Category: ರಾಜಕೀಯ

  • ಕುಂದಾಪುರ :ಮಂಗಳೂರಿನ ಕಾಂಗ್ರೆಸ್ ಸಮಾವೇಶಕ್ಕೆ ಬೈಂದೂರಿನಿಂದ 5 ಸಾವಿರ ಜನ – ಗೋಪಾಲ ಪೂಜಾರಿ

    ಕುಂದಾಪುರ :ಮಂಗಳೂರಿನ ಕಾಂಗ್ರೆಸ್ ಸಮಾವೇಶಕ್ಕೆ ಬೈಂದೂರಿನಿಂದ 5 ಸಾವಿರ ಜನ – ಗೋಪಾಲ ಪೂಜಾರಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಫೆ.17ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದ್ದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಲಿದ್ದಾರೆ. ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರಾವಳಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
    ಅವರು ಕುಂದಾಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಯಶಸ್ವಿ ಐದು ಗ್ಯಾರಂಟಿಗಳ ಸ್ತಬ್ದಚಿತ್ರವನ್ನು ಒಳಗೊಂಡ ಬೈಂದೂರು ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರ ರ್ಯಾಲಿ ಮಂಗಳೂರಿಗೆ ಸಾಗಿಹೋಗಲಿದೆ. ಹೆಜಮಾಡಿಯಿಂದ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ರ್ಯಾಲಿ ಕಾರ್ಯಕ್ರಮ ಸ್ಥಳಕ್ಕೆ ಸಾಗಲಿದೆ. ಇದು ಗ್ಯಾರಂಟಿ ಕಾರ್ಯಕ್ರಮ ಅನುಷ್ಟಾನಗೊಂಡ ಬಳಿಕ ನಡೆಯುತ್ತಿರುವ ಮೊತ್ತ ಮೊದಲ ಕಾರ್ಯಕ್ರಮವಾಗಿದೆ ಎಂದರು.
    ಗ್ಯಾರಂಟಿ ಸಮಿತಿಗಳ ರಚನೆಯಾಗುತ್ತಿದ್ದು, ಆ ಮೂಲಕ  ಸೌಲಭ್ಯ ದೊರಕ ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡಲಾಗುವುದು. ಅಧಿವೇಶನದ ಬಳಿಕ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಯಲಿದೆ ಎಂದರು.
    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾನ ಸಮಿತಿ ರಚನೆಯ ಬಗ್ಗೆ ಬಿಜೆಪಿ ಅಡ್ಡಿ ಪಡಿಸಿ ನ್ಯಾಯಾಲಯದ ಮೆಟ್ಟಿಲು ಏರಿದೆ. ಆಯಾಯ ಸರ್ಕಾರಗಳು ವ್ಯವಸ್ಥಾಪನ ಸಮಿತಿ ರಚನೆ ಮಾಡುತ್ತವೆ. ಆದರೆ ಬಿಜೆಪಿಗರು ಅಧಿಕಾರ ಧಾಹದಿಂದ ಅದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ದೂರಿದರು.
    ಕ್ಷೇತ್ರದಲ್ಲಿ ಈ ಹಿಂದೆ ಲಕ್ಷ್ಮೀನಾರಾಯಣ, ಸುಕುಮಾರ ಶೆಟ್ಟರು ಶಾಸಕರಾಗಿದ್ದಾಗಲೂ ಕೂಡಾ ನಾನು ಅಭಿವೃದ್ಧಿಗೆ ಅಡ್ಡಿ ಪಡಿಸಿಲ್ಲ. ಅಭಿವೃದ್ಧಿ ಕೆಲಸಗಳಿಗೆ ನಾನೆಂದೂ ಅಡ್ಡಿ ಪಡಿಸುವುದಿಲ್ಲ.  ಸಂಬಂಧಪಟ್ಟ ಅಧಿಕಾರಿಗಳು, ಸಚಿವರನ್ನು ಸಂಪರ್ಕಿಸಿ ಅನುದಾನ ತರುವುದು ಶಾಸಕರ ಜವಬ್ದಾರಿ ಎಂದು ಹೇಳಿದರು.
    ನಾನು ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಿಲ್ಲ. ಧರ್ಮ ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುವ ಕೆಲಸ ಮಾಡಿಲ್ಲ ಎಂದು ಹೇಳಿದ ಅವರು ಮಾಜಿ ಶಾಸಕ ಸುಕುಮಾರ ಶೆಟ್ಟಿಯವರು ಕಾಂಗ್ರೆಸಿಗೆ ಸೇರ್ಪಡೆಯಾಗಲು ನಾವ್ಯಾರು ಆಕ್ಷೇಪ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ, ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
    ಪಕ್ಷ ಸಂಘಟನೆಯ ಕಾರ್ಯ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿದೆ. ರಾಜ್ಯಾದ್ಯಂತ ಪಕ್ಷವನ್ನು ಪುನರಚನೆ ಮಾಡಿ, ಹೊಸ ಪದಾಧಿಕಾರಿಗಳ ನೇಮಕ ಮಾಡುವ ಕಾರ್ಯ ಆಗಲಿದೆ. ಒಂದು ತಿಂಗಳಲ್ಲಿ ಪೂರ್ಣ ಬದಲಾವಣೆ ಆಗಲಿದೆ ಎಂದರು.
    ಬಿಜೆಪಿಗರು ಸಹ ಗ್ಯಾರಂಟಿಯ ಹಿಂದೆ ಹೋಗಿದ್ದಾರೆ. ಅವರು ಕೂಡಾ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎಂದು ಅವರು ಹೇಳಿದರು.
    ಸುದ್ಧಿಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಉಪಸ್ಥಿತರಿದ್ದರು.
  • ಕುಂದಾಪುರ :ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಬಿ. ಕಿಶೋರ್  ಕುಮಾರ್ ಅವರಿಗೆ ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ಅಭಿನಂದನೆ

    ಕುಂದಾಪುರ :ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಬಿ. ಕಿಶೋರ್ ಕುಮಾರ್ ಅವರಿಗೆ ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ಅಭಿನಂದನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಉಡುಪಿ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕವಾದ ಕುಂದಾಪುರದ ಬಿ. ಕಿಶೋರ್ ಕುಮಾರ್ ಅವರಿಗೆ ಶನಿವಾರ ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ಪಕ್ಷದ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

    ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬಹುಮತ ಸಿಗದಿದ್ದರೂ, ಉಡುಪಿ ಜಿಲ್ಲೆಯಲ್ಲಿ ಎಲ್ಲ ೫ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವಷ್ಟು ಸದೃಢವಾಗಿ ರೂಪುಗೊಂಡಿದೆ. ಪಕ್ಷವನ್ನು ಬೂತ್ ಮಟ್ಟದಿಂದ ಇನ್ನಷ್ಟು ಬಲಪಡಿಸುವ ಜತೆಗೆ ಶಕ್ತಿ ತುಂಬುವ ಕಾರ್‍ಯ ಜಿಲ್ಲಾಧ್ಯಕ್ಷರಿಂದ ಆಗಲಿ. ಈ ಜಿಲ್ಲಾಧ್ಯಕ್ಷ ಹುದ್ದೆ ಜಿಲ್ಲೆಯಲ್ಲಿಯೇ ಮಹತ್ವವಾದ ಸ್ಥಾನಮಾನವಾಗಿದ್ದು, ಮುಂಬರುವ ಲೋಕಸಭೆ, ಜಿ.ಪಂ., ತಾ.ಪಂ. ಚುನಾವಣೆಗಳು, ಪುರಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಸಂಪೂರ್ಣ ಗೆಲ್ಲಿಸುವ ಸವಾಲು ಇವರ ಮೇಲಿದೆ ಎಂದು ಹಾರೈಸಿದರು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರದವರಿಗೆ ಈ ಜಿಲ್ಲಾಧ್ಯಕ್ಷ ಹುದ್ದೆ ಬಂದಿರುವುದು ಖುಷಿ‌ ತಂದಿದೆ. ಪಕ್ಷ‌ ಸಂಘಟನೆಗೆ ಶಾಸಕನಾಗಿ ಎಲ್ಲ ರೀತಿಯಿಂದಲೂ ಸಹಕರಿಸಲಾಗುವುದು ಎಂದರು.

    ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

    ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇದು ಬಯಸದೇ ಬಂದ ಭಾಗ್ಯ. ಕಾರ್ಯಕರ್ತರೊಂದಿಗಿನ ನಿರಂತರ ಸಂಬಂಧ ಈ‌ ಹಂತಕ್ಕೆ ಬೆಳೆಸಿದೆ. ಈ ಜವಾಬ್ದಾರಿ ಸಿಗುವಲ್ಲಿ ನೆರವಾದ ಎಲ್ಲ ಹಿರಿಯ, ಕಿರಿಯರೆಲ್ಲರಿಗೂ ಋಣಿ ಎಂದರು.

    ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ ಮಾತನಾಡಿದರು. ಒಬಿಸಿ ಮೋರ್ಚಾ ರಾಜ್ಯ ಕಾರ್‍ಯದರ್ಶಿ ವಿಠಲ ಪೂಜಾರಿ ಐರೋಡಿ, ಜಿಲ್ಲಾ ಕಾರ್‍ಯದರ್ಶಿಗಳಾದ ಸದಾನಂದ ಬಳ್ಕೂರು, ಅನಿತಾ ಶ್ರೀಧರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ್ ಕಳಂಜಿ, ಪುರಸಭೆ ಸದಸ್ಯರು, ಪಕ್ಷದ ಪ್ರಮುಖರು, ಮಂಡಲದ ಪದಾಧಿಕಾರಿಗಳು, ಕಾರ್‍ಯಕರ್ತರು ಉಪಸ್ಥಿತರಿದ್ದರು.

    ಮಂಡಲದ ಪ್ರ. ಕಾರ್‍ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ ಸ್ವಾಗತಿಸಿ, ಸತೀಶ್ ಪೂಜಾರಿ ವಕ್ವಾಡಿ ಕಾರ್‍ಯಕ್ರಮ ನಿರೂಪಿಸಿದರು.

  • ಕುಂದಾಪುರ: ಮತ್ತೊಮ್ಮೆ ಮೋದಿ ಗೋಡೆ ಬರಹಕ್ಕೆ ಕುಂದಾಪುರದಲ್ಲಿ ಚಾಲನೆ

    ಕುಂದಾಪುರ: ಮತ್ತೊಮ್ಮೆ ಮೋದಿ ಗೋಡೆ ಬರಹಕ್ಕೆ ಕುಂದಾಪುರದಲ್ಲಿ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೋಟೇಶ್ವರ ಮಹಾಶಕ್ತಿ ಕೇಂದ್ರದ ವತಿಯಿಂದ ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮತ್ತೊಮ್ಮೆ ಮೋದಿ 3.0 ಗೋಡೆ ಬರಹ ಅಭಿಯಾನಕ್ಕೆ ಕುಂದಾಪುರದಲ್ಲಿ ಚಾಲನೆ ನೀಡಲಾಯಿತು. ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಕೋಟೇಶ್ವರದ ಮಾರ್ಕೊಡು ಸುಧೀರ್ ಕುಮಾರ್ ಶೆಟ್ಟಿ ಯವರ ಅಪಾರ್ಟ್ಮೆಂಟಿನ ಮುಂಭಾಗದಲ್ಲಿ ಸ್ಪ್ರೇ ಸಿಂಪಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಂದರ್ಭ ಮಾತನಾಡಿದ ಕುಂದಾಪುರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿದ ಕರೆಯಂತೆ ಮೂರನೇ ಅವಧಿಗೆ ನರೇಂದ್ರ ಮೋದಿಯನ್ನೇ ಪ್ರದಾನಿ ಮಾಡುವುದು ಬಿಜೆಪಿಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಗೋಡೆಬರಹದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಪ್ರತೀ ಬೂತು ಮಟ್ಟದಲ್ಲಿಯೂ ಅಭಿಯಾನವನ್ನು ಯಶಸ್ವಿಗೊಳಿಸಲಾಗುವುದು ಎಂದು ಹೇಳಿದರು.

    ಈ ಸಂದರ್ಭ ಪಕ್ಷದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ, ಮತ್ತೊಮ್ಮೆ ಮೋದಿ ಗೋಡೆ ಬರಹದ ಜಿಲ್ಲಾ ಸಹ ಸಂಚಾಲಕ ರಾಜೇಶ್ ಕಾವೇರಿ, ಕುಂದಾಪುರ ಮಂಡಲದ ಸಂಚಾಲಕ ಸುಧೀರ್ ಕೆ.ಎಸ್, ಸಹ ಸಂಚಾಲಕ ಸುರೇಂದ್ರ ಕಾಂಚನ್ ಸಂಗಮ್, ಮಹಿಳಾ ಮೋರ್ಛಾದ ಅಧ್ಯಕ್ಷೆ ರೂಪ ಬಾಬು ಪೈ, ಮಂಡಲದ ಉಪಾಧ್ಯಕ್ಷ ರಾಜೇಶ್ ಉಡುಪ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಗಿಣಿ ದೇವಾಡಿಗ, ಕೋಟೇಶ್ವರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣ ಗೊಲ್ಲ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಆಚಾರ್ಯ, ಕೋಟೇಶ್ವರ ಗ್ರಾಮ ಪಂಚಾಯತಿನ ಸದಸ್ಯರು ಹಾಗೂ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಮುಖಂಡರು ಹಿತೈಷಿಗಳು ಉಪಸ್ಥಿತರಿದ್ದರು.

  • ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಿಶೋರ್ ಕುಮಾರ್ ಕುಂದಾಪುರ ಆಯ್ಕೆ

    ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಿಶೋರ್ ಕುಮಾರ್ ಕುಂದಾಪುರ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕುಂದಾಪುರ ಅವರನ್ನು ನೇಮಕ ಮಾಡಲಾಗಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೊರಡಿಸಿರುವ ಆದೇಶದಲ್ಲಿ ಕಿಶೋರ್ ಕುಮಾರ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿಯ ನೇತೃತ್ವದ ಹೊಸ ಜವಾಬ್ದಾರಿ ನೀಡಲಾಗಿದೆ. ಪ್ರಸ್ತುತ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

  • ಕುಂದಾಪುರ: ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಸದಸ್ಯರು ಸಂಕಲ್ಪ ಮಾಡಬೇಕಿದೆ ಹರಿಪ್ರಸಾದ್ ಶೆಟ್ಟಿ

    ಕುಂದಾಪುರ: ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಸದಸ್ಯರು ಸಂಕಲ್ಪ ಮಾಡಬೇಕಿದೆ ಹರಿಪ್ರಸಾದ್ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತವು, ಬಹು ಸಂಸ್ಕೃತಿಯನ್ನು ಒಳಗೊಂಡು, ವಿವಿಧತೆಯಲ್ಲಿ ಏಕತೆಯನ್ನು ಪಸರಿಸುವ ದೇಶ. ಬಹುತ್ವದ ಬೇರುಗಳನ್ನು ದೇಶದಲ್ಲಿ ಗಟ್ಟಿಗೊಳಿಸಿದ್ದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ. ತನ್ನ 139ನೇ ಸಂಸ್ಥಾಪನ ದಿನದಂದು ಇತಿಹಾಸದಲ್ಲಿ ಪುನರಾವರ್ತನೆಯ ಸಂಕಲ್ಪ ಪ್ರತಿಯೊಂದು ಕಾಂಗ್ರೆಸ್ ಸದಸ್ಯರು ಮುಂದಿನ ದಿನಗಳಲ್ಲಿ ಸವಾಲಾಗಿ ಸ್ವೀಕರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ತಿಳಿಸಿದರು.

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನಡೆಸಿ ಮಾತನಾಡಿದರು. ಇನ್ನೋರ್ವ ಅತಿಥಿ ಭಾಸ್ಕರ್ ಶೆಟ್ಟಿ, ಕಿಸಾನ್ ಘಟಕದ ಅಧ್ಯಕ್ಷರು ಈ ಸಂದರ್ಭದಲ್ಲಿ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ವಸಂತಿ ಮೊಗವೀರ, ಮಾಜಿ ಪುರಸಭಾ ಅಧ್ಯಕ್ಷ ಹಾರೊನ್ ಸಾಹೇಬ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರೇವತಿ ಶೆಟ್ಟಿ ,ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷ ಮುನಾಫ್ ಕೋಡಿ, ಐಟಿ ಸೆಲ್ ಚಂದ್ರಶೇಖರ್ ಶೆಟ್ಟಿ , ಜ್ಯೋತಿ ನಾಯ್ಕ್ , ಅಶೋಕ್ ಸುವರ್ಣ, ಸುನಿಲ್ ಪೂಜಾರಿ, ಗಂಗಾಧರ ಶೆಟ್ಟಿ, ಜೋಸೆಫ್ ರೆಬೆಲ್ಲೊ, ಸುಭಾಷ್ ಪೂಜಾರಿ, ಶೋಭಾ ಸಚ್ಚಿದಾನಂದ, ಸೀಮಾ, ಚಂದ್ರ ಪೂಜಾರಿ, ವೇಲಾ ಬ್ರಗಾಂಜ, ಮೇಬಲ್ ಡಿಸೋಜಾ, ಕೆಪಿ ಅರುಣ್ ಪಟೇಲ್ ,ದಿನೇಶ್ ಭೆಟ್ಟ ,ನಾಗರಾಜ್ ನಾಯ್ಕ , ಪ್ರೀತಮ್ ಕರ್ವಾಲ್ಲೊ, ವೇಣುಗೋಪಾಲ್, ವಿವೇಕಾನಂದ, ಶಶಿ ಕುಮಾರ್, ಎಡಾಲ್ಫ್ ಡಿಕೋಸ್ತಾ, ಕೆ ಸುರೇಶ್, ಸ್ವಸ್ತಿಕ್ ಶೆಟ್ಟಿ, ಅಬ್ದುಲ್ಲಾ ಕೋಡಿ, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.

    ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರ್ವಹಿಸಿ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ವಂದಿಸಿದರು.

  • ಬೆಂಗಳೂರು :ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ

    ಬೆಂಗಳೂರು :ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ

    ಕುಂದಾಪುರ ಮಿರರ್ ಸುದ್ದಿ…

    ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಬಿ.ವೈ.ವಿಜಯೇಂದ್ರ ಅವರನ್ನು ನಿಯೋಜಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದೇಶಿಸಿದ್ದಾರೆ.

    ಶಿಕಾರಿಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ನಡೆಯಲಿದ್ದಾರೆ.

    ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇದೀಗ ಕೊನೆಗೂ ನೇಮಕವಾಗಿದೆ.

  • ಕುಂದಾಪುರ: ಬಿಜೆಪಿಯಿಂದ ಪದವೀಧರ ಶಿಕ್ಷಣ ಕ್ಷೇತ್ರದ ಮತದಾರರ ಪಟ್ಟಿ ಅಭಿಯಾನಕ್ಕೆ ಚಾಲನೆ

    ಕುಂದಾಪುರ: ಬಿಜೆಪಿಯಿಂದ ಪದವೀಧರ ಶಿಕ್ಷಣ ಕ್ಷೇತ್ರದ ಮತದಾರರ ಪಟ್ಟಿ ಅಭಿಯಾನಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮುಂಬರುವ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಂದಾಪುರದ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಭಿಯಾನಕ್ಕೆ ಕುಂದಾಪುರ ಬಿಜೆಪಿ ಚಾಲನೆ ನೀಡಿತು.

    ಭಾರತೀಯ ಜನತಾಪಕ್ಷದ ಕಾರ್ಯಾಲಯದಲ್ಲಿ ಆರಂಭಗೊಂಡ ಆಭಿಯಾನದಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಪಟ್ಡಿಯನ್ನು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಬಿಡುಗಡೆಗೊಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ ವಹಿಸಿದರು. ಸಂಚಾಲಕಿ ಗೀತಾಂಜಲಿ ಸುವರ್ಣ ಮಾಹಿತಿ ನೀಡಿದರು. ಮಂಡಲ ಕಾರ್ಯದರ್ಶಿ ಸುರೇಂದ್ರ ಕಾಂಚನ್ ಸಂಗಮ್ ನಿರೂಪಿಸಿ ವಂದಿಸಿದರು.

    ಜಿಲ್ಲಾ ಎಸ್.ಸಿ. ಮೋರ್ಚದ ಅಧ್ಯಕ್ಷ ಗೋಪಾಲ್ ಕಳಂಜಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ವಿವಿಧ ಮೋರ್ಚಾದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

  • ಕುಂದಾಪುರ: ಉಚ್ಚಾಟಿತ ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ : ಬಿಜೆಪಿ ಮುಕ್ತ ಮಾಡ್ತೇವೆ ಎಂದ ಕಾಂಗ್ರೆಸ್

    ಕುಂದಾಪುರ: ಉಚ್ಚಾಟಿತ ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ : ಬಿಜೆಪಿ ಮುಕ್ತ ಮಾಡ್ತೇವೆ ಎಂದ ಕಾಂಗ್ರೆಸ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶುಕ್ರವಾರವಷ್ಟೇ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಅಧಿಕೃತವಾಗಿ ಉಚ್ಛಾಟಿತಗೊಂಡ ಬಿಜೆಪಿ ಕಾರ್ಯಕರ್ತರು ಹಾಗೂ ಆನಗಳ್ಳಿವಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರಭಾಕರ ಬಂಗೇರ ಹಾಗೂ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ಶನಿವಾರ ಹೇರಿಕುದ್ರುನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿಗೆ ಠಕ್ಕರ್ ನೀಡಿದ್ದಾರೆ.

    ಶನಿವಾರ ಹೇರಿಕುದ್ರುವಿನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ವಿನೋದ್ ಕ್ರಾಸ್ತಾ ಸಮ್ಮುಖದಲ್ಲಿ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ಲಾರೆನ್ಸ್ ಡಿಸೋಜ ಹಾಗು ಸದಸ್ಯ ಗಂಗಾಧರ ಶೆಟ್ಟಿ ಮುಂದಾಳತ್ವದಲ್ಲಿ ಕಾಂಗ್ರೆಸ್ ಸೇರಿದರು.

    ಈ ಸಂದರ್ಭ ಮಾತನಾಡಿದ ಪ್ರಭಾಕರ ಬಂಗೇರ, ಹಾಲಾಡಿ ಶ್ರೀನಿವಾಸ ಶೆಟ್ಟರ ರಾಜಕೀಯ ನಿವೃತ್ತಿಯ ಬಳಿಕ ಕುಂದಾಪುರ ಬಿಜೆಪಿ ಒಡೆದ ಮನೆಯಾಗಿದೆ ಎಂದರು. ಯಜಮಾನನಿಲ್ಲದ ಕುಂದಾಪುರ ಬಿಜೆಪಿ ಗೊಂದಲದ ಗೂಡಾಗಿದೆ ಎಂದರು.

    ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಶೆಟ್ಟಿ ಹೇರಿಕುದ್ರು ಮಾತನಾಡಿ, ಹೇರಿಕುದ್ರು ಗ್ರಾಮ ಪಂಚಾಯತ್ ನಲ್ಲಿ ಕಳೆದ 35 ವರ್ಷಗಳಿಂದ ಕಪ್ಪು ಚುಕ್ಕೆಗೆ ಅವಕಾಶ ನೀಡದೇ ಕಾಂಗ್ರೆಸ್ ಆಡಳಿತ ನಡೆಸಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಗ್ರಾಮ ಮಾಡುತ್ತೇವೆ ಎಂದರು.

    ದಿನೇಶ್ ಹೆಗ್ಡೆ ಮೊಳಹಳ್ಳಿಯವರು ಸೇರ್ಪಡೆಗೊಂಡ ಇಬ್ಬರಿಗೂ ಕಾಂಗ್ರೆಸ್ ಶಾಲು ಹೊದೆಸಿ, ಪಕ್ಷದ ಧ್ವಜ ನೀಡಿ ಸ್ವಾಗತಿಸಿಕೊಂಡರು.

  • ಬೈಂದೂರು ಕಾಂಗ್ರೆಸ್ಗೆ ಹೊಸ ಸಾರಥ್ಯ : ಅರವಿಂದ ಪೂಜಾರಿ ಅಧ್ಯಕ್ಷ

    ಬೈಂದೂರು ಕಾಂಗ್ರೆಸ್ಗೆ ಹೊಸ ಸಾರಥ್ಯ : ಅರವಿಂದ ಪೂಜಾರಿ ಅಧ್ಯಕ್ಷ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಫುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಬೈಂದೂರು ವಿಧಾನಸಭೆ ಕ್ಷೇತ್ರದ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ನ ಯುವ ಮುಖಂಡ ಅರವಿಂದ ಪೂಜಾರಿ ಅವರನ್ನು ಆಯ್ಕೆ ಮಾಡಿ ಡಿ.ಕೆ.ಶಿವಕುಮಾರ್ ಆದೇಶ ನೀಡಿದ್ದಾರೆ.

    ಬೈಂದೂರು ಬ್ಲಾಕ್ ಕಾಂಗ್ರೆಸ್ಸಿನ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ, ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ.

  • ಕುಂದಾಪುರ :ರಾಜ್ಯ ಸರಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

    ಕುಂದಾಪುರ :ರಾಜ್ಯ ಸರಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    Video:-

    ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 100 ದಿನದಲ್ಲಿ 175 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ಶೋಚನೀಯ. ಈ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಹಲವಾರು ರೈತ ಪರ ಯೋಜನೆ ರದ್ದುಪಡಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಪ್ರವೀಣ್ ಶೆಟ್ಟಿ ಹೇಳಿದರು.

    ಸೋಮವಾರ ಸಂಜೆ ಇಲ್ಲಿನ ಶಾಸ್ತ್ರೀವೃತ್ತದಲ್ಲಿ ರಾಜ್ಯ ಸರಕಾರದ ರೈತ ವಿರೋಧಿ ನಿಲುವು ಖಂಡಿಸಿ ಬಿಜೆಪಿ ರೈತ ಮೋರ್ಚಾ ಕುಂದಾಪುರ ಮಂಡಲ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

    ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸಹಿತ ಹಲವಾರು ಹಿಂದಿನ ಬಿಜೆಪಿ ಸರಕಾರದ ಯೋಜನೆ ರದ್ದುಪಡಿಸುವ ಮೂಲಕ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗಿದೆ. ಬಿಟ್ಟಿಭಾಗ್ಯಗಳಿಗಾಗಿ ರೈತರ ಜೀವನ ಹದಗೆಡಿಸಿದ ಸರಕಾರ ಕೂಡಲೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದರು.

    ರಾಜ್ಯದಲ್ಲಿ ಬರ ಕಾಡುತ್ತಿದೆ. ಇನ್ನೂ ಬರ ಘೋಷಣೆ ಮಾಡಿಲ್ಲ. ರೈತರ ಪಂಪ್‍ಸೆಟ್‍ಗಳಿಗೆ 7 ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡಿಲ್ಲ. ಅನಿಯಮಿತ ವಿದ್ಯುತ್ ಕಡಿತದಿಂದ ಜನಸಾಮಾನ್ಯರು ಸಹ ತೊಂದರೆಗೀಡಾಗಿದ್ದಾರೆ. ಸರಕಾರ ರೈತರ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರು ಹರಿಹಾಯ್ದರು.
    ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ ರೈತ ವಿರೋಧಿ ನಿಲುವು ಖಂಡಿಸಿ ಇಡಿ ರಾಜ್ಯಾದ್ಯಂತ ರೈತರು ಬೀದಿಗಿಳಿದಿದ್ದಾರೆ. ನಮಗೆ ಕುಡಿಯಲು ನೀರಿಲ್ಲ. ಜಲಾಶಯ ಬರಿದಾಗಿದೆ. ಈ ನಡುವೆ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ರೈತರನ್ನು ಜೀವಹಿಂಡುವ ಕೆಲಸ ಸರಕಾರ ನಡೆಸುತ್ತಿದೆ. ಬೆಂಗಳೂರಿನಲ್ಲಿ ಟ್ಯಾಕ್ಸಿ, ಕ್ಯಾಬ್ ಚಾಲಕರು ಬೀದಿಗಿಳಿದಿದ್ದಾರೆ. ಇದೊಂದು ರೈತ ವಿರೋಧಿ ಮತ್ತು ಜನವಿರೋಧಿ ಸರಕಾರ ಎಂದು ಅವರು ಟೀಕಿಸಿದರು.
    ಶಾಸಕ ಕಿರಣ್‍ಕುಮಾರ ಕೊಡ್ಗಿ, ಬಿಜೆಪಿ ಮಂಗಳೂರು ಸಹಪ್ರಭಾರಿ ರಾಜೇಶ ಕಾವೇರಿ, ಬಿಜೆಪಿ ರೈತ ಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷ ಸುನಿಲ್‍ಕುಮಾರ ಶೆಟ್ಟಿ ಹೇರಿಕುದ್ರು, ಮುಖಂಡರಾದ ಕಾಳಾವರ ಸತೀಶ್ ಪೂಜಾರಿ, ಭಾಸ್ಕರ ಬಿಲ್ಲವ ಹೇರಿಕುದ್ರು, ಸುರೇಶ್ ಶೆಟ್ಟಿ ಮೂಡುಗೋಪಾಡಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಬಿ.ಪೈ, ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಜಯ ಪೂಜಾರಿ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ತಹಸೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.