಗೆ ಮೇಲೆ ಏರುತ್ತ ಹೋದಂತೆ ಶಿಲೆಗಲ್ಲಿನ ಪಾರೆಗಳು, ಅಲ್ಲಿ ಇರುವ ಪ್ರಾಕೃತಿಕ ದೈವಿ ಸನ್ನಿಧಿ, ಒಂದಿಷ್ಟು ವಿಶಾಲವಾದ ಸ್ಥಳ, ಚಿತ್ತ ವಿಚಿತ್ರ ಆಕಾರದ ಶಿಲೆಯ ಪದರಗಳು ಗಮನ ಸಳೆಯುತ್ತವೆ. ಗಣಪತಿಯ ಸಾನಿಧ್ಯ ತಲುಪಿದ ಮೇಲೆ ಮೇಲೇರಿದ ಶ್ರಮ ಮಾಯವಾಗುತ್ತದೆ. ಪಟ್ಟ ಶ್ರಮಕ್ಕೆ ಸಾರ್ಥಕತೆ ಮೂಡುತ್ತದೆ.
    ಗಾಳಿಗುಡ್ಡ ಗಣಪತಿ ದೇವಸ್ಥಾನ ಜೈನರ ಆಳ್ವಿಕೆಯ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಹಿನ್ನೆಡೆ ಕಂಡಿತು. ಇತ್ತೀಚೆನ ವರ್ಷಗಳಲ್ಲಿ ಗಾಳಿಗುಡ್ಡ ಮಹಾಗಣಪತಿ ಗುಡಿಯ ಪೂಜೆ ಕಾರ್ಯವನ್ನು ಕೊಡ್ಗಿ ವಂಶಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ಆಡಳಿತ ಮೊಕ್ತೇಸರರಾಗಿ ಎ. ಶಂಕರನಾರಾಯಣ ಕೊಡ್ಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯರು ಉತ್ಸವಕ್ಕೆ ಸಹಕಾರ ನೀಡುತ್ತಾರೆ.

    ಈ ಗ್ರಾಮವು ನಾಲ್ಕು ಉಪಗ್ರಾಮ ಹೊಂದಿದ್ದು ಕೆಳಸುಂಕದಲ್ಲಿ ಈಶ್ವರ ದೇವಸ್ಥಾನ, ಜಡ್ಡಿನಗದ್ದೆಯಲ್ಲಿ ಗಾಳಿಗುಡ್ಡ ಮಹಾಗಣಪತಿ, ಬಳ್ಮನೆ ಚತುರ್ಮುಖ ಬ್ರಹ್ಮ, ಹಾಗೆ ಕೆಳದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಹೊಂದಿದ್ದು. ಎಲ್ಲದಕ್ಕೂ ಒಂದಕ್ಕೊಂದು ಸಂಬಂಧ ಹೊಂದಿದೆ.
    ಉಡುಪಿ ಜಿಲ್ಲೆಯಲ್ಲಿರುವ ನಿಸರ್ಗದತ್ತ ಅಪೂರ್ವ ದೇವಸ್ಥಾನಗಳಲ್ಲಿ ಇದೂ ಒಂದು. ಇಲ್ಲಿಗೆ ಹೋಗುವುದು ಶ್ರಮದಾಯಕ ಆದ್ದರಿಂದ ಪ್ರಚಾರದಿಂದ ಹಿಂದಿದೆ. ವರ್ಷಕ್ಕೊಮ್ಮೆ ಡಿ.25ರಂದು ಸಾವಿರಕ್ಕಿಂತಲೂ ಹೆಚ್ಚು ಜನ ಗಾಳಿಗುಡ್ಡ ಏರುತ್ತಾರೆ.
    ಚಾರಣಿಗರು, ಪ್ರವಾಸಿಗರು ಇಲ್ಲಿಗೆ ಹೋಗುವುದಾದರೆ ಸ್ಥಳೀಯರಿಂದ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ಹೋಗುವುದು ಒಳಿತು.

  • ಕುಂದಾಪುರ ಚತುಷ್ಪಥ ಕಾಮಗಾರಿ ವಿಳಂಬ

    ಕುಂದಾಪುರ ಚತುಷ್ಪಥ ಕಾಮಗಾರಿ ವಿಳಂಬ

    ಕುಂದಾಪುರದಲ್ಲಿ ಚತುಷ್ಪಥದ ನಡುವೆ ಪಾದಚಾರಿಗಳ ಯೋಚನೆಯನ್ನೇ ಮರೆತು ಬಿಟ್ಟಂತೆ ಇದೆ. ಕಿರಿದಾದ ಸರ್ವೀಸ್ ರಸ್ತೆಯಲ್ಲಿಯೇ ಎಲ್ಲ ವಾಹನಗಳು ಅವಲಂಬಿಸಿವೆ. ಈ ನಡುವೆ ಪಾದಚಾರಿಗಳಿಗೆ ತಿರುಗಾಡಲು ಸೂಕ್ತ ಮಾರ್ಗವೇ ವ್ಯವಸ್ಥಿತವಾಗಿಲ್ಲ. ಚರಂಡಿಗೆ ಅಳವಡಿಸಿದ ಸ್ಲ್ಯಾಬ್ ಮೇಲಾದರೂ ನಡೆಯೋಣ ಎಂದರೂ ಮಳೆಗಾಲದಲ್ಲಿ ಬೆಳೆದ ಪೊದೆ ಗಿಡಗಳನ್ನು ಇನ್ನೂ ಕೂಡಾ ತೆರವು ಗೊಳಿಸುವ ಕೆಲಸವಾಗಿಲ್ಲ. ಚರಂಡಿ ಸ್ಲ್ಯಾಬ್‍ಗಳನ್ನೇ ಗಿಡಗಂಟಿಗಳು ಅತಿಕ್ರಮಿಸಿಕೊಂಡಿದ್ದರೆ ಕೆಲವೆಡೆ ಸ್ಲ್ಯಾಬ್ ತೆರೆದಿವೆ. ಇನ್ನೂ ಕೆಲವಡೆ ಗೂಡಾಂಗಡಿಗಳು ಪುಟ್‍ಪಾತ್‍ನ್ನೆ ಆಕ್ರಮಿಸಿಕೊಂಡಿದೆ. ಹಾಗಾಗಿ ಪಾದಚಾರಿಗಳು ಅನಿವಾರ್ಯವಾಗಿ ವಾಹನಬಿಡಾದ ಸರ್ವೀಸ್ ರಸ್ತೆಗೆ ಇಳಿಯಬೇಕಾದ ಅನಿರ್ವಾತೆ ಸೃಷ್ಟಿಯಾಗಿದೆ.
    ಈಗ ಕುಂದಾಪುರ ಕಾಲೇಜು ರಸ್ತೆ ತಿರುವಿನಿಂದ ವಿನಾಯಕದ ತನಕವೂ ಪುಟ್‍ಪಾತ್ ಇದೆ. ಒಂದಿಷ್ಟು ಅಗಲದ ಸರ್ಕಾರಿ ಸ್ವಾಮ್ಯದ ಸ್ಥಳವೂ ಇದೆ. ಆದರೆ ಅಲ್ಲಲ್ಲಿ  ತಲೆಎತ್ತಿರುವ ಗೂಡಾಂಗಡಿಗಳು ಕಾಲುದಾರಿಯನ್ನೇ ಅತಿಕ್ರಮಿಸಿಕೊಂಡಿವೆ. ಚರಂಡಿಯ ಮೇಲೆ ಹಾಕಲಾದ ಸ್ಲ್ಯಾಬ್‍ನ ಮೇಲೆಯೇ ಪಾದಾಚಾರಿಗಳು ನಡೆಯಬೇಕು. ಅದಾದರೂ ಸರಿ, ಆದರೆ ವಿನಾಯಕದ ತನಕ ಚರಂಡಿಗೆ ನಿರಂತರವಾಗಿ ಸ್ಲ್ಯಾಬ್ ಅಳವಡಿಕೆ ಮಾಡಿಲ್ಲ. ಅಲ್ಲಲ್ಲಿ ಏಕಾಏಕಿ ಮುಚ್ಚಿಗೆ ಹಾಕದೇ ಬಿಟ್ಟಿರುವುದು ಅಪಾಯಕಾರಿಯಾಗಿದೆ. ಗಾಂಧಿ ಮೈದಾನದ ಪಾಶ್ರ್ಚದಲ್ಲಿಯೇ ಮೋರಿ ಇರುವೆಡೆ ಸ್ಲ್ಯಾಬ್ ಅಳವಡಿಕೆ ಮಾಡಿಲ್ಲ. ಇದು ಅತ್ಯಂತ ಅಪಾಯಕಾರಿಯಾಗಿದೆ.
    ಪಾದಚಾರಿಗಳಿಗೆ ನಡೆದಾಡಲು ಸಮರ್ಪಕ ಕಾಲುದಾರಿಯನ್ನು ನಿರ್ಮಾಣ ಮಾಡಲು ಸರ್ಕಲ್‍ನಿಂದ ವಿನಾಯಕದ ತನಕ ಅವಕಾಶವಿದೆ. ಈಗ ಚರಂಡಿಗೆ ಹಾಕಲಾದ ಸ್ಲ್ಯಾಬ್‍ನ್ನೇ ಬಳಸಿಕೊಂಡು ಬಲ ಬದಿಗೆ ಒಂದಿಷ್ಟು ಅಗಲ ಮಾಡಿದರೆ ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಬದ್ದತೆ ಪ್ರದರ್ಶಿಸಿಸಬೇಕಿದೆ.
    ಕುಂದಾಪುರ ನಗರದಲ್ಲಿ ಪಾದಚಾರಿಗಳಿಗೆ ನಡೆದಾಡಲು ಸ್ಥಳವಕಾಶ ಇಲ್ಲ ಎನ್ನುವ ಸಾರ್ವಜನಿಕ ದೂರುಗಳು ನಿರಂತರವಾಗಿ ಕೇಳಿ ಬರುತ್ತಿದೆ. ಶಾಲಾ ಮಕ್ಕಳಿಗೂ ನಡೆದಾಡಲು ಕಷ್ಟವಾಗುತ್ತದೆ. ಅಲ್ಲದೇ ಹಲವಾರು ಸರ್ಕಾರಿ ಕಛೇರಿಗಳು ಈ ಭಾಗದಲ್ಲಿಯೇ ಇದೆ. ಹಳ್ಳಿ ಹಳ್ಳಿಗಳಿಂದ ಬಸ್‍ಗಳಲ್ಲಿ ಬರುವ ಜನಸಾಮಾನ್ಯರು ನಡೆದುಕೊಂಡೇ ಕಚೇರಿಗಳಿಗೆ ಹೋಗಬೇಕು. ಆದರೆ ಇಲ್ಲಿ ನಡೆದುಕೊಂಡು ಹೋಗಲು ಸರಿಯಾದ ಮಾರ್ಗವೇ ಇಲ್ಲದಿರುವುದು ವಿಷಾಧನೀಯ.
    ಮೇಲ್ಸೆತುವೆ ಮುಕ್ತಾಯ ಮತ್ತೆ ಮಾರ್ಚ್ ಅಂತ್ಯ!
    ಕುಂದಾಪುರದಲ್ಲಿ ಮೇಲ್ಸೆತುವೆ ಕಾಮಗಾರಿ ಕಳೆದ ಮಾರ್ಚ್ ಅಂತ್ಯದೊಳಗೆ ಮುಕ್ತಾಯ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಯಾರ ದುರಾದೃಷ್ಟವೋ ಕೊರೋನಾದ ನೆವದಿಂದ ವಿರಾಮ ಸಿಕ್ಕಿತ್ತು. ಈಗ ಎಲ್ಲಾ ಸರಿಯಾಗಿದ್ದರೂ ಕೂಡಾ ಕಂಪೆನಿ ಕಾಮಗಾರಿಯನ್ನು ವೇಗಗೊಳಿಸುತ್ತಿಲ್ಲ. 2021ರ ಮಾರ್ಚ್ ಅಂತ್ಯಕ್ಕೆ ಮುಗಿಸಲಾಗುತ್ತದೆ ಎಂದು ಜಿ.ಪಂ,.ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಎಷ್ಟು ಮಾರ್ಚ್ ಬರಬೇಕು ಎನ್ನುವುದು ಗೊತ್ತಿಲ್ಲ.
    ಚರಂಡಿ ಸ್ಲ್ಯಾಬ್ ಮೇಲಾದರೂ ಪಾದಾಚಾರಿಗಳಿಗೆ ಅನುಕೂಲ  ಕಲ್ಪಿಸಿ
    ಇಕ್ಕಟ್ಟಾದ ಸರ್ವೀಸ್ ರಸ್ತೆಯಿಂದಾಗಿ ವಾಹನಗಳು ನಿಬಿಡತೆಯಲ್ಲಿ ಸದಾ ಕರ್ಕಶ ಹಾರ್ನ್‍ಗಳ ಕಿವಿಗಡಚ್ಚುವ ಶಬ್ದಗಳು. ಇದು ಕಳೆದ ಎರಡು ವರ್ಷದಿಂದ ಕುಂದಾಪುರ ಜನ ಅನುಭವಿಸಿಕೊಂಡು ಬಂದಿರುವ ಗೋಳು. ಇದರ ನಡುವೆ ಪಾಪ ಪಾದಚಾರಿಗಳ ಗೋಳು ಕೇಳುವವರೇ ಇಲ್ಲ. ರಸ್ತೆಯ ಪಕ್ಕದ ಚರಂಡಿ ಸ್ಲ್ಯಾಬ್ ಮೇಲಾದರೂ ಹೋಗೋಣವೆಂದರೂ ಅಲ್ಲಲ್ಲಿ ಸ್ಲ್ಯಾಬ್ ಬಾಯಿ ಬಿಟ್ಟಿದೆ. ಕೆಲವಡೆ ಗೂಡಾಂಗಡಿಗಳು ಚರಂಡಿ ಸ್ಲ್ಯಾಬ್‍ಗಳನ್ನೇ ಅತಿಕ್ರಮಿಸಿಕೊಂಡಿವೆ.